More

    ಗುಂಪುಗಾರಿಕೆ ಮಾಡಿ ಕಾಮಗಾರಿಗಳ ವಿಳಂಬಕ್ಕೆ ಅವಕಾಶ ಮಾಡಿಕೊಡಬೇಡಿ

    ಶ್ರೀನಿವಾಸಪುರ: ಸರ್ಕಾರದಿಂದ ಕಾಡಿ-ಬೇಡಿ ಅನುದಾನ ತಂದು ಕಾಮಗಾರಿ ನಡೆಸಲು ಸೂಚನೆ ನೀಡಿದರೆ ಗುಂಪುಗಾರಿಕೆ ಮಾಡಿ ಕಾಮಗಾರಿಗಳ ವಿಳಂಬಕ್ಕೆ ಅವಕಾಶ ಮಾಡಿಕೊಟ್ಟಿದ್ದೀರಿ. ಮುಂದೆ ನಡೆಯುವ ಗ್ರಾಪಂ ಚುನಾವಣೆಗಳಲ್ಲಿ ಹೇಗೆ ಸ್ಪರ್ಧೆ ಮಾಡುತ್ತೀರಿ ಎಂದು ಮುಖಂಡರನ್ನು ಮಾಜಿ ಸ್ಪೀಕರ್ ಕೆ.ಆರ್. ರಮೇಶ್‌ಕುಮಾರ್ ತರಾಟೆಗೆ ತೆಗೆದುಕೊಂಡರು.

    ಶ್ರೀನಿವಾಸಪುರದ ಪುಲಗೂರಕೋಟೆ, ಲಕ್ಷ್ಮೀಪುರ, ಕೋಡಿಪಲ್ಲಿ, ನೆಲವಂಕಿ ಪಂಚಾಯಿತಿಯ ವಿವಿಧ ಗ್ರಾಮಗಳಲ್ಲಿ ನಡೆದಿರುವ ಕಾಮಗಾರಿಗಳನ್ನು ಶುಕ್ರವಾರ ವೀಕ್ಷಣೆ ಮಾಡಿ ಮಾತನಾಡಿ, ಈಗ ಸರ್ಕಾರ ನಮ್ಮದಿಲ್ಲ. ಕಾಮಗಾರಿಗಳಿಗೆ ಹಣ ಮಂಜೂರು ಮಾಡಸಬೇಕಾದರೆ ಎಷ್ಟು ಕಷ್ಟವಾಗುತ್ತದೆ ಎಂಬುದು ನನಗೆ ಗೊತ್ತು. ಗ್ರಾಮಗಳಲ್ಲಿ ಗುಂಪುಗಾರಿಕೆ ಮಾಡಿಕೊಂಡು ಕಾಮಗಾರಿ ವಿಳಂಬ ಮಾಡುವುದರಿಂದ ಅನುದಾನ ವಾಪಸ್ ಹೊಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ನನ್ನ ಅಧಿಕಾರ ಸಮಯ ಇನ್ನೂ 3 ವರ್ಷ ಇದೆ. ಮುಂಬರುವ ಗ್ರಾಪಂ ಚುನಾವಣೆಯನ್ನು ಸ್ಥಳೀಯ ಮುಖಂಡರಿಗೆ ವಹಿಸಿ ನಾನು ಮನೆಯಲ್ಲೇ ಕೂರುತ್ತೇನೆ. ಆಗ ಜನರ ಮುಂದೆ ಹೋದರೆ ನಿಮಗೆ ಗೊತ್ತಾಗುತ್ತದೆ. ಗ್ರಾಮಗಳಲ್ಲಿ ಕಾಮಗಾರಿ ನಡೆಯದಿದ್ದಲ್ಲಿ ಮಹಿಳೆಯರೇ ನಿಮ್ಮನ್ನು ನಿಲ್ಲಿಸುತ್ತಾರೆ. ಆಗ ನೀವು ಏನೆಂದು ಜವಾಬು ಕೊಡುತ್ತೀರಿ? ಪಂಚಾಯಿತಿಗಳಲ್ಲಿ ಅಧಿಕಾರ ಕಳೆದುಕೊಂಡರೆ ಅಧಿಕಾರ ಇರುವವರ ಬಳಿ ಭಿಕ್ಷೆ ಬೇಡಬೇಕಾಗುತ್ತದೆ. ಇನ್ನಾದರು ಜವಾಬ್ದಾರಿ ಅರಿತು ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು.

    ಪ್ರತಿಗ್ರಾಮಕ್ಕೂ ಮಂಜೂರಾಗಿರುವ ಸಮುದಾಯ ಭವನ, ಸಿಸಿ ರಸ್ತೆ, ಕುಡಿಯುವ ನೀರು, ಶುದ್ಧ ನೀರಿನ ಘಟಕಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಮಾಜಿ ಸ್ಪೀಕರ್ ಮಾರ್ಚ್ ಕೊನೆಯೊಳಗೆ ಕಾಮಗಾರಿ ಮುಗಿಯಬೇಕು. ಅನುದಾನ ವಾಪಸ್ ಆಗಬಾರದು. ಮುಖಂಡರ ಗುಂಪುಗಾರಿಕೆಗಳಿಗೆ ಕಿವಿಗೊಡದೆ ಸರ್ಕಾರಿ ಸಂಸ್ಥೆಗಳಿಂದಲೇ ಕಾಮಗಾರಿ ಮುಂದುವರಿಸಬೇಕು. ಒಟ್ಟಾಗಿ ಮುಂದೆ ಬಂದು ಕಾಮಗಾರಿ ನಡೆಸುತ್ತೇನೆಂದರೆ ಅಂತಹವರಿಗೆ ಕಾಮಗಾರಿ ನೀಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಜಿಪಂ ಸದಸ್ಯರಾದ ಗೋವಿಂದಸ್ವಾಮಿ, ಮ್ಯಾಕಲ ನಾರಾಯಣಸ್ವಾಮಿ, ತಾಪಂ ಅಧ್ಯಕ್ಷ ನರೇಶ, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಆರ್.ವೆಂಕಟಶಿವಾರೆಡ್ಡಿ, ಮಾಜಿ ಸದಸ್ಯ ಕೆ.ಕೆ.ಮಂಜು, ಎಇಇ ಅಪ್ಪಿರೆಡ್ಡಿ, ಎಲ್.ಕೆ.ಶ್ರೀನಿವಾಸಮೂರ್ತಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts