More

    ಸ್ತ್ರೀಗೌರವದ ಶರನ್ನವರಾತ್ರಿ: ಆಚರಣೆಯ ಹಿನ್ನೆಲೆ, ವಿಧಿವಿಧಾನ ವಿವರಿಸಿದ ದೈವಜ್ಞ ಕೆ.ಎನ್. ಸೋಮಯಾಜಿ..

    ಸ್ತ್ರೀಯನ್ನು ಶಕ್ತಿಯ ಸ್ವರೂಪವಾಗಿ ಪೂಜಿಸುವ ಭಾರತೀಯ ಸಂಪ್ರದಾಯದ ವಿಶಿಷ್ಟ ಕಲ್ಪನೆಯ ಪ್ರಮುಖ ಆಚರಣೆ ಶರನ್ನವರಾತ್ರಿ. ‘ಯತ್ರ ನಾರ್ಯಸ್ತು ಪೂಜ್ಯಂತೆ, ರಮಂತೇ ತತ್ರ ದೇವತಾಃ’ (ಸ್ತ್ರೀಯನ್ನು ಪೂಜಿಸುವಲ್ಲಿ ದೇವರು ಸಂಚರಿಸುತ್ತಾರೆ) ಎಂಬ ಭಾರತೀಯ ಕಲ್ಪನೆಯ ಅದ್ಭುತ ಆಚರಣೆ ನವರಾತ್ರಿ. ಸಾಮಾನ್ಯವಾಗಿ ನವರಾತ್ರಿ ಎಂದೇ ಪ್ರಸಿದ್ಧವಾದ ಆಚರಣೆಯ ಹಿನ್ನೆಲೆ, ವಿಧಿ ವಿಧಾನಗಳು, ತಪ್ಪು ಕಲ್ಪನೆಗಳು ಹಾಗೂ ಆಚರಣೆಯ ಮಹತ್ವದ ಕುರಿತು ಖ್ಯಾತ ಧಾರ್ವಿುಕ ಮಾರ್ಗದರ್ಶಿ, ದೈವಜ್ಞ ಕೆ.ಎನ್. ಸೋಮಯಾಜಿ ಅವರು ‘ವಿಜಯವಾಣಿ’ ಹಾಗೂ ‘ದಿಗ್ವಿಜಯ 247 ನ್ಯೂಸ್’ ಕ್ಲಬ್​ಹೌಸ್ ಸಂವಾದದಲ್ಲಿ ವಿವರಿಸಿದ್ದಾರೆ.

    | ದೈವಜ್ಞ ಕೆ.ಎನ್. ಸೋಮಯಾಜಿ

    ಐದರಿಂದ ಎರಡು ನವರಾತ್ರಿ ಆಯಿತು

    ಭಾರತೀಯ ಸಂಪ್ರದಾಯದಲ್ಲಿ ಹಬ್ಬಗಳಿಗೆ ಕೊರತೆಯಿಲ್ಲ. ಅನಾದಿಕಾಲದಲ್ಲಿ ವರ್ಷಕ್ಕೆ ಐದು ನವರಾತ್ರಿ ಆಚರಣೆಗಳಿರುತ್ತಿದ್ದವು. ಸದ್ಯ ಎರಡು ನವರಾತ್ರಿಗಳು ಆಚರಣೆಯಲ್ಲಿವೆ. ಮೊದಲನೆಯದು ಚೈತ್ರಮಾಸದಲ್ಲಿ ನಡೆಯುವ ಚೈತ್ರ ನವರಾತ್ರಿ ಅಥವಾ ವಸಂತ ನವರಾತ್ರಿ. ಎರಡನೆಯದು ಶರದ್ ಋತುವಿನಲ್ಲಿ ನಡೆಯುವ ಶರನ್ನವರಾತ್ರಿ. ಹಬ್ಬಗಳು ಎಂದ ಕೂಡಲೆ ಹೊಸ ಬಟ್ಟೆ, ಸಂಭ್ರಮ, ಊಟೋಪಚಾರ, ಕುಟುಂಬ-ಬಂಧು ಬಳಗದ ಮಿಲನ ಇರುತ್ತದೆ. ಸಾಮಾನ್ಯವಾಗಿ ಹಬ್ಬಗಳು ಬೆಳಗ್ಗೆ ಆಚರಿಸಲ್ಪಡುತ್ತವೆ. ರಾತ್ರಿ ವೇಳೆ ಆಚರಿಸಲ್ಪಡುವ ಹಬ್ಬಗಳೆಂದರೆ ಕೃಷ್ಣಾಷ್ಟಮಿ, ಶಿವರಾತ್ರಿ ಹಾಗೂ ನವರಾತ್ರಿ. ‘ನವರಾತ್ರಿಯನ್ನು ರಾತ್ರಿ ವೇಳೆಯಲ್ಲೇ ಆಚರಿಸಬೇಕು ತಾನೆ? ಏಕೆ ಬೆಳಗ್ಗೆ ಆಚರಣೆ ನಡೆಯುತ್ತಿದೆ’ ಎಂದು ಅನೇಕರು ಪ್ರಶ್ನಿಸುತ್ತಾರೆ. ವ್ಯವಸ್ಥೆಯ ಪರಿಧಿಯಲ್ಲಿ, ಕಾಲ ಬದಲಾದಂತೆ ಬೆಳಗ್ಗೆ ಆಚರಣೆ ನಡೆಯುತ್ತಿದೆ. ಇದೇನೂ ತಪ್ಪಲ್ಲ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ನವರಾತ್ರಿ ಆಚರಣೆಯಲ್ಲಿ ಆಯಾ ಪ್ರಾಂತ್ಯಗಳಿಗೆ, ಸಂಪ್ರದಾಯ ಗಳಿಗೆ ಅನುಗುಣವಾಗಿ ಸ್ವಲ್ಪ ವ್ಯತ್ಯಾಸವಿದೆ. ಆದರೆ ಅನೇಕ ಅಂಶಗಳು ಸಮಾನವಾಗಿವೆ. ಕಲಶಸ್ಥಾಪನೆ, ಆಂಕುರಾರ್ಪಣೆ ಮಾಡಿ ದೇವಿಯನ್ನು ಅವರವರ ಶಕ್ಱಾನುಸಾರ ಸುವರ್ಣ, ರಜತ, ತಾಮ್ರ ಕಲಶದಲ್ಲಿ ಆವಾಹನೆ ಮಾಡಿ, ಅಲ್ಲಿ ದೇವಿಯ ಸ್ವರೂಪ ಕಾಣಲಾಗುತ್ತದೆ.

    ಜಗನ್ಮಾತೆಯ ಪ್ರಾರ್ಥನೆ

    ಆಚರಣೆಗಳಲ್ಲಿ ವಿಭಿನ್ನತೆ ಇದ್ದರೂ ಎಲ್ಲ ಆಚರಣೆಗಳ ಏಕೈಕ ಗುರಿ- ಜಗನ್ಮಾತೆಯ ಚರಣ ಕಮಲದಲ್ಲಿ ತಲೆಯಿಟ್ಟು ಪ್ರಾರ್ಥಿಸುವುದು. ಇದರಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಪಾಡ್ಯದ ದಿನ ಬೆಳಗ್ಗೆ ಕಂಕಣಬದ್ಧರಾದರೆ ನವಮಿ ರಾತ್ರಿವರೆಗೆ ಆಚರಣೆ ಮಾಡಲಾಗುತ್ತದೆ. ಮಹಾಕಾಳಿ, ಮಹಾಲಕ್ಷ್ಮೀ ಹಾಗೂ ಸರಸ್ವತಿಯ ರೂಪದಲ್ಲಿ ದೇವಿಯನ್ನು ತಲಾ ಮೂರು ದಿನದಂತೆ 9 ದಿನ ಪೂಜಿಸಲಾಗುತ್ತದೆ. ‘ಜಗತ್ತಿನ ಸಕಲ ಜೀವರಾಶಿಗಳನ್ನೂ ಸೃಷ್ಟಿಸಿದ ತಾಯೇ, ರಾಕ್ಷಸರಿಂದ ಮನುಕುಲವನ್ನು ರಕ್ಷಿಸು, ಸಂಪತ್ತು ನೀಡು ಹಾಗೂ ಜ್ಞಾನ ಪ್ರದಾನ ಮಾಡು’ ಎಂದು ಮೂರೂ ರೂಪಗಳನ್ನು ಕೋರುತ್ತೇವೆ. ದೇವಿಯನ್ನು ಸ್ತುತಿಸುವ ಮಂತ್ರ ಅದ್ಭುತವಾಗಿದೆ, ದುರ್ಗಾ ಸಪ್ತಶತಿ ಎಂಬ ಮಂತ್ರ ಬಹಳ ಅರ್ಥಗರ್ಭಿತವಾಗಿದೆ. ದೇವೀ ಭಾಗವತ ಅಥವಾ ಚಂಡಿಕಾ ಪಾರಾಯಣ ನಂತರ ವಿಧಿ ಪೂರ್ವಕವಾಗಿ ಚಂಡಿ ದೇವಿಗೆ ಪೂಜೆ, ಪೂಜೆ ನಂತರ ದೇವಿಯ ಪ್ರತಿರೂಪ ಎಂದು ಭಾವಿಸಿ ಸುವಾಸಿನಿಯರಿಗೆ ಪೂಜೆ, ಅನ್ನ ಸಂತರ್ಪಣೆ, ಹಸ್ತೋದಕ ನೀಡಲಾಗುತ್ತದೆ.

    ಇಂಟರ್ನೆಟ್​ನಲ್ಲಿ ನೋಡಿಕೊಂಡು ದುರ್ಗಾಸಪ್ತಶತಿ ಪಾರಾಯಣ ಮಾಡಬಹುದೇ?

    ಗುರುಮುಖೇನ ಉಪದೇಶ ಇದ್ದು, ಸ್ಪಷ್ಟತೆ, ನಿಖರತೆ ಇದ್ದ ಯಾರಾದರೂ ಪಾರಾಯಣ ಮಾಡಬಹುದು ಎಂದು ಶಾಸ್ತ್ರಗಳು ಹೇಳುತ್ತವೆ. ಇಲ್ಲಿ ಗಮನಿಸಬೇಕಾದ ಸೂಕ್ಷ್ಮ ಹಾಗೂ ಗಂಭೀರ ವಿಚಾರವೊಂದಿದೆ. ದೇವಿ ಮಹಾತ್ಮೆ ಸ್ವಲ್ಪ ಮಟ್ಟಿಗಿನ ತಾಂತ್ರಿಕತೆಯಿಂದ ಕೂಡಿದೆ. ತಪು್ಪ ಆಚರಣೆ ಅಥವಾ ತಪು್ಪ ಉಚ್ಛಾರಣೆಯಿಂದ ಹಾನಿಯೂ ಆಗಬಹುದು. ಉದಾಹರಣೆಗೆ, ಪಾರಾಯಣದಲ್ಲಿ ‘ಭಾರ್ಯಾಂ ರಕ್ಷತಿ ಭೈರವಿ’ ಎಂಬ ವಾಕ್ಯ ಬರುತ್ತದೆ. ಅಂದರೆ ಹೆಂಡತಿಯನ್ನು ರಕ್ಷಿಸು ಎಂದು ಕೇಳಿಕೊಳ್ಳುತ್ತೇವೆ. ಅಪ್ಪಿತಪ್ಪಿ ‘ಭಾರ್ಯಾಂ ಭಕ್ಷತು ಭೈರವಿ’ ಎಂದುಬಿಟ್ಟರೆ ಏನಾಗಬಹುದು? ಇಂತಹ ಅಪಾಯಗಳು ಇರುವುದರಿಂದ ಎಚ್ಚರ ಇರಬೇಕು.

    ಎರಡು ದಿನ ಉತ್ಸವವಾಗಲಿ

    ನಮ್ಮ ಎಲ್ಲ ಹಬ್ಬಗಳೂ ಪಂಚಾಂಗದ ಆಧಾರದಲ್ಲೆ ನಡೆಯುತ್ತವಾದರೂ ಎರಡು ದಿನ ಮಾತ್ರ ಇಂಗ್ಲಿಷ್ ಕ್ಯಾಲೆಂಡರ್ ಆಧಾರದಲ್ಲಿ ನಡೆಯುತ್ತದೆ. ಅವುಗಳೆಂದರೆ, ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಆಗಸ್ಟ್ 15 ಹಾಗೂ ದೇಶವು ಗಣರಾಜ್ಯವಾದ ಜನವರಿ 26. ಇವೆರಡೂ ದಿನಗಳನ್ನು ರಾಷ್ಟ್ರೀಯ ಹಬ್ಬವಾಗಿ ಆಚರಣೆ ಮಾಡಲಾಗುತ್ತಿದೆಯಾದರೂ ಅವುಗಳನ್ನೂ ನಮ್ಮ ಇತರ ಹಬ್ಬಗಳಂತೆ ಪಾವಿತ್ರ್ಯತೆಯಿಂದ ಆಚರಣೆ ಮಾಡಬೇಕು. ಅದುವೇ ನಮ್ಮ ಮುಂದಿನ ಪೀಳಿಗೆಗೆ ನಾವು ನೀಡುವ ಕೊಡುಗೆ.

    ಮೂರು ದಿನಕ್ಕೊಂದು ದೇವತೆ

    ಒಟ್ಟು 9 ದಿನಗಳಲ್ಲಿ ತಲಾ 3 ದಿನದಂತೆ ದೇವಿ ಆರಾಧನೆ ನಡೆಯುತ್ತದೆ. ಮೊದಲ 3 ದಿನ, ಅಂದರೆ ಪಾಡ್ಯದಿಂದ ತದಿಗೆವರೆಗೆ ಉಗ್ರರೂಪವಾದ ಮಹಾಕಾಳಿ ಆರಾಧನೆ ನಡೆಯುತ್ತದೆ. ಈ ರೂಪದಿಂದ ಜಗತ್ತಿಗೆ ಬಂದ ಕಂಟಕಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ಎರಡನೇ ದಿನ, ಚೌತಿಯಿಂದ ಷಷ್ಠಿವರೆಗೆ ಮಹಾಲಕ್ಷ್ಮೀ ಸ್ವರೂಪಳಾದ ಲಕ್ಷ್ಮೀಗೆ ಪೂಜೆ ನಡೆಯುತ್ತದೆ. ಅಂತಸ್ತು, ಐಶ್ವರ್ಯ, ಸುಖ ಶಾಂತಿಯನ್ನು ಬೇಡಿಕೊಳ್ಳುತ್ತೇವೆ. ಮೂರನೇ ದಿನ, ಸಪ್ತಮಿಯಿಂದ ನವಮಿವರೆಗೆ ಸರಸ್ವತಿ ರೂಪಕ್ಕೆ ಪೂಜೆ ನಡೆಯುತ್ತದೆ. ಉತ್ತಮ ಜೀವನ ನಡೆಸುವ ಸರಿಯಾದ ಮಾರ್ಗ, ವಿದ್ಯೆ, ಜ್ಞಾನ ನೀಡು ಎಂದು ಮಹಾಮಾತೆಯಲ್ಲಿ ಪ್ರಾರ್ಥಿಸುತ್ತೇವೆ. ನಂತರದಲ್ಲಿ ದಶಾಂಶಹೋಮ ಎಂದು ಚಂಡಿ ಹೋಮ ಮಾಡಿ, 9 ದಿನದ ಪೂಜೆಯ ಪೂರ್ಣಾಹುತಿ ನೀಡಲಾಗುತ್ತದೆ. ನಂತರ ಕಂಕಣ ವಿಸರ್ಜನೆ ಮಾಡಲಾಗುತ್ತದೆ.

    ಸ್ತ್ರೀಗೌರವದ ಶರನ್ನವರಾತ್ರಿ: ಆಚರಣೆಯ ಹಿನ್ನೆಲೆ, ವಿಧಿವಿಧಾನ ವಿವರಿಸಿದ ದೈವಜ್ಞ ಕೆ.ಎನ್. ಸೋಮಯಾಜಿ..ನವರಾತ್ರಿ ಪೂಜಾ ವಿಶೇಷ

    ನೈವೇದ್ಯ ಹಾಗೂ ಪ್ರತಿ ಅಧ್ಯಾಯಕ್ಕೂ ತರ್ಪಣ ಈ ಪೂಜೆಯ ವಿಶೇಷ. ಕೆಂಪು ಗಂಧ (ರಕ್ತಚಂದನ), ಏಲಕ್ಕಿ, ಪಚ್ಚಕರ್ಪರ, ಕೇಸರಿ, ಶುದ್ಧ ಹಸುವಿನ ಹಾಲು, ಜೇನುತುಪ್ಪದಲ್ಲಿ ಅಘರ್Â ಕೊಡುವುದು ಪಾರಾಯಣದ ಅವಿಭಾಜ್ಯ ಅಂಗ ಎಂದು ಶಾಸ್ತ್ರ ಹೇಳಿದೆ. ನಂತರದಲ್ಲಿ ಸುವಾಸಿನಿ ಪೂಜೆ ಅಥವಾ ಕುಮಾರಿ ಪೂಜೆ ನಡೆಯುತ್ತದೆ. ಪ್ರಾಂತ್ಯಗಳಲ್ಲಿ ವಿಭಿನ್ನ ಆಚರಣೆಗಳೂ ಇವೆ. ಕೆಲವೆಡೆ ಮೊದಲ ದಿನಕ್ಕೆ ಒಂದು ವರ್ಷದ ಹೆಣ್ಣುಮಗು ಹಾಗೂ ಒಬ್ಬರು ಮುತೆôದೆಯರನ್ನು ಆಹ್ವಾನಿಸಿ ಆಸನಾದಿಗಳಿಂದ ಕೂರಿಸಿ, ಅಕ್ಷತೆ ಕಾಳಿನಿಂದ ಪೂಜಿಸಿ, ವಸ್ತ್ರದಾನ, ದಕ್ಷಿಣೆ, ಮಂಗಳದ್ರವ್ಯ ನೀಡಿ, ಫಲತಾಂಬೂಲ, ಭೋಜನ ನೀಡಿ ದೇವೀ ಸ್ವರೂಪ ಎಂದು ನಮಸ್ಕಾರ ಮಾಡಿ ಆಶೀರ್ವಾದ ಪಡೆಯುವುದು. 2ನೇ ದಿನ 2 ವರ್ಷದ ಹೆಣ್ಣು ಮಗು, ಇಬ್ಬರು ಮುತೆôದೆಯರು. 3ನೇ ದಿನ 3 ವರ್ಷದ ಹೆಣ್ಣು ಮಗು ಹಾಗೂ ಮೂವರು ಮುತೆôದೆಯರು. ಹೀಗೆ 9ನೇ ದಿನ 9 ವರ್ಷದ ಹೆಣ್ಣು ಮಗು ಹಾಗೂ 9 ಮುತೆôದೆಯರನ್ನು ಪೂಜಿಸುತ್ತಾರೆ. ಕೆಲ ಪದ್ಧತಿಗಳಲ್ಲಿ ಎಲ್ಲ ದಿನಗಳೂ ಒಬ್ಬ ಮುತೆôದೆಯನ್ನು ಆಹ್ವಾನಿಸಲಾಗುತ್ತದೆ. ಆಚರಣೆ ಹೇಗೇ ಇದ್ದರೂ, ಸ್ತ್ರೀಗೆ ಗೌರವ ನೀಡಬೇಕೆನ್ನುವುದು ಸಮಾನ ಅಂಶ. ಭಾರತೀಯ ಸಂಪ್ರದಾಯದಲ್ಲಿ ಮಾತ್ರ ಇದನ್ನು ಕಾಣಬಹುದು.

    ವಿಜಯದಶಮಿ ನವರಾತ್ರಿಯ ಭಾಗವಲ್ಲ

    ವಿಜಯದಶಮಿಯೂ ನವರಾತ್ರಿಯ ಭಾಗ ಎಂದು ಅನೇಕರು ತಿಳಿದಿದ್ದಾರೆ. ಇವೆರಡಕ್ಕೂ ಸಂಬಂಧವಿಲ್ಲ. ನವರಾತ್ರಿ ನಂತರ ಆಗಮಿಸುವ ದೊಡ್ಡ ಹಾಗೂ ಸ್ವತಂತ್ರ ಹಬ್ಬ ವಿಜಯದಶಮಿ. ಎರಡರ ಆಚರಣೆಗಳೇ ಬೇರೆ. ನವ ರಾತ್ರಿಯ ಭಾಗ ಎಂಬುದು ವಾಡಿಕೆಯಲ್ಲಿ ಬಂದಿದೆ ಅಷ್ಟೆ.

    ಈ ವರ್ಷ 8 ದಿನದಲ್ಲೇ ನವರಾತ್ರಿ

    ನವರಾತ್ರಿ ಎಂದ ಕೂಡಲೇ 9 ರಾತ್ರಿ ಎಂದಾಗುತ್ತದೆ. ಈ ವರ್ಷದ ಪ್ಲವನಾಮ ಸಂವತ್ಸರದಂದು ಅ. 7ರಿಂದ ಅ. 14ರವರೆಗೆ ಅಂದರೆ 8 ದಿನದಲ್ಲಿ ನವರಾತ್ರಿ ನಡೆಯುತ್ತದೆ. ಇದೇನು ನವರಾತ್ರಿ ಎಂಟೇ ದಿನಕ್ಕೆ ಮುಗಿಯುತ್ತದೆಯೇ ಎಂದು ಪ್ರಶ್ನಿಸಬಹುದು. ನಮ್ಮ ಹಬ್ಬಗಳು ಪಂಚಾಂಗವನ್ನು ಆಧರಿಸಿ ನಡೆಯುತ್ತವೆಯೇ ವಿನಾ ಇಂಗ್ಲಿಷ್ ಪಂಚಾಂಗದ ಆಧಾರದಲ್ಲಿ ಅಲ್ಲ. ಸೂರ್ಯಚಂದ್ರರ ಗತಿಯನ್ನಾಧರಿಸಿ ಆಚರಣೆ ನಡೆಯುತ್ತದೆ. ಪಂಚಾಂಗದಲ್ಲಿ, ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ವಿಧ. ನವರಾತ್ರಿಯನ್ನು ಚಾಂದ್ರಮಾನ ರೀತಿಯಲ್ಲೇ ಆಚರಣೆ ಮಾಡಲಾಗುತ್ತದೆ. ಈ ರೀತಿಯಲ್ಲಿ, 8 ದಿನದ ಒಂದು ದಿನ, ಎರಡೂ ದಿನಗಳ ಆಚರಣೆಗಳನ್ನೂ ಮಾಡಬೇಕು. ಈ ವರ್ಷ ಅ. 10ರ ಭಾನುವಾರ 8.20ರವರೆಗೂ ಚೌತಿ ಇದೆ. ನಂತರ ಪಂಚಮಿ ಆರಂಭವಾಗುತ್ತದೆ. ಆ ದಿವಸ ಚೌತಿ ಹಾಗೂ ಪಂಚಮಿ ಎರಡೂ ದಿನಗಳ ಆಚರಣೆ ಮಾಡಬೇಕು. ಅಂದರೆ ಚೌತಿಯ ದಿನ ಹಾಗೂ ಪಂಚಮಿಯಂದು ಮಾಡಬೇಕಿರುವ ಎಲ್ಲ ಪೂಜೆ, ಊಟೋಪಚಾರ, ಸುವಾಸಿನಿಯರ ಪೂಜೆಗಳನ್ನೂ ಭಾನುವಾರ ಒಂದೇ ದಿನ ಆಚರಣೆ ಮಾಡಬೇಕು. ಇದರಿಂದ ದೋಷವೇನೂ ಇಲ್ಲ. ಈ ರೀತಿ ಮೂರ್ನಾಲ್ಕು ವರ್ಷಕ್ಕೊಮ್ಮೆ ಆಗುತ್ತದೆ. ಯಾರೂ ಆತಂಕ ಪಡುವ ಅಗತ್ಯ ಇಲ್ಲ.

    ಆಯುಧ ಪೂಜೆ ಏಕೆ?

    ಈಗಿನ ಸನ್ನಿವೇಶದಲ್ಲಿ ಆಯುಧ ಪೂಜೆ ಏಕೆ ಎಂಬ ಅನುಮಾನ ಅನೇಕರಲ್ಲಿದೆ. 25 ವರ್ಷದ ಹಿಂದೆ ಜ. 26ರ ಕಾರ್ಯಕ್ರಮಕ್ಕೆ ನವದೆಹಲಿಗೆ ತೆರಳಿದ್ದೆ. ಯುದ್ಧ ವಿಮಾನ, ಯುದ್ಧ ಪರಿಕರಗಳ ಪ್ರದರ್ಶನವನ್ನು ನೋಡುತ್ತ, ಕೋಟ್ಯಂತರ ರೂ. ವೆಚ್ಚ ಮಾಡಿ ಏಕೆ ಇದನ್ನೆಲ್ಲ ಹಾರಿಸಬೇಕು? ಎಂದು ಜತೆಗಿದ್ದ ಅಧಿಕಾರಿಯನ್ನು ಕೇಳಿದೆ. ನಮ್ಮ ಸೇನಾ ಸಾಮರ್ಥ್ಯವನ್ನು ಆಗಾಗ ಪರೀಕ್ಷೆ ಮಾಡಿಕೊಂಡು ಸುಸ್ಥಿತಿಯಲ್ಲಿರಲು ಇದರ ಅವಶ್ಯಕತೆ ಇದೆ ಎಂದು ಅವರು ಹೇಳಿದರು. ಆದರೆ, ಆಯುಧ ಎಂದರೆ ಹತ್ಯೆ ಮಾಡುವ ಸಾಧನ ಮಾತ್ರವಲ್ಲ. ನಮಗೆ, ಕುಟುಂಬಕ್ಕೆ ಆಶ್ರಯ ನೀಡಿ ಸಲಹುತ್ತಿರುವ ಎಲ್ಲ ವಸ್ತುಗಳಲ್ಲಿ ದೈವತ್ವವನ್ನು ಕಂಡು, ಆ ವಸ್ತುವನ್ನು ಶುದ್ಧೀಕರಿಸಿ, ಕೃತಜ್ಞತೆಯಿಂದ ಭಕ್ತಿಭಾವವನ್ನು ಸಮರ್ಪಣೆ ಮಾಡುವುದು ನಮ್ಮ ಸಂಪ್ರದಾಯದಲ್ಲಿ ನಡೆದುಕೊಂಡು ಬಂದಿದೆ. ಯಂತ್ರಗಳಲ್ಲಿಯೂ ದೈವತ್ವವನ್ನು ಕಂಡು ಕೃತಜ್ಞತಾಪೂರ್ವಕವಾಗಿ ಪೂಜಿಸುವುದು ಈ ಹಬ್ಬದ ಅವಿಭಾಜ್ಯ ಅಂಗ.

    ವಿಜಯದಶಮಿಯಂದು ಪಂಚಾಂಗ ಶುದ್ಧಿ ನೋಡುವ ಅಗತ್ಯ ಏಕಿಲ್ಲ?

    ಇದು ಜ್ಯೋತಿಷ ಶಾಸ್ತ್ರಕ್ಕೆ ಸಂಬಂಧಿಸಿದ ವಿಚಾರ. ವಿಜಯದಶಮಿ, ದೀಪಾವಳಿ, ಅಕ್ಷಯ ತದಿಗೆ, ಯುಗಾದಿ ಮುಂತಾದವನ್ನು ಮಹಾಮುಹೂರ್ತ ಎನ್ನಲಾಗುತ್ತದೆ. ಅಂದು ಪಂಚಾಂಗ ಶುದ್ಧಿ ನೋಡಬೇಕಿಲ್ಲ. ಮುಹೂರ್ತಕ್ಕೆ ಸಂಬಂಧಿಸಿ ಪ್ರಾಂತೀಯವಾಗಿ ಕೆಲ ವ್ಯತ್ಯಾಸವಿದೆ. ಭಾರತದ ಉತ್ತರ ಭಾಗದಲ್ಲಿ ಹುಣ್ಣಿಮೆಯಿಂದ ಹುಣ್ಣಿಮೆಗೆ ಮಾಸ ಎಂದರೆ, ದಕ್ಷಿಣ ಭಾಗದಲ್ಲಿ ಅಮಾವಾಸ್ಯೆಯಿಂದ ಅಮಾವಾಸ್ಯೆಗೆ ಲೆಕ್ಕ ಹಾಕುತ್ತಾರೆ. ನಮ್ಮ ಪಕ್ಕದ ತಮಿಳುನಾಡಿನಲ್ಲೆ ಅಮಾವಾಸ್ಯೆಯ ದಿನ ಶುಭ ಮುಹೂರ್ತ ಎನ್ನುತ್ತಾರೆ. ಅಲ್ಲಿನ ವ್ಯವಸ್ಥೆ, ಜೀವನ ಪದ್ಧತಿಗೆ ಅನುಗುಣವಾಗಿ ಈ ಆಚರಣೆಗಳು ನಡೆಯುತ್ತವೆ. ನವರಾತ್ರಿಯಂದು ದೇವಿಯನ್ನು ಆರಾಧಿಸಿ ವಿಜಯ ದಶಮಿ ದಿವಸ ಯಾವುದೇ ಕಾರ್ಯಕ್ರಮ ನಡೆಸಲು ಪಂಚಾಂಗ ಶುದ್ಧಿ ನೋಡುವ ಅವಶ್ಯಕತೆ ಇಲ್ಲ.

    ಉಪವಾಸಗಳು ಯಾವ ರೀತಿ ಇರಬೇಕು?

    ಉಪವಾಸ ಎಂದರೆ ಭಗವಂತನ ಸಮೀಪಕ್ಕೆ ಹೋಗುವುದು ಎಂದರ್ಥ. ಆಡು ಭಾಷೆಯಲ್ಲಿ ಉಪವಾಸ ಎಂದರೆ ಊಟ, ತಿಂಡಿ ತ್ಯಜಿಸುವುದು ಎಂದರ್ಥ. ಎಲ್ಲ ರೀತಿಯ ಪೂಜೆ, ಸಾಧನೆ, ಅನುಷ್ಠಾನ, ಜಪ ತಪಗಳಿಗೆ ಬೇಕಾಗಿರುವುದು ಅಭಿಲಾಷೆ, ದೈಹಿಕ ಬಲಿಷ್ಠತೆ, ಮಾನಸಿಕ ದೃಢತೆ. ಶರೀರ ಮಾತ್ರೇಣ ಖಲುಧರ್ಮ ಸಾಧನಂ ಎಂದರು ಹಿರಿಯರು. ಉಪವಾಸ ಮಾಡುವ ಮುನ್ನ ನಮ್ಮ ದೈಹಿಕ ಸಾಮರ್ಥ್ಯ ನೋಡಿಕೊಳ್ಳಬೇಕು. ಒಂದು ಹೊತ್ತು ಊಟ ಮಾಡಿ ಮತ್ತೊಂದು ಹೊತ್ತು ಹಣ್ಣು ತಿನ್ನುವುದು, 24 ಗಂಟೆ ಏನನ್ನೂ ಸೇವಿಸದೇ ಇರುವುದು, ಸಂಜೆ ಹೊತ್ತಿನಲ್ಲಿ ಲಘು ಉಪಾಹಾರ ಸೇವಿಸುವುದು ಸೇರಿ ಅನೇಕ ರೀತಿ ಉಪವಾಸ ಮಾಡಲಾಗುತ್ತದೆ. ಉಪವಾಸದಲ್ಲಿ ತ್ಯಾಗ, ದೈಹಿಕ ಶುದ್ಧಿ ಮುಖ್ಯ. ವಿಪರೀತ ಆಹಾರ ಸೇವಿಸಿ ಪೂಜೆಗೆ ಕುಳಿತರೆ ಆಲಸ್ಯ ಉಂಟಾಗಬಹುದು, ಮಲಮೂತ್ರ ವಿಸರ್ಜನೆಗೆ ತೆರಳಬೇಕಾಗಬಹುದು. ಇದನ್ನು ಗಮನಿಸಿ, ಕೆಲವು ಸಂಪ್ರದಾಯವನ್ನು ಹಿರಿಯರು ತಂದಿದ್ದಾರೆ. ನಿಮ್ಮ ಕಲ್ಪನೆ, ದೈಹಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಉಪವಾಸವನ್ನು ಆಯ್ಕೆ ಮಾಡಿಕೊಳ್ಳಬಹುದು.

    ಸರಸ್ವತಿ ಪೂಜೆ ವಿಶೇಷ

    ಮೂಲಾ ನಕ್ಷತ್ರದ ದಿನ ಸಾಮಾನ್ಯವಾಗಿ ಸಪ್ತಮಿ ದಿನ ಬರುತ್ತದೆ. ಅಂದು ಸರಸ್ವತಿ ಪೂಜೆ. ವಿದ್ಯಾರ್ಥಿಗಳಿರುವ ಮನೆಗಳಲ್ಲಿ ಶಾಲಾ ಕಾಲೇಜಿನ ಪುಸ್ತಕ, ಸಂಗೀತ ಸಾಧನಗಳನ್ನಿರಿಸಿ ಸರಸ್ವತಿ ಪೂಜೆ ಮಾಡಲಾಗುತ್ತದೆ. ಪೂಜಿಸಲು ಪುಸ್ತಕಗಳೇ ಆಗಬೇಕೆಂದಿಲ್ಲ, ಜ್ಞಾನ ಒದಗಿಸುವ ಯಾವುದೇ ಸಾಧನವನ್ನಿರಿಸಿ ಪೂಜೆ ಮಾಡಬಹುದು. ಸರಸ್ವತಿ ವಿಸರ್ಜನೆ ಮಾಡುವ ಅವಶ್ಯಕತೆಯಿಲ್ಲ, 3 ದಿನದ ಪೂಜೆ ಮುಗಿದ ನಂತರ ಓದನ್ನು ಆರಂಭಿಸಬೇಕು. ಮಕ್ಕಳ ಅಕ್ಷರಾರಂಭಕ್ಕೆ ಅನೇಕರು ಮುಹೂರ್ತ ಹುಡುಕುತ್ತಿರುತ್ತಾರೆ. ಅಕ್ಷರಾರಂಭ ಎಂಬುದು ಅದ್ಭುತ ಪರಂಪರೆ. ಸರಸ್ವತಿಯನ್ನು ಆಹ್ವಾನಿಸಿ ಪೂಜೆ ನಂತರ ವಿಜಯದಶಮಿ ದಿನ ಅಕ್ಷರಾಭ್ಯಾಸ ಮಾಡಿಸಲು ಯಾವುದೇ ತಾರಾಬಲ, ಮುಹೂರ್ತ ನೋಡುವ ಅಗತ್ಯವಿಲ್ಲ.

    ಪಿತೃಕಾರ್ಯಕ್ಕೆ ಮುನ್ನ ದೈವ ಕಾರ್ಯ ಬೇಡ

    ಸರಸ್ವತಿ ಪೂಜೆ ದಿನ ಕೆಲವು ಮನೆಗಳಲ್ಲಿ ಹಿರಿಯರ ವೈದಿಕ ಬರುತ್ತದೆ ಎಂದುಕೊಂಡರೆ, ಮೊದಲ ಮತ್ತು ಕೊನೆಯ 3 ದಿನ ನವರಾತ್ರಿ ಆಚರಿಸುತ್ತಾರೆ. ಇದು ಸರಿಯಲ್ಲ. ದೇವ ಕಾರ್ಯಕ್ಕಿಂತ ಮಿಗಿಲಾದದ್ದು ಪಿತೃಕಾರ್ಯ. ಪಿತೃಕಾರ್ಯಕ್ಕೇ ಪ್ರಾಮುಖ್ಯತೆ. ಹಿರಿಯರ ವಾರ್ಷಿಕ ಶ್ರಾದ್ಧದವರೆಗೆ ನವರಾತ್ರಿ ಆಚರಣೆ ಮಾಡುವಂತಿಲ್ಲ. ಅಷ್ಟಮಿ ದಿನ ಸಪ್ತಶತಿ ಆಚರಿಸಬಹುದು.

    ಸ್ತ್ರೀಗೌರವದ ಶರನ್ನವರಾತ್ರಿ: ಆಚರಣೆಯ ಹಿನ್ನೆಲೆ, ವಿಧಿವಿಧಾನ ವಿವರಿಸಿದ ದೈವಜ್ಞ ಕೆ.ಎನ್. ಸೋಮಯಾಜಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts