More

    ಪ್ರತಿ ಇಲಾಖೆಯಲ್ಲಿ ಜಾಗೃತ ಕೋಶ ಸ್ಥಾಪಿಸಿ; ನ್ಯಾ. ಬಿ.ಎಸ್.ಪಾಟೀಲ್ ಸಲಹೆ

    ಬೆಂಗಳೂರು: ಪ್ರತಿ ಇಲಾಖೆಯಲ್ಲಿ ಜಾಗೃತ ಕೋಶವನ್ನು ಸ್ಥಾಪಿಸಿ, ಮುಖ್ಯಸ್ಥರು ತಮ್ಮ ಅಧೀನ ಸಿಬ್ಬಂದಿಗಳ ಬಗ್ಗೆ ನಿಗಾ ವಹಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಸಲಹೆ ನೀಡಿದರು.

    ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಆಡಳಿತದಲ್ಲಿ ಕಾರ್ಯಕ್ಷಮತೆಯ ಬಲಪಡಿಸುವಿಕೆ, ಸಮಗ್ರತೆ ಮತ್ತು ಪಾರದರ್ಶಕತೆಯನ್ನು ಖಾತ್ರಿಪಡಿಸುವಿಕೆ’ ಕುರಿತ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

    ಜಾಗೃತ ಕೋಶ ಸ್ಥಾಪನೆಯಿಂದ ಪಾರದರ್ಶಕ ಆಡಳಿತ ನೀಡಲು ಸಾಧ್ಯವಾಗುತ್ತದೆ. ಸರ್ಕಾದ ಬಗ್ಗೆ ಜನರ ವಿಶ್ವಾಸವೂ ಹೆಚ್ಚುತ್ತದೆ ಎಂದು ಹೇಳಿದರು.
    ಭ್ರಷ್ಟಾಚಾರ, ದುರಾಡಳಿತ ನಿಯಂತ್ರಣಕ್ಕೆ ಲೋಕಾಯುಕ್ತ ಸಂಸ್ಥೆ ಜತೆಗೆ ಜನರ ಸಹಕಾರ ಕೂಡ ಅತ್ಯವಶ್ಯ. ಭ್ರಷ್ಟಾಚಾರ ನಿಯಂತ್ರಿಸಲು ಲೋಕಾಯುಕ್ತ ಸಂಸ್ಥೆಯ ಜತೆಗೆ ಪ್ರತಿಯೊಬ್ಬ ವ್ಯಕ್ತಿ ಹಾಗೂ ಇಲಾಖೆ ಮುಖ್ಯಸ್ಥರು ಕೈಜೋಡಿಸಬೇಕು ಎಂದು ತಿಳಿಸಿದರು.

    ದುರಾಡಳಿತ ಇಡೀ ವ್ಯವಸ್ಥೆಯ ಮೇಲೆ ಆಘಾತಕಾರಿ ಪರಿಣಾಮಗಳನ್ನು ತಂದೊಡ್ಡಿದೆ. ಲೋಕಾಯುಕ್ತ ಸಂಸ್ಥೆ ಅನೇಕ ಸರ್ಕಾರಿ ಕಚೇರಿ ಮತ್ತು ಸಂಸ್ಥೆಗಳ ಮೇಲೆ ದಾಳಿ ನಡೆಸಿ ವಿಚಾರಣೆಯನ್ನು ಕೈಗೊಂಡು ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಆದರೆ ಈ ಬಗ್ಗೆ ಸೀಮಿತ ಫಲಿತಾಂಶ ಮಾತ್ರ ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ಲೋಕಾಯುಕ್ತ ಸಂಸ್ಥೆ ದೂರುಗಳ ಬಗ್ಗೆ ತನಿಖೆ ಕೈಗೊಂಡು ಆಪಾದನೆಗಳು ಮೇಲ್ನೋಟಕ್ಕೆ ಸತ್ಯವೆಂದು ಕಂಡುಬಂದ ಪ್ರಕರಣಗಳಲ್ಲಿ ಕಳುಹಿಸಲಾದ ಅನೇಕ ಶಿಫಾರಸ್ಸುಗಳು ಸರ್ಕಾರದ ಮಟ್ಟದಲ್ಲಿಯೇ ಬಾಕಿವುಳಿದಿವೆ. ಈ ಬಗ್ಗೆ ಇಲಾಖಾ ಮುಖ್ಯಸ್ಥರುಗಳು ಗಮನ ಹರಿಸಿ ಸೂಕ್ತ ಕ್ರಮಗಳನ್ನು ಕೈಗೊಂಡಲ್ಲಿ ದುರಾಡಳಿತ ತಡೆಗಟ್ಟಬಹುದು ಎಂದು ಹೇಳಿದರು.

    ಸರ್ಕಾರದ ಹಂತದಲ್ಲಿ 1074 ಪ್ರಕರಣ

    ಇಲಾಖಾ ವಿಚಾರಣೆ ಪ್ರಕರಣಗಳಲ್ಲಿ ಆಪಾದನೆಗಳು ಸಾಬೀತಾಗಿ ದಂಡನೆ ವಿಧಿಸಲು ಶಿಫಾರಸ್ಸು ಮಾಡಲಾದ 1074 ಪ್ರಕರಣಗಳು ಇನ್ನೂ ಸರ್ಕಾರದ ಹಂತದಲ್ಲಿ ಬಾಕಿಯಿವೆ ಎಂದು ತಿಳಿಸಿದರು.

    ರಾಜ್ಯದ ಅಧಿಕಾರಿಗಳಿಗೂ ಆನ್‌ಲೈನ್ ಆಸ್ತಿ ವಿವರ

    ಈವರೆಗೆ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಅವರ ಆಸ್ತಿ ವಿವರಗಳನ್ನು ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ಘೋಷಿಸಲು ಮತ್ತು ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ಮಾಡಲಾಗಿದೆ. ಆದರೆ, ರಾಜ್ಯ ಅಧಿಕಾರಿಗಳ ವಿಷಯದಲ್ಲಿಯೂ ಈ ರೀತಿ ಮಾಡಬೇಕೆಂದು ಸಲಹೆ ನೀಡಿದರು.

    ಮತ್ತೊಂದು ವಿಚಾರಣೆ ಅನಾವಶ್ಯಕ

    ಭ್ರಷ್ಟಾಚಾರ ತಡೆ ಕಾಯಿದೆ, 1988 ರ ಸೆಕ್ಷನ್ 19 ರ ಅಡಿಯಲ್ಲಿ ಮಾಡಿದ ಪ್ರಾಸಿಕ್ಯೂಷನ್ ಸ್ಯಾಂಕ್ಷನ್ ಆರ್ಡರ್ ಅನುಸಾರವಾಗಿ ಪೊಲೀಸರು ಪೂರ್ಣಗೊಳಿಸಿದ ತನಿಖೆಗೆ ಸಂಬಂಧಿಸಿದಂತೆ ಮತ್ತೊಂದು ವಿಚಾರಣೆಯನ್ನು ತಪ್ಪಿಸಬೇಕೆಂದು ತಿಳಿಸಿದರು.

    ಸರ್ಕಾರ ಸಾರ್ವಜನಿಕರ ವಿಶ್ವಾಸ ಗಳಿಸಬೇಕು

    ಲಂಚ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಅಧಿಕಾರಿಗಳನ್ನು ಬಂಧಿಸಿ ಅಮಾನತುಗೊಳಿಸಿದ ನಂತರ ಸದರಿ ಅಧಿಕಾರಿಯ ಅಮಾನತು ಹಿಂಪಡೆದ ಮೇಲೆ ಹೆಚ್ಚಿನ ಪ್ರಕರಣಗಳಲ್ಲಿ ಆ ಅಧಿಕಾರಿಗೆ ಅದೇ ಹುದ್ದೆಗೆ ನಿಯೋಜಿಸುವುದು ಬಹಳಷ್ಟು ಪ್ರಕರಣಗಳಲ್ಲಿ ಗಮನಕ್ಕೆ ಬಂದಿದೆ. ಪರಿಣಾಮವಾಗಿ ಸಾರ್ವಜನಿಕರು ಸರ್ಕಾರದ ಕ್ರಮದಲ್ಲಿ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ ಮತ್ತು ಸಾರ್ವಜನಿಕರ ದೃಷ್ಟಿಕೋನವೂ ಹತಾಶವಾಗುತ್ತದೆ ಎಂದು ಎಚ್ಚರಿಸಿದರು.

    ಕಾಯ್ದೆ ಮಹತ್ವ ತಿಳಿದುಕೊಳ್ಳಿ:

    ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು, ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಅಂಶಗಳ ಬಗ್ಗೆ ಬೆಳಕು ಚೆಲ್ಲಿ, ಕಾಯ್ದೆಯ ಮಹತ್ವವನ್ನು ತಿಳಿಸಿಕೊಟ್ಟರು.
    ಅಧ್ಯಕ್ಷತೆ ವಹಿಸಿ ಮಾತನಾಡಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ,

    ಲೋಕಾಯುಕ್ತರ ಸಲಹೆ ಕಾರ್ಯರೂಪಕ್ಕೆ:
    ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ನೀಡಿದ ಸಲಹೆಗಳನ್ನು ಆಡಳಿತದಲ್ಲಿ ಅಳವಡಿಸಿಕೊಂಡು ಕಾರ್ಯರೂಪಕ್ಕೆ ತರುವುದಾಗಿ ಭರವಸೆ ನೀಡಿದರು.

    ಐಎಎಸ್ ಅಧಿಕಾರಿಗಳಾದ ಪಿ.ಸಿ.ಜಾಫರ್, ತುಷಾರ್ ಗಿರಿನಾಥ್, ರಾಜೇಂದ್ರ ಕಠಾರಿಯಾ, ರಿತೇಷ್ ಕುಮಾರ್ ಸಿಂಗ್, ಅವರು ತಮ್ಮ ತಮ್ಮ ಇಲಾಖೆಗಳಲ್ಲಿ ಜಾಗೃತಿಯ ಬಗ್ಗೆ ಕೈಗೊಂಡ ವಿವಿಧ ಸುಧಾರಣಾ ಕ್ರಮಗಳ ಬಗ್ಗೆ ವಿವರಿಸಿದರು. ಕರ್ನಾಟಕ ಲೋಕಾಯುಕ್ತ ನಿಬಂಧಕರಾದ ಉಷಾರಾಣಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts