More

    ಕರಾವಳಿಯಲ್ಲಿ ಏಳು ಜಂಗಲ್ ರೆಸಾರ್ಟ್

    ಮಂಗಳೂರು: ಒಂದೆಡೆ ನೀಲವರ್ಣದ ವಿಶಾಲವಾದ ಕಡಲು. ಮತ್ತೊಂದೆಡೆ ಹಚ್ಚಹಸಿರ ಪಶ್ಚಿಮ ಘಟ್ಟದ ಸಾಲು. ಪ್ರವಾಸಿಗರನ್ನು ತನ್ನತ್ತ ಆಕರ್ಷಿಸಲು ಇಷ್ಟು ಪ್ರಾಕೃತಿಕ ಸಂಪತ್ತು ಸಾಕು. ವಿಪುಲ ಅವಕಾಶವಿದ್ದರೂ ಕಾಡು, ನೆಲ, ಜಲವನ್ನು ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಸರಿಯಾಗಿ ಬಳಸಿಕೊಳ್ಳುವಲ್ಲಿ ಇಲಾಖೆಗಳು ವಿಫಲವಾಗಿದೆ ಎನ್ನಬಹುದು.

    ಪ್ರಸ್ತುತ ಇದನ್ನೇ ಮೂಲವಾಗಿರಿಸಿ ಸರ್ಕಾರದ ಅಂಗವಾದ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ನಿ. (ಜಂಗಲ್ ಲಾಡ್ಜಸ್ ಆಂಡ್ ರೆಸಾರ್ಟ್ಸ್) ಕರಾವಳಿಯಲ್ಲಿ ಜಂಗಲ್ ರೆಸಾರ್ಟ್ ಮೂಲಕ ಪ್ರವಾಸಿಗರನ್ನು ಆಕರ್ಷಿಸುವ ಯೋಜನೆ ಹಾಕಿಕೊಂಡಿದೆ. ಕಾರವಾರದಿಂದ ತಲಪಾಡಿವರೆಗಿನ ಕಡಲ ಕಿನಾರೆ ಮತ್ತು ಸಮಾನಾಂತರವಾಗಿರುವ ಪಶ್ಚಿಮಘಟ್ಟದ ತಪ್ಪಲಿನ ಕಾಡು ಪ್ರದೇಶ ಬಳಸಿ ಬೋಟ್ ಹೌಸ್‌ಗಳ ಸಹಿತ ಪ್ರವಾಸಿಗರು ತಂಗಲು ಮತ್ತು ರಜೆಯ ಮಜಾ ಅನುಭವಿಸಲು ಸೂಕ್ತವಾದ ಜಂಗಲ್ ರೆಸಾರ್ಟ್ ನಿರ್ಮಿಸುವುದು ಯೋಜನೆ.

    ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೂಚನೆಯಂತೆ, ಜಿಲ್ಲಾಡಳಿತದ ಅನುಮತಿಯೊಂದಿಗೆ ಸಂಸ್ಥೆ ಅಧ್ಯಕ್ಷ ಎಂ.ಅಪ್ಪಣ್ಣ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸ್ಥಳಗಳ ಪರಿಶೀಲನೆ ಮಾಡುತ್ತಿದ್ದಾರೆ. ಮೂರು ಜಿಲ್ಲೆಗಳ ಒಟ್ಟು ಏಳು ಕಡೆಗಳಲ್ಲಿ ಇಂತಹ ವಿಹಾರಧಾಮ ನಿರ್ಮಿಸಲು ಉದ್ದೇಶಿಸಲಾಗಿದೆ. ಜಾಗದ ಆಯ್ಕೆ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಿ, ಮುಂದಿನ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ವರದಿ ನೀಡಲಾಗುವುದು. ಕರಾವಳಿಯ ವಿವಿಧ ಜಾನಪದ ಕಲಾ ಪ್ರಕಾರ, ಕ್ರೀಡೆ, ಸಂಸ್ಕೃತಿಯನ್ನು ದೇಶ-ವಿದೇಶಗಳ ಪ್ರವಾಸಿಗರಿಗೆ ಪರಿಚಯಿಸುವ ಪ್ರಯತ್ನವೂ ರೆಸಾರ್ಟ್‌ಗಳ ಮೂಲಕ ನಡೆಯಲಿದೆ ಎಂದು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಹೆಚ್ಚು ಪ್ರಚಲಿತವಿಲ್ಲ: ಅರಣ್ಯ ವಸತಿ ಮತ್ತು ವಿಹಾರಧಾಮ ಸಂಸ್ಥೆ ರಾಜ್ಯದಲ್ಲಿ 18 ಜಂಗಲ್ ರೆಸಾರ್ಟ್‌ಗಳನ್ನು ನಿರ್ವಹಿಸುತ್ತಿದ್ದು, ಒಪ್ಪಂದದ ಮೇರೆಗೆ 4 ರೆಸಾರ್ಟ್‌ಗಳಿವೆ. ಆನೆ ಜರಿ ಚಿಟ್ಟೆ ಶಿಬಿರ, ಭಗವತಿ ಪ್ರಕೃತಿ ಶಿಬಿರ, ಸಕ್ರೆಬೈಲ್ ಆನೆಶಿಬಿರ, ಸೀತಾನದಿ ಪ್ರಕೃತಿ ಶಿಬಿರ ಮತ್ತು ಗೋಪಿನಾಥನ್‌ಮಿಸ್ಟ್ರಿ ಟೇಲ್ಸ್ ಸೇರಿ 5 ಅರಣ್ಯ ಕ್ಯಾಂಪ್‌ಗಳಿವೆ. ನದಿ-ಸಮುದ್ರದಲ್ಲಿ ಸಾಹಸ ಕ್ರೀಡೆ, ಪ್ರಕೃತಿ, ಕಡಲ ತೀರ ವೀಕ್ಷಣೆ, ಪಾರಂಪರಿಕ ಪ್ರವಾಸೋದ್ಯಮ, ಸಫಾರಿ ಮೊದಲಾದವುಗಳು ಈ ಜಂಗಲ್ ರೆಸಾರ್ಟ್, ಅರಣ್ಯ ಕ್ಯಾಂಪ್‌ಗಳಲ್ಲಿ ಪ್ರಮುಖವಾಗಿರುತ್ತದೆ. ಕರಾವಳಿಯಲ್ಲೂ ಉತ್ತರ ಕನ್ನಡ ಜಿಲ್ಲೆಗೆ ಹೋಲಿಸಿದರೆ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯಲ್ಲಿ ಇವು ಹೆಚ್ಚು ಪ್ರಚಲಿತವಿಲ್ಲ.

     ಸ್ಥಳೀಯರಿಗೆ ಉದ್ಯೋಗಾವಕಾಶ: ಜಂಗಲ್ ಲಾಡ್ಜ್‌ಗಳ ನಿರ್ಮಾಣದಿಂದ ಪ್ರವಾಸೋದ್ಯಮ ಅಭಿವೃದ್ಧಿಯ ಜತೆಗೆ, ಸ್ಥಳೀಯವಾಗಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತದೆ. 7 ಜಂಗಲ್ ರೆಸಾರ್ಟ್‌ಗಳ ಮೂಲಕ ಕರಾವಳಿಯಲ್ಲಿ 4-5 ಸಾವಿರ ಮಂದಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗ ಪಡೆಯುವ ನಿರೀಕ್ಷೆಯಿದೆ ಎನ್ನುತ್ತಾರೆ ಎಂ.ಅಪ್ಪಣ್ಣ.

    ಕರಾವಳಿ ಜಿಲ್ಲೆಗಳಲ್ಲಿ ಏಳು ಕಡೆ ಜಂಗಲ್ ರೆಸಾರ್ಟ್‌ಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಸಂಸ್ಥೆಯಿಂದ ಸ್ಥಳ ಪರಿಶೀಲನೆ ನಡೆಯುತ್ತಿದೆ. ನದಿ, ಸಮುದ್ರ ತೀರವನ್ನು ಹೊಂದಿಕೊಂಡಂತಿರುವ ಪ್ರದೇಶಗಳನ್ನು ಅಂತಿಮಪಡಿಸಲಾಗುವುದು. ಕರಾವಳಿಯ ಯಕ್ಷಗಾನ ಸೇರಿದಂತೆ ವಿವಿಧ ಜಾನಪದ ಕಲೆಗಳ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶವಿದೆ.
    – ಎಂ.ಅಪ್ಪಣ್ಣ, ಅಧ್ಯಕ್ಷ, ಅರಣ್ಯ ವಸತಿ ಮತ್ತು ವಿಹಾರಧಾಮ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts