More

    ಜಾಂಟಿ ರೋಡ್ಸ್ ಮನಗೆದ್ದ ಭಾರತೀಯ ಫೀಲ್ಡರ್

    ನವದೆಹಲಿ: ಒಂದು ಕಾಲವಿತ್ತು, ಕ್ರಿಕೆಟ್‌ನಲ್ಲಿ ಚುರುಕಿನ, ತಜ್ಞ ಫೀಲ್ಡರ್ ಎಂದರೆ ನೆನಪಾಗುತ್ತಿದ್ದುದು ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್ ಅವರೊಬ್ಬರೇ. ಹಾಗಿತ್ತು ಅವರ ಫೀಲ್ಡಿಂಗ್ ವ್ಯೆಹ. ಅವರ ಕೈಗೆ ಚೆಂಡು ಹೋದರೆ ಬ್ಯಾಟ್ಸ್‌ಮನ್‌ಗಳು ಕ್ರೀಸ್ ಬಿಡಲು ಹೆದರುತ್ತಿದ್ದರು. ಬ್ಯಾಟ್ಸ್‌ಮನ್ ಆಗಿ ಹೆಚ್ಚು ಉಪಯುಕ್ತರಾಗದಿದ್ದರೂ, ಬರೀ ಫೀಲ್ಡಿಂಗ್‌ನಿಂದಲೇ ತಂಡಕ್ಕೆ ಪ್ರತಿ ಪಂದ್ಯದಲ್ಲಿ 20-25 ರನ್ ಉಳಿಸಿಕೊಡುತ್ತಿದ್ದ ಚಾಕಚಕ್ಯತೆಯಿಂದ 90ರ ದಶಕದ ದಕ್ಷಿಣ ಆಫ್ರಿಕಾ ತಂಡದಲ್ಲಿ ಅವರಿಗೊಂದು ಸ್ಥಾನ ಭದ್ರವಾಗಿತ್ತು. ಈ ಫೀಲ್ಡಿಂಗ್ ದಿಗ್ಗಜ ಜಾಂಟಿ ರೋಡ್ಸ್ ಅವರಿಂದ ಈಗ ಭಾರತೀಯ ಫೀಲ್ಡರ್ ಒಬ್ಬರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರೇ ಟೀಮ್ ಇಂಡಿಯಾದ ಆಲ್ರೌಂಡರ್ ರವೀಂದ್ರ ಜಡೇಜಾ!

    ಭಾರತದ ಉತ್ತಮ ಫೀಲ್ಡರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಸುರೇಶ್ ರೈನಾ ಜತೆಗಿನ ಇನ್‌ಸ್ಟಾಗ್ರಾಂ ಲೈವ್ ಮಾತುಕತೆಯ ವೇಳೆ ಜಾಂಟಿ ರೋಡ್ಸ್ ಈ ಮೆಚ್ಚುಗೆ ವ್ಯಕ್ತಪಡಿಸಿದ್ದು, ‘ಜಡೇಜಾ ಅವರೊಬ್ಬ ವಿಶೇಷ ರೀತಿಯ ಫೀಲ್ಡರ್. ಚೆಂಡನ್ನು ಮೇಲಿನಿಂದ ಎಸೆಯಬೇಕೆಂದು ನಾನು ಫೀಲ್ಡರ್‌ಗಳಿಗೆ ಸಲಹೆ ನೀಡುತ್ತಿರುತ್ತೇನೆ. ಆದರೆ ಜಡ್ಡು (ಜಡೇಜಾ) ಬದಿಯಿಂದ ಚೆಂಡನ್ನು ಎಸೆಯುತ್ತಾರೆ. ಆದರೂ ಅವರು ಎಸೆಯುವ ಚೆಂಡು ವಿಕೆಟ್‌ಗೆ ಬಡಿಯುತ್ತದೆ. ಅವರು ನನಗಿಂತ ಮತ್ತು ನಿಮಗಿಂತ (ರೈನಾ) ಭಿನ್ನವಾದವರು. ಒಂದು ರೀತಿಯಲ್ಲಿ ಮೈಕೆಲ್ ಬೆವನ್ ಇದ್ದಂತೆ’ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಧೋನಿಗೆ ಬಿರಿಯಾನಿ ಕೊಡದೆ ತಂಡದಿಂದ ಹೊರಬಿದ್ದರೇ ಕೈಫ್​?

    ‘ಜಡೇಜಾ ಡೈವ್ ಹೊಡೆಯುವುದನ್ನು ಅಥವಾ ಸ್ಲೆ ಡ್ ಮಾಡುವುದನ್ನು ನೀವೆಂದೂ ನೋಡಲಾರಿರಿ. ಯಾಕೆಂದರೆ ಅವರು ವೇಗವಾಗಿ ಓಡುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಬೇಗನೆ ಚೆಂಡನ್ನು ಹಿಡಿದುಕೊಳ್ಳುತ್ತಾರೆ. ನಾನು ಮತ್ತು ನೀವು (ರೈನಾ) ಡರ್ಟಿ ಫೀಲ್ಡರ್‌ಗಳು. ನಾವು ನೆಲಕ್ಕೆ ಬಿದ್ದು ಮಣ್ಣು ಮಾಡಿಕೊಳ್ಳುತ್ತೇವೆ ಮತ್ತು ಬೇಗನೆ ಮೇಲೇಳುತ್ತೇವೆ. ಜಡೇಜಾ ಮತ್ತು ಬೆವನ್ ಅವರಂಥವರ ವೇಗ ಅಪೂರ್ವವಾದುದು. ಬೌಂಡರಿ ಗೆರೆಯ ಹೊರತಾಗಿ ಅವರು ಬೇರೆಲ್ಲೂ ಡೈವ್ ಹೊಡೆಯುವುದು ಕಾಣಲು ಸಿಗುವುದಿಲ್ಲ. ಜಡ್ಡು ಇತ್ತೀಚೆಗಿನ ದಿನಗಳಲ್ಲಿ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಕೆಲ ಅದ್ಭುತ ಕ್ಯಾಚ್‌ಗಳನ್ನೂ ಹಿಡಿದಿದ್ದಾರೆ. ಅವರ ಬದ್ಧತೆಯೇ ಅವರ ಶಕ್ತಿ’ ಎಂದು ಜಾಂಟಿ ರೋಡ್ಸ್ ವಿವರಿಸಿದ್ದಾರೆ.

    ಇದನ್ನೂ ಓದಿ: ಟೀಮ್ ಇಂಡಿಯಾ ಆಟಗಾರನ ಕುದುರೆ ಪ್ರೀತಿ

    ಎಬಿಡಿ, ಗುಪ್ಟಿಲ್‌ಗೂ ಮೆಚ್ಚುಗೆ
    ಜಡೇಜಾ ಹೊರತಾಗಿ ಜಾಗತಿಕ ಫೀಲ್ಡರ್‌ಗಳ ಪೈಕಿ ದಕ್ಷಿಣ ಆಫ್ರಿಕಾದವರೇ ಆದ ಎಬಿ ಡಿವಿಲಿಯರ್ಸ್‌ ಅವರ ಫೀಲ್ಡಿಂಗ್ ಇಷ್ಟ. ಬ್ಯಾಟಿಂಗ್‌ನಲ್ಲೂ ಅವರು ಮನರಂಜನೆ ನೀಡುತ್ತಾರೆ. ನ್ಯೂಜಿಲೆಂಡ್‌ನ ಮಾರ್ಟಿನ್ ಗುಪ್ಟಿಲ್ ಕೂಡ ಅತ್ಯುತ್ತಮ ಫೀಲ್ಡರ್ ಆಗಿದ್ದಾರೆ ಎಂದು 50 ವರ್ಷದ ರೋಡ್ಸ್ ಅಭಿಪ್ರಾಯ ಪಟ್ಟಿದ್ದಾರೆ. ಜಾಂಟಿ ರೋಡ್ಸ್ ದಕ್ಷಿಣ ಆಫ್ರಿಕಾ ಪರ 52 ಟೆಸ್ಟ್ ಮತ್ತು 245 ಏಕದಿನ ಪಂದ್ಯವಾಡಿದ್ದು, ಕ್ರಮವಾಗಿ 34 ಮತ್ತು 105 ಕ್ಯಾಚ್ ಹಿಡಿದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts