More

    ಕೆಲಸಕ್ಕಾಗಿ ಮುಗಿಬಿದ್ದ ಆಕಾಂಕ್ಷಿಗಳು ; 890 ಅಭ್ಯರ್ಥಿಗಳಿಗೆ ಕೆಲಸ

    ಚಿಕ್ಕಬಳ್ಳಾಪುರ: ಕನಿಷ್ಠ 900 ಮಂದಿಗೆ ಉದ್ಯೋಗ ಕೊಡಿಸುವ ಉದ್ದೇಶದೊಂದಿಗೆ ಜಿಲ್ಲಾಕೇಂದ್ರದಲ್ಲಿ ಆಯೋಜಿಸಲಾಗಿದ್ದು ಉದ್ಯೋಗ ಮೇಳಕ್ಕೆ ನಿರೀಕ್ಷೆಗೂ ಮೀರಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಆನ್‌ಲೈನ್‌ನಲ್ಲಿ 1,618 ಮತ್ತು ನೇರವಾಗಿ 1,733 ಮಂದಿ ಅರ್ಜಿ ಸಲ್ಲಿಸಿದ್ದರು.

    ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕೌಶಲಾಭಿವೃದ್ಧಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಭಾನುವಾರ ಕೈಗೊಂಡಿದ್ದ ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದ ಉದ್ಯೋಗಾಕ್ಷಿಗಳು ವಿವಿಧ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಮುಗಿಬಿದ್ದರು.

    ಮೋಡ ಮುಸುಕಿದ ವಾತಾವರಣ ಮತ್ತು ತುಂತರು ಹನಿಗಳ ಸಿಂಚನದ ನಡುವೆ ಜಿಲ್ಲೆ ಮಾತ್ರವಲ್ಲದೇ ದೇವನಹಳ್ಳಿ, ವಿಜಯಪುರ, ದೊಡ್ಡಬಳ್ಳಾಪುರ ಸೇರಿ ಇತರ ಕಡೆಗಳಿಂದ ಬಂದಿದ್ದ ಎಸ್ಸೆಸ್ಸೆಲ್ಸಿ ಉತ್ತೀರ್ಣ ಇಲ್ಲವೇ ಅನುತ್ತೀರ್ಣ, ಪಿಯುಸಿ/ಪದವಿ/ಐಟಿಐ/ಡಿಪ್ಲೊಮಾ/ಇಂಜಿನಿಯರಿಂಗ್/ ಸ್ನಾತಕೋತ್ತರ ಪದವಿ ಉತ್ತೀರ್ಣರಾದ ಆಕಾಂಕ್ಷಿಗಳು ಅಗತ್ಯ ದಾಖಲೆಗಳೊಂದಿಗೆ ನಾಲ್ಕೈದು ಬೃಹತ್ ಸಾಲುಗಳಲ್ಲಿ ನಿಂತು ಸಂದರ್ಶನವನ್ನು ಎದುರಿಸಿದರು.

    ಮೇಳದಲ್ಲಿ ವಿಸ್ಟ್ರಾನ್, ಮೀಶೋ, ಸ್ಪಂದನ ಸ್ಫೂರ್ತಿ, ಡೆಲಿವರಿ ಡಾಟ್‌ಕಾಮ್, ಎಚ್‌ಡಿಎಫ್‌ಸಿ, ಟಾಪೆ, ಮುತ್ತೂಟ್ ಪಿನ್‌ಕಾರ್ಪ್, ಪ್ರೀಕಾಟ್, ಎಕ್ಸಟ್ರೀಮ್ ಸಾಫ್‌ಟೆಕ್, ಭಿಮಲ್, ಎಜಾಕ್ಸ್ ಎಂಜಿನಿಯರ್ಸ್, ಅಕ್ಸಾ ಇನ್‌ಫೋಟೆಕ್ ಸೇರಿ 25 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು. ಆಕಾಂಕ್ಷಿಗಳಿಗೆ ಮಾರ್ಗದರ್ಶನ, ದಾಖಲೆಗಳ ಪರಿಶೀಲನೆ, ಕಂಪನಿಯ ಮಾನವ ಸಂಪನ್ಮೂಲ ಸಿಬ್ಬಂದಿಯಿಂದ ಸಂದರ್ಶನ ಮತ್ತು ನೇಮಕಾತಿ ಪತ್ರ ವಿತರಣೆ ಜತೆಗೆ ವಿವಿಧ ಪ್ರಕ್ರಿಯೆಗಳಿಗಾಗಿ ಕಾಲೇಜಿನಲ್ಲಿ ಪ್ರತ್ಯೇಕ ಕೊಠಡಿಗಳನ್ನು ಗುರುತಿಸಲಾಗಿತ್ತು.

    ಮೇಳ ಸಾಕ್ಷಿ: ಕರೊನಾ ನಿಯಂತ್ರಣದ ಸಲುವಾಗಿ ಕೈಗೊಂಡ ಲಾಕ್‌ಡೌನ್ ಸೇರಿ ನಿಬರ್ಂಧ ಕ್ರಮಗಳಿಂದ ಹಲವು ಕ್ಷೇತ್ರಗಳು ನಷ್ಟಕ್ಕೊಳಗಾಗಿದ್ದು, ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಇದರ ನಡುವೆ ಸರ್ಕಾರಿ ಹುದ್ದೆಗಳ ಭರ್ತಿಯು ನಿಧಾನಗತಿಯಲ್ಲಿದೆ. ಇದರಿಂದ ಜೀವನ ನಿರ್ವಹಣೆಗಾಗಿ ಯುವಕ ಯುವತಿಯರು ಕೆಲಸಕ್ಕೆ ಮುಗಿ ಬೀಳುತ್ತಿದ್ದು, ಉದ್ಯೋಗ ಮೇಳದಲ್ಲಿ ಕಂಡು ಬಂದ ದೃಶ್ಯಗಳು ಸಾಕ್ಷಿಯಾದವು. ಮುಂಬರುವ ದಿನಗಳಲ್ಲಿ ಬೃಹತ್ ಉದ್ಯೋಗ ಮೇಳದ ಆಯೋಜಿಸುವ ಅಗತ್ಯತೆಯನ್ನು ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆ ಅಧಿಕಾರಿಗಳು ಒಪ್ಪಿಕೊಂಡರು.

    890 ಮಂದಿಗೆ ಉದ್ಯೋಗ: ಉದ್ಯೋಗ ಮೇಳಕ್ಕೆ ಬರೋಬ್ಬರಿ 9 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವಾದರೂ 3,351 ಅಭ್ಯರ್ಥಿಗಳು ಆಗಮಿಸಿದ್ದರು. ಈ ಪೈಕಿ 1,890 ಪುರುಷರು ಮತ್ತು 1,416 ಮಹಿಳೆಯರು ಸಂದರ್ಶನ ಎದುರಿಸಿದ್ದು ಇದರಲ್ಲಿ 890 ಮಂದಿಗೆ ಉದ್ಯೋಗಾವಕಾಶ ನೀಡಲಾಗಿದೆ. 150 ಅಭ್ಯರ್ಥಿಗಳು ಮುಂದಿನ ಹಂತದ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts