More

    ಜಿಲ್ಲಾ ಪಂಚಾಯಿತಿ ಮಾಸಿಕ ಕೆಡಿಪಿ ಸಭೆ

    ಉಡುಪಿ: ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಎಲ್ಲ ಇಲಾಖೆಗಳು ಮಾರ್ಚ್ ಅಂತ್ಯದೊಳಗೆ ಆರ್ಥಿಕ ಮತ್ತು ಭೌತಿಕ ಗುರಿಯಲ್ಲಿ ಸಂಪೂರ್ಣ ಗುರಿ ಸಾಧಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ತಾಕೀತು ಮಾಡಿದರು.

    ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯಿತಿಗಳು ತೆರಿಗೆ ಸಂಗ್ರಹದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಿದ್ದು, ಬಾಕಿ ಇರುವ ಪಂಚಾಯಿತಿಗಳು ಮಾರ್ಚ್ ಅಂತ್ಯದೊಳಗೆ ಸಂಪೂರ್ಣ ಗುರಿ ಸಾಧಿಸಬೇಕು. ವಿವಿಧ ಪಂಚಾಯಿತಿಗಳಲ್ಲಿ ಬಾಕಿ ಇರುವ 33 ಲಕ್ಷ ರೂ. ಮೊತ್ತದ ವಿದ್ಯುತ್ ಬಿಲ್‌ಗಳನ್ನು ಶೀಘ್ರ ಪಾವತಿಸುವ ಕುರಿತು ಕಾರ್ಯನಿರ್ವಹಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

    ಮನೆ ಕಾಮಗಾರಿ ಪೂರ್ತಿಗೊಳಿಸಿ: ಜನಗಣತಿ ವೇಳೆ ಪ್ರತಿ ಮನೆಗಳಲ್ಲಿನ ಶೌಚಗೃಹದ ಗಣತಿ ಸಹ ನಡೆಯುವುದರಿಂದ ಬಾಕಿ ಇರುವ ಶೌಚಗೃಹಗಳನ್ನು ಶೀಘ್ರ ಮುಕ್ತಾಯಗೊಳಿಸುವಂತೆ ಮತ್ತು ಹೊಸದಾಗಿ ನಿರ್ಮಾಣವಾಗುವ ಮನೆಗಳಿಗೆ ಕಡ್ಡಾಯವಾಗಿ ಟ್ವಿನ್‌ಪಿಟ್ ಶೌಚಗೃಹಗಳನ್ನು ಅಳವಡಿಸುವ ಬಗ್ಗೆ ಷರತ್ತು ವಿಧಿಸುವಂತೆ ಹಾಗೂ ವಸತಿ ಯೋಜನೆಯಡಿ ಬ್ಲಾಕ್ ತೆರವುಗೊಳಿಸಿರುವ ಮನೆಗಳ ಕಾಮಗಾರಿ ಕೂಡಲೇ ಆರಂಭಿಸುವಂತೆ ತಿಳಿಸಿದರು.

    ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್, ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಆಶಿಶ್ ರೆಡ್ಡಿ, ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಯೋಜನಾ ನಿರ್ದೇಶಕ ಗುರುದತ್ ಉಪಸ್ಥಿತರಿದ್ದರು.

    ಒಣ ಕಸ ಸಂಗ್ರಹ: ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಮಾತನಾಡಿ, ಜಿಲ್ಲೆಯ 54 ಗ್ರಾಪಂಗಳಲ್ಲಿ ಒಣಕಸ ಸಂಗ್ರಹ ನಡೆಯುತ್ತಿದ್ದು, ಉಳಿದ ಗ್ರಾಪಂಗಳಲ್ಲಿ ಸಹ ಸಂಗ್ರಹಕ್ಕೆ ಸೂಚನೆ ನೀಡಲಾಗಿದೆ. ಹೊಸದಾಗಿ ಘನತ್ಯಾಜ್ಯ ಘಟಕ ಆರಂಭಿಸಲು 53 ಗ್ರಾಪಂಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ 24 ಪೂರ್ಣಗೊಂಡಿದ್ದು, 6 ಪ್ರಗತಿಯಲ್ಲಿವೆ. 13 ಟೆಂಡರ್ ಪ್ರಕ್ರಿಯೆಯಲ್ಲಿವೆ. ಘಟಕ ಆರಂಭಿಸಲು ಜಾಗದ ಅವಶ್ಯಕತೆಯಿದ್ದರೆ ತಿಳಿಸಬೇಕು ಎಂದು ಹೇಳಿದರು.

    ಕುಡಿಯುವ ನೀರಿಗೆ ರೂ.1 ಕೋಟಿ: ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ತುರ್ತಾಗಿ ಕುಡಿಯುವ ನೀರು ಪೂರೈಸಲು ಕೈಗೆತ್ತಿಕೊಳ್ಳುವ ಕಾಮಗಾರಿಗಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ವಿವೇಚನೆ ನಿಧಿಯಿಂದ 1 ಕೋಟಿ ರೂ. ಅನುದಾನ ಒದಗಿಸಲಾಗಿದ್ದು, ಈ ಕುರಿತು ಕ್ರಿಯಾ ಯೋಜನೆ ತಯಾರಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ತಿಳಿಸಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ, ಗ್ರಾಮೀಣ ಪ್ರದೇಶದಲ್ಲಿ ತುರ್ತಾಗಿ ಕುಡಿಯುವ ನೀರು ಪೂರೈಸಲು ಅಗತ್ಯವಿರುವ ಕೊಳವೆ ಬಾವಿ, ಹೊಸ ಪೈಪ್‌ಲೈನ್ ಕಾಮಗಾರಿ, ದುರಸ್ತಿ, ವಿದ್ಯುತ್ ಸಂಪರ್ಕ ಸೇರಿದಂತೆ ತುರ್ತಾಗಿ ಕೈಗೊಳ್ಳಬಹುದಾದ ಕಾಮಗಾರಿಗಳಿಗಾಗಿ 1 ಕೋಟಿ ರೂ. ಅನುದಾನ ನೀಡಲಾಗಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿರುವ ಗ್ರಾಪಂಗಳಲ್ಲಿ ಅಗತ್ಯವಿರುವ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts