More

    ಜನಪರ ಆಡಳಿತದ ಬಿಜೆಪಿ ಭರವಸೆ ಹುಸಿ ; ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನ ಎದುರು ಜೆಡಿಎಸ್ ಧರಣಿ

    ಚಿಕ್ಕಬಳ್ಳಾಪುರ: ಇಂಧನ ಬೆಲೆ ಏರಿಕೆ ಆಕ್ರೋಶದ ಜತೆಗೆ ಕರೊನಾ ಸೋಂಕು ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿ ಜೆಡಿಎಸ್ ಗುರುವಾರ ಪ್ರತಿಭಟನೆ ನಡೆಸಿತು.

    ಜಿಲ್ಲಾಡಳಿತ ಭವನದ ಎದುರು ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
    ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮೊದಲು ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿನ ಬೆಲೆ ಏರಿಕೆ, ಭ್ರಷ್ಟಾಚಾರ, ನಿರುದ್ಯೋಗ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದರು, ಜನಪರ ಆಡಳಿತದ ಭರವಸೆ ನೀಡಿದ್ದರು. ಆದರೆ, ಬಿಜೆಪಿ ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದಾಗಿನಿಂದಲೂ ಬಡ ಮತ್ತು ಮಧ್ಯಮ ವರ್ಗದ ಜನರು ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಗಂಭೀರ ಸಮಸ್ಯೆಗಳಿಗೆ ಹೈರಾಣರಾಗಿದ್ದಾರೆ. ಬಿಜೆಪಿ ಕಾರ್ಯ ವೈಖರಿ ಕಂಡು ಈ ಹಿಂದಿನ ಅನ್ಯ ಸರ್ಕಾರಗಳ ಆಡಳಿತವೇ ಮೇಲು ಎಂಬ ಭಾವನೆ ಮೂಡಿಸಿದೆ ಎಂದು ಚಿಂತಾಮಣಿ ಶಾಸಕ ಎಂ.ಕೃಷ್ಣಾರೆಡ್ಡಿ ವ್ಯಂಗ್ಯವಾಡಿದರು.

    ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಿದ ಬಿಜೆಪಿ, ದೇಶದ ಜನರ ಬದಲಿಗೆ ಕಾರ್ಪೋರೇಟ್ ಕಂಪನಿಗಳ ಹಿತ ಕಾಪಾಡಲು ಬದ್ಧವಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಡಬಲ್ ಎಂಜಿನ್ ಸರ್ಕಾರದಿಂದಲೂ ಕರ್ನಾಟಕಕ್ಕೆ ಹೆಚ್ಚಿನ ಅನುಕೂಲವಾಗಿಲ್ಲ. ಕರೊನಾ ಲಸಿಕೆ, ಜಿಎಸ್‌ಟಿ ಪಾಲು, ನೆಲ-ಜಲ ವಿಚಾರವಾಗಿ ಅನ್ಯಾಯವಾಗುತ್ತಿದೆ ಎಂದು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

    ಕರೊನಾ ಸೋಂಕಿನ ನಿಯಂತ್ರಣದಲ್ಲಿ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿದೆ. ಚಾಮರಾಜನಗರದಲ್ಲಿ ಸೋಂಕಿತರು ಆಕ್ಸಿಜನ್ ಕೊರತೆಯಿಂದ ಮೃತಪಟ್ಟ ದುರ್ಘಟನೆಯೇ ಉತ್ತಮ ನಿದರ್ಶನವಾಗಿದೆ. ಹಾಸಿಗೆ ಬ್ಲಾಕಿಂಗ್, ಸೋಂಕಿತರಿಂದ ಹಣ ವಸೂಲಿ, ಸಾವು ಮತ್ತು ಚಿಕಿತ್ಸೆ ವೆಚ್ಚದಲ್ಲಿ ಸುಳ್ಳು ಲೆಕ್ಕ ಸೇರಿ ನಾನಾ ರೀತಿಯಲ್ಲಿ ಜನರನ್ನು ವಂಚಿಸಲಾಗುತ್ತಿದೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ.ಮುನೇಗೌಡ ಆರೋಪಿಸಿದರು. ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ನಗರಸಭೆ ಸದಸ್ಯ ಆರ್.ಮಟಮಪ್ಪ ಹಾಗೂ ಕಾರ್ಯಕರ್ತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts