More

    ಜೆಡಿಎಸ್ ಬೆಂಬಲಿಸಲು ಮತದಾರರ ನಿರ್ಧಾರ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿಶ್ವಾಸ

    ಮಂಡ್ಯ: ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ರಾಷ್ಟ್ರೀಯ ಪಕ್ಷಗಳ ದುರಾಡಳಿತದಿಂದ ಬೇಸತ್ತಿರುವ ಜನರು ಜೆಡಿಎಸ್ ಬೆಂಬಲಿಸುವ ತೀರ್ಮಾನ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
    ತಾಲೂಕಿನ ಕೆರಗೋಡು ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಆರ್.ರಾಮಚಂದ್ರು ಪರವಾಗಿ ಶನಿವಾರ ರಾತ್ರಿ ಆಯೋಜಿಸಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನನ್ನನ್ನು ಮುಖ್ಯಮಂತ್ರಿ ಮಾಡಿದವರು ಮಂಡ್ಯದ ಜನ. ಅಂದು ಜಿಲ್ಲೆಯ ಜನತೆ ಒಟ್ಟಾಗಿ ಹೋರಾಟ ಮಾಡಿದ್ದೀರಿ. ಅದನ್ನು ನಾನು ಯಾವತ್ತೂ ಮರೆತಿಲ್ಲ. ಮರೆಯುವುದೂ ಇಲ್ಲ ಎಂದು ಹೇಳಿದರು.
    ಗ್ರಾಮ ಪಂಚಾಯಿತಿಯಿಂದ ದೆಹಲಿವರೆಗೆ ನನಗೆ ಆಶೀರ್ವಾದ ಮಾಡಿ ಕಳುಹಿಸಿದ್ದೀರಿ. ಅದೇ ರೀತಿ ನಮ್ಮ ಪಕ್ಷವನ್ನು ರಾಜ್ಯದಲ್ಲಿ ಉಳಿಸುವುದು ನಿಮ್ಮ ಕೈಯಲ್ಲಿದೆ. ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಆಶೀರ್ವಾದ ಮಾಡಿ, ನಿಮ್ಮ ಮನೆಯ ಮಗ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನು ಉಳಿಸಲು ದಿನದ 10-12 ಗಂಟೆ ಹೋರಾಟ ಮಾಡುತ್ತಿದ್ದೇನೆ. ಈ ಪಕ್ಷವನ್ನು ಶಾಶ್ವತವಾಗಿ ಉಳಿಸಬೇಕು ಎಂಬ ಉದ್ದೇಶದಿಂದ ಹೋರಾಡುತ್ತಿದ್ದೇನೆ ಎಂದು ಹೇಳಿದರು.
    ಎಚ್.ಡಿ.ಕುಮಾರಸ್ವಾಮಿ ರಾಜ್ಯಾದ್ಯಂತ ಓಡಾಡುತ್ತಿದ್ದಾರೆ. ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಪೂರ್ಣ ಸಾಲ ಮನ್ನಾ, ಹೈಟೆಕ್ ಆಸ್ಪತ್ರೆ ಮಾಡುವುದು, ಶಿಕ್ಷಣಕ್ಕೆ ಹೆಚ್ಚಿನ ಒತ್ತು, ಸರ್ಕಾರಿ ನೌಕರರಿಗೆ ನೀಡುವ ಮಾದರಿಯಲ್ಲೇ ರೈತರೀಗೂ ಪ್ರತೀ ತಿಂಗಳು 5 ಸಾವಿರ ರೂ ಪಿಂಚಣಿ ಯೋಜನೆ ಸೇರಿದಂತೆ ಪಂಚರತ್ನ ಯೋಜನೆಗಳನ್ನು ಜಾರಿ ಮಾಡಲು ನಿರ್ಧರಿಸಿದ್ದೇವೆ ಎಂದ ಅವರು, ಮೊದಲ ಬಾರಿಗೆ ಕಾಶ್ಮೀರಕ್ಕೆ ಹೋದವನು ನಾನು. ಅಲ್ಲಿ ನಿತ್ಯವೂ ಉಗ್ರರ ಉಪಟಳದಿಂದ ಹೆಚ್ಚಾಗಿ ನರಮೇಧ ನಡೆಯುತ್ತಲೇ ಇರುತ್ತದೆ ಎಂದು ಹೇಳುತ್ತಿದ್ದರು. ಮೊಟ್ಟ ಮೊದಲ ಬಾರಿಗೆ ಕನ್ನಡಿಗನಾದ ನಾನು ಕಾಶ್ಮೀರಕ್ಕೆ ಹೋಗಿದ್ದೆ. ಯಾವ ಮುಸ್ಲಿಂರೂ ಏನೂ ಮಾಡಲಿಲ್ಲ. ನಾಲ್ಕು ಬಾರಿ ಕಾಶ್ಮೀರಕ್ಕೆ ಹೋಗಿ ಬಂದಿದ್ದೇನೆ ಎಂದು ಬಿಜೆಪಿಗೆ ಟಾಂಗ್ ನೀಡಿದರು.
    ತಮಿಳರಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ. ಕನ್ನಡಿಗರಾದ ನಮಗೆ ಅವರು ಕುಡಿಯಲು ನೀರು ಕೊಡಲಿಲ್ಲ. ಅದಕ್ಕಾಗಿ ಇಳಿ ವಯಸ್ಸಿನಲ್ಲೂ ಹೋರಾಟ ಮಾಡಿದ್ದೇನೆ. ತಮಿಳರು ನಮಗೆ ಕುಡಿಯುವ ನೀರು ಕೊಡಲು ಅಡ್ಡಿ ಮಾಡಿದರು. ಎಷ್ಟೊಂದು ತೊಂದರೆ ಕೊಟ್ಟರು. ಆದರೂ ಛಲ ಬಿಡದೆ ಹೋರಾಟ ಮಾಡಿಕೊಂಡೇ ಬಂದಿದ್ದೇನೆ. ನಮಗೂ ನೀರಿನ ಮೇಲೆ ಹಕ್ಕಿಲ್ಲವೇ, ಕುಡಿಯಲು ನೀರು ಕೊಡುವುದಿಲ್ಲ ಎಂದರೆ ಏನು ಎಂದು ಪ್ರಶ್ನಿಸಿದ ಅವರು, ಈ ಹೋರಾಟದ ಕೆಚ್ಚೆದೆ ಕಾಂಗ್ರೆಸ್-ಬಿಜೆಪಿಗಿಲ್ಲ. ತಮಿಳರು ನೀಡುತ್ತಿದ್ದ ತೊಂದರೆಯಿಂದಾಗಿಯೇ ನಾನು ಹೋರಾಟ ಮಾಡಬೇಕಾಯಿತು. ಈ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ. ನನ್ನ ಕೊನೆಯುಸಿರು ಎಳೆಯುವವರೆವಿಗೂ ನಿರಂತರವಾಗಿ ನಡೆಯಲಿದೆ ಎಂದರು.
    ಪಕ್ಷದ ಅಭ್ಯರ್ಥಿ ಬಿ.ಆರ್.ರಾಮಚಂದ್ರು, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮನ್‌ಮುಲ್ ಉಪಾಧ್ಯಕ್ಷ ರಘುನಂದನ್, ಕೆರಗೋಡು ಹೋಬಳಿ ಜೆಡಿಎಸ್ ಮುಖಂಡ ವಸಂತ್, ಉದ್ಯಮಿ ಸ್ವಾಮಿ, ಬಿ.ಆರ್.ಸುರೇಶ್, ಆನಂದ್, ಶ್ರೀನಿವಾಸ್, ದಯಾನಂದ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts