More

    ಸಮಾಜದ ಶಾಂತಿಗಾಗಿ ಹೋರಾಡಿದ್ದಕ್ಕೆ ನನ್ನನ್ನು ಕೊಲ್ಲುವ ಸಂಚು: ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಸರಣಿ ಟ್ವೀಟ್​

    ಬೆಂಗಳೂರು: ಸಮಾಜದ ಶಾಂತಿಗಾಗಿ ಹೋರಾಡಿದ್ದಕ್ಕೆ ನನ್ನನ್ನು ಕೊಲ್ಲುವ ಸಂಚು ನಡೆಯುತ್ತಿದೆಯಂತೆ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಸರಣಿ ಟ್ವೀಟ್​ ಮಾಡಿದ್ದಾರೆ.

    ನನ್ನನ್ನು ಕೊಲ್ಲಿಸುವ ಕೆಲಸಕ್ಕೆ ಕೈಹಾಕಿದವರೇ ಒಂದು ವಿಚಾರ ತಿಳಿದುಕೊಳ್ಳಿ. ನನ್ನಂತೆ ಹೋರಾಡಬಲ್ಲ ಲಕ್ಷಾಂತರ ಕಾರ್ಯಕರ್ತರು, ಅಭಿಮಾನಿಗಳ ಪಡೆ ನನ್ನ ಬೆನ್ನಿಗಿದೆ. ನನ್ನನ್ನು ಕೊಲ್ಲಬಹುದು. ಆದರೆ ನನ್ನ ಬೆನ್ನಿಗೆ ನಿಂತವರನ್ನು ಕೊಲ್ಲಲಾದೀತೆ? ಎಂದು ಪ್ರಶ್ನಿಸಿದ್ದಾರೆ.

    ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ನಾನು‌ ನಡೆಸುತ್ತಿರುವ ಹೋರಾಟಕ್ಕೆ ಬೆದರಿರುವ ಬಿಜೆಪಿ, ನನ್ನನ್ನು ‘ಪಾಕಿಸ್ತಾನಿ’ ಎಂದು ಕರೆದು ಅಪಮಾನಿಸುವ ಪ್ರಯತ್ನ ಮಾಡುತ್ತಿದೆ. ಕೊಲ್ಲಲು ಬಂದವರದ್ದು ಬೆದರಿಕೆಯ ‘ಉಗ್ರ’ ತಂತ್ರವಾದರೆ, ಅವರದ್ದೇ ಸಿದ್ಧಾಂತ ಪ್ರತಿಪಾದಿಸುತ್ತಿರುವ ಬಿಜೆಪಿಯದ್ದು ಅಪಮಾನದ ತಂತ್ರ ಎಂದು ಟೀಕಿಸಿದ್ದಾರೆ.

    ಕರ್ನಾಟಕದಲ್ಲಿ ಒಕ್ಕಲಿಗ ನಾಯಕತ್ವದ ವಿರುದ್ಧ ಹಿಂದಿನಿಂದಲೂ ದೌರ್ಜನ್ಯ ರಾಜಕಾರಣ ಇದ್ದದ್ದೇ. ಮೂದಲಿಸುವುದು, ಸಲ್ಲದ ಆರೋಪ ಮಾಡುವುದು‌. ಈ ಹಿಂದೆ ನಡೆದ ತಂತ್ರಗಳು. ಆದರೆ ಈಗಿನ ಕೊಲ್ಲುವ ಸಂಚು, ಪಾಕಿಸ್ತಾನಿ ಪ್ರಯೋಗ, ಒಕ್ಕಲಿಗ ರಾಜಕಾರಣದ ವಿರುದ್ಧ ನಡೆಯುತ್ತಿರುವ ಮತ್ತೊಂದು ಬಗೆಯ ದೌರ್ಜನ್ಯ ಎಂದಿದ್ದಾರೆ.

    ಒಕ್ಕಲಿಗರು ಹೋರಾಟಕ್ಕಿಳಿದರೆ, ಅಧಿಕಾರಕ್ಕೆ ಬಂದರೆ ಅವರನ್ನು ಬೆದರಿಸುವ, ಸರ್ಕಾರಗಳನ್ನು ಬೀಳಿಸುವ ಕಾಯಕ ಹಿಂದಿನಿಂದ ನಡೆದುಕೊಂಡು ಬಂದಿದೆ. ದೇವೇಗೌಡ ಅಂತವರ ಮೇಲೇ ಹಲ್ಲೆ ಪ್ರಯತ್ನಗಳು ನಡೆದಿವೆ. ಅವರಿಗೆ ಅಧಿಕಾರ ವಂಚಿಸಲು ಯತ್ನಿಸಿದ್ದನ್ನು ಸಮಾಜ ನೋಡಿದೆ. ಈಗ ಈ ಶಕ್ತಿಗಳು ನನ್ನ ವಿರುದ್ಧ ನಿಂತಿವೆ. ಇದಕ್ಕೆ ಬೆದರುವ ವ್ಯಕ್ತಿ ನಾನಲ್ಲ.

    “ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗತ್ತು” ಎಂಬ ಕವಿವಾಣಿ ನೆನಪಿರಲಿ. ಅವರ ಪ್ರತಿನಿಧಿ ನಾನು. ರೈತರಿಗಾಗಿ ಕಾರ್ಯಕ್ರಮ ಹಮ್ಮಿಕೊಂಡವ ನಾನು. ನೀವು ನನ್ನನ್ನು ಕೊಲ್ಲಲಾದೀತೇ? ನನ್ನನ್ನು ಪಾಕಿಸ್ತಾನಿ ಎನ್ನುವಿರೇ? ಮುಂದೊಂದು ದಿನ ಪ್ರಾಯಶ್ಚಿತ ಪಡಲೆಂದೇ ಇಂದು ನೀವು ಮಾಡಿಕೊಳ್ಳುತ್ತಿರುವ ಪಾಪಗಳಿವು ಎಂದು ಟ್ವೀಟ್​ನಲ್ಲಿ ಹೇಳಿದ್ದಾರೆ.

    ಬಿಜೆಪಿಗರೇ ಎಚ್ಚರ: ನಿಮ್ಮ ಜೀನ್​ಗಳು ಪಾಕಿಸ್ತಾನದಲ್ಲಿರಬಹುದು. ಅಥವಾ ಜರ್ಮನಿಯ ನಾಜಿಗಳಲ್ಲಿರಬಹುದು. ನನ್ನ‌ ಜೀನ್ ಈ ಮಣ್ಣಿನಲ್ಲಿದೆ. ನನ್ನನ್ನು ಕೊಲ್ಲಲೆತ್ನಿಸುವವರು ನವ ಉಗ್ರರು. ಅಪಮಾನಿಸಲು ಯತ್ನಿಸುತ್ತಿರುವವರು ಒಕ್ಕಲಿಗ ಅಸ್ಮಿತೆಯ ವಿರೋಧಿಗಳು ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts