More

    ಜೆಡಿಎಸ್ ಕಾರ್ಯಗಾರದಲ್ಲಿ ವಾಸು ಪ್ರತ್ಯಕ್ಷ ; ವರಿಷ್ಠರ ಜತೆ ಮುನಿಸಿಗೆ ತಾತ್ಕಾಲಿಕ ಬ್ರೇಕ್ ; ದೂರವೇ ಉಳಿದ ಬೆಮೆಲ್

    ತುಮಕೂರು : ಪಕ್ಷದ ವರಿಷ್ಠರ ಮೇಲಿನ ಮುನಿಸು ಮರೆತು ಜೆಡಿಎಸ್ ಶಾಸಕ, ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್ ರಾಮನಗರ ಜಿಲ್ಲೆ ಬಿಡದಿ ಬಳಿ ನಡೆಯುತ್ತಿರುವ ಪಕ್ಷದ ಕಾರ್ಯಾಗಾರದಲ್ಲಿ 2ನೇ ದಿನವಾದ ಮಂಗಳವಾರ ಭಾಗವಹಿಸಿ ಅಚ್ಚರಿ ಮೂಡಿಸಿದರು.

    ಕೇತಗಾನಹಳ್ಳಿಯ ಎಚ್‌ಡಿಕೆ ತೋಟದ ಮನೆ ಆವರಣದಲ್ಲಿ ನಡೆಯುತ್ತಿರುವ ಜನತಾ ಪರ್ವ 1.0 ವಿಷನ್-123 ಕಾರ್ಯಗಾರದಲ್ಲಿ ಕಾಣಿಸಿಕೊಂಡ ಶ್ರೀನಿವಾಸ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪುತ್ರ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಜತೆಗೆ ಹಸ್ತಲಾಘವ ಮಾಡಿಸಿ ಮುನಿಸು ಮರೆತು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಸೂಚಿಸಿದರು.

    ಹಿರಿಯರ ಆದೇಶಕ್ಕೆ ತಲೆಬಾಗಿದ ವಾಸು ಸಮ್ಮಿಶ್ರ ಸರ್ಕಾರದ ಪತನ ಬಳಿಕ ಸೃಷ್ಟಿಯಾಗಿದ್ದ ವರಿಷ್ಠರ ನಡುವಿನ ಕಂದಕ ದಾಟಿ ಮತ್ತೆ ಕುಮಾರಸ್ವಾಮಿ ಜತೆ ಕೈಕುಲುಕಿದರು. ಈ ಸಂದರ್ಭಕ್ಕೆ ಪಕ್ಷದ ಜಿಲ್ಲಾ ಮುಖಂಡರು ಸಾಕ್ಷಿಯಾದರು. ತಾತ್ಕಾಲಿಕವಾಗಿ ಮುಖಂಡರ ನಡುವಿನ ಆಂತರಿಕ ಕಲಹಕ್ಕೆ ಬ್ರೇಕ್ ಬಿದ್ದದಂತಾಗಿದೆ.

    ಇಡೀ ದಿನ ಕಾರ್ಯಾಗಾರದಲ್ಲಿ ಅತ್ಯಂತ ಚಟುವಟಿಕೆಯಾಗಿ ಪಾಲ್ಗೊಂಡ ವಾಸು ಜಿಲ್ಲೆಯ ಹಾಲಿ, ಮಾಜಿ ಶಾಸಕರೊಂದಿಗೆ ಎಲ್ಲ ಬೇಸರವನ್ನು ಮರೆತು ಪಕ್ಷ ಸಂಘಟನೆ ವಿಚಾರ ಹಾಗೂ ಮುಂಬರುವ ಚುನಾವಣೆಗಳ ಬಗ್ಗೆ ಎಲ್ಲರೊಂದಿಗೆ ಚರ್ಚೆ ನಡೆಸಿದ್ದು ಗಮನಸೆಳೆಯಿತು. ಸದ್ಯಕ್ಕೆ ಪಕ್ಷದೊಳಗಿನ ಕಚ್ಚಾಟಕ್ಕೆ ತಾತ್ಕಾಲಿಕ ವಿರಾಮ ನೀಡಿದಂತಾಗಿದೆ.

    ಜಿಲ್ಲಾಧ್ಯಕ್ಷ ಆರ್.ಸಿ.ಆಂಝೀನಪ್ಪ, ಶಾಸಕರಾದ ಡಿ.ಸಿ.ಗೌರಿಶಂಕರ್, ಎಂ.ವಿ.ವೀರಭದ್ರಯ್ಯ, ಮಾಜಿ ಶಾಸಕರಾದ ಸಿ.ಬಿ.ಸುರೇಶ್‌ಬಾಬು, ಡಿ.ನಾಗರಾಜಯ್ಯ, ಎಂ.ಟಿ.ಕೃಷ್ಣಪ್ಪ, ಪಿ.ಆರ್.ಸುಧಾಕರಲಾಲ್ ಭಾಗವಹಿಸಿದ್ದರು.

    ಮುಖಂಡರ ಮುನಿಸು : ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಪತನದ ಬಳಿಕ ಎಚ್.ಡಿ.ಕುಮಾರಸ್ವಾಮಿ ಬಹಿರಂಗವಾಗಿ ಸಿಡಿದೆದ್ದಿದ್ದ ಎಸ್.ಆರ್.ಶ್ರೀನಿವಾಸ್ ಮೊನ್ನೆತನಕ ಎಚ್ಡಿಕೆ ಜತೆ ವೈಯಕ್ತಿಕವಾಗಿ, ರಾಜಕೀಯವಾಗಿ ಅಂತರ ಕಾಯ್ದುಕೊಂಡಿದ್ದರು. ಕುಮಾರಸ್ವಾಮಿ ಸೊಸೆ ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಾಸು ಪಕ್ಷದ ಕಾರ್ಯಾಗಾರದ ಮೊದಲ ದಿನ ಭಾಗವಹಿಸದೇ ಇದ್ದದು ರಾಜಕೀಯ ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು. ಸದ್ಯಕ್ಕೆ ವರಿಷ್ಠರ ಜತೆಗಿನ ಬಂಡಾಯಕ್ಕೆ ತೆರೆಎಳೆದಿರುವ ವಾಸು ವಿಧಾನಸಭಾ ಚುನಾವಣೆ ಹೊತ್ತಿಗೆ ಯಾವು ನಿರ್ಧಾರ ತೆಗೆದುಕೊಳ್ಳುತ್ತಾರೊ ಎಂಬುದನ್ನು ಕಾದುನೋಡಬೇಕಿದೆ. ಕಾಂಗ್ರೆಸ್ ಸೇರ್ಪಡೆಗೆ ತುದಿಗಾಲ ಮೇಲೆನಿಂತಿರುವ ವಿಧಾನಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಪಕ್ಷದ ಕಾರ್ಯಕ್ರಮದಿಂದ ದೂರವೇ ಉಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts