More

  ಜರೂರ್ ಮಾತು | ನಾವು ಬದಲಾಗದೆ ಎಷ್ಟು ಹೊಸವರ್ಷಗಳು ಬಂದರೇನು…?

  ಲೈಫೇ ಎಷ್ಟು ವಿಚಿತ್ರ ಅಲ್ವಾ…?
  ನಮ್ಮ ಹೊರಗಿದ್ದದ್ದು, ಎದುರಿಗಿದ್ದದ್ದು ಬದಲಾಗಬೇಕೆಂದೇ ಬಹುತೇಕರು ಬಯಸುವುದುಂಟು. ಹಾಗೆ ಹೊರಗಿನ ಬದಲಾವಣೆಯಾಗಿಬಿಟ್ಟರೆ ನಮ್ಮ ‘ಸಮಸ್ಯೆ’ ಕೊನೆಗೊಂಡಿತು ಎಂದು ಭಾವಿಸುತ್ತೇವೆ. ಅಂಥ ಸುಖ ಕೆಲವೇ ಕ್ಷಣಗಳದ್ದು. ಏಕೆಂದರೆ, ಮತ್ತೆ ಯಾವುದೋ ವ್ಯಕ್ತಿಯಲ್ಲಿ, ವ್ಯವಸ್ಥೆಯಲ್ಲಿ ನಮಗೆ ಸಮಸ್ಯೆ, ಅತೃಪ್ತಿ ಕಾಣುತ್ತದೆ. ಆಗ ಮನಸ್ಸು ಕೊರಗಲು ಶುರುಮಾಡುತ್ತದೆ. ಅದೇ ಗೋಜಲು, ಗೊಂದಲ. ಪರಿಣಾಮ, ಬದುಕನ್ನು ಹಳಿಯುತ್ತೇವೆ, ಬೇರೆಯವರನ್ನು ಟೀಕಿಸುತ್ತೇವೆ, ಹಣೆಬರಹವೇ ಚೆನ್ನಾಗಿಲ್ಲ ಎಂದು ಅಲವತ್ತುಕೊಳ್ಳುತ್ತೇವೆ. ಒಬ್ಬ ವ್ಯಕ್ತಿ ಜಗತ್ತಿನ ಸಮಸ್ಯೆಗಳನ್ನು ಕಂಡು ಅದನ್ನು ಪರಿಹರಿಸುತ್ತೇನೆ ಎಂದು ಹೊರಟು ನಿರಾಶನಾದ. ಬಳಿಕ ದೇಶದ, ರಾಜ್ಯದ, ಊರಿನ, ಮನೆಯ ಸಮಸ್ಯೆಯನ್ನೂ ಬಗೆಹರಿಸಲಾಗದೆ ಕುಗ್ಗಿದಾಗ ಅವನಿಗೆ ಜ್ಞಾನೋದಯವಾಗಿದ್ದು ‘ಸಮಸ್ಯೆ ನನ್ನಲ್ಲಿ ಇದೆ’ ಎಂದು… ಆಗ ನಿಜವಾದ ಪರಿವರ್ತನೆಯ ಪಯಣ ಆರಂಭವಾಯಿತು. ಈ ಕಥೆಯನ್ನು ಎಷ್ಟು ಬಾರಿ ಕೇಳಿಲ್ಲ? ಅಷ್ಟೇ ವೇಗದಲ್ಲಿ ಅದನ್ನು ಮರೆತು ಮತ್ತೆ ಹೊರಗಿನ ಬದಲಾವಣೆಗೆ ತುಡಿಯುತ್ತ, ಆಂತರಿಕ ಜಗತ್ತಿನಲ್ಲಿ ಕೋಲಾಹಲ ಎಬ್ಬಿಸುತ್ತೇವೆ.

  ಏಕೆ ಹೀಗಾಗುತ್ತೆ? ಮನಸ್ಸು ವಾಸ್ತವವನ್ನು ಒಪ್ಪಿಕೊಳ್ಳುವುದೇ ಇಲ್ಲ. ಅದು ಸದಾ ಭ್ರಮೆಗಳಲ್ಲೇ ಸಂತೋಷ ಅರಸುತ್ತದೆ. ಆ ಭ್ರಮೆಗಳನ್ನೇ ಜೀವನಕ್ಕೆ ಅನ್ವಯಿಸಿಕೊಂಡು ನೆಮ್ಮದಿ ಹಾಳು ಮಾಡಿಕೊಳ್ಳುತ್ತೇವೆ. ವಾಸ್ತವ ಒಪ್ಪಿಕೊಳ್ಳಲು ತುಂಬ ಮನೋಸ್ಥೈರ್ಯ ಬೇಕು. ಅಂಥವರೇ ಸ್ಥಿತಪ್ರಜ್ಞತೆ ಅಳವಡಿಸಿಕೊಳ್ಳಲು ಸಾಧ್ಯ. 2020ನೇ ಇಸ್ವಿ ಇನ್ನೇನು ಕಾಲಗರ್ಭ ಸೇರಲಿದೆ. 2021ನ್ನು ಸ್ವಾಗತಿಸಲು ಸಜ್ಜಾಗಿದ್ದೇವೆ. ಆದರೆ, ಹೊಸ ವರ್ಷದ ಉತ್ಸಾಹ, ಸಂತೋಷ ಕೆಲವೇ ದಿನಗಳಲ್ಲಿ ಕರಗಿ ಎಲ್ಲವೂ ‘ರೂಟೀನ್’ ಅನಿಸುವುದೇಕೆ? ಬೇರೆಯವರು ಬದಲಾಗಲಿ ಎಂದು ಹಪಹಪಿಸುವುದಕ್ಕಿಂತ ‘ನಾನು ಬದಲಾಗಬೇಕು…’ ಎಂಬ ಸಂಕಲ್ಪಕ್ಕೆ ಸಾಕಾರ ರೂಪ ನೀಡಿದರೆ ಪ್ರಪಂಚವೇ ಹೊಸದಾಗಿ ಕಾಣಿಸಿಕೊಳ್ಳುತ್ತದೆ. ನಮ್ಮ ಆಂತರಿಕ ಜಗತ್ತು ಕೂಡ ನಾವೀನ್ಯ ಪಡೆದುಕೊಂಡು, ಉತ್ಸಾಹದಿಂದ ಪುಟಿಯುತ್ತದೆ. ಹಾಗೇ ಗಮನಿಸಿ! ನಮ್ಮ ಸಂತೋಷ ಬೇರೆಯವರ ಮೇಲೆ ಅವಲಂಬಿಸಿದೆ! ಅಂದರೆ ಯಾರೋ ನಮ್ಮ ಮನಸ್ಸಿಗೆ ತಕ್ಕಂತೆ ನಡೆದುಕೊಂಡರೆ ನಮಗೆ ಖುಷಿ! ವಿರುದ್ಧವಾಗಿ ನಡೆದುಕೊಂಡರೆ ‘ಅವರು ಸರಿಯಿಲ್ಲ’ ಎಂಬ ಹಣೆಪಟ್ಟಿ. ಹಾಗಾಗಿಯೇ, ಕುಟುಂಬಗಳಲ್ಲಿ ನಲಿವಿನ ಪ್ರಮಾಣ ಕಡಿಮೆಯಾಗಿ ನೋವಿನ ಭಾರ ಹೆಚ್ಚಾಗುತ್ತದೆ. ಇದು ಇಷ್ಟಕ್ಕೆ ಸೀಮಿತವಾಗಿಲ್ಲ. ನಮ್ಮ ದುಃಖಕ್ಕೂ ಬೇರೆಯವರು ಕಾರಣ, ಕೋಪಕ್ಕೂ, ತಾಪಕ್ಕೂ, ಮುನಿಸಿಗೂ, ನೋವಿಗೂ! ಹೀಗೆ ಎಲ್ಲ ಘಟನಾವಳಿಗಳಿಗೆ, ಭಾವಪ್ರಪಂಚದ ತಾಕಲಾಟಗಳಿಗೆ ‘ಇನ್ನೊಬ್ಬರೇ’ ಕಾರಣ ಎಂದು ನಿರ್ಧರಿಸಿ ಬಿಡುತ್ತೇವೆ. ಹಾಗಾದರೆ, ನಾವು ಯಾರಿಗಾಗಿ ಬದುಕುತ್ತಿದ್ದೇವೆ? ನಮಗೋಸ್ಕರವೇ, ಬೇರೆಯವರಿಗೋಸ್ಕರವೇ? ನಾವು ನಮಗಾಗಿ ಬದುಕುತ್ತಿಲ್ಲ ಎಂದಾದರೆ ಇಷ್ಟೊಂದು ಹೋರಾಟ, ಪರದಾಟಗಳಿಗೆ ಏನು ಅರ್ಥವಿದೆ?

  ಭ್ರಮೆಗಳಲ್ಲೇ ಬದುಕನ್ನು ದೂಡುತ್ತಿದ್ದರೆ ವಾಸ್ತವ ಬದಲಾಗುವುದೇ? ನಮ್ಮ ಸಂತೋಷ, ಸಮಾಧಾನ ನಮ್ಮನ್ನು ಅವಲಂಬಿಸಿರಬೇಕೆ ಹೊರತು ಇತರರ ನಡವಳಿಕೆಯಿಂದಲ್ಲ. ಹಾಗೆ ಅಪೇಕ್ಷೆ ಇಟ್ಟುಕೊಂಡು ಹೊರಟರೆ ಇಷ್ಟು ಚಿಕ್ಕ ಬದುಕಿನಲ್ಲಿ ಎಷ್ಟು ಜನರನ್ನು ಹಾಗೆ ಬದಲಿಸಲು ಸಾಧ್ಯ? ಅದೊಂದು ವ್ಯರ್ಥಸಾಹಸ ಆದೀತು ಅಷ್ಟೇ. ಹಾಗಾಗಿ, ನಾವು ಬದುಕಲು, ನಗಲು ಕಲಿಯಬೇಕು. ಕೀಳರಿಮೆಯ ಭಾವವನ್ನು ಕಿತ್ತೊಗೆದು, ಬೇಸರದ ಮುಖವಾಡ ಕಳಚಿಟ್ಟು, ಅನುಕರಣೆಯ ಹಾದಿ ತ್ಯಜಿಸಿ ನಮ್ಮಂತೆ ನಾವು ಬದುಕಬೇಕು. ಆಗ ನೋಡಿ, ಬದುಕಿನ ಸೌಂದರ್ಯವೇ ಬದಲಾಗಿ ಬಿಡುತ್ತದೆ.

  ಮಹಾಪುರುಷರ ಜೀವನಪಥ ನೋಡಿದರೆ, ಅವರು ಆಂತರಿಕ ಪರಿವರ್ತನೆಯ ಪಥದಲ್ಲಿ ಕ್ರಮಿಸಿದ ಮೇಲೆಯೇ, ಬದುಕಿನ ಅರ್ಥಗಳನ್ನು ಅನಾವರಣಗೊಳಿಸಿದರು. ಪೂಜ್ಯ ಸಿದ್ಧೇಶ್ವರ ಸ್ವಾಮೀಜಿ ತುಂಬ ಮಹತ್ವದ ಜೀವನಸೂತ್ರವನ್ನು ಸರಳವಾಗಿ ಹೇಳಿದ್ದಾರೆ. ‘ಸಂಬಂಧಗಳೇ ಹೊಯ್ದಾಡುವಾಗ ಸಂಬಂಧದಿಂದ ಶಾಂತಿ ಪಡೆಯುತ್ತೇನೆ ಎಂದರೆ ಹೇಗೆ ಸಾಧ್ಯ ಮನುಷ್ಯನೇ…’ ಎನ್ನುತ್ತ ವಾಸ್ತವ ಒಪ್ಪಿಕೊಳ್ಳುವ ದಾರಿಯನ್ನೂ ಪರಿಚಯಿಸಿದ್ದಾರೆ. ಅದೇಂದರೆ, ‘ಇದ್ದಾಂಗ ಇರೋದಿಲ್ಲ…’! ಅಂದರೆ, ಯಾವುದು ಈಗಿರುವ ಹಾಗೆ ಇರುವುದಿಲ್ಲ. ಬದಲಾಗುತ್ತಲೇ ಇರುತ್ತದೆ. ಸುಖ, ದುಃಖಕ್ಕೂ ಇದು ಅನ್ವಯ. ಇಂದು ನಮ್ಮನ್ನು ಹೊಗಳುವ ಜನ, ನಾಳೆ ಯಾವುದೋ ಕಾರಣಕ್ಕೆ ತೆಗಳಲೂ ಬಹುದು. ಆದರೆ, ಜನ ಹೊಗಳುವಾಗಲೂ, ತೆಗಳುವಾಗಲೂ ‘ಇದು ಇದ್ದಾಂಗ ಇರೋದಿಲ್ಲ…’ ಅಂತ ಹೇಳಿಕೊಂಡರೆ ಮುಗಿಯಿತು! ಈ ವಾಸ್ತವದೊಂದಿಗೇ ಉದ್ಯಮ, ನೌಕರಿ, ಸಂಸಾರ ಅಷ್ಟೇ ಏಕೆ ಸಂನ್ಯಾಸಜೀವನ ಆರಂಭಿಸಿದರೂ ಹೊರಗಿನವು ನಮಗೆ ತಟ್ಟುವುದಿಲ್ಲ ಎನ್ನುತ್ತಾರೆ ಸ್ವಾಮೀಜಿ. ಉದ್ಯೋಗಕ್ಕೆ ಹೊಸದಾಗಿ ಸೇರಿಕೊಂಡವ, ಒಮ್ಮೆ ನಿವೃತ್ತಿಯಾಗಲೇ ಬೇಕು ಇದು ಇದ್ದಾಂಗ ಇರಂಗಿಲ್ಲ ಅಂದುಕೊಂಡರೆ, ಯೌವನದ ಬಗ್ಗೆ ಹುಚ್ಚುಭ್ರಮೆ ಕಟ್ಟಿಕೊಂಡವರು ವೃದ್ಧಾಪ್ಯವೂ ಬಂದೇ ಬರುತ್ತದೆ ಎಂದು ಅರ್ಥಮಾಡಿಕೊಂಡರೆ, ಅಧಿಕಾರದಲ್ಲಿ ಇರುವವರು ಕುರ್ಚಿಯಿಂದ ಒಂದು ದಿನ ಇಳಿಯಲೇ ಬೇಕಾಗುತ್ತದೆ ಎಂಬ ವಾಸ್ತವವನ್ನು ನೆನಪಿಟ್ಟುಕೊಂಡರೆ…. ಯಾವ ಸಂಗತಿಯೂ ತೀರಾ ಡಿಸ್ಟರ್ಬ್ ಮಾಡುವುದಿಲ್ಲ.

  ಬಹುತೇಕರು, ‘ಇದ್ದಾಂಗ ಇರೋದಿಲ್ಲ’ ಎಂಬ ಸೂತ್ರ ಬದಿಗಿಟ್ಟು, ‘ಈಗ ಇದ್ದಾಂಗೇ ಇರಬೇಕು’ ಎಂದು ಬಯಸುತ್ತಿರುವುದರಿಂದ ಲೈಫಿನ ಜರ್ನಿ ಗಮ್ಯದ ನಿಲ್ದಾಣ ಬಿಟ್ಟು ಎಲ್ಲೆಲ್ಲೋ ಸಾಗುತ್ತದೆ. ಇಂದಿನ ಕ್ಷಣಗಳಲ್ಲಿ ಬದುಕುವುದನ್ನು ಬಿಟ್ಟು ಭೂತಕಾಲದ ನೋವಿನಲ್ಲೋ, ಭವಿಷ್ಯದ ಆಲೋಚನೆಗಳಲ್ಲೋ ಕಳೆದುಹೋಗುತ್ತದೆ. ಅಷ್ಟಕ್ಕೂ, ಬದುಕಿನ ಬಗ್ಗೆ ನಾವೇನು ಹೊಸದಾಗಿ ಅನ್ವೇಷಿಸಬೇಕಿಲ್ಲ. ನೆಮ್ಮದಿ, ಸಮಾಧಾನದ ಜೀವನ ರೂಪಿಸಿಕೊಳ್ಳುವ ವಿಧಾನವನ್ನು ಸಂತ-ಮಹಂತರು, ಮಹಾಪುರುಷರು, ಸಾಧಕರು ತೋರಿಸಿಕೊಟ್ಟಿದ್ದಾರೆ.

  ಸಮರ್ಥ ರಾಮದಾಸರ ‘ದಾಸಬೋಧ’ ಇದನ್ನೇ ಪ್ರತಿಪಾದಿಸಿದೆ. ‘ಮನುಷ್ಯ ಜನ್ಮ ಅಮೂಲ್ಯ. ಇದನ್ನು ಯಾವುದ್ಯಾವುದೋ ಕ್ಷುಲ್ಲಕ ಕಾರಣಗಳಿಗೆ ವ್ಯಯಿಸಬೇಡಿ. ಬಂದ ಉದ್ದೇಶವನ್ನು ಅರ್ಥ ಮಾಡಿಕೊಂಡು, ಜೀವನ ಸಾರ್ಥಕ ಮಾಡಿಕೊಳ್ಳಿ’ ಎಂದ ರಾಮದಾಸರು ಅದೆಷ್ಟೋ ಮನಸ್ಸುಗಳ ಶೋಕವನ್ನು ಶಾಶ್ವತವಾಗಿ ನಿವಾರಿಸಿದ್ದಾರೆ. ಸಂತ ಗಜಾನನ ಮಹಾರಾಜ್, ‘ಅಹಂಕಾರ ಪಡಬೇಡ. ಇಲ್ಲಿ ಯಾವುದೂ ನಿನ್ನದಲ್ಲ. ಹೆಸರು ನಿನ್ನದಷ್ಟೇ. ಅದೂ ಬೇರೆಯವರು ಇಟ್ಟಿದ್ದು. ಉಸಿರು ಆತನದ್ದು (ಭಗವಂತನದ್ದು). ಏನು ತಂದಿದ್ದಿಯ ಅಂತ ಬೀಗುವೆ? ಏನು ಕಳೆದುಕೊಳ್ಳುತ್ತಿರುವೆ ಅಂತ ಇಷ್ಟು ಶೋಕಿಸುತ್ತಿರುವೆ?’ ಅಂತ ಬಡಿದೆಬ್ಬಿಸಿ ಮಾನವೀಯತೆಯ ಸೇವೆಯಲ್ಲೇ ಸಾರ್ಥಕತೆಯನ್ನು ತೋರಿಸಿಕೊಟ್ಟರು, ಒಂದು ಅಗಳು ಅನ್ನದ ಮಹತ್ವವನ್ನೂ ತೋರಿಸಿಕೊಟ್ಟರು. 14ನೇ ವರ್ಷಕ್ಕೆ ಜ್ಞಾನೇಶ್ವರಿ ರಚಿಸಿದ ಸಂತ ಜ್ಞಾನೇಶ್ವರ ಮಹಾರಾಜರು ಮನಸ್ಸನ್ನು ಶುದ್ಧ ಮಾಡಿಕೊಳ್ಳುವ ಪರಿಯನ್ನೇ ಬೋಧಿಸಿದರು. ಒಳ್ಳೆಯ ಕೆಲಸಗಳಿಗಾಗಿ ಹುರಿದುಂಬಿಸಿದ ಅಕ್ಕಲಕೋಟೆಯ ಸ್ವಾಮಿ ಸಮರ್ಥ, ‘ಹೆದರಬೇಡ, ನಾನು ನಿನ್ನ ಹಿಂದೆ ಇದ್ದೇನೆ’ ಎಂಬ ಧೈರ್ಯವನ್ನೂ ಕೊಟ್ಟರು. ಸಂತ ತುಕಾರಾಮ ಮಹಾರಾಜರಂತೂ, ‘ಜೀವನವೆಂದರೆ ಬೇರೆ ಏನೂ ಅಲ್ಲವಪ್ಪ, ಅದು ಬರೀ ಪ್ರೇಮ. ಪ್ರೇಮದ ಹೊರತಾಗಿ ಬೇರೇನೂ ಇಲ್ಲ’ ಎಂದರು. ಸಂತ ಗಾಡ್ಗೆ ಬಾಬಾ ಬಾಹ್ಯ ಸ್ವಚ್ಛತೆ, ಅಂತರಗದ ಸ್ವಚ್ಛತೆ ಎರಡರ ಅಗತ್ಯವನ್ನು ಮನದಟ್ಟು ಮಾಡಿಕೊಟ್ಟರು. ಇನ್ನು, ಪುರಂದರದಾಸರು, ಕನಕದಾಸರು ತಿಳಿಸಿಕೊಟ್ಟಿದ್ದು ಬದುಕಿನ ವಾಸ್ತವಗಳನ್ನೇ ಅಲ್ಲವೇ? ಬಸವೇಶ್ವರರು ವಚನಗಳಲ್ಲಿಯೇ ಜೀವನದರ್ಶನ ಮಾಡಿಸಿಲ್ಲವೇ?

  ಇಷ್ಟೊಂದು ಜ್ಞಾನದ ಖಜಾನೆ ನಮ್ಮಲ್ಲಿ ಇರುವುದರಿಂದಲೇ ವಿದೇಶಿಯರು ಸಮಾಧಾನ ಅರಸಿಕೊಂಡು ಭಾರತಕ್ಕೆ ಬರುತ್ತಾರೆ, ಅಧ್ಯಾತ್ಮ, ಜೀವನಶಾಸ್ತ್ರದ ಜಿಜ್ಞಾಸುಗಳಾಗುತ್ತಾರೆ. ಇಲ್ಲಿ ಕಂಡುಕೊಂಡ ಪರಮಸತ್ಯವನ್ನು ತಮ್ಮ ನೆಲಕ್ಕೂ ಕೊಂಡೊಯ್ದು ಪಸರಿಸುತ್ತಾರೆ. ಆದರೆ, ನಾವು… ಇದಕ್ಕೆ ತದ್ವಿರುದ್ಧ ದಿಕ್ಕಿನಲ್ಲಿ ಸಾಗುತ್ತ ಅನುಕರಣೆಯೇ ಬದುಕು ಎಂದುಕೊಂಡಿದ್ದೇವೆ. ಪಾಶ್ಚಾತ್ಯರ ಜೀವನಶೈಲಿಯನ್ನು ನಮ್ಮದು ಎಂದು ಪ್ರತಿಷ್ಠೆಯಿಂದ ಹೇಳಿಕೊಳ್ಳುತ್ತ ಮೂಲವನ್ನು ಮರೆಯುತ್ತಿದ್ದೇವೆ. ನಮ್ಮತನದ ಬಗ್ಗೆ ನಮಗೆ ತಾತ್ಸಾರ. ಅದರಿಂದಲೇ ಬದುಕು ನಿರಸ. ಹಿಂದೆ ಎಲ್ಲ ಜ್ಞಾನ, ಮೌಲ್ಯ, ಸಾತ್ವಿಕತೆ, ನೈತಿಕತೆ, ಉಪಕಾರ, ಸಹಿಷ್ಣುತೆ ಈ ಗುಣಗಳನ್ನು ಆಧರಿಸಿ ವ್ಯಕ್ತಿತ್ವವನ್ನೂ, ಅದರ ಶ್ರೇಷ್ಠತೆಯನ್ನೂ ಅಳೆಯಲಾಗುತ್ತಿತ್ತು. ಆದರೀಗ, ಹಣ, ಅಧಿಕಾರ, ಪ್ರತಿಷ್ಠೆ, ಸಂಪತ್ತು, ಸೌಂದರ್ಯದ ಆಧಾರದ ಮೇಲೆ ವ್ಯಕ್ತಿ ‘ಯಶಸ್ವಿ’ಯೋ ‘ಅಯಶಸ್ವಿ’ಯೋ ಎಂದು ನಿರ್ಧರಿಸುವ ವಿಪರ್ಯಾಸ. ಈ ದೃಷ್ಟಿಕೋನ ಬದಲಾಗದೆ ಜೀವನ ಹೇಗೆ ಬದಲಾಗಲು ಸಾಧ್ಯ?

  ನಮ್ಮನ್ನು ನಾವು ಅರಿತುಕೊಳ್ಳುವ, ಬದಲಾವಣೆ ಮಾಡಿಕೊಳ್ಳುವ, ಶಕ್ತಿ-ಸಾಮರ್ಥ್ಯ ಹಾಗೇ ದೌರ್ಬಲ್ಯಗಳನ್ನೂ ತಿಳಿದುಕೊಳ್ಳುವ ಮನಸ್ಸು ಮಾಡಿ, ಮೂಲದತ್ತ ಮರಳೋಣ. ಹೊಸವರ್ಷಕ್ಕೆ ‘ಹೊಸ ಗೊತ್ತುವಳಿ’ಗಳ ಪಟ್ಟಿ ಈಗಾಗಲೇ ಸಿದ್ಧವಾಗಿರಬಹುದು. ಅದರಲ್ಲಿ ಈ ಕೆಲವನ್ನು ಸೇರ್ಪಡೆ ಮಾಡಿಕೊಳ್ಳಲು ಸಾಧ್ಯವೇ ನೋಡಿ- * ಹಳೆಯ ನೋವುಗಳನ್ನು ಮರೆಯೋಣ. * ಸಂಪತ್ತಿಗಲ್ಲ; ಸಂಬಂಧಗಳಿಗೆ ಬೆಲೆ ನೀಡೋಣ. * ಕೀಳರಿಮೆ ದೂರ ಅಟ್ಟೋಣ. * ಎಲ್ಲರ ಹಿತ ಬಯಸುತ್ತ, ನಮ್ಮ ಉತ್ಕರ್ಷಕ್ಕಾಗಿ ಶ್ರಮಿಸೋಣ. * ಬೇರೆಯವರ ನೋವಿಗೆ, ಕಷ್ಟಕ್ಕೆ ನಮ್ಮಿಂದ ಸಾಧ್ಯವಾದಷ್ಟು ಸ್ಪಂದಿಸೋಣ. * ಇತರರ ಸಾಧನೆ, ಯಶಸ್ಸನ್ನು ನಾವೂ ಸಂಭ್ರಮಿಸಿ, ಅದರಿಂದ ಪ್ರೇರಣೆ ಪಡೆಯಲು ಪ್ರಯತ್ನಿಸೋಣ * ಸಕಾರಾತ್ಮಕ ಚಿಂತನೆ ಅಳವಡಿಸಿಕೊಂಡು, ಒಳ್ಳೆಯದನ್ನೇ ಮಾಡೋಣ. * ಮುಖದಲ್ಲಿ ಸದಾ ನಗುವೆಂಬ ದಿವ್ಯಾಭರಣ ಶೋಭಿಸುತ್ತಿರಲಿ. * ಇತರರಿಗೆ ಒಳ್ಳೆಯದನ್ನು ಮಾಡಲು ಸಾಧ್ಯವಾಗದಿದ್ದರೂ ಸರಿ; ಯಾರದೇ ಕೆಡಕನ್ನು ಬಯಸದಿರೋಣ. * ವಾಸ್ತವವನ್ನು ಒಪ್ಪಿಕೊಂಡು, ಅಪ್ಪಿಕೊಂಡು ಈಗಿನ ಕ್ಷಣದಲ್ಲಿ ಬದುಕೋಣ.

  ಆಗ ಪ್ರತಿದಿನವೂ ನವೋಲ್ಲಾಸದ ರಂಗೋಲಿಯೇ ಆದೀತು. ಅಲ್ಲವೇ?

  (ಲೇಖಕರು ವಿಜಯವಾಣಿ ಸಹಾಯಕ ಸುದ್ದಿಸಂಪಾದಕರು) 

  ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

  ಡಿಟಿಎಚ್​ ಪರಿಷ್ಕೃತ ಮಾರ್ಗದರ್ಶಿಗೆ ಸಚಿವ ಸಂಪುಟ ಒಪ್ಪಿಗೆ – ಪರವಾನಗಿ 20 ವರ್ಷಕ್ಕೆ, ಎಫ್​ಡಿಐ 100%

  ರಾಜ್ಯೋತ್ಸವ ರಸಪ್ರಶ್ನೆ - 29

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts