More

    ಮಾರುಕಟ್ಟೆಯಲ್ಲಿ ಜನವೋ ಜನ

    ಹುಬ್ಬಳ್ಳಿ: ಶುಕ್ರವಾರದಂದು ರಂಜಾನ್ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ನಗರದ ಹಳೇಹುಬ್ಬಳ್ಳಿ, ದುರ್ಗದ ಬೈಲ್ ಸೇರಿ ಇತರ ಮಾರುಕಟ್ಟೆ ಪ್ರದೇಶಗಳಲ್ಲಿ ಗುರುವಾರ ಜನ ಸಂಚಾರ ಹೆಚ್ಚಾಗಿತ್ತು. ದಿನಸಿ, ಡ್ರೖೆ ಫ್ರೂಟ್ಸ್, ತರಕಾರಿ, ಹಣ್ಣು- ಹಂಪಲು ಖರೀದಿಗೆ ಜನ ಮುಗಿಬಿದ್ದಿದ್ದರು. ಹಲವೆಡೆ ಕರೊನಾ ಮರೆತು ಪರಸ್ಪರ ಅಂತರವಿಲ್ಲದೆ ಓಡಾಡುತ್ತಿದ್ದ ದೃಶ್ಯ ಕಂಡು ಬಂತು.

    ಲಾಕ್​ಡೌನ್ ನಡುವೆಯೂ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 10 ಗಂಟೆವರೆಗೆ ಸರ್ಕಾರ ಅವಕಾಶ ಮಾಡಿದೆ. ಇದನ್ನೇ ನೆಪವಾಗಿಟ್ಟುಕೊಂಡು ಹಲವರು ರಸ್ತೆಗೆ ಇಳಿಯುತ್ತಿದ್ದಾರೆ. ರಂಜಾನ್ ಹಿನ್ನೆಲೆಯಲ್ಲಿ ಗುರುವಾರ ಖರೀದಿ ಭರಾಟೆ ಮತ್ತಷ್ಟು ಜೋರಾಗಿತ್ತು. ಹಳೇಹುಬ್ಬಳ್ಳಿ, ದುರ್ಗದ ಬೈಲ್ ಮಾರುಕಟ್ಟೆ, ಭೂಸಪೇಟ, ಅಕ್ಕಿಹೊಂಡ ಪ್ರದೇಶಗಳಲ್ಲಿ ಜನ ನಿರಾತಂಕವಾಗಿ ಓಡಾಡುತ್ತಿದ್ದರು. ಬೆಳಗ್ಗೆ 10 ಗಂಟೆಯಾಗುತ್ತಿದ್ದಂತೆ ಫೀಲ್ಡ್​ಗೆ ಇಳಿದ ಪೊಲೀಸರು ವ್ಯಾಪಾರ ಬಂದ್ ಮಾಡಿಸಿ, ಜನರನ್ನು ಮನೆಗೆ ಕಳುಹಿಸಿದರು.

    ಚನ್ನಮ್ಮ ವೃತ್ತದಲ್ಲಿ ಅನಗತ್ಯವಾಗಿ ಓಡಾಡುವ ವಾಹನಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಪೊಲೀಸರು ಬೆಳಗ್ಗೆ 6 ಗಂಟೆಯಿಂದಲೇ ತಪಾಸಣೆ ಆರಂಭಿಸಿದ್ದರು.

    ಬಡಾವಣೆಗಳಲ್ಲಿ ಹೆಚ್ಚಿದ ಓಡಾಟ: ಚನ್ನಮ್ಮ ವೃತ್ತ, ರಾಯಣ್ಣ ವೃತ್ತ, ಇಂಡಿ ಪಂಪ್ ವೃತ್ತ, ಸವೋದಯ ವೃತ್ತ, ಅಶೋಕ ನಗರ ಬ್ರಿಜ್ ವೃತ್ತ, ನವನಗರ ಸೇರಿದಂತೆ ನಗರದ ಪ್ರಮುಖ ಮಾರ್ಗಗಳಲ್ಲಿ ಪೊಲೀಸರ ಚೆಕ್ ಪಾಯಿಂಟ್​ಗಳಿವೆ. ಅಲ್ಲಿ ಪೊಲೀಸರು ಎಲ್ಲ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಹಾಗಾಗಿ, ಜನ ಒಳ ರಸ್ತೆಗಳಲ್ಲಿ ಕದ್ದು ಮುಚ್ಚಿ ಓಡಾಡುತ್ತಿರುವುದು ಸಾಮಾನ್ಯವಾಗಿದೆ.

    ಪಡಿತರಕ್ಕಾಗಿ ಜನದಟ್ಟಣೆ: ಪಡಿತರ ಪಡೆಯಲು ನಿತ್ಯ ನೂರಾರು ಜನ ಆಗಮಿಸುತ್ತಿದ್ದಾರೆ. ಹಾಗಾಗಿ, ರೇಶನ್ ಅಂಗಡಿಗಳ ಮುಂದೆ ಜನದಟ್ಟಣೆ ಹೆಚ್ಚಾಗಿದೆ. ಹಳೇ ಹುಬ್ಬಳ್ಳಿ, ಭೂಸಪೇಟ ಸೇರಿ ಕೆಲವೆಡೆ ಪರಸ್ಪರ ಅಂತರವಿಲ್ಲದೆ, ಮಾಸ್ಕ್ ಧರಿಸದೆ ಸರತಿಯಲ್ಲಿ ನಿಂತಿದ್ದ ದೃಶ್ಯ ಕಂಡು ಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts