More

    ಜನಸಾಮಾನ್ಯರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ

    ಜಮಖಂಡಿ: ತಾಯಿ ಮತ್ತು ಶಿಶು ಮರಣ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ಸುಸಜ್ಜಿತ ಆಸ್ಪತ್ರೆಗಳನ್ನು ನಿರ್ಮಿಸುವುದರ ಮೂಲಕ ಜನ ಸಾಮಾನ್ಯರ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಗೊವೀಂದ ಕಾರಜೋಳ ಹೇಳಿದರು.

    ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ತಾಲೂಕು ಆರೋಗ್ಯ ಅಧಿಕಾರಿಗಳ ಆಶ್ರಯದಲ್ಲಿ 100 ಹಾಸಿಗೆಗಳ ಸೌಲಭ್ಯವುಳ್ಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ರಾಜ್ಯದ 75 ಉಪ ವಿಭಾಗ ಕೇಂದ್ರಗಳಲ್ಲಿ 20 ಕೋಟಿ ರೂ.ಗೂ ಅಧಿಕ ಅನುದಾನದಲ್ಲಿ ಸುಸಜ್ಜಿತ ಆಸ್ಪತ್ರೆಗಳ ಆವರಣದಲ್ಲೇ ವೈದ್ಯರಿಗೆ, ಸಿಬ್ಬಂದಿಗೆ ವಸತಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಸ್ವಾತಂತ್ರೃ ನಂತರ ತಾಯಿ ಮತ್ತು ಶಿಶು ಮರಣ ಪ್ರಮಾಣ ಕಡಿಮೆ ಮಾಡುವುದಕ್ಕೆ ಬರೀ ಭಾಷಣ ಮಾಡುತಿದ್ದರು. ಆದರೆ, ಇದನ್ನು ತಡೆಯುವ ಯೋಜನೆ ಹಾಕಿಕೊಂಡಿರಲಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೊದಿ ದಿಟ್ಟ ಹೆಜ್ಜೆಯನಿಟ್ಟಿದ್ದಾರೆ ಎಂದರು.

    ಜಮಖಂಡಿ ಉಪವಿಭಾಗದಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ ಹೆಚ್ಚಿದ್ದ ಹಿನ್ನೆಲೆಯಲ್ಲಿ ಮುಧೋಳದಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ಎಆರ್‌ಟಿ ಕೇಂದ್ರ ನಿರ್ಮಿಸಲಾಗಿದೆ. ಇದರಿಂದ ಸುತ್ತಮುತ್ತಲಿನ ತಾಲೂಕಿನ ಎಚ್‌ಐವಿ ರೋಗಿಗಳಿಗೆ ಬಹಳಷ್ಟು ಅನುಕೂಲವಾಗಿದೆ ಎಂದರು.

    ಶಾಸಕ ಆನಂದ ನ್ಯಾಮಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, 1938ರಲ್ಲಿ ನಗರದಲ್ಲಿ ಆಸ್ಪತ್ರೆ ಕಾರ್ಯಾರಂಭ ಮಾಡಿದೆ. ದಿ. ಬಿ.ಡಿ. ಜತ್ತಿ ಅವರು ಈ ಆಸ್ಪತ್ರೆಯಲ್ಲಿ 100 ಹಾಸಿಗೆ ಆಸ್ಪತ್ರೆಯನ್ನಾಗಿ ಅಭಿವೃದ್ಧಿ ಮಾಡಿದ್ದರು. ಸುಮಾರು 70 ವರ್ಷ ಹಳೆಯದಾದ ಆಸ್ಪತ್ರೆಯನ್ನು 200 ಹಾಸಿಗೆಯ ಆಸ್ಪತ್ರೆಯನ್ನಾಗಿ ಅಭಿವೃದ್ಧಿ ಪಡಿಸಲು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.

    ದಿ. ಸಿದ್ದು ನ್ಯಾಮಗೌಡ ಬಡವರಿಗೆ ಕಡಿಮೆ ಖರ್ಚಿನಲ್ಲಿ ಉತ್ತಮ ಸೌಲಭ್ಯಗಳನ್ನೊಳಗೊಂಡ ಸಹಕಾರಿ ಆಸ್ಪತ್ರೆ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದರು. ಈ ಬಗ್ಗೆ ಅಂದಿನ ಆರೋಗ್ಯ ಸಚಿವ ಶಿವಾನಂದ ಪಾಟೀಲ ಅವರ ಮುಂದೆ ಪ್ರಸ್ತಾಪಿಸಿದಾಗ 100 ಹಾಸಿಗೆಯುಳ್ಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಮಂಜೂರಾತಿ ನೀಡಿದರು. ಸರ್ಕಾರ ಬದಲಾದರೂ ಉಪಮುಖ್ಯಮಂತ್ರಿ ಗೊವೀಂದ ಕಾರಜೋಳ ಸಹಕಾರ ನೀಡಿ ಸರ್ಕಾರದಿಂದ ಅನುಮೋದನೆ ನೀಡಿ ಭೂಮಿಪೂಜೆ ನೆರವೇರಿಸಿದ್ದಾರೆ ಎಂದರು.

    ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ತೇರದಾಳ ಶಾಸಕ ಸಿದ್ದು ಸವದಿ, ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೊಮಾರ, ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ, ನಗರಸಭೆ ಅಧ್ಯಕ್ಷ ಸಿದ್ದು ಮೀಶಿ, ಉಪಾಧ್ಯಕ್ಷೆ ಮಲ್ಲವ್ವ ಪಾಯಗೊಂಡ, ತಾಪಂ ಅಧ್ಯಕ್ಷೆ ಸವಿತಾ ಕಲ್ಯಾಣಿ, ಉಪಾಧ್ಯಕ್ಷೆ ಸುಂದ್ರವ್ವ ಬೆಳಗಲಿ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಫಕೀರಸಾಬ ಬಾಗವಾನ, ಅರುಣಕುಮಾರ ಶಹಾ, ರಾಜು ಪಿಸಾಳ ಇತರರು ಇದ್ದರು.

    ಸುರೇಶ ಬಿರಾದಾರ ನಾಡಗೀತೆ ಹಾಡಿದರು. ಜಿಲ್ಲಾ ಆರೋಗ್ಯಾಧಿಕಾರಿ ಎ.ಎನ್. ದೇಸಾಯಿ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಶ್ರೀನಿವಾಸ ಕಟ್ಟಿಮನಿ ನಿರೂಪಿಸಿದರು.

    ಕರೊನಾ ತಾತ್ಸಾರ ಬೇಡ
    ದೇಶದಲ್ಲಿ ಎರಡನೇ ಹಂತದಲ್ಲಿ ಕರೊನಾ ಬಹಳ ಕ್ರೂರವಾಗಿ ಹರಡಲಿದೆ. ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಕರೊನಾ ಇನ್ನೂ ಹೋಗಿಲ್ಲ. ಕರೊನಾ ಬಗ್ಗೆ ತಾತ್ಸಾರ ಮಾಡಬೇಡಿ. ಅಲಕ್ಷೃ ಮಾಡದೆ ಪ್ರತಿಯೊಬ್ಬರೂ ಮಾಸ್ಕ್‌ಗಳನ್ನು ಧರಿಸಬೇಕು. ಇದರಿಂದ ಶೇ.90 ರಷ್ಟು ಕರೊನಾ ಬರದಂತೆ ತಡೆಯಬಹುದು. ಪರಸ್ಪರ ಅಂತರದಿಂದ ಎಲ್ಲರೂ ಇದ್ದು, ಜಾಗೃತರಾಗಿರಬೇಕು ಎಂದು ಡಿಸಿಎಂ ಗೊವೀಂದ ಕಾರಜೋಳ ಮನವಿ ಮಾಡಿಕೊಂಡರು.

    ತರಾಟೆಗೆ ತೆಗೆದುಕೊಂಡ ಡಿಸಿಎಂ
    100 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಭೂಮಿಪೂಜೆ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯರಿಗೆ, ಮಾಜಿ ಶಾಸಕರಿಗೆ ಸೌಜನ್ಯಕ್ಕಾದರೂ ಆಮಂತ್ರಣ ಪತ್ರಿಕೆ ಕೊಡುವುದಕ್ಕೆ ಆಗಲ್ವಾ, ನಿಮಗೆ ಸಾಮಾನ್ಯ ಜ್ಞಾನ ಇಲ್ವಾ, ನೀವು ಬೇರೆಕಡೆ ಹೋಗುವುದಕ್ಕೆ ತಯಾರಾಗಿ ಎಂದು ಮುಖ್ಯ ಆರೋಗ್ಯಾಧಿಕಾರಿ ಡಾ. ಕೃಷ್ಣಾ ಬಣ್ಣದ ಅವರನ್ನು ಡಿಸಿಎಂ ಗೋವಿಂದ ಕಾರಜೋಳ ತರಾಟೆಗೆ ತೆಗೆದುಕೊಂಡರು. ಡಾ. ಕೃಷ್ಣಾ ಬಣ್ಣದ ಅವರಿಗೆ ಶೋಕಾಸ್ ನೋಟಿಸ್ ನೀಡಿ ಅವರನ್ನು ಬಿಡುಗಡೆಗೊಳಿಸಿ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಎ.ಎನ್.ದೇಸಾಯಿ ಅವರಿಗೆ ಡಿಸಿಎಂ ಸೂಚನೆ ನೀಡಿದರು.

    ನಮಗೆ ಡೀಸೆಲ್ ಬಿಲ್ ಕೊಡಿಸ್ರಿ ಸಾಹೇಬ್ರ
    ಡಿಸಿಎಂ ಗೋವಿಂದ ಕಾರಜೋಳ ಕಾರ್ಯಕ್ರ ಮುಗಿಸಿ ವಾಹನದಲ್ಲಿ ಹೊರ ಹೋಗುತ್ತಿದ್ದ ಸಂದರ್ಭದಲ್ಲಿ ಹಲವು ವರ್ಷಗಳಿಂದ ನಮ್ಮ ವಾಹನದ ಡೀಸೆಲ್ ಬಿಲ್ ನೀಡಿಲ್ಲರ‌್ರಿ, ನಮಗೆ ಡೀಸೆಲ್ ಬಿಲ್ ಕೊಡಿಸ್ರಿ ಎಂದು ತಾಪಂ ಅಧ್ಯಕ್ಷೆ ಸವಿತಾ ಕಲ್ಯಾಣಿ, ಉಪಾಧ್ಯಕ್ಷೆ ಸುಂದ್ರವ್ವ ಬೆಳಗಲಿ ಮನವಿ ಮಾಡಿದರು. ಇದಕ್ಕೆ ಡಿಸಿಎಂ ಈ ಕುರಿತು ಸಿಇಒ ಅವರಿಗೆ ಹೇಳುತ್ತೇನೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts