More

    ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ

    ಜಮಖಂಡಿ: ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆ ಮುಖ್ಯಸ್ಥ ಸಂಜಯ ಮೋಹನ ಅವರು ಜಮಖಂಡಿ ತಾಲೂಕಿನಲ್ಲಿ ಕೈಗೊಂಡಿರುವ ಅರಣ್ಯ ಅಭಿವೃದ್ಧಿ ಕಾರ್ಯಗಳನ್ನು ಭಾನುವಾರ ವೀಕ್ಷಿಸಿದರು.

    ಬೆಳಗ್ಗೆ ರಾಮತೀರ್ಥ ಅರಮನೆ ಪ್ರದೇಶದ ಹಿಂಭಾಗದಲ್ಲಿರುವ ನೆಡುತೋಪು ಹಾಗೂ ಕಟ್ಟೆ ಕೆರೆ ಸುತ್ತಲಿನ ಪ್ರದೇಶವನ್ನು ವೀಕ್ಷಿಸಿದರು. ನಂತರ ಹುನ್ನೂರು ಗ್ರಾಮದ ಕೆರೆ ಹಾಗೂ ಕಲ್ಹಳ್ಳಿ ವೆಂಕಟೇಶ್ವರ ದೇವಸ್ಥಾನ ಬಳಿಯ ಗುಡ್ಡದ ಪ್ರದೇಶಕ್ಕೆ ಭೇಟಿ ನೀಡಿದರು.

    ಎರಡು ವರ್ಷಗಳ ಹಿಂದೆ ಕಲ್ಹಳ್ಳಿ ವೆಂಕಟೇಶ್ವರ ದೇವಸ್ಥಾನ ಬಳಿ ಕೈಗೊಂಡಿರುವ ಪ್ಲಾೃಂಟೇಷನ್ ವೀಕ್ಷಿಸಿದ ಅವರು, ಬಹುತೇಕ ಕಲ್ಲಿನಿಂದ ಕೂಡಿರುವ ಗುಡ್ಡದ ಪ್ರದೇಶದಲ್ಲಿ ನೆಟ್ಟಿರುವ 900 ಆಲ, ಅರಳಿ, ಹುಣಸೆ, ಬಸರಿ ಹಾಗೂ ಗೋಣಿ ಸಸಿಗಳು ಇಲಾಖೆಯ ಸಂರಕ್ಷಣೆಯಿಂದಾಗಿ ಮರಗಳಾಗಿ ಬೆಳೆದಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು. ಒಣ ಪ್ರದೇಶದಲ್ಲೂ ಹಸಿರು ವೃದ್ಧಿಗಾಗಿ ಶ್ರಮಿಸುತ್ತಿರುವ ಸಾಮಾಜಿಕ ಅರಣ್ಯ ವಲಯ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿದರು.

    ಹುನ್ನೂರು ಕೆರೆ ಏರಿ ಮೇಲೆ ಮೂರು ವರ್ಷಗಳ ಹಿಂದೆ ಸಾಮಾಜಿಕ ಅರಣ್ಯ ವಲಯದವರು ನೆಟ್ಟಿರುವ 200ಕ್ಕೂ ಅಧಿಕ ಸಸಿಗಳು ಈಗ ಮರಗಳಾಗಿ ಬೆಳೆದಿದ್ದನ್ನು ವೀಕ್ಷಿಸಿದ ಸಂಜಯ ಮೋಹನ, ಅವುಗಳನ್ನು ರಕ್ಷಿಸಿದ ಕಾವಲುಗಾರ ಸಂಗಪ್ಪ ಕುಲ್ಹಳ್ಳಿ ಅವರಿಂದ ಮಾಹಿತಿ ಪಡೆದರು. ಕೆರೆಗೆ ಉದ್ಯಾನ ಸ್ವರೂಪ ನೀಡಲು ಸಹಕಾರ ನೀಡಿದ ಹುನ್ನೂರು ಗ್ರಾಮಸ್ಥರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ವಿ.ಪಾಟೀಲ, ಬಾಗಲಕೋಟೆ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಸಂಕಿನಮಠ, ಸಾಮಾಜಿಕ ವಿಭಾಗದ ಡಿಎಫ್‌ಒ ಸುದರ್ಶನ ಸಾವಂತ್, ಜಮಖಂಡಿ ಪ್ರಾದೇಶಿಕ ಉಪವಿಭಾಗದ ಎಸಿಎಫ್ ಸುರೇಶ ತೇಲಿ, ಸಾಮಾಜಿಕ ಉಪವಿಭಾಗದ ಎಸಿಎಫ್ ಅಶೋಕ ಚೌಗಲಾ, ವಲಯ ಅರಣ್ಯಾಧಿಕಾರಿ ಲಿಂಗೋಜಿರಾವ್ ಕುಲಕರ್ಣಿ ಹಾಗೂ ಸಿಬ್ಬಂದಿ ಇದ್ದರು.

    ಹುನ್ನೂರು ಗ್ರಾಮಸ್ಥರ ಮನವಿ
    ಹುನ್ನೂರು ಗ್ರಾಮದ ಬಳಿಯ ಗುಡ್ಡದ ಪ್ರದೇಶದಲ್ಲಿರುವ ಹುಲಿಕೋಡಿ ಬಾಂದಾರ ವಿಸ್ತರಣೆಗೆ ಅವಕಾಶ ಮಾಡಿಕೊಡುವಂತೆ ಗ್ರಾಮಸ್ಥರು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆ ಮುಖ್ಯಸ್ಥ ಸಂಜಯ ಮೋಹನ ಅವರಿಗೆ ಮನವಿ ಮಾಡಿದರು. ಮಳೆಗಾಲದಲ್ಲಿ ಗುಡ್ಡದಿಂದ ಹರಿಯುವ ನೀರನ್ನು ಬಾಂದಾರ ಕಟ್ಟಿ ತಡೆಯಲಾಗಿದೆ. ಪೈಪ್‌ಲೈನ್ ಮೂಲಕ ಕೆರೆ ನೀರನ್ನು ಬಾಂದಾರಗೆ ತುಂಬುತ್ತಿರುವುದರಿಂದ ಅಂತರ್ಜಲಮಟ್ಟ ಹೆಚ್ಚಳವಾಗಿ ನೀರಿನ ಸಮಸ್ಯೆ ನಿವಾರಣೆಯಾಗಿದೆ. ಚಿಕ್ಕ ಬಾಂದಾರವನ್ನು ವಿಸ್ತರಿಸುವುದರಿಂದ ಮತ್ತಷ್ಟು ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ ಎಂದು ಗ್ರಾಮಸ್ಥ ಈಶ್ವರ ಹನಗಂಡಿ ತಿಳಿಸಿದರು. ಗ್ರಾಮಸ್ಥರ ಮನವಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ವಿಜಯಕುಮಾರ್ ಅವರಿಗೆ ಸಂಜಯ ಮೋಹನ ಸೂಚಿಸಿದರು. ಹುನ್ನೂರಿನ ಪರಿಸರ ಪ್ರಿಯರಾದ ಶಂಕ್ರಯ್ಯ ಕಾಡದೇವರಮಠ, ಶಾಂತವೀರ ಕೋಲಾರ, ಪೌರ ಕಾರ್ಮಿಕರು ಹಾಗೂ ಗ್ರಾಮಸ್ಥರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts