More

    ಜಮಾ ಆಗದ ರಾಗಿ ಖರೀದಿ ಹಣ: ಬಾಕಿಗಾಗಿ ರೈತರ ಅಲೆದಾಟ

    ರಾಮನಗರ: ಸರ್ಕಾರ ಬೆಂಬಲ ಬೆಲೆಯಲ್ಲಿ ರೈತರಿಂದ ರಾಗಿ ಖರೀದಿಯೇನೋ ಮಾಡಿದೆ, ಆದರೆ ತಾಂತ್ರಿಕ ಕಾರಣದಿಂದ ಕಳೆದ 5 ತಿಂಗಳಿಂದ ಜಿಲ್ಲೆಯ ಸುಮಾರು 70 ರೈತರಿಗೆ ಹಣ ಸಂದಾಯವಾಗದೇ ರೈತರನ್ನು ತೊಂದರೆಗೆ ನೂಕಿದೆ.

    ನ್ಯಾಯಬೆಲೆ ಅಂಗಡಿಗಳ ಮೂಲಕ ಸಾರ್ವಜನಿಕರಿಗೆ ಪಡಿತರವಾಗಿ ರಾಗಿ ವಿತರಿಸಲು ನಿರ್ಧಾರ ಕೈಗೊಂಡ ಸರ್ಕಾರ, ರೈತರನ್ನು ರಾಗಿ ಬೆಳೆಯಲು ಉತ್ತೇಜಿಸಿ ಬೆಂಬಲ ಬೆಲೆಯಲ್ಲಿ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮೂಲಕ ಪ್ರತಿವರ್ಷ ರಾಗಿ ಖರೀದಿ ಮಾಡುತ್ತಿದೆ. ಆದರೆ, ಈ ಬಾರಿ ಖರೀದಿಸಿದ ರಾಗಿ ಹಣವಿನ್ನೂ ರೈತರ ಬ್ಯಾಂಕ್ ಖಾತೆಗೆ ಜಮಾ ಆಗದೆ ಪ್ರತಿದಿನ ಕಚೇರಿಗೆ ಅಲೆಯುವಂತಾಗಿದೆ.

    ಲಿಂಕ್ ಆಗಿಲ್ಲವಂತೆ: ಜಿಲ್ಲೆಯ ಪ್ರತಿ ತಾಲೂಕು ಕೇಂದ್ರದಲ್ಲಿಯೂ ಒಂದೊಂದು ರಾಗಿ ಖರೀದಿ ಕೇಂದ್ರ ತೆರೆಯಲಾಗಿತ್ತು. ರಾಗಿ ಮಾರಾಟ ಮಾಡುವ ರೈತ ಜಮೀನಿನ ಪಹಣಿ, ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಆಧಾರ್ ಕಾರ್ಡ್ ಪ್ರತಿಯನ್ನು ನೀಡಬೇಕಿತ್ತು. ಆದರೆ, ರೈತರು ನೀಡಿರುವ ಬ್ಯಾಂಕ್ ಖಾತೆಗೂ ಆಧಾರ್ ಸಂಖ್ಯೆಯೂ ಹೊಂದಾಣಿಯೇ ಆಗುತ್ತಿಲ್ಲ ಅಥವಾ ಬಹುತೇಕ ರೈತರ ಬ್ಯಾಂಕ್‌ಗಳು ಆಧಾರ್ ನಂಬರ್‌ಗೆ ಲಿಂಕ್ ಆಗಲೇ ಇಲ್ಲ. ಇದರಿಂದಾಗಿ ರಾಗಿ ಖರೀದಿ ಹಣ ರೈತರ ಖಾತೆಗೆ ಜಮೆ ಆಗಿಲ್ಲ ಎನ್ನುವುದು ಅಧಿಕಾರಿಗಳ ಅಭಿಪ್ರಾಯ. ಯಾವ ರೈತರಿಗೆ ಹಣ ತಲುಪಿಲ್ಲವೋ ಅಂತಹ ರೈತರು ತಮ್ಮ ಬ್ಯಾಂಕ್ ಖಾತೆಗೆ ಕೂಡಲೇ ಆಧಾರ್ ಲಿಂಕ್ ಮಾಡಬೇಕು ಎಂದು ಅಧಿಕಾರಿಗಳ ಮನವಿ.

    ನಗದು ನೀಡಿ: ಮಧ್ಯವರ್ತಿಗಳ ಹಾವಳಿ ಮತ್ತು ಅಧಿಕಾರಿಗಳ ಕಿರುಕುಳ ತಪ್ಪಿಸಲು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಆನ್‌ಲೈನ್ ವ್ಯವಸ್ಥೆ ಜಾರಿಗೆ ಬಂದಿದೆ. ಇದರಿಂದ ರೈತರಿಗೆ ಅನುಕೂಲವಾಗಿದೆ. ಆದರೆ ರಾಗಿ ಮಾರಾಟ ಮಾಡಿ ಹಲವಾರು ತಿಂಗಳುಗಳು ಕಳೆದರೂ ಹಣ ಸಿಗದೇ ಇರುವುದರಿಂದ ನಗದು ರೂಪದಲ್ಲಿಯೇ ರೈತರಿಗೆ ಹಣ ನೀಡಬೇಕು ಎನ್ನುವುದು ರೈತರ ಆಗ್ರಹವಾಗಿದೆ.

    ಮತ್ತೊಬ್ಬರ ಖಾತೆಗೆ ಹಣ: ಕೆಲವು ರೈತರಿಗೆ ಹಣ ಸಿಗದಿರುವುದು ಒಂದೆಡೆಯಾದರೆ, ಮತ್ತೊಂದೆಡೆ ರೈತರ ಖಾತೆ ಸೇರಬೇಕಿದ್ದ ಹಣ ಬೇರೆ ಯಾರದೋ ಖಾತೆಗೆ ಜಮಾ ಆಗಿದೆ. ಉದಾಹಣೆಗೆ ಚನ್ನಪಟ್ಟಣದ ರೈತ ಜಗದೀಶ್ ಕಳೆದ ಮಾರ್ಚ್‌ನಲ್ಲೆ ರಾಗಿ ಮಾರಾಟ ಮಾಡಿದ್ದಾರೆ. ಅವರಿಗೆ ಸುಮಾರು 97 ಸಾವಿರ ರೂ. ಬರಬೇಕಿತ್ತು. ಆದರೆ ಇವರ ಹಣ ಮತ್ತೊಬ್ಬರ ಖಾತೆಗೆ ಜಮೆ ಆಗಿದೆ. ವಿಪರ್ಯಾಸವೆಂದರೆ ಹಣ ಜಮೆ ಆಗಿರುವ ಬ್ಯಾಂಕ್‌ನಲ್ಲಿ ಜಗದೀಶ್ ಖಾತೆಯನ್ನೇ ಹೊಂದಿಲ್ಲ. ಈ ಸಂಬಂಧ ನಿಗಮದ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಜಮೆ ಆಗಿರುವ ಹಣವನ್ನು ಹಿಂಪಡೆಯುವ ಪ್ರಯತ್ನದಲ್ಲಿದ್ದಾರೆ ಅಧಿಕಾರಿಗಳು.

    ರೈತರು ನೀಡಿದ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದೇ ಇರುವುದು ಸೇರಿ ಮತ್ತಿತರ ತಾಂತ್ರಿಕ ಕಾರಣಗಳಿಗಾಗಿ ರೈತರಿಗೆ ಹಣ ಇನ್ನೂ ತಲುಪಿಲ್ಲ. ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಶೀಘ್ರವೇ ರೈತರಿಗೆ ಹಣ ಸೇರಲಿದೆ.
    ಎಚ್.ಆರ್.ಜಯಣ್ಣ, ಕೆಎಫ್‌ಸಿಎಸ್‌ಸಿ ಅಧಿಕಾರಿ, ರಾಮನಗರ

    ನನ್ನ ಖಾತೆಗೆ ಜಮಾ ಆಗಬೇಕಾದ ಹಣ ಮತ್ತೊಬ್ಬರ ಖಾತೆಗೆ ಜಮೆ ಆಗಿದೆ. ಈ ಬಗ್ಗೆ ಮೇ ಅಂತ್ಯದಲ್ಲಿಯೇ ದೂರು ನೀಡಿದ್ದೆ. ಈವರೆಗೂ ಹಣ ಬಂದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು.
    ಸಿ.ಆರ್.ಜಗದೀಶ್, ರೈತ, ಚನ್ನಪಟ್ಟಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts