More

    ಜಲಶಕ್ತಿ ಅಭಿಯಾನಕ್ಕೆ ನಾಳೆ ಚಾಲನೆ

    ಮಂಗಳೂರು: ಜಲಸಂರಕ್ಷಣೆಗೆ ಆದ್ಯತೆ ನೀಡುವ ಉದ್ದೇಶದಿಂದ ಪ್ರಧಾನಿ ಮೋದಿಯವರ ಆಸ್ಥೆಯಂತೆ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ 100 ದಿನದವರೆಗೆ ಜಲಶಕ್ತಿ ಅಭಿಯಾನ ಆಯೋಜಿಸಲಾಗುವುದು. ಏ.9ರಂದು ಹುಬ್ಬಳ್ಳಿಯಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

    ಬುಧವಾರ ನಗರದಲ್ಲಿ ಇಲಾಖಾ ಪ್ರಗತಿ ಪರಿಶೀಲನೆ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಜಲಶಕ್ತಿ ಅಭಿಯಾನದಡಿ ನರೇಗಾ ಯೋಜನೆಯಲ್ಲಿ ಸಮಗ್ರ ಕೆರೆ ಅಭಿವೃದ್ಧಿ, ಕೆರೆಗೆ ನೀರು ಹರಿದು ಬರುವ ಕಾಲುವೆಗಳ ಪುನಶ್ಚೇತನ, ಹೂಳು ತೆಗೆಯುವುದು, ಕೆರೆ ಏರಿ ದುರಸ್ತಿ, ಕೆರೆ ಅಂಚಿನ ಖಾಲಿ ಪ್ರದೇಶದಲ್ಲಿ ಸಸಿ ಬೆಳೆಸುವುದು, ಬದು ನಿರ್ಮಾಣ ಅಭಿಯಾನ, ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕಲ್ಯಾಣಿ ಪುನಶ್ಚೇತನ, ನಾಲಾ ಪುನಶ್ಚೇತನ, ಗೋಕಟ್ಟೆಗಳ ನಿರ್ಮಾಣ, ಕೆರೆ ನಿರ್ಮಾಣ, ಸೋಕ್ ಪಿಟ್ ನಿರ್ಮಾಣ, ಮಲ್ಟಿ ಆರ್ಚ್ ಚೆಕ್ ಡ್ಯಾಂ, ಬೋರ್‌ವೆಲ್ ರಿಚಾರ್ಜ್, ಮಳೆ ನೀರು ಕೊಯ್ಲು, ಅರಣ್ಯೀಕರಣ ಕಾಮಗಾರಿ, ಚೆಕ್ ಡ್ಯಾಂಗಳ ಹೂಳು ತೆಗೆಯುವುದು ಹಾಗೂ ಜಲ ಸಂರಕ್ಷಣೆ ಕಾಮಗಾರಿ ದುರಸ್ತಿ ಮಾಡಲು ಅವಕಾಶವಿದೆ ಎಂದರು.

    ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕಾ ಸಚಿವ ಎಸ್.ಅಂಗಾರ, ಶಾಸಕ ರಾಜೇಶ್ ನಾಕ್, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಸುದ್ದಿಗೋಷ್ಠಿಯಲ್ಲಿದ್ದರು.

    ತಾಪಂ ರದ್ದು ಸದ್ಯಕ್ಕಿಲ್ಲ, ಚುನಾವಣೆ ಪಕ್ಕಾ: ಈ ಬಾರಿ ಜಿಪಂ ಜತೆಯಲ್ಲೇ ತಾಪಂ ಚುನಾವಣೆ ಸಿದ್ಧತೆ ನಡೆಯುತ್ತಿದ್ದು ಸದ್ಯಕ್ಕೆ ರದ್ದುಪಡಿಸುವ ಪ್ರಸ್ತಾವ ಇಲ್ಲ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು. ವೆಚ್ಚ ಹೆಚ್ಚು ಉಪಯೋಗ ಕಡಿಮೆ ಎಂಬ ಕಾರಣ ಅನೇಕ ಶಾಸಕರು ತಾಪಂ ರದ್ದುಪಡಿಸಬೇಕು ಎಂಬ ಅಭಿಪ್ರಾಯ ಹೊಂದಿದ್ದಾರೆ. ಆದರೆ ಅದಕ್ಕೆ ರಾಜ್ಯ ಏಕಾಏಕಿ ನಿರ್ಧಾರ ತೆಗೆದುಕೊಳ್ಳಲಾಗದು. ವಿಧಾನಸಭೆಯಲ್ಲಿ ಅನುಮೋದನೆ ಪಡೆದು ಕೇಂದ್ರಕ್ಕೆ ಕಳುಹಿಸಬೇಕು. ಈ ಬಾರಿ ಅಧಿವೇಶನ ಸರಿಯಾಗಿ ನಡೆಯದೆ ಚರ್ಚೆ ಆಗಿಲ್ಲ, ಮುಂದೆ ಚರ್ಚೆ ಕೈಗೆತ್ತಿಕೊಳ್ಳಲಾಗುವುದು. 2019-20 ಹಾಗೂ 2020-21ರ 2 ವರ್ಷ ಇಲಾಖೆ ಸಾಕಷ್ಟು ಸಾಧನೆ ಮಾಡಿದೆ. ಉಪಚುನಾವಣೆ ಬಳಿಕ ಇಲಾಖೆಯಲ್ಲಿ ಸಿಬಂದಿ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

    ಗವರ್ನರ್‌ಗೆ ದೂರಿಲ್ಲ, ಸಲಹೆ ಕೇಳಿದ್ದೆ: ಪಂಚಾಯತ್‌ರಾಜ್ ಇಲಾಖೆಗೆ ಎಂದು ಬಜೆಟ್‌ನಲ್ಲಿ ನಿಗದಿಯಾಗಿದ್ದ ಹಣ ಆ ಇಲಾಖೆಯಲ್ಲಿಯೇ ಖರ್ಚಾಗಬೇಕು. ಆದರೆ ಅಲ್ಲಿ ವ್ಯತ್ಯಾಸವಾಗಿದೆ ಎಂಬ ಅಂಶ ತನಗೆ ಗೊತ್ತಾದ ಕಾರಣ, ಅನುಭವಿಗಳೂ, ಹಾಗೂ ಹಿಂದೆ ಗುಜರಾತ್‌ನಲ್ಲಿ ಹಣಕಾಸು ಸಚಿವರಾಗಿದ್ದ ರಾಜ್ಯಪಾಲರ ಬಳಿಗೆ ಹೋಗಿ ಈ ವಿಚಾರದಲ್ಲಿ ಮಾತನಾಡಿದ್ದೇನೆಯೇ ಹೊರತು, ದೂರು ಕೊಟ್ಟಿದ್ದಲ್ಲ. ನಿಯಮಾವಳಿ ಬಗ್ಗೆ ಮಾರ್ಗದರ್ಶನ ಬೇಕು ಎಂದು ಅವರಲ್ಲಿ ಕೇಳಿ ಸಲಹೆ ಕೇಳಿದ್ದೇನೆ ಸ್ಪಷ್ಟಪಡಿಸಿದರು.

    ಕೆಎಸ್‌ಆರ್‌ಟಿಸಿ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಆಗುವುದಿಲ್ಲ. ಅದನ್ನು ಮಾಡಿದರೆ ಉಳಿದ ನಿಗಮದವರು ಕೂಡ ಕೇಳುತ್ತಾರೆ. ಬೇಡಿಕೆ ನ್ಯಾಯಯುತವಾಗಿರಬೇಕು, ಕೋಡಿಹಳ್ಳಿ ಅವರ ಮಾತುಕೇಳಿ ನೌಕರರು ಅನ್ಯಾಯಕ್ಕೊಳಗಾಗಲಿದ್ದಾರೆ. ಕಾನೂನು ವಿರೋಧಿ ಹೋರಾಟವನ್ನು ಸರ್ಕಾರ ಮಟ್ಟ ಹಾಕಲು ಬದ್ಧವಾಗಿದೆ.
    – ಈಶ್ವರಪ್ಪ ಸಚಿವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts