More

    ಮಹಶೀರ್ ಮೀನು ತಳಿ ಸಂರಕ್ಷಣೆಗೆ ಯೋಜನೆ: ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ರಾಜೀವ್ ರಂಜನ್ ಮಾಹಿತಿ

    ಹಲಗೂರು: ಮಹಶೀರ್ ಮೀನು ತಳಿ ಸಂರಕ್ಷಣೆ ಮತ್ತು ಸಂವರ್ಧನೆಗೆ ಯೋಜನೆ ರೂಪಿಸಲಾಗಿದೆ ಎಂದು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ರಾಜೀವ್ ರಂಜನ್ ತಿಳಿಸಿದರು.
    ಮುತ್ತತ್ತಿ ಬಳಿ ಇರುವ ಭೀಮೇಶ್ವರಿ ಜಂಗಲ್ ಲಾಡ್ಜ್ ಆ್ಯಂಡ್ ರೆಸಾರ್ಟ್ಸ್‌ನಲ್ಲಿ ಶುಕ್ರವಾರ ಅರಣ್ಯ ಇಲಾಖೆ ಮತ್ತು ಕಾವೇರಿ ವನ್ಯಜೀವಿ ವಲಯ ಸಹಯೋಗದಲ್ಲಿ ಆಯೋಜಿಸಿದ್ದ ಮಹಶೀರ್ ಮೀನು ಜಾಗೃತಿ ಮತ್ತು ಸಂರಕ್ಷಣಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕಾವೇರಿ ನದಿಯ ಅಭಯಾರಣ್ಯದ ಪ್ರಮುಖ ಭಾಗದಲ್ಲಿ ಮಹಶೀರ್ ಮೀನುಗಳ ಸಂತಾನವಿದ್ದು, ಅಳಿವಿನ ಅಂಚಿನಲ್ಲಿದೆ. ಕಾವೇರಿ ನದಿಯ ತಪ್ಪಲಿನಲ್ಲಿರುವ ಭೀಮೇಶ್ವರಿ ಬಳಿ ಒಂದು ಚಿಕ್ಕ ಕೊಳ ನಿರ್ಮಿಸಿ ಇದರಲ್ಲಿ ಮಹಶೀರ್ ಮೀನುಗಳನ್ನು ಸಾಕಣೆ ಮಾಡಿ ಹಾರಂಗಿ ಮೀನು ಉತ್ಪಾದನಾ ಕೇಂದ್ರಕ್ಕೆ ಕಳುಹಿಸಲಾಗುವುದು. ನಂತರ ಮೀನು ಮರಿಗಳನ್ನು ಮರಳಿ ಕಾವೇರಿ ನದಿಗೆ ಬಿಟ್ಟು ತಳಿಯ ಸಂರಕ್ಷಣೆ ಮತ್ತು ಸಂವರ್ಧನೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
    ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಮಾಲತಿ ಪ್ರಿಯಾ ಮಾತನಾಡಿ, ಮಹಶೀರ್ ತಳಿಯ ಮೀನು ಕಾವೇರಿ ತಪ್ಪಲಿನಲ್ಲಿ ಕಾಣಸಿಗಲಿದ್ದು, ಕರ್ನಾಟಕದಲ್ಲಿ ಸ್ಥಳೀಯರು ಮಹಶೀರ್ ಅನ್ನು ‘ಬಿಳಿ ಮೀನು’ ಎನ್ನುತ್ತಾರೆ. ಇದನ್ನು ‘ಕಾವೇರಿ ನದಿಯ ಹುಲಿ’ ಎಂದು ಕರೆಯಲಾಗುತ್ತದೆ ಎಂದರು.
    ಅರಣ್ಯ ಅಧಿಕಾರಿ ನಂದೀಶ್ ಮಾತನಾಡಿ, ಕಾವೇರಿ ವನ್ಯಜೀವಿ ವಿಭಾಗದಲ್ಲಿ 15 ರಿಂದ 20 ಕೆಜಿವರೆಗಿನ ಮಹಶೀರ್ ಈಗ ಕಾಣುತ್ತಿಲ್ಲ. ಇನ್ನೂ ಒಂದು ತಿಂಗಳವರೆಗೆ ಟೆಲಿಮೆಟ್ರಿಕ್ ಪರೀಕ್ಷೆ ನಡೆಸಿ ಪೂರ್ಣ ಪ್ರಮಾಣದಲ್ಲಿ ಬೆಳೆದ ಒಂದು ಮೀನಿಗೆ ಚಿಪ್ಪನ್ನು ಅಳವಡಿಸಿ ಅದರ ಚಲನವಲನದ ಬಗ್ಗೆ ಗಮನಹರಿಸಬೇಕಿದೆ. ಅವುಗಳ ಜೀವವೈವಿಧ್ಯತೆ ಬಗ್ಗೆ ಅರಿಯಬೇಕಿದೆ ಎಂದರು.
    ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ, ತುಮಕೂರು, ಮೈಸೂರು, ಬೆಂಗಳೂರು, ರಾಮನಗರ ಮತ್ತು ಮಂಡ್ಯ ಸೇರಿದಂತೆ ವಿವಿಧೆಡೆಯಿಂದ ನೂರಾರು ಜನರು ಆಗಮಿಸಿದ್ದರು. ಮಹಶೀರ್ ಮೀನಿನ ಸಂಗ್ರಹ ಚಿತ್ರಪ್ರದರ್ಶನ ಗಮನ ಸೆಳೆದವು.
    ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸಂತೋಷ್ ಕುಮಾರ್, ಕುಮಾರ್ ಪುಸ್ಕರ್, ಪ್ರಭಾಕರ್ ಪ್ರಿಯದರ್ಶಿ, ನಂದಿನಿ, ವಾಸಿ ಸಂಸ್ಥೆ ಅಧ್ಯಕ್ಷ ಸುಶೀಲ್, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಮಲ್ಲಪ್ಪ, ವಿದ್ಯಾಧರ್, ದರ್ಶನ, ನಾಗೇಂದ್ರ ಪ್ರಸಾದ್, ಅಂಕರಾಜು, ರವಿ ಬುರ್ಜಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts