More

    ಸಕಾಲಕ್ಕೆ ವೈದ್ಯರ ಸೇವೆ ಲಭಿಸದೆ ವ್ಯಕ್ತಿ ಸಾವು

    ಜಗಳೂರು: ತಾಲೂಕಿನ ಸೊಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಕಾಲಕ್ಕೆ ವೈದ್ಯರ ಸೇವೆ ಹಾಗೂ ಆಕ್ಸಿಜನ್ ಲಭಿಸದೆ ಹುಸೇನ್ ಸಾಬ್ ಎಂಬಾತ ಮೃತಪಟ್ಟಿದ್ದಾರೆ ಎಂದು ಆಪಾದಿಸಿ ಗ್ರಾಮಸ್ಥರು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಬೀಗ ಜಡಿದು ಬುಧವಾರ ಪ್ರತಿಭಟನೆ ನಡೆಸಿದರು.

    ಬೆಳಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮುತ್ತಿಗೆ ಹಾಕಿದ ಗ್ರಾಮಸ್ಥರು ಬಾಗಿಲು ಮುಚ್ಚಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಸ್ಥಳಕ್ಕೆ ಅಧಿಕಾರಿಗಳು ಬರುವಂತೆ ಪಟ್ಟುಹಿಡಿದರು. ಸೊಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸೇರಿ 10 ನೌಕರರು ಇರಬೇಕು. ಆದರೆ ಅಲ್ಲಿರುವುದು ಬೆರಳೆಣಿಕೆ ಸಿಬ್ಬಂದಿ ಮಾತ್ರ. ಹೀಗಾಗಿ ರೋಗಿಗಳಿಗೆ ಗುಣ ಮಟ್ಟದ ಚಿಕಿತ್ಸೆ ಸಿಗುತ್ತಿಲ್ಲ ಎಂದು ಆಪಾದಿಸಿದರು.

    ಆರೋಗ್ಯ ಕೇಂದ್ರದಲ್ಲಿ ಕಡ್ಡಾಯವಾಗಿ ವೈದ್ಯರು, ಸಿಬ್ಬಂದಿ ಇರಬೇಕು. ನಿರಂತರವಾಗಿ 108 ಆಂಬುಲೆನ್ಸ್ ಸೇವೆ ಇರಬೇಕು. ಎಲ್ಲ ರೋಗಿಗಳಿಗೂ ಔಷಧ, ಮಾತ್ರೆಗಳನ್ನು ವಿತರಿಸಬೇಕು. ರಾತ್ರಿ ವೇಳೆ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

    ಗ್ರಾಮಸ್ಥರ ಸಹಕಾರ ಕೋರಿದ ಅಧಿಕಾರಿಗಳು: ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಡಿಟಿಒ ಡಾ. ಮುರುಳಿಧರ್, ಪಿಎಸ್‌ಐ ಸಾಗರ್ ಗ್ರಾಮಸ್ಥರ ಸಮಸ್ಯೆ ಆಲಿಸಿದರು. ಸೊಕ್ಕೆ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಇದ್ದು ಮೂಲಸೌಲಭ್ಯ ಕೂಡ ಅಷ್ಟಕ್ಕಷ್ಟೇ ಅಧಿಕಾರಿಗಳ ಗಮನಕ್ಕೂ ತಂದರೂ ಯಾರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರ ರು ದೂರಿದರು.

    ಸಮಸ್ಯೆಯಾದಾಗ ಮಾತ್ರ ಸ್ಥಳಕ್ಕೆ ಹೋಗುವ ಮೇಲಧಿಕಾರಿಗಳು ಎರಡು ತಿಂಗಳಿಗೊಮ್ಮೆಯಾದರೂ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಈಗ ಬಂದು ಸಬೂಬು ಹೇಳಿದರೆ ಕೇಳುವುದಿಲ್ಲ ಎಂದು ಎಚ್ಚರಿಸಿದರು.

    ಡಿಟಿಒ ಡಾ. ಮುರುಳಿಧರ್ ಮಾತನಾಡಿ, ಗ್ರಾಮಗಳಲ್ಲಿ ಉತ್ತಮ ಸೇವೆ ಸಲ್ಲಿಸಲು ಜನರ ಸಹಕಾರವೂ ಅಗತ್ಯ. ವೈದ್ಯರೊಂದಿಗೆ ಪ್ರೀತಿ, ವಿಶ್ವಾಸದಿಂದ ನಡೆದುಕೊಳ್ಳಬೇಕು.ಗಲಾಟೆ, ಪ್ರತಿಭಟನೆ ಮಾಡಿದರೆ ಬರಲು ಹಿಂದೇಟು ಹಾಕುತ್ತಾರೆ ಎಂದರು. ನಿತ್ಯವೂ ವೈದ್ಯರು ಲಭಿಸುವಂತೆ ಸೂಚಿಸುತ್ತೇವೆ. 108 ವಾಹನ ಹಾಗೂ ಆಸ್ಪತ್ರೆ ಆಂಬ್ಯುಲೆನ್ಸ್ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

    ಹಿನ್ನೆಲೆ: ಸೊಕ್ಕೆ ಗ್ರಾಮದ ಹುಸೇನ್ ಸಾಬ್ ಅವರಿಗೆ (48) ಮಂಗಳವಾರ ಸಂಜೆ ಹೃದಯಘಾತ ಆಗಿತ್ತು. ಕುಟುಂಬದವರು ತಕ್ಷಣವೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಆದರಲ್ಲಿ ವೈದ್ಯರಿಲ್ಲದ ಕಾರಣ ನರ್ಸ್ ಒಬ್ಬರೇ ಚಿಕಿತ್ಸೆ ನೀಡಿದ್ದಾರೆ. ಉಸಿರಾಟದ ತೊಂದರೆಯಾದಾಗ ಆಕ್ಸಿಜನ್ ಪೂರೈಕೆ ಇಲ್ಲದೆ ಹುಸೇನ್ ಸಾಬ್ ಮೃತಪಟ್ಟಿದ್ದಾರೆ. ಇದರಿಂದ ಅಸಮಾಧಾನಗೊಂಡ ಕುಟುಂಬದವರು ಮತ್ತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಬುಧವಾರ ಬೀದಿಗಿಳಿದಿದ್ದರು.

    ಡಾ. ರೇಣುಕಾರಾಧ್ಯ, ಡಾ. ಉಮೇಶ್, ಡಾ. ಕಾವ್ಯಾ, ಬಿಪಿಎಂ ಮಂಜುನಾಥ್, ಗ್ರಾಮಸ್ಥರಾದ ಡಿ.ಸಿ.ಹನುಮಂತಪ್ಪ, ಮಾರಪ್ಪನಾಯಕ, ರಾಜಪ್ಪ, ಹಾಲಪ್ಪ, ಮೂಗಬಸಪ್ಪ, ಸುರೇಶ್, ಪರಸಪ್ಪ, ಶಕುಂತಲಮ್ಮ, ಗಂಗಮ್ಮ, ಹುಲಿಗೆಮ್ಮ, ಭಾಗ್ಯಮ್ಮ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts