More

    ಕೃಷಿ ಜಮೀನಲ್ಲಿ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ವಿರೋಧ; ಜಗಳೂರಿನಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ರೈತರ ಪ್ರತಿಭಟನೆ

    ಜಗಳೂರು: ಜಗಳೂರು ತಾಲೂಕಿನ ವಿವಿಧೆಡೆ ಕೃಷಿ ಜಮೀನುಗಳಲ್ಲಿ ವಿದ್ಯುತ್ ಸ್ಥಾವರ ಅಳವಡಿಕೆ ವಿರೋಧಿಸಿ ಬ್ಲಾಕ್ ಕಾಂಗ್ರೆಸ್ ಹಾಗೂ ರೈತ ಸಂಘಟನೆಗಳ ಕಾರ್ಯಕರ್ತರು ಬಿದರಕೆರೆಯಲ್ಲಿ ಗುರುವಾರ ರಸ್ತೆ ತಡೆ ನಡೆಸಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

    ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ರೈತರು ಬಿದರಕೆರೆ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದರು. ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ಕೃಷಿ ಜಮೀನುಗಳಲ್ಲಿ ಯಾವುದೇ ಕಂಪನಿಗಳು ವಿದ್ಯುತ್ ಟವರ್ ಹಾಗೂ ಸೋಲಾರ್ ಕಂಬ ಅಳವಡಿಸುವ ಮುನ್ನ ರೈತರೊಂದಿಗೆ ಚರ್ಚಿಸಿ ಅನುಮತಿ ಪಡೆಯಬೇಕು. ಆದರೆ ಇಲ್ಲಿ ಕಂಪನಿ ಅಧಿಕಾರಿಗಳು ಪೊಲೀಸ್ ಇಲಾಖೆ ಬಲದಲ್ಲಿ ಏಕಾಏಕಿ ಕಂಬ ಅಳವಡಿಕೆಗೆ ಮುಂದಾಗಿದ್ದು, ಇದರಿಂದ ಬೆಳೆ ನಾಶವಾಗಿದೆ. ಅಧಿಕಾರಿಗಳಿಗೆ ರೈತರಿಗಿಂತ ಕಂಪನಿಯವರೇ ಮುಖ್ಯವಾಗಿದ್ದಾರೆ ಅಸಮಾಧಾನ ವ್ಯಕ್ತಪಡಿಸಿದರು.

    ಕ್ಷೇತ್ರದ ಶಾಸಕರು ವಿದೇಶಿ ಕಂಪನಿಗಳ ಜತೆ ಕಮಿಷನ್ ಪಡೆದು ರೈತರಿಗೆ ಪರಿಹಾರದ ಆಮಿಷವೊಡ್ಡಿ ಬಲವಂತದಿಂದ ಖಾಲಿ ಪೇಪರ್ ಮೇಲೆ ಸಹಿ ಹಾಕಿಸಿಕೊಂಡಿದ್ದಾರೆ. ಅಧಿಕಾರಿಗಳು ಎಸಿ ಕೊಠಡಿಯಲ್ಲಿ ಕುಳಿತು ಸಭೆ ನಡೆಸದೇ ರೈತರ ಮಧ್ಯೆ ಸಭೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು. ಇಲ್ಲವಾದರೆ ಕಾಂಗ್ರೆಸ್ ತೀವ್ರ ಹೋರಾಟ ನಡೆಸಲಿದೆ ಎಂದರು.

    ಬಿದರಕೆರೆ ರೈತ ಉಜ್ಜಪ್ಪ ಗೌಡ ಅವರು ತಮ್ಮ ಜಮೀನಿನಲ್ಲಿ ಸ್ವಯಂ ಉದ್ಯೋಗ ಆರಂಭಿಸಲು ಎನ್‌ಎ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ಅನಗತ್ಯ ವಿಳಂಬ ಮಾಡುತ್ತಾರೆ. ಆದರೆ ಇಂತಹ ಕಾರ್ಯಗಳಿಗೆ ದಿಢೀರ್ ಅವಕಾಶ ನೀಡಲಾಗುತ್ತದೆ ಎಂದು ದೂರಿದರು.

    ಕೆಪಿಸಿಸಿ ಎಸ್‌ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ಪೊಲೀಸ್ ಇಲಾಖೆ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ. ರೈತರಿಗೆ ನ್ಯಾಯ ಕೊಡಿಸದೆ ಕಂಪನಿಗಳ ಪರವಾಗಿ ನಿಂತಿರುವುದು ದುರಂತ. ಕಳೆದ 30 ವರ್ಷಗಳಲ್ಲಿ ಕಂಡರಿಯದ ಪೊಲೀಸ್ ಅಧಿಕಾರಿಗಳು ತಾಲೂಕಿನಲ್ಲಿದ್ದಾರೆ. ಪ್ರತಿಭಟನೆ ನಡೆಯುವ ಮಾಹಿತಿ ಗೊತ್ತಿದ್ದರೂ ಸ್ಥಳಕ್ಕೆ ಆಗಮಿಸದಿರುವುದು ಬೇಸರದ ಸಂಗತಿ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ತಾಲೂಕು ಅಧ್ಯಕ್ಷ ಶಂಷೀರ್ ಅಹಮ್ಮದ್, ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಅರಸೀಕೆರೆ-ಬಿಳಿಚೋಡು ಬ್ಲಾಕ್ ಉಸ್ತುವಾರಿ ಬಿ.ಟಿ.ಜಗದೀಶ್, ತಾಲೂಕು ಉಸ್ತುವಾರಿ ಕಲ್ಲೇಶ್‌ರಾಜ್ ಪಟೇಲ್, ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ, ಕುಬೇಂದ್ರಪ್ಪ, ಬಿ.ಲೋಕೇಶ್, ಪ್ರಕಾಶ್, ಶ್ರೀನಿವಾಸ್, ಅಜ್ಜಪ್ಪ, ನಾಗರಾಜ್ ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts