More

    ಕುರಿಗಾರರಿಗೆ ಪರಿಹಾರ ಕಲ್ಪಿಸಲು ಪ್ರಯತ್ನ

    ಜಗಳೂರು: ನಾನಾ ರೋಗಗಳಿಂದ ಕುರಿ ಮರಿಗಳು ಸಾಯುತ್ತಿರುವ ಬಗ್ಗೆ ಸರ್ಕಾರದ ಗಮನ ಸೆಳೆದು ಲಸಿಕೆ ಮತ್ತು ಪರಿಹಾರ ಮೊತ್ತ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಹಸೀಲ್ದಾರ್ ಸಂತೋಷ್ ತಿಳಿಸಿದರು.

    ತಾಪಂ ಸಭಾಂಗಣದಲ್ಲಿ ಶನಿವಾರ ಕುರಿಗಾರರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಅಂಕಿ ಅಂಶ ಪ್ರಕಾರ 1.3 ಲಕ್ಷಕ್ಕೂ ಹೆಚ್ಚು ಕುರಿ, ಮೇಕೆಗಳಿವೆ. ಆದರೆ ಕಾಲುಬಾಯಿ, ನೀಲಿ ನಾಲಿಗೆಯಂತಹ ಮಾರಣಾಂತಿಕ ರೋಗ ಹಬ್ಬಿದಾಗ ಅಗತ್ಯ ಚಿಕಿತ್ಸೆ ಲಭಿಸದೆ ಸಾವಿಗೀಡಾಗುತ್ತಿರುವ ಪ್ರಕರಣ ಹೆಚ್ಚಿದೆ ಎಂದು ಕಳವಳ ವ್ಯಕ್ತಪಡಿಸಿದರು. ಈಗಾಗಲೇ 5-6 ಸಾವಿರ ಕುರಿಗಳು ಮೃತಪಟ್ಟಿದ್ದು, ಸೂಕ್ತ ಪರಿಹಾರ ಸಿಗದೆ ಕುರಿಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಅನೇಕರು ಮನವಿ ಸಲ್ಲಿಸಿದ್ದಾರೆ. ಕೂಲಂಕಷ ಪರಿಶೀಲನೆ ನಡೆಸಿ, ಜಿಲ್ಲಾಧಿಕಾರಿ ಜತೆ ಚರ್ಚಿಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.

    ಫೆ.1ರಿಂದ ಲಸಿಕೆ: ಫೆ.1ರಿಂದ ಲಸಿಕೆ, ಚುಚ್ಚುಮದ್ದು ಕೊಡುವುದಾಗಿ ಪಶು ಇಲಾಖೆ ಜಿಲ್ಲಾ ಉಪ ನಿರ್ದೇಶಕರು ಹೇಳಿದ್ದಾರೆ. ಹಾಗಾಗಿ ತಾಲೂಕಿನ ಹೋಬಳಿ ಮಟ್ಟದಲ್ಲಿ ಹಂತ ಹಂತವಾಗಿ ನೀಡಲು ದಿನಾಂಕ ನಿಗದಿಪಡಿಸಿ ನಾಮಫಲಕಗಳಲ್ಲಿ ಹಾಕಬೇಕು. ಇದರ ಬಗ್ಗೆ ಜಾಗೃತಿ ಮೂಡಿಸಬೇಕು. ಪ್ರತಿ ಪಶು ಆಸ್ಪತ್ರೆಗಳಲ್ಲೂ ವೈದ್ಯರು ಮತ್ತು ಸಿಬ್ಬಂದಿ ಕೆಲಸ ಮಾಡಿ ಪ್ರಗತಿ ವರದಿ ನೀಡಬೇಕೆಂದು ಎಚ್ಚರಿಸಿದರು. ಪಶು ಇಲಾಖೆ ಜಿಲ್ಲಾ ಉಪ ನಿರ್ದೇಶಕ ಡಾ. ಚಂದ್ರಶೇಖರ್ ಮಾತನಾಡಿ, ಕುರಿ ಮತ್ತು ಮೇಕೆಗಳಿಗೆ ಲಸಿಕೆ, ಚುಚ್ಚುಮದ್ದು ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆ ಲಸಿಕೆ ಪೂರೈಕೆಯಲ್ಲಿ ತೊಂದರೆಯಾಗಿದ್ದು, ಇನ್ನು ಮುಂದೆ ತಪ್ಪು ಮರುಕಳಿಸದಂತೆ ಮುಂಜಾಗ್ರತೆ ವಹಿಸಲಾಗುವುದು. ಮೃತಪಟ್ಟ ಕುರಿಗಳ ಮಾಹಿತಿ ಪಡೆದು ಪರಿಹಾರಕ್ಕೆ ಸರ್ಕಾರಕ್ಕೆ ವರದಿ ಕಳಿಸಲಾಗುವುದು ಎಂದರು.

    ಜೆಡಿಎಸ್ ರಾಜ್ಯ ಕಾರ್ಯದರ್ಶಿ ಕೆ.ಬಿ. ಕಲ್ಲೇರುದ್ರೇಶ್ ಮಾತನಾಡಿ, ಪಶು ಇಲಾಖೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದಿಂದ ಕುರಿಗಾರರಿಗೆ ಸಾಕಷ್ಟು ಅನ್ಯಾಯವಾಗಿದೆ. ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ಸರಿಯಾಗಿ ತಲುಪಿಲ್ಲ. ಕುರಿಗಾಹಿ ರೈತರಿಗೆ ನ್ಯಾಯ ಕೊಡಿಸಿ, ಮೂಕ ಪ್ರಾಣಿಗಳ ಜೀವ ಉಳಿಸಿ ಎಂದು ಮನವಿ ಮಾಡಿದರು. ಸಭೆಯಲ್ಲಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಉಪ ನಿರ್ದೇಶಕ ಡಾ.ಶಿವಕುಮಾರ್, ಡಾ.ವೀರೇಶ್, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಲಿಂಗರಾಜ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts