More

    ಉಕ್ಕುವ ಸಾಗರದ ಸೊಕ್ಕಿಗೆ ಸಿಕ್ಕಿಹೋದ ನಾಗರಿಕತೆಗಳು

    ಉಕ್ಕುವ ಸಾಗರದ ಸೊಕ್ಕಿಗೆ ಸಿಕ್ಕಿಹೋದ ನಾಗರಿಕತೆಗಳುಸಮಶೀತೋಷ್ಣ ವಲಯವಾಗಿದ್ದ ಸೈಬೀರಿಯಾ ಧ್ರುವಪಲ್ಲಟದಿಂದಾಗಿ ಒಂದೆರಡು ಕ್ಷಣಗಳಲ್ಲಿ ಶೀತವಲಯವಾಗಿ ಪರಿವರ್ತನೆಗೊಂಡಿತು. ಹಿಗಾಗಿ ಅಲ್ಲಿದ್ದ ಜೀವಸಂಕುಲವೆಲ್ಲವೂ ನೈಸರ್ಗಿಕ ಡೀಪ್ ಫ್ರೀಝುರ್​ನೊಳಗೆ ದೂಡಲ್ಪಟ್ಟು ಮರಗಟ್ಟಿ ಸತ್ತುಹೋದವು. ಇಂದು ಹಿಮಗಟ್ಟಿಹೋಗಿರುವ ಆ ನೆಲದಲ್ಲಿ ಆ ಪ್ರಾಣಿಗಳ ಮೃತದೇಹಗಳು ಸುಸ್ಥಿತಿಯಲ್ಲೇ ಪತ್ತೆಯಾಗುತ್ತಿವೆ.

    ಅಲೆಮಾರಿ ಧೂಮಕೇತು 12,800 ವರ್ಷಗಳ ಹಿಂದೆ ಭೂಮಿಗೆ ಅಪ್ಪಳಿಸಿದ್ದರಿಂದಾದ ದುರಂತದ ಚಿತ್ರವನ್ನು ಕಲ್ಪಿಸಿಕೊಳ್ಳಬೇಕಾದರೆ ಅಂದು ಭೂಮಿ ಹೇಗಿತ್ತು ಅನ್ನುವುದರ ಚಿತ್ರ ನಮಗೆ ಮೊದಲು ಅಗತ್ಯವಾಗುತ್ತದೆ. ಆಗ ಭೂಮಿ ಹೀಗಿರಲೇ ಇಲ್ಲ, ಭೂಖಂಡಗಳ ಆಕಾರಗಳೂ ಈಗಿರುವಂತೆ ಇರಲಿಲ್ಲ, ಈಗಿರುವ ಅಕ್ಷಾಂಶ – ರೇಖಾಂಶಗಳಲ್ಲಿ ಅವು ಇರಲೇ ಇಲ್ಲ ಎಂದು ಹೇಳುವುದರ ಮೂಲಕವೇ ಅಂದಿನ ಭೂಮಿಯ ಚಿತ್ರವನ್ನು ನಿಮ್ಮ ಮುಂದಿಡುತ್ತೇನೆ.

    ಅಂದು ಉತ್ತರ ಧ್ರುವ ಇದ್ದದ್ದು ಉತ್ತರ ಕೆನಡಾದಲ್ಲಿ ಮತ್ತು ದಕ್ಷಿಣ ಧ್ರುವ ಅದಕ್ಕೆ ನೇರವಾಗಿ ದಕ್ಷಿಣ ಹಿಂದೂ ಮಹಾಸಾಗರದಲ್ಲಿತ್ತು. ಇಂದು ಶೀತವಲಯವಾಗಿರುವ ಆರ್ಕ್​ಟಿಕ್ ಸಾಗರ ಮತ್ತು ಸೈಬಿರಿಯಾವು ಉತ್ತರ ಸಮಶೀತೋಷ್ಣ ವಲಯದಲ್ಲಿತ್ತು. ಅಂಟಾರ್ಕ್​ಟಿಕಾವು ದಕ್ಷಿಣ ಸಮಶೀತೋಷ್ಣ ವಲಯದಲ್ಲಿ, ದಕ್ಷಿಣ ಪೆಸಿಫಿಕ್ ಸಾಗರದಲ್ಲಿತ್ತು. ಸಮಭಾಜಕ ವೃತ್ತ ನಮ್ಮ ಭಾರತದ ಮೇಲೆ ಹಾದುಹೋಗುತ್ತಿತ್ತು. ಈ ಮೂರು ವಿವರಗಳ ಆಧಾರದ ಮೇಲೆ ಇತರ ಭೂಖಂಡಗಳ ಅಕ್ಷಾಂಶೀಯ-ರೇಖಾಂಶೀಯ ಸ್ಥಾನಗಳನ್ನು ಚಿತ್ರಿಸಿಕೊಳ್ಳಲು ಪ್ರಯತ್ನಿಸಿ. ಐದು ಚೂರುಗಳಾಗಿ ಸಿಡಿದ ಧೂಮಕೇತುವಿನ ಅತಿ ದೊಡ್ಡ ತುಂಡು ಬಿದ್ದದ್ದು ಉತ್ತರ ಕೆನಡಾದ ಮೇಲೆ, ಅಂದರೆ ಅಗಾಧ ಹಿಮರಾಶಿಯಿದ್ದ ಅಂದಿನ ಉತ್ತರ ಧ್ರುವದ ಮೇಲೆ ನೇರವಾಗಿ! ಅದರಿಂದಾಗಿ ಒಂದರ ಹಿಂದೊಂದರಂತೆ ಎರಡು ಬಗೆಯ ದುರಂತಗಳು ಈ ಭೂಮಿಯಲ್ಲಿ ಘಟಿಸಿದವು. ಧೂಮಕೇತು ಎರಗಿದ್ದರಿಂದಾಗಿ ಉತ್ಪನ್ನವಾದ ಅಪಾರ ಪ್ರಮಾಣದ ಶಾಖ ಉತ್ತರ ಧ್ರುವದ ಹಿಮರಾಶಿಯನ್ನು ಕ್ಷಿಪ್ರಕಾಲದಲ್ಲಿ ಕರಗಿಸಿಬಿಟ್ಟಿತು ಮತ್ತು ಅದಕ್ಕನುಗುಣವಾಗಿ ಜಗತ್ತಿನೆಲ್ಲೆಡೆ ಸಾಗರಗಳ ಮಟ್ಟವೂ ವೇಗವಾಗಿ ಎರತೊಡಗಿತು. ಅದು ನುಂಗಿಹಾಕಿದ್ದು ಸಾಗರತೀರಗಳಲ್ಲಿ ಬೆಳೆದುಬಂದಿದ್ದ ಎಲ್ಲ ನಾಗರಿಕತೆಗಳನ್ನು. ಅಲ್ಲಿನ ಜನರು ಮನೆಮಠಗಳನ್ನು ಕಳೆದುಕೊಂಡರೂ ತಮ್ಮ ಜೀವವುಳಿಸಿಕೊಂಡು, ಸಣ್ಣಪುಟ್ಟ ವಸ್ತುಗಳನ್ನೂ ಎತ್ತಿಕೊಂಡು ಒಳನಾಡಿಗೆ ಓಡಿಹೋಗಲು ಸಮಯಾವಕಾಶ ಖಂಡಿತಾ ಸಿಕ್ಕಿರುತ್ತದೆ. ಆದರೆ, ಅವರ ಮೇಲೆ ಎರಗಿದ್ದು ಇನ್ನೊಂದು ದುರಂತ. ಉತ್ತರ ಧ್ರುವದಲ್ಲಿದ್ದ ಅಗಾಧ ಹಿಮರಾಶಿ ಕರಗಿದ್ದರಿಂದ ಆ ಪ್ರದೇಶದ ಮೇಲಿದ್ದ ಒತ್ತಡ ಕಡಿಮೆಯಾಯಿತು. ಪರಿಣಾಮವಾಗಿ ಭೂಮಿಯ ಹೊರಪದರ ಸರ›ನೆ ಜರುಗಿಬಿಟ್ಟಿತು. ಆಗ ಆದದ್ದು ಭೂವಿಜ್ಞಾನಿಗಳು ಹೇಳುವಂತೆ ಕಟ್ಝಚ್ಟ ಖಜಜ್ಛಿಠಿ ಅಥವಾ ಧ್ರುವ ಪಲ್ಲಟ ಅಂದರೆ ಧ್ರುವಗಳ ಸ್ಥಾನದಲ್ಲಿ ಬದಲಾವಣೆ.

    ನಮ್ಮೀ ಭೂಮಿಯ ಬದುಕಿನಲ್ಲಿ ಧ್ರುವ ಪಲ್ಲಟಗಳು ಆಗಾಗ ಘಟಿಸುತ್ತಲೇ ಬಂದಿವೆ. 12,800 ವರ್ಷಗಳ ಹಿಂದೆ ಇದುವರೆಗಿನ ಕೊನೆಯ ಧ್ರುವಪಲ್ಲಟ ಘಟಿಸಿದಾಗ ಉತ್ತರ ಧ್ರುವ ಉತ್ತರ ಕೆನಡಾದಿಂದ ಸರಿದು ಆರ್ಕ್​ಟಿಕ್ ಸಾಗರದಲ್ಲಿ ಈಗಿರುವ ಸ್ಥಾನಕ್ಕೆ ಬಂತು. ಅದಕ್ಕೆದುರಾಗಿದ್ದ ಅಂಟಾರ್ಕ್​ಟಿಕಾ ದಕ್ಷಿಣ ಧ್ರುವವಾಯಿತು. ಇಂದು ಅಂಟಾರ್ಕ್​ಟಿಕಾದ ಮೇಲೆ ಸರಾಸರಿ ಎರಡು ಕಿಲೋಮೀಟರ್ ದಪ್ಪದ ಹಿಮಪದರ ಕೂತುಬಿಟ್ಟಿದೆ. ಆದರೆ, ಧ್ರುವ ಪಲ್ಲಟಕ್ಕೆ ಮೊದಲು ದಕ್ಷಿಣ ಸಮಶೀತೋಷ್ಣ ವಲಯದಲ್ಲಿ ತಿಳಿನೀರಿನ ನದಿ, ಸರೋವರಗಳಿದ್ದವು, ಹರಿದ್ವರ್ಣ ಕಾನನಗಳಿದ್ದವು ಮತ್ತು ಇವೆಲ್ಲವೂ ಅಸಂಖ್ಯ ಜೀವಸಂಕುಲವನ್ನು ಪೋಷಿಸಿ ಬೆಳೆಸಿದ್ದವು. ಅಷ್ಟೇ ಅಲ್ಲ, ಇಂದು ಒಂದೂವರೆ ಕೋಟಿ ಚದರ ಕಿಲೋಮೀಟರ್ ವಿಸ್ತೀರ್ಣದ ಹಿಮಚಪ್ಪಡಿಯಡಿಯಲ್ಲಿ ಸಿಲುಕಿ ಒಂದೇ ದ್ವೀಪದಂತೆ ಕಾಣುವ ಅಂಟಾರ್ಕ್​ಟಿಕಾ ವಾಸ್ತವವಾಗಿ ಅಕ್ಕಪಕ್ಕದಲ್ಲಿದ್ದ ಸಮುದ್ರಕಾಲುವೆಯಿಂದ ಬೇರ್ಪಟ್ಟ ಎರಡು ಬೃಹತ್ ದ್ವೀಪಗಳು! ಇಂದು ಅವುಗಳ ತೀರಗಳೇ ನಮಗೆ ಗೊತ್ತಾಗದಂತೆ ಅವೆರಡನ್ನೂ ಸೇರಿಸಿಕೊಂಡು ವಿಶಾಲ ಹಿಮಚಪ್ಪಡಿ ಅಲ್ಲಿ ಕೂತುಬಿಟ್ಟಿದೆ. ಧೂಮಕೇತು ಅಪ್ಪಳಿಸುವಿಕೆ, ಏರತೊಡಗಿದ ಸಾಗರದ ಮಟ್ಟ, ತದನಂತರದ ಧ್ರುವಪಲ್ಲಟ ಜನ ಜಾನುವಾರುಗಳ ಮೇಲೆ ಎಂತಹ ಪರಿಣಾಮ ಬೀರಿರಬಹುದು? ಅದನ್ನು ಚಿತ್ರಿಸಿಕೊಳ್ಳಲು ನಮಗೆ ಸಾಧ್ಯವಾಗುವಂತಹ ಆಧಾರಗಳು ದೊರೆತಿವೆ.

    ನಾರ್ವೆಯ ಉತ್ತರದಲ್ಲಿನ ದ್ವೀಪವೊಂದು ಪ್ರಾಚೀನ ದರಂತಕ್ಕೆ ಸಾಕ್ಷಿಯಾಗಿ ಇನ್ನೂ ನಿಂತಿದೆ. ಅಂದು ದೊಡ್ಡ ದ್ವೀಪವಾಗಿದ್ದ ಅದು ಸಾಗರದ ಮಟ್ಟ ಏರುತ್ತಾ ಹೋದಂತೆ ತನ್ನ ಗಾತ್ರವನ್ನು ಕಳೆದುಕೊಳ್ಳತೊಡಗಿತು. ಅಲ್ಲಿದ್ದ ಸಹಸ್ರಾರು ಪ್ರಾಣಿಗಳೂ ಮುಖ್ಯವಾಗಿ ಹಿಮಸಾರಂಗಗಳು ಏರುತ್ತಿದ್ದ ನೀರಿನಿಂದ ತಪ್ಪಿಸಿಕೊಳ್ಳಲು ಎತ್ತರದ ಪ್ರದೇಶಕ್ಕೆ ಓಡಗೊಡಗಿದವು. ಇಂದು ಅಲ್ಲಿ ಪುಟ್ಟ ದ್ವೀಪವಾಗಿ ಉಳಿದಿರುವುದು ಅಂದಿನ ವಿಶಾಲ ದ್ವೀಪದ ಬೆಟ್ಟವೊಂದರ ಬರಡು ನೆತ್ತಿ ಮಾತ್ರ. ಅಲ್ಲಿಗೆ ತಲುಪಿ ಗುಂಪುಗಟ್ಟಿ ನಿಂತ ಅಸಹಾಯಕ ಹಿಮಸಾರಂಗಗಳಿಗೆ ಚರಮಗೀತೆ ಹಾಡಿದ್ದು ಹಸಿವು. ಅಂದು ಸಮಶೀತೋಷ್ಣವಲಯವಾಗಿದ್ದ ಆ ದ್ವೀಪವಿದ್ದ ಪ್ರದೇಶ ಧ್ರುವಪಲ್ಲಟದಿಂದಾಗಿ ಶೀತವಲಯವಾದ ಕಾರಣ ಆ ಹಿಮಸಾರಂಗಗ ಅಸ್ಥಿಪಂಜರಗಳ ಮೇಲೆ ಹಿಮ ಆವರಿಸಿಕೊಂಡಿತು. ಇಂದು ಆ ಪುಟ್ಟ ದ್ವೀಪದಲ್ಲಿ ಎಲ್ಲಿ ಹಿಮಪದರವನ್ನು ಕೆದಕಿದರೂ ಸಾರಂಗಗಳ ಅಸ್ಥಿಪಂಜರಗಳು ಸಿಗುತ್ತವೆ.

    ಉತ್ತರ ಸೈಬೀರಿಯಾದ್ದು ಇನ್ನೊಂದು ದುರಂತ ಕಥೆ. ಸಮಶೀತೋಷ್ಣ ವಲಯವಾಗಿದ್ದ ಸೈಬೀರಿಯಾ ಧ್ರುವಪಲ್ಲಟದಿಂದಾಗಿ ಒಂದೆರಡು ಕ್ಷಣಗಳಲ್ಲಿ ಶೀತವಲಯವಾಗಿ ಪರಿವರ್ತನೆಗೊಂಡಿತು. ಹಿಗಾಗಿ ಅಲ್ಲಿದ್ದ ಜೀವಸಂಕುಲವೆಲ್ಲವೂ ನೈಸರ್ಗಿಕ ಡೀಪ್ ಫ್ರೀಝುರ್​ನೊಳಗೆ ದೂಡಲ್ಪಟ್ಟು ಮರಗಟ್ಟಿ ಸತ್ತುಹೋದವು. ಇಂದು ಹಿಮಗಟ್ಟಿಹೋಗಿರುವ ಆ ನೆಲದಲ್ಲಿ ಆ ಪ್ರಾಣಿಗಳ ಮೃತದೇಹಗಳು ಸುಸ್ಥಿತಿಯಲ್ಲೇ ಪತ್ತೆಯಾಗುತ್ತಿವೆ. ಬೆರೆಸೋವ್ಕಾ ಎಂಬಲ್ಲಿ ಏನೋ ಕಾರಣದಿಂದ ನೆಲ ಬಿರುಕು ಬಿಟ್ಟಾಗ ಕಂಡದ್ದು ಮ್ಯಾಮತ್ ಎಂಬ ಹೆಸರಿನ, ಇಂದು ಭೂಮಿಯಲ್ಲೆಲ್ಲೂ ಉಳಿದಿಲ್ಲದ, ಉದ್ದನೆಯ ದಂತಗಳು ಮತ್ತು ರೋಮಗಳನ್ನು ಹೊಂದಿದ ಬೃಹದಾಕಾರದ ಆನೆಯಂತಹ ಪ್ರಾಣಿಯ ಕಳೇಬರ. ಅದೆಷ್ಟು ಸುಸ್ಥಿತಿಯಲ್ಲಿದೆ ಎಂದರೆ ಸಾಯುವಾಗ ಅದು ಮೇಯುತ್ತಿದ್ದ ಬಟರ್ ಕಪ್ ಹೂಗಳು ಅದರ ಜಠರದಲ್ಲಿ ಇನ್ನೂ ಹಾಗೆಯೇ ಇವೆ! ಅಷ್ಟೇ ಅಲ್ಲ, ಅದರ ಮಾಂಸ ಅದೆಷ್ಟು ತಾಜಾ ಆಗಿದೆಯೆಂದರೆ ಅದನ್ನು ಈಗಲೂ ಆಹಾರವಾಗಿ ಸೇವಿಸಬಹುದು! ಅದನ್ನು ಮೊದಲಿಗೆ ಸಾಬೀತುಪಡಿಸಿದ್ದು ಜನ ನೋಡುವ ಮೊದಲೇ ಅಲ್ಲಿ ಸೇರಿ ಭೂಜನವನ್ನು ಆರಂಭಿಸಿದ್ದ ತೋಳಗಳು.

    ಇದು ಪ್ರಾಣಿಗಳ ವಿಚಾರವಾಯಿತು. ಮನುಷ್ಯನ ಮೇಲೆ ಆ ಎರಡು ಪ್ರಕೋಪಗಳ ಪರಿಣಾಮವೇನು? ಅಜೋರ್ಸ್ ದ್ವೀಪಗಳು, ಕೆರಿಬಿಯನ್ ಸಮುದ್ರ, ಅಮೆರಿಕದ ಪೂರ್ವದ ಸಾಗರ ಪ್ರದೇಶ, ನಮ್ಮದೇ ತಮಿಳುನಾಡಿನ ಮತ್ತು ಗುಜರಾತ್​ನ ಸೌರಾಷ್ಟ್ರ ತೀರಗಳಲ್ಲಿ ನೀರಿನಾಳದಲ್ಲಿ ಪತ್ತೆಯಾಗಿರುವ ಹಲವು ಮಾನವನಿರ್ವಿುತವೆಂದು ಸ್ಪಷ್ಟವಾಗಿ ಹೇಳಬಹುದಾದ ಬಗೆಬಗೆಯ ಕಟ್ಟಡಗಳು ಹಾಗೂ ಮ್ಯಾಂಗನೀಸ್ ಆಕ್ಸೆ ೖಡ್ ಲೇಪಿತ ರಸ್ತೆಗಳು ಅಲ್ಲಿದ್ದ ಮನುಷ್ಯರು ಸಾಗರದ ಮಟ್ಟ ಏರತೊಡಗಿದಂತೆ ಅವೆಲ್ಲವನ್ನೂ ಇದ್ದ ಹಾಗೇ ತೊರೆದು ಓಡಿಹೋದ ಕುರುಹುಗಳಾಗಿ ನಮಗೀಗ ಲಭ್ಯವಿವೆ. ಜಪಾನ್​ನ ದಕ್ಷಿಣಕ್ಕಿರುವ ಪೆಸಿಫಿಕ್ ಸಾಗರದಾಳದಲ್ಲಿ ದೇವಾಲಯವೆಂಬಂತೆ ತೋರುವ ಬೃಹತ್ ರಚನೆಯೊಂದು ಪತ್ತೆಯಾಗಿದೆ! ಇದು ಇದುವರೆಗೆ ಪತ್ತೆಯಾಗಿರುವ ಅತ್ಯಂತ ಪ್ರಾಚೀನ ದೇವಾಲಯ ಎಂದು ಸಾಗರ ಪ್ರಾಕ್ತನಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ.

    ಸರಿ, ಧ್ರುವ ಪಲ್ಲಟವನ್ನು ಕಂಡವರಿದ್ದಾರೆಯೇ? ಈ ಮಹತ್ತರ ಪ್ರಶ್ನೆಗೆ ಉತ್ತರ ಅರ್ಜೆಂಟೈನಾದಲ್ಲಿ ಸಿಗುತ್ತದೆ. ಅಲ್ಲಿನ ಪೆಟಗೋನಿಯಾ ಪ್ರಸ್ಥಭೂಮಿಯ ಮೂಲನಿವಾಸಿಗಳ ಪುರಾತನ ದಂತಕತೆಯೊಂದು ನಿಂತ ನೆಲ ಗಿರ›ನೆ ತಿರುಗಿದ, ಆಕಾಶದಲ್ಲಿ ಸೂರ್ಯ ಒಂದೆಡೆಯಿಂದ ಇನ್ನೊಂದೆಡೆಗೆ ಸರ›ನೆ ಸರಿದದ್ದನ್ನು ಕಣ್ಣಾರೆ ಕಂಡಂತಹ, ಪರಿಣಾಮವನ್ನು ಅನುಭವಿಸಿದಂತಹ ವಿವರಗಳನ್ನು ನೀಡುತ್ತದೆ. ಈ ದಂತಕಥೆ ಅರ್ಥಕ್ಕೆ ನಿಲುಕದ ಘಟನೆಯೊಂದರ ನಿಜವಾದ ದಾಖಲೆ ಎಂದು ಪರಿಗಣಿಸುವುದಾದರೆ ಅದು ಪ್ರಸ್ಥಭೂಮಿಯಂತಹ ಎತ್ತರದ ಪ್ರದೇಶಗಳ ನಿವಾಸಿಗಳ ಅನುಭವವಷ್ಟೇ. ಕೆಳಪ್ರದೇಶಗಳ ಜನರ ಅನುಭವ ಬಹುಶಃ ಮೌಖಿಕ ಅಥವಾ ಲಿಖಿತ ದಾಖಲೆಯಾಗಿ ನಮಗೆ ಎಲ್ಲೂ ಎಂದೂ ಸಿಗಲಾರದು. ಎಲ್ಲ ಭೂಖಂಡಗಳನ್ನೂ, ಸಾಗರಗಳನ್ನೂ ಹೊತ್ತ ಭೂಮಿಯ ಇಡೀ ಮೇಲ್ಪದರ ಇದ್ದಕ್ಕಿದ್ದಂತೇ ಜರುಗಿದಾಗ ಸಾಗರಗಳ ನೀರು ಉಕ್ಕೇರಿ ಎಲ್ಲೆಡೆ ನೂರಾರು ಕಿಲೋಮೀಟರ್ ಪ್ರದೇಶಕ್ಕೆ ನುಗ್ಗಿ, ಹಿಂದಕ್ಕೆ ಸರಿದೋಡುವಾಗ ಜನ ಜಾನುವಾರೆಲ್ಲವನ್ನೂ ತನ್ನೊಂದಿಗೆ ಹೊತ್ಯೊಯ್ದಿರುವುದು ಖಂಡಿತ. ನೆಲವೇ ಇಡಿಯಾಗಿ ತೊಳೆದುಹೋದಾಗ ಗೋಳು ಹೇಳಲು ಉಳಿಯುವರಾದರೂ ಯಾರು?

    ಮಾನವಕುಲದ ಸಂಕಟ ಅಲ್ಲಿಗೇ ನಿಲ್ಲಲಿಲ್ಲ, ಹೋರಾಟವೂ ಸಹ. ಅಂದಿನ ಉತ್ತರ ಕೆನಡಾ ಅಂದರೆ ಅಂದಿನ ಉತ್ತರ ಧ್ರುವದ ಮೇಲೆ ಅಪ್ಪಳಿಸಿದ ಧೂಮಕೇತುವಿನ ಅತಿ ದೊಡ್ಡ ತುಂಡು ಹಿಮವನ್ನು ಕರಗಿಸಿದರೆ, ಉತ್ತರ ಯೂರೋಪ್ ಮತ್ತು ಸಿರಿಯಾ ಮೇಲೆ ಎರಗಿದ ಮಧ್ಯಮ ಗಾತ್ರದ ತುಂಡುಗಳು ಅಗಾಧ ಪ್ರಮಾಣದಲ್ಲಿ ಧೂಳು ಎಬ್ಬಿಸಿಬಿಟ್ಟವು. ಭೂಮಿಯ ಸುತ್ತುವಿಕೆಯೊಂದಿಗೆ ಈ ಧೂಳು ನಿಧಾನವಾಗಿ ಎಲ್ಲೆಡೆ ಆವರಿಸಿಕೊಂಡು ಭೂವಾತಾವರಣ ಹಲವು ಮೈಲು ದಪ್ಪದ ಧೂಳಿನ ಮೋಡದಿಂದ ಕವಿದುಹೋಗಿ ಸೂರ್ಯರಶ್ಮಿ ಭೂಮಿಗೆ ತಲುಪದೇಹೋಯಿತು. ಇದರಿಂದಾಗಿ ತಾಪಮಾನ ಕುಗ್ಗಿ, ಏಳೆಂಟು ಸಾವಿರ ವರ್ಷಗಳಿಂದಲೂ ಸಾಗಿಬಂದಿದ್ದ ಉಷ್ಣಯುಗ ನಿಲುಗಡೆಗೆ ಬಂತು. ಆ ಕಾರಣದಿಂದಾಗಿ ಆರಂಭವಾದ ತಾತ್ಕಾಲಿಕ ಹಿಮಯುಗ ಮುಂದಿನ ಒಂದು ಸಾವಿರ ವರ್ಷಗಳವರೆಗೆ ಜಾರಿಯಲ್ಲಿತ್ತು. ನಾವು ಹೋಮೋ ಸೇಪಿಯನ್​ರ ಇತಿಹಾಸದಲ್ಲಿ ಇದು ಅಂಧಕಾರ ಯುಗ.

    ಈ ತಾತ್ಕಾಲಿಕ ಹಿಮಯುಗ 11,800-11,700 ವರ್ಷಗಳ ಹಿಂದೆ ಅಂತ್ಯಗೊಂಡು ಮತ್ತೆ ಉಷ್ಣಯುಗ ಆರಂಭಗೊಂಡಿತು, ಸಾಗರದ ಮಟ್ಟ ಏರುವುದು ಮತ್ತೆ ಆರಂಭವಾಯಿತು. ಅದೇ ಸಮಯದಲ್ಲಿ ಹಲವೆಡೆ ನಾಗರಿಕತೆಗಳು ಮತ್ತೆ ಆರಂಭಗೊಂಡ ಕುರುಹುಗಳು ಕಾಣಬರುತ್ತವೆ. ಇವು ಇಂದು ಅತಿ ಪ್ರಮುಖವಾಗಿ ಗೋಚರವಾಗುವುದು ಆಗ್ನೇಯ ತುರ್ಕಿಯ ಗೊಬೆಕ್ಲಿ ತೆಪೆಯಲ್ಲಿ. ವಿವಿಧೆಡೆ ಸಾಗರದಾಳದಲ್ಲಿ ಪತ್ತೆಯಾಗಿರುವ ಮಾನವ ನಿರ್ವಿುತ ರಚನೆಗಳಿಗಿಂತಲೂ ಬೃಹತ್ತಾದ, ಭವ್ಯವಾದ ಶಿಲಾರಚನೆಗಳೂ, ಕಟ್ಟಡಗಳೂ 11,800-11,700ರ ನಡುವೆ ಗೊಬೆಕ್ಲಿ ತೆಪೆಯಲ್ಲಿ ಕಾಣಿಸಿಕೊಂಡವು. ಅಲ್ಲದೆ, ಮನುಷ್ಯನ ದೈನಂದಿನ ನಾಗರಿಕ ಬದುಕಿನ ಬಗ್ಗೆ ಬೇರೆಲ್ಲೂ ಕಾಣಸಿಗದಿರುವ ವಿವರಗಳು ಇಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ಪ್ರಮುಖವಾದುವು ನಾಯಿ ಸಾಕುವ, ವ್ಯವಸಾಯ ಆರಂಭಿಸಿದ ಕುರುಹುಗಳು. ಇದೆಲ್ಲವನ್ನೂ ಮನುಷ್ಯ ಹಿಂದೆಯೂ ಮಾಡಿದ್ದಿರಲೇಬೇಕು. ಮೂವತ್ತು ಸಾವಿರ ವರ್ಷಗಳ ಹಿಂದೆಯೇ ಸೂಕ್ಷ್ಮ ಕರಕುಶಲ ವಸ್ತುಗಳನ್ನು ತಯಾರಿಸಿದ್ದ, ಇಪ್ಪತ್ತು ಸಾವಿರ ಕಟ್ಟಡಗಳನ್ನು ಕಟ್ಟಿದ್ದ ಕುರುಹುಗಳನ್ನು ಬಿಟ್ಟುಹೋಗಿರುವ ಮನುಷ್ಯ ಆಗ ವ್ಯವಸಾಯ ಕಲಿತಿರಲಿಲ್ಲ ಎಂದು ಹೇಳಲಾಗದು. ಆದರೆ, ಆ ಕುರುಹುಗಳು ನಮಗೆ ಲಭ್ಯವಿಲ್ಲ ಅಷ್ಟೇ. ಏರಿಬಂದ ಸಾಗರದ ನೀರು ಅವುಗಳನ್ನು ಉಳಿಸಿಲ್ಲ. ಒಟ್ಟಿನಲ್ಲಿ, ಸಾಗರದಿಂದ ದೂರದ ಎತ್ತರದ ಪ್ರದೇಶಗಳನ್ನು ಮನುಷ್ಯ ತನ್ನ ಹೊಸ ವಾಸಸ್ಥಳಗಳನ್ನಾಗಿ ಆರಿಸಿಕೊಂಡ ಎನ್ನುವುದಕ್ಕೆ ಗೊಬೆಕ್ಲಿ ತೆಪೆ ಉದಾಹರಣೆಯಾಗುತ್ತದೆ. ಆದರೆ, ಪ್ರಾಚೀನ ಭಾರತೀಯ ಸಾಗರ ನುಂಗಿದ ನೆಲದಿಂದ ತುಸುವೇ ಒಳಸರಿದು ಹೊಸ ನಗರಗಳನ್ನು ಕಟ್ಟಿದ. ಅವೇ ಖಂಭಾತ್ ಕೊಲ್ಲಿಯಲ್ಲಿ ಪತ್ತೆಯಾಗಿರುವ ನಗರಗಳು ಎಂದು ಹೇಳಬಹುದು. ಆದರೆ, ಧೂಮಕೇತು ಸೃಷ್ಟಿಸಿದ ಸುಮಾರು ಒಂದು ಸಾವಿರ ವರ್ಷಗಳ ತಾತ್ಕಾಲಿಕ ಹಿಮಯುಗ ಅಂತ್ಯಗೊಂಡು ಉಷ್ಣಯುಗ ಮತ್ತೆ ಆರಂಭವಾದಂತೆ ಏರತೊಡಗಿದ ಸಾಗರದ ಮಟ್ಟ ಈ ನಗರಗಳನ್ನೂ ನುಂಗಿಬಿಟ್ಟಿತು. ಇದಾದದ್ದು ಎಂಟರಿಂದ ಏಳು ಸಾವಿರ ವರ್ಷಗಳ ಹಿಂದೆ. ಹೀಗೆ 20,000-7,000 ವರ್ಷಗಳ ನಡುವೆ ಪ್ರಪಂಚದಾದ್ಯಂತ ಸಾಗರ ನುಂಗಿದ ನೆಲ ಒಂದುಕೋಟಿ ಎಂಬತ್ತು ಲಕ್ಷ ಚದರ ಕಿಲೋಮೀಟರ್​ಗಳು. ಅಂದರೆ ಸರಿಸುಮಾರು ನಮ್ಮ ಭಾರತದ ಆರು ಪಟ್ಟು! ನಮ್ಮ ಪಶ್ಚಿಮ ತೀರದ ಬಗ್ಗೆ ಹೇಳುವುದಾದರೆ ಸೌರಾಷ್ಟ್ರದ ಮೂರೂ ದಿಕ್ಕಿನಲ್ಲಿ ನೀರು ನುಗ್ಗಿ ಕಚ್ಛ್ ಕೊಲ್ಲಿ ಮತ್ತು ಖಂಭಾತ್ ಕೊಲ್ಲಿ ನಿರ್ವಣವಾಗಲು ಕನಿಷ್ಠ 800 ವರ್ಷಗಳು ತಗುಲಿರಬೇಕು ಎಂದು ವಿಜ್ಞಾನಿಗಳು ಹೇಳುತ್ತಾರೆ. ಅಂದರೆ ಖಂಭಾತ್ ನಗರಗಳ ನಿವಾಸಿಗಳು ಸುರಕ್ಷಿತವಾಗಿ ಒಳನಾಡಿಗೆ ಗುಳೆಹೋಗಲು ಸಾಕಷ್ಟು ಸಮಯಾವಕಾಶ ಅವರಿಗಿದ್ದೇ ಇತ್ತು ಮತ್ತು ಅವರು ಮಾಡಿದ್ದು ಅದನ್ನೇ.

    ಖಂಭಾತ್ ಕೊಲ್ಲಿಯ ನಗರ ಅವಶೇಷಗಳು ಮೊಹೆಂಜೋದಾರೋದಲ್ಲಿನ ಅವಶೇಷಗಳ ಪಡಿಯಚ್ಚಿನಂತಿವೆ. ಅದೇ ನಗರನಿರ್ವಣ ಯೋಜನೆ, ಕೋಟೆ, ಬೃಹತ್ ಸ್ನಾನಗೃಹ, ಧಾನ್ಯ ಸಂಗ್ರಹಾಲಯ, ಸಾಲುಸಾಲು ವಾಸದ ಮನೆಗಳು, ನೇರ ರಸ್ತೆಗಳು, ಎಲ್ಲವೂ ಅವೇ! ಇದು ನಮಗೆ ಅವಕಾಶ ಮಾಡಿಕೊಡುವುದು ಖಂಭಾತ್ ಕೊಲ್ಲಿಯ ನಗರಗಳು ಮತ್ತವುಗಳ ಜತೆಗೆ ಗುಜರಾತ್ ಮತ್ತು ಸಿಂಧ್ ತೀರದಲ್ಲಿ ಇದ್ದಿರಬಹುದಾದ, ನಮಗಿನ್ನೂ ಗೋಚರವಾಗದ ನಗರಗಳ ನಿವಾಸಿಗಳು ಸಮುದ್ರದಿಂದ ದೂರ ದೂರ ಸರಿಯುತ್ತಾ, ಇಂದಿನ ಸಿಂಧ್, ಪಂಜಾಬ್, ಹರಿಯಾಣಾ, ರಾಜಸ್ತಾನಗಳಲ್ಲಿ ಹೊಸ ನಗರಗಳನ್ನು ಕಟ್ಟಿ ತಮ್ಮ ಪುರಾತನ ನಾಗರಿಕತೆ-ಸಂಸ್ಕೃತಿಯನ್ನು ಅನೂಚಾನವಾಗಿ ಕಾಪಾಡಿಕೊಂಡು ಬಂದರು ಎಂದು ರ್ತಸಲು.

    ಸರಿ, ಹಾಗಿದ್ದರೆ, ಕನಿಷ್ಠ 32,000 ವರ್ಷಗಳಿಂದ ಸಾಗರ ಒಡ್ಡಿದ ಎಲ್ಲ ಅಡತಡೆಗಳನ್ನೂ ನಿಭಾಯಿಸಿಕೊಂಡು ಅನೂಚಾನವಾಗಿ ಬೆಳೆದುಬಂದ ಸಿಂಧೂ-ಸರಸ್ವತಿ ನಾಗರಿಕತೆ ಸುಮಾರು 3,800-3,700ರ ಸುಮಾರಿಗೆ ಅಳಿದುಹೋದದ್ದೇಕೆ? ಇದನ್ನು ಹೇಳಲು ನನಗೆ ಲೇಖನ ಸರಣಿಗೆ ನಾಲ್ಕನೆಯ ಭಾಗವನ್ನೂ ಸೇರಿಸಬೇಕಾದ ಅನಿವಾರ್ಯತೆ ಇದೆ. ಬೇರೆ ದಾರಿ ಇಲ್ಲ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts