More

    ರಾಷ್ಟ್ರಧ್ವಜ ಸಂಹಿತೆ, ಸಂರಕ್ಷಣೆ, ನಿರ್ವಹಣೆ..

    ಬೆಂಗಳೂರು: ದೇಶದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ 75 ಲಕ್ಷಕ್ಕೂ ಅಧಿಕ ರಾಷ್ಟ್ರಧ್ವಜಗಳನ್ನು (ಹರ್ ಘರ್ ತಿರಂಗಾ) ಹಾರಿಸುವುದರ ಕುರಿತು ಸರ್ಕಾರ ಮಾಡಿದ್ದ ಸಂಕಲ್ಪ ಬಹುತೇಕ ಯಶಸ್ವಿಯಾಗಿದೆ. ಆದರೆ, ನಾವು ಹಾರಿಸಿರುವ ಧ್ವಜಗಳನ್ನು ತ್ರಿವರ್ಣ ಧ್ವಜ ಸಂಹಿತೆ ಅನುಸರಿಸಿ ಸಂರಕ್ಷಣೆ ಮಾಡುವುದು ಕೂಡ ಅಷ್ಟೇ ಮುಖ್ಯವಾಗಿದೆ. ಹಾರಿಸಲಾದ ಎಲ್ಲ ಧ್ವಜಗಳನ್ನು ಜಾಗರೂಕತೆಯಿಂದ ಕೆಳಗಿಳಿಸಿ ಧ್ವಜ ಸಂಹಿತೆಯ ಮೂಲಕ ಸಂರಕ್ಷಣೆ ಮಾಡುವ ಕ್ರಮವನ್ನೂ ಅನುಸರಿಸಬೇಕು.

    ರಾಷ್ಟ್ರಧ್ವಜ ಸಂಹಿತೆಯಲ್ಲೇನಿದೆ?: ಪ್ರತಿಯೊಬ್ಬ ವ್ಯಕ್ತಿಯೂ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವುದನ್ನು ಕಡ್ಡಾಯಗೊಳಿಸಲು ಪ್ರತ್ಯೇಕ ರಾಷ್ಟ್ರಧ್ವಜ ಸಂಹಿತೆ ಜಾರಿಗೊಳಿಸಲಾಗಿದೆ. ಇದರ ಅನುಸಾರ ಪ್ರತಿ ಧ್ವಜವು 3:2 ಅಳತೆಯ ಅನುಪಾತವನ್ನು ಹೊಂದಿರಬೇಕು. ಮೇಲ್ಭಾಗದಿಂದ ಕೆಳಕ್ಕೆ ಸಮಾನವಾಗಿ ಕೇಸರಿ-ಬಿಳಿ-ಹಸಿರು ಬಣ್ಣಗಳ ನಡುವೆ 24 ಗೆರೆಗಳನ್ನು ಹೊಂದಿದ ಅಶೋಕ ಚಕ್ರವಿರಬೇಕು. ಧ್ವಜ ಹಾರಿಸುವಾಗ ವೇಗವಾಗಿ ಹಾಗೂ ಇಳಿಸುವಾಗ ನಿಧಾನದ ಕ್ರಮಗಳನ್ನು ಅನುಸರಿಸಬೇಕು. ಹರಿದ, ಮಾಸಿದ, ಸುಕ್ಕಾದ, ಬಣ್ಣಗಳು ಮತ್ತು ನೀಲಿಚಕ್ರವು ಸರಿಯಾಗಿ ಮುದ್ರಿತವಾಗದ ಧ್ವಜಗಳನ್ನು ಹಾರಿಸಬಾರದು. ಈ ಧ್ವಜ ಸಂಹಿತೆ ಉಲ್ಲಂಘನೆಗೆ 3 ವರ್ಷ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲಾಗುತ್ತದೆ. ದೇಶದ ವಿವಿಧ ಜಾತಿ, ಮತ, ಪಂಗಡ ಮತ್ತು ಸಂಸ್ಕೃತಿಯ ಜನರನ್ನು ಹೊಂದಿದ ಎಲ್ಲ ಜನರನ್ನು ಒಂದೇ ಧ್ವಜದಡಿ ನಿಲ್ಲಿಸಿ ಸಮಾನತೆ ಸಾರುವ ಪ್ರತೀಕವಾಗಿದೆ.

    3 ದಿನ ನಿಗಾ ವಹಿಸಿ: ಸ್ವಾತಂತ್ರ್ಯ ದಿನಾಚರಣೆ ವೇಳೆ ಹಾರಿಸಲಾಗುವ ಸರ್ಕಾರಿ ಕಚೇರಿಗಳು, ಶಾಲೆ- ಕಾಲೇಜುಗಳು, ನಿಗಮ ಮಂಡಳಿ, ಪ್ರಾಧಿಕಾರ, ಸ್ಥಳೀಯ ಆಡಳಿತ ಸಂಸ್ಥೆಗಳು ಬೆಳಗ್ಗೆ ಧ್ವಜಾರೋಹಣ ನೆರವೇರಿಸಿ ಸಂಜೆ ವೇಳೆಗೆ ಧ್ವಜವನ್ನು ಇಳಿಸಿ ಸಂರಕ್ಷಣೆ ಮಾಡಿ ಇಡಲಾಗುತ್ತಿತ್ತು. ಈ ವರ್ಷ ಎಲ್ಲರೂ ತಮ್ಮ ಮನೆಗಳ ಮೇಲೆ 3 ದಿನ ಧ್ವಜ ಹಾರಿಸುತ್ತಿರುವ ಹಿನ್ನೆಲೆಯಲ್ಲಿ ಧ್ವಜದ ಕಡೆಗೆ ಗಮನಹರಿಸಬೇಕು. ಗಾಳಿ, ಮಳೆಯ ಸಂಭವ ಹೆಚ್ಚಾಗಿದ್ದು, ಧ್ವಜವು ಬೀಳದಂತೆ ಮತ್ತು ಧ್ವಜ ಅಳವಡಿಸಲು ಬಳಸುವ ಕಟ್ಟಿಗೆಯನ್ನು ಬಿಗಿಯಾಗಿ ಕಟ್ಟಬೇಕು. ರಸ್ತೆ, ಚರಂಡಿ ಅಥವಾ ಇನ್ಯಾವುದೇ ಸ್ಥಳಕ್ಕೆ ಧ್ವಜ ಬಿದ್ದು ಹಾಳಾಗದಂತೆ ನಿಗಾ ವಹಿಸಬೇಕು.

    ಹಾನಿಗೀಡಾದ ಧ್ವಜಗಳ ನಿರ್ವಹಣೆ ಹೇಗೆ?: ಮೂರು ದಿನಗಳ ರಾಷ್ಟ್ರಧ್ವಜ ಹಾರಾಟದ ವೇಳೆ ಧ್ವಜದಲ್ಲಿ ತೂತು ಬೀಳುವುದು, ಹರಿದಿರುವುದು, ಕೊಳೆ ಆಗಿರುವುದು ಕಂಡುಬಂದಲ್ಲಿ ತಕ್ಷಣ ಅದನ್ನು ಕೆಳಗಿಳಿಸಬೇಕು. ಇನ್ನು ಆ.15ರ ನಂತರ ಧ್ವಜ ಕೆಳಗಿಳಿಸಿದಾಗ ಧ್ವಜ ಹಾನಿಯಾಗಿರುವುದು ಕಂಡುಬಂದಲ್ಲಿ ಸಂರಕ್ಷಿಸಿ ಇಡದೇ ವಿಲೇವಾರಿ ಮಾಡಬೇಕು. ಮನುಷ್ಯರನ್ನು ಪಂಚಭೂತಗಳಲ್ಲಿ ಲೀನರಾಗುವಂತೆ ಮಾಡುವ ವಿಶೇಷ ಕ್ರಮಗಳ ಮೂಲಕ ನಿರ್ವಹಣೆ (ವಿಲೇವಾರಿ) ಮಾಡಬೇಕು. ಒಬ್ಬರು ಅಥವಾ ಇಬ್ಬರು ಖಾಸಗಿಯಾಗಿ ಗೌರವದಿಂದ ಸುಟ್ಟುಹಾಕಬೇಕು. ಪೇಪರ್ ಅಥವಾ ಪ್ಲಾಸ್ಟಿಕ್​ನ ಧ್ವಜಗಳನ್ನು ಕೂಡ ವೈಯಕ್ತಿಕವಾಗಿ ಸುಡುವ ಮೂಲಕ ಗೌರವ ಸಲ್ಲಿಸಬೇಕು.

    ಧ್ವಜ ಸಂಗ್ರಹಣಾ ಬ್ಯಾಂಕ್: ನಾವು ಹಾರಿಸಿದ ಧ್ವಜಗಳನ್ನು ಮನೆಗಳಲ್ಲಿ ಸುರಕ್ಷಿತವಾಗಿ ಸಂರಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲ ಎನ್ನುವವರು ಜಿಲ್ಲಾಡಳಿತ ಅಥವಾ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ (ಪಾಲಿಕೆ, ಪಂಚಾಯಿತಿ) ವಾಪಸ್ ಕೊಡಬಹುದು. ಅಲ್ಲಿ ಸಂರಕ್ಷಣೆ ಮತ್ತು ನಿರ್ವಹಣೆ ಮಾಡಲಾಗುತ್ತದೆ. ಒಂದು ವೇಳೆ ಮುಂದಿನ ವರ್ಷ ಬಳಸಲು ಅದೇ ಧ್ವಜ ಬೇಕು ಎನ್ನುವವರು ಕೆಲವು ಸಂಘ ಸಂಸ್ಥೆಗಳು ಸ್ಥಾಪಿಸಿದ ‘ರಾಷ್ಟ್ರಧ್ವಜ ಸಂರಕ್ಷಣಾ ಬ್ಯಾಂಕ್’ಗಳಲ್ಲಿ ಇಡಬಹುದು. ಇಲ್ಲಿ ನೀವು ಇಟ್ಟ ಧ್ವಜಕ್ಕೆ ವರ್ಷಕ್ಕೆ ಇಂತಿಷ್ಟು ಹಣ ಪಾವತಿಸಬೇಕಾಗಬಹುದು. ಬೆಂಗಳೂರಿನಲ್ಲಿ ಸಮರ್ಪಣ ಸಂಸ್ಥೆಯಿಂದ ಧ್ವಜ ಸಂಗ್ರಹಣಾ ಬ್ಯಾಂಕ್ ಆರಂಭಿಸಲಾಗಿದೆ.

    ಬಾವುಟ ಬಳಕೆ ಹೀಗಿರಲಿ…

    • ಕೇಸರಿ, ಬಿಳಿ, ಹಸಿರು ಸಮಪ್ರಮಾಣದಲ್ಲಿರುವ (3:2 ಅಗಲ: ಉದ್ದದ ಅನುಪಾತದ ಅಳತೆ) ಮಧ್ಯದಲ್ಲಿ ಅಶೋಕ ಚಕ್ರವಿರುವ ಧ್ವಜವನ್ನು ಹಾರಿಸಬೇಕು.
    • ಹರಿದ, ಸುಟ್ಟ, ಮಾಸಿದ ಮತ್ತು ಬಣ್ಣಗಳು ಸರಿಯಾಗಿರದ ಧ್ವಜ ಹಾರಿಸಬಾರದು.
    • ಕನಿಷ್ಠ ಎದೆಯ ಮೇಲ್ಭಾಗದಲ್ಲಿ ಧ್ವಜ ಹಾರುತ್ತಿರಬೇಕು.
    • ಆ. 15ರ ಸಂಜೆ ಸೂರ್ಯಾಸ್ತದ ಮುನ್ನ ಧ್ವಜವನ್ನು ನಿಧಾನ ಮತ್ತು ಗೌರವದಿಂದ ಕೆಳಗಿಳಿಸಬೇಕು.
    • ಸ್ವಚ್ಛವಾದ ಸಮತಟ್ಟಾದ ಸ್ಥಳದಲ್ಲಿ ಧ್ವಜವನ್ನಿಟ್ಟು ಮೊದಲು ಕೇಸರಿ, ನಂತರ ಹಸಿರು ಬಣ್ಣವನ್ನು ಸಮತಟ್ಟಾಗಿ ಬಿಳಿ ಬಣ್ಣದ ಮೇಲೆ ಮಡಚಬೇಕು.
    • ಆಯತಾಕಾರದಲ್ಲಿನ ಬಿಳಿ ಬಣ್ಣದ ಭಾಗವನ್ನು ಅಶೋಕ ಚಕ್ರ ಮಧ್ಯದಲ್ಲಿ ಮೇಲ್ಭಾಗದಲ್ಲಿರುವಂತೆ ಮಡಚಿಡಬೇಕು.
    • ಮನೆ ಅಥವಾ ಕಚೇರಿಗಳಲ್ಲಿ ಧೂಳು, ಇಲಿಗಳು ಇರದ ಕನಿಷ್ಠ 4 ಅಡಿಗಿಂತ ಎತ್ತರದ ಪ್ರದೇಶದಲ್ಲಿ ಸಂರಕ್ಷಿಸಿಡಬೇಕು.
    • ಮರುವರ್ಷ ಸಂರಕ್ಷಿಸಿಟ್ಟ ಧ್ವಜವನ್ನು ಮರುಬಳಕೆ ಮಾಡಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts