More

    ಹಾನಗಲ್ಲ ಜನರಿಗೆ ಅಶುದ್ಧ ನೀರೇ ಗತಿ

    ಹಾನಗಲ್ಲ: ಪಟ್ಟಣದ 35 ಸಾವಿರ ನಾಗರಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾದ ಪುರಸಭೆ ಕಳೆದ ಒಂದು ತಿಂಗಳಿನಿಂದ ಅಶುದ್ಧ ನೀರು ಪೂರೈಸುತ್ತಿದೆ. ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

    ಪಟ್ಟಣದ ನೀರು ಸರಬರಾಜು ವ್ಯವಸ್ಥೆಯ ಶುದ್ಧೀಕರಣ ಘಟಕದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಕರೊನಾ ಪ್ರಾರಂಭದ ಹಂತದಲ್ಲಿ ಇದೇ ಸಮಸ್ಯೆ ಎದುರಾಗಿತ್ತು. ಆಗ 15 ಲಕ್ಷ ರೂ. ವ್ಯಯಿಸಿ 15 ದಿನಗಳಲ್ಲಿ ಸರಿಪಡಿಸಲಾಗಿತ್ತು. ಆದರೆ, ಈ ಸಮಸ್ಯೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕಿತ್ತು.

    ಶುದ್ಧೀಕರಣ ಘಟಕದ ಫಿಲ್ಟರ್ ಮೀಡಿಯಾದಲ್ಲಿ ಸಮಸ್ಯೆ ಇದೆ, ನೀರು ಸರಬರಾಜು ನಲ್ಲಿಗಳ ಪೈಪ್​ಲೈನ್​ಗಳ ಸೋರಿಕೆಯಿಂದ ಹೀಗಾಗುತ್ತಿದೆ ಎನ್ನಲಾಗುತ್ತಿದೆ. ಇದರಿಂದ ಆನೆಕೆರೆಯಲ್ಲಿ ಸಂಗ್ರಹವಿರುವ ನೀರಿನಲ್ಲಿಯೇ ಫಂಗಸ್ ಬೆಳೆದು ಶುದ್ಧೀಕರಣವಾಗದ ಸ್ಥಿತಿ ತಲುಪಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಸರಿಯಾದ ಕಂಪನಿಯ ಕೆಮಿಕಲ್ಸ್ ಬಳಸುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.

    ಸಮಸ್ಯೆ ಆರಂಭವಾದಂದಿನಿಂದಲೇ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಪುರಸಭೆ ಅಧಿಕಾರಿಗಳ ಗಮನ ಸೆಳೆಯುತ್ತ ಬಂದಿದ್ದಾರೆ. ಸಮಸ್ಯೆಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ನಾಗರಿಕರು ಪುರಸಭೆ ಎದುರು ಪ್ರತಿಭಟನೆ ನಡೆಸಲು ಮುಂದಾಗುತ್ತಿದ್ದಾರೆ. ಪುರಪಿತೃರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಮೇಲಿಂದ ಮೇಲೆ ಪರಿಶೀಲಿಸಿ ಸಮಸ್ಯೆ ಉಲ್ಬಣಗೊಳ್ಳುವ ಮುನ್ನ ಪರಿಹರಿಸುವ ಪ್ರಯತ್ನ ಕೈಗೊಳ್ಳಬೇಕಿತ್ತು. ನೀರಿನ ಸಮಸ್ಯೆ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಸಾರ್ವಜನಿಕರೇ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸುವ ಹಂತಕ್ಕೆ ತಲುಪಿರುವುದು ಸಮಸ್ಯೆಯ ತೀವ್ರತೆಯನ್ನು ತೆರೆದಿಟ್ಟಿದೆ.

    ಈ ಮಧ್ಯೆ ಪುರಸಭೆ ಅಧಿಕಾರಿಗಳು, ಶುದ್ಧೀಕರಣ ಘಟಕದಲ್ಲಿ ತಾಂತ್ರಿಕ ಸಮಸ್ಯೆಯಿದ್ದು, ಸರಬರಾಜು ಮಾಡಲಾಗುವ ನಲ್ಲಿ ನೀರನ್ನು ಕುಡಿಯಲು ಬಳಕೆ ಮಾಡಬಾರದು. ಮನೆ ಬಳಕೆಗೆ ಮಾತ್ರ ಉಪಯೋಗಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳಿಂದ ನೀರು ತಂದು ಕುಡಿಯಬೇಕು ಎಂದು ಧ್ವನಿವರ್ಧಕಗಳ ಮೂಲಕ ಸೂಚನೆ ನೀಡಿದ್ದಾರೆ. ಪಟ್ಟಣದಲ್ಲಿ 12 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದರೂ ಅದರಲ್ಲಿ ಬೆರಳೆಣಿಕೆಯಷ್ಟು ಮಾತ್ರ ಸುಸ್ಥಿತಿಯಲ್ಲಿದ್ದು, ಅರ್ಧದಷ್ಟು ಹಲವು ವರ್ಷಗಳಿಂದ ಬಾಗಿಲು ಮುಚ್ಚಿವೆ. ಹೀಗಾಗಿ ಇರುವ ಘಟಕಗಳೆದುರೇ ಜನರು ಸಾಲುಗಟ್ಟಿ ನಿಂತು ನೀರನ್ನು ತರುವ ಅನಿವಾರ್ಯತೆ ಬಂದೊದಗಿದೆ.

    ಹಲವು ತಿಂಗಳಿನಿಂದ ನಲ್ಲಿಯಲ್ಲಿ ಅಶುದ್ಧ ನೀರು ಬರುತ್ತಿದ್ದು, ಜನರ ಆರೋಗ್ಯ ಹದಗೆಡುತ್ತಿದೆ. ಭಾನುವಾರದೊಳಗಾಗಿ ಶುದ್ಧ ನೀರು ಸರಬರಾಜು ಮಾಡಬೇಕು. ಇಲ್ಲದಿದ್ದರೆ ಪುರಸಭೆ ಎದುರು ಧರಣಿ ನಡೆಸಲಾಗುವುದು ಎಂದು ಪುರಸಭೆಗೆ ಲಿಖಿತ ದೂರು ಸಲ್ಲಿಸಲಾಗಿದೆ. ನೀರಿನ ಸಮಸ್ಯೆ ಬಗ್ಗೆ ರ್ಚಚಿಸಲು ಹಾಗೂ ಹೋರಾಟ ರೂಪಿಸಲು ಫೆ. 14ರಂದು ಬೆಳಗ್ಗೆ ಸಾರ್ವಜನಿಕರ ಸಭೆ ಕರೆಯಲಾಗಿದೆ.

    | ರವಿಚಂದ್ರ ಪುರೋಹಿತ ಸಾಮಾಜಿಕ ಕಾರ್ಯಕರ್ತ

    ಶುದ್ಧೀಕರಣ ಘಟಕದ ಫಿಲ್ಟರ್ ಮೀಡಿಯಾದಲ್ಲಿ ಸಮಸ್ಯೆ ಎದುರಾಗಿದ್ದರಿಂದ ಅದರಲ್ಲಿನ ಜಲ್ಲಿಕಲ್ಲು, ಮರಳು, ಮತ್ತಿತರ ಸಾಮಗ್ರಿಗಳನ್ನು ಬದಲಾಯಿಸಿದ್ದೇವೆ. ಕೆಮಿಕಲ್​ಗಳ ಪ್ರಮಾಣ, ಗುಣಮಟ್ಟ ಪರೀಕ್ಷಿಸಿದ್ದೇವೆ. ಬೇರೆ-ಬೇರೆ ಕಂಪನಿಗಳ ಕೆಮಿಕಲ್ಸ್​ಗಳನ್ನೂ ಬಳಸಿ ನೋಡಿದ್ದೇವೆ. ಆದರೆ, ಸಮಸ್ಯೆ ಏನೆಂದು ತಿಳಿಯುತ್ತಿಲ್ಲ. ನೀರಿನಲ್ಲಿಯೇ ದೋಷವಿರಬಹುದೆಂಬ ಅನುಮಾನ ಬರುತ್ತಿದೆ. ಅದಕ್ಕಾಗಿ ಆನೆಕೆರೆಯ ನೀರನ್ನು ಧಾರವಾಡದ ನಿಕ್ರೋಂ ಟೆಸ್ಟಿಂಗ್ ಲಾಬೋರೋಟರಿ, ರಿಸರ್ಚ್ ಸೆಂಟರ್ ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳ ಕಚೇರಿಯ ಸರ್ವೆಕ್ಷಣಾ ಘಟಕಕ್ಕೆ ಪರಿಶೀಲನೆಗೆ ಕಳಿಸಲಾಗಿದೆ.

    | ನಾಗರಾಜ ಮಿರ್ಜಿ

    ಇಂಜಿನಿಯರ್ ಪುರಸಭೆ ಹಾನಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts