More

    ಗಾಂಧೀಜಿ ಬದುಕು ಅರಿಯುವುದು ಅವಶ್ಯ

    ವಿಜಯಪುರ: ಸತ್ಯಾಗ್ರಹ ಹಾಗೂ ಅಹಿಂಸಾ ಮಾರ್ಗದಿಂದ ದೇಶಕ್ಕೆ ಸ್ವಾತಂತ್ರೃ ತಂದುಕೊಟ್ಟ ಮಹಾತ್ಮ ಗಾಂಧೀಜಿ ಅವರ ಜೀವನ, ವ್ಯಕ್ತಿತ್ವವನ್ನು ಇಂದಿನ ಮಕ್ಕಳು ಅರಿತುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

    ನಗರದ ಜಿಪಂ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ವಿಜಯಪುರ (ಗ್ರಾಮೀಣ) ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

    ಸ್ವಾತಂತ್ರೃ ಹೋರಾಟದ ನೇತೃತ್ವ ವಹಿಸಿ, ಅಹಿಂಸಾ ಮಾರ್ಗದಿಂದ ಸ್ವಾತಂತ್ರೃ ತಂದು ಕೊಟ್ಟ ಮಹಾತ್ಮ ಗಾಂಧೀಜಿ ಅವರ ಜನ್ಮ ದಿನದಂದು ವಿಶ್ವಸಂಸ್ಥೆ (ನಾನ್ ವೈಲೆನ್ಸ್) ಅಹಿಂಸಾ ದಿನವನ್ನಾಗಿ ಆಚರಿಸುತ್ತಿದ್ದು, ಇದು ಪ್ರತಿಯೊಬ್ಬ ಭಾರತೀಯನಿಗೆ ಸ್ಫೂರ್ತಿದಾಯಕ ಹಾಗೂ ಗೌರವಪಡುವಂತದ್ದು ಎಂದರು.

    ಯುವ ಪೀಳಿಗೆ, ಜನಸಾಮಾನ್ಯರಿಗೂ ಗಾಂಧೀಜಿ ಅವರ ಸಂದೇಶ ತಲುಪಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ಗಾಂಧಿ ಭವನ ನಿರ್ಮಾಣ ಮಾಡುತ್ತಿದೆ. ಗಾಂಧೀಜಿ ಅವರ ವಿಚಾರ ಅವರ ಸಂದೇಶಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಗಾಂಧಿ ಭವನದಲ್ಲಿ ಆಯೋಜಿಸಲು ಉದ್ದೇಶಿಸಿದೆ ಎಂದ ಅವರು, ರಾಜ್ಯ ಸರ್ಕಾರದ ವಾರ್ತಾ ಇಲಾಖೆಯ ಮಾಸಿಕ ಜನಪದ ಪತ್ರಿಕೆಯ ಗಾಂಧಿ ಭವನದ ಕುರಿತ ಲೇಖನ ಉಲ್ಲೇಖಿಸಿದರು.

    ಗಾಂಧಿ ಭವನದಲ್ಲಿ ಗಾಂಧೀಜಿಯವರ ಜೀವನವನ್ನು ಪರಿಚಯಿಸುವ ಕುರಿತ ಕಾರ್ಯಕ್ರಮ ನಿರಂತರ ನಡೆಯಬೇಕು. ಇಂದಿನ ಯುವ ಪೀಳಿಗೆಗೆ, ಮಕ್ಕಳಿಗೆ ಮಹಾತ್ಮರ ಸಂದೇಶ ಅರಿತುಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಗಾಂಧಿ ಭವನ ಕುರಿತಾಗಿಯೇ ಪ್ರತ್ಯೇಕ ಸಮಿತಿ ರಚಿಸಿ, ವಿಸ್ತೃತ ರೂಪುರೇಷೆ ಸಿದ್ಧಪಡಿಸಿ, ಈ ನಿಟ್ಟಿನಲ್ಲಿ ವಿವಿಧ ಚರ್ಚಾಕೂಟ, ರಸಪ್ರಶ್ನೆ ಸ್ಪರ್ಧೆ, ಚಿತ್ರಕಲೆ ಸೇರಿದಂತೆ ವಿವಿಧ ಸೃಜನಾತ್ಮಕ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.

    ಮಹಾತ್ಮ ಗಾಂಧೀಜಿಯವರ ಬಾಲ್ಯ ಮತ್ತು ಜೀವನ ಕುರಿತು ಮಕ್ಕಳ ಸಾಹಿತಿ ಜಂಬುನಾಥ ಕಂಚಾಣಿ ಉಪನ್ಯಾಸ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಕೆ.ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ನಿರೂಪಣಾಧಿಕಾರಿ ಜಿ.ಎಸ್.ಗುತ್ತರಗಿಮಠ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್.ಸಿ.ಮ್ಯಾಗೇರಿ, ಸಾಹಿತಿ ಕೆ.ಸುನಂದಾ, ನೇತಾಜಿ ಗಾಂಧಿ ಮತ್ತಿತರರಿದ್ದರು.

    ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. 5 ರಿಂದ 10 ವರ್ಷದ ಮಕ್ಕಳಿಂದ ಛದ್ಮವೇಷ, ಸ್ವಯಂಭೂ ಆರ್ಟ್ ಸಂಸ್ಥೆ, ನವರಸ ನೃತ್ಯ ಸಂಸ್ಥೆ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಶಾಲೆ, ಜಗಜ್ಯೋತಿ ಬಸವೇಶ್ವರ ಶಾಲೆ ಹಾಗೂ ಬಾಲಕಿಯ ಬಾಲಮಂದಿರದ ಮಕ್ಕಳಿಂದ ನೃತ್ಯ, ಸಂಗೀತ, ನಾಟಕ ಪ್ರದರ್ಶನಗಳು ಜರುಗಿದವು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts