More

    ಚಂದ್ರನ ಮೇಲೆ ಕಾಲಿಡಲು ಇಸ್ರೋ ಶ್ರಮ

    ಕೆ.ಆರ್.ಪೇಟೆ : ಭಾರತೀಯರು 2040ರ ವೇಳೆಗೆ ಚಂದ್ರನ ಮೇಲೆ ಕಾಲಿಡಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಇಸ್ರೋ ಬದ್ಧತೆಯಿಂದ ಕೆಲಸ ನಿರ್ವಹಿಸುತ್ತಿದೆ ಎಂದು ಇಸ್ರೋ ಸಂಚಾಲಕ ಶ್ರೀನಿವಾಸ್ ತಿಳಿಸಿದರು.

    ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಇಸ್ರೋ ಸಾಧನೆಗಳನ್ನೊಳಗೊಂಡ ಸಂಚಾರಿ ಪ್ರದರ್ಶನ ವಾಹನಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

    ಇಸ್ರೋ ಕಳೆದ ಹಲವು ವರ್ಷಗಳಿಂದ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂಥ ಕೆಲಸಗಳನ್ನು ಮಾಡುತ್ತಿದೆ. ಈ ಎಲ್ಲ ಯೋಜನೆಗಳನ್ನು ಪ್ರತಿಬಿಂಬಿಸುವ ವಾಹನದಲ್ಲಿ ಆರ್ಯಭಟ, ಭಾಸ್ಕರ, ಕ್ರಯೋಜನಿಕ್ ಇಂಜಿನ್, ಉಪಗ್ರಹ ಉಡಾವಣೆ, ಚಂದ್ರಯಾನ, ಮಂಗಳಯಾನ, ನೂತನ ಜಿಪಿಎಸ್ ತಂತ್ರಾಂಶ, ಬಾಹುಬಲಿ ರಾಕೆಟ್ ತಯಾರಿಕೆ, ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ, ಸೇರಿದಂತೆ ಇಲ್ಲಿಯವರೆಗೆ ಇಸ್ರೋ ಕೈಗೊಂಡಿರುವ ಎಲ್ಲ ಯೋಜನೆಗಳ ಮಾದರಿಗಳನ್ನು ಒಳಗೊಂಡಿದ್ದು ವಿದ್ಯಾರ್ಥಿಗಳಿಗೆ ಸಾಕಷ್ಟು ಉಪಯೋಗವಾಗಲಿದೆ. ಒಂದೊಂದು ಮಾದರಿಯೂ ತನ್ನದೇ ಆದ ವೈಶಿಷ್ಟೃಗಳನ್ನು ಹೊಂದಿದ್ದು ಅವುಗಳ ಬಗ್ಗೆ ವಿದ್ಯಾರ್ಥಿಗಳು ತಿಳಿಯುವುದು ಅಗತ್ಯವಾಗಿದೆ ಎಂದರು.

    ಇಸ್ರೋ ನಿರ್ದೇಶಕಿ ಮಾಲತಿ ಮಾತನಾಡಿ, ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಸಹ ಉತ್ತಮವಾಗಿ ವ್ಯಾಸಂಗ ಮಾಡಿದರೆ ಇಸ್ರೋದಲ್ಲಿ ಉದ್ಯೋಗ ಪಡೆಯಬಹುದಾಗಿದೆ. ಅದಕ್ಕೆ ಈ ಶಾಲೆಯ ಹಳೆಯ ವಿದ್ಯಾರ್ಥಿ ಆಕಾಶ್ ಉದಾಹರಣೆ. ಆದ್ದರಿಂದ ನೀವೆಲ್ಲರೂ ಉತ್ತಮ ಶಿಕ್ಷಣ ಪಡೆದು ಪರೀಕ್ಷೆಗಳನ್ನು ಎದುರಿಸಬೇಕು. ಇಂಜಿನಿಯರಿಂಗ್‌ನ ಎಲ್ಲ ವಿಭಾಗಗಳಿಗೂ ಉದ್ಯೋಗದಲ್ಲಿ ವಿಪುಲ ಅವಕಾಶಗಳಿವೆ. ಅವನ್ನು ಸದುಪಯೋಗಪಡಿಸಿಕೊಳ್ಳಬೇಕು. ನಾವೆಲ್ಲರೂ ದೇಶಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ನಮಗೆ ಹಗಲು, ರಾತ್ರಿ ಎಂಬುದು ಮರೀಚಿಕೆಯಾಗಿದ್ದು ನಮ್ಮ ಕೆಲಸ ಪೂರ್ಣಗೊಳ್ಳುವವರೆಗೂ ವಿಶ್ರಮಿಸದೇ ಕೆಲಸ ಮಾಡುತ್ತಿದ್ದು ಭಾರತಕ್ಕೆ ವಿಶ್ವಮಟ್ಟದಲ್ಲಿ ಸ್ಥಾನ ಪಡೆಯಲು ಶ್ರಮಿಸುತ್ತಿದ್ದೇವೆ ಎಂದರು.

    ಬಿಇಒ ಸೀತಾರಾಮು ಮಾತನಾಡಿದರು. ಇದೇ ಸಂದರ್ಭದಲ್ಲಿ ಈ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಇಸ್ರೋದ ತಾಂತ್ರಿಕ ವಿಭಾಗದ ಇಂಜಿನಿಯರ್ ಆಕಾಶ್ ಅವರನ್ನು ಕಾಲೇಜಿನ ವತಿಯಿಂದ ಅಭಿನಂದಿಸಲಾಯಿತು. ಇಸ್ರೋ ಇಂಜಿನಿಯರ್ ಚಾರ್ಲ್ಸ್ ಬಾಸ್ಟಿನ್, ಉಪಪ್ರಾಂಶುಪಾಲ ರವಿಕುಮಾರ್, ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಕೆ.ಮಂಜುನಾಥ್, ಶಿಕ್ಷಣ ಸಂಯೋಜಕ ವೇಣುಗೋಪಾಲ್, ಬಿಆರ್‌ಪಿ ಮೋಹನ್, ಕಾಲೇಜಿನ ಅಧ್ಯಾಪಕ ವರ್ಗ, ವಿವಿಧ ಶಾಲೆಗಳ ಸಾವಿರಾರು ಮಕ್ಕಳು ಪ್ರದರ್ಶನ ವಾಹನ ವೀಕ್ಷಿಸಿ ಸಂತಸಪಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts