More

    7 ಜಿಲ್ಲೆಗಳಲ್ಲಿ ಹೆದ್ದಾರಿ ತಡೆದು ಇಷ್ಟಲಿಂಗ ಪೂಜೆ

    ಮಹಾಲಿಂಗಪುರ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ರಾಜ್ಯ ಸರ್ಕಾರ 2ಎ ಮೀಸಲಾತಿ ಘೋಷಿಸಬೇಕು ಮತ್ತು ಲಿಂಗಾಯತ ಉಪಸಮಾಜಗಳನ್ನು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಸೇರ್ಪಡೆಗೊಳಿಸಿ ಶಿಫಾರಸು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯಿಸಿ ರಾಜ್ಯಾದ್ಯಂತ ಭಾಗ 2 ರ 6 ನೇ ಹಂತದ ಚಳವಳಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮಿಗಳು ಹೇಳಿದರು.

    ಸಮೀಪದ ರನ್ನಬೆಳಗಲಿ ವ್ಯಾಪ್ತಿಯ ಹಣಮಂತ ಶಿರೋಳ ನಿವಾಸದ ಆವರಣದಲ್ಲಿ ಬುಧವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಹಾಲುಮತ ಸಮಾಜಕ್ಕೆ ಎಸ್‌ಟಿ ಮೀಸಲಾತಿ ಶಿಾರಸು ಮಾಡಿದೆ. ಅದನ್ನು ಸ್ವಾಗತಿಸುವೆ. ಸರ್ಕಾರ ಡಿ.4ರ ಅಧಿವೇಶನಕ್ಕೂ ಮೊದಲೇ ಎಲ್ಲ ಶಾಸಕರನ್ನು ಸಮಾಲೋಚಿಸಿ ಕಾನೂನು ಅಡೆತಡೆಗಳನ್ನು ನಿವಾರಿಸಿ ಮೀಸಲಾತಿಗೆ ಮುನ್ನುಡಿ ಬರೆದು ಬರುವ ಪಾರ್ಲಿಮೆಂಟ್ ಚುನಾವಣೆಯೊಳಗೆ ಅನುಷ್ಠಾನಕ್ಕೆ ತರುವ ಕಾರ್ಯವನ್ನು ಸರ್ಕಾರ ಮಾಡಬೇಕು. ಸರ್ಕಾರ ಇದಕ್ಕೆ ಸ್ಪಂದಿಸದಿದ್ದರೆ ಅಂದಾಜು 7 ಜಿಲ್ಲೆಗಳಲ್ಲಿ ಹೆದ್ದಾರಿ ಸಂಚಾರ ತಡೆದು ಅಲ್ಲಿಯೇ ಇಷ್ಟಲಿಂಗ ಪೂಜೆ ಮಾಡಲಾಗುವುದು. ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಬಂದು ಮನವಿ ಸ್ವೀಕರಿಸಲಿ. ನಾವು ಸುವರ್ಣಸೌಧದ ಅಂಗಳಕ್ಕೂ ತೆರಳಿ ಪೂಜೆ ಸಲ್ಲಿಸಿದರೂ ಅಚ್ಚರಿಪಡಬೇಕಾಗಿಲ್ಲ. ಮನೆ-ಮಠ ಬಿಟ್ಟು ರಸ್ತೆಯಲ್ಲಿ ಕುಳಿತಿದ್ದೇವೆ. ನಮ್ಮ ಮಕ್ಕಳಿಗಾಗಿ ನಾವು ಸುವರ್ಣ ಸೌಧದಲ್ಲೂ ಕುಳಿತು ಪೂಜೆ ಸಲ್ಲಿಸುವೆವು. ಕಾರಣ ಮುಖ್ಯಮಂತ್ರಿಗಳು ನಮಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಇದರ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದರು.

    ಮೂರು ವರ್ಷಗಳಿಂದ ನಿರಂತರ 6 ಹಂತಗಳಲ್ಲಿ ಹೋರಾಟ ಮಾಡಲಾಗಿದೆ. ಕೊನೆಗೆ ಸತ್ಯಾಗ್ರಹ ಕೈಗೊಳ್ಳಲಾಗಿತ್ತು. ರಾಜ್ಯ ಸರ್ಕಾರ 2 ಡಿ ಮೀಸಲಾತಿ ಘೋಷಿಸಿತು. ನಮ್ಮ ಹೋರಾಟಕ್ಕೆ ಅಲ್ಪ ಜಯ ಸಿಕ್ಕಿತೆಂದು ಅದನ್ನು ಸ್ವಾಗತಿಸಲಾಯಿತು. ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಪಂಚಮಸಾಲಿಗಳ ಪಾತ್ರ ಬಹಳ ದೊಡ್ಡದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹಿಂದಿನ ಸರ್ಕಾರ ಈ ದಿಸೆಯಲ್ಲಿ ನಿರ್ಧಾರ ಕೈಗೊಳ್ಳಲು ವಿಳಂಬ ಮಾಡಿದ್ದರಿಂದ ನಮ್ಮ ಜನ ಮನಸ್ಸು ಬದಲಾಯಿಸಿದೆವು. ನಮ್ಮ ಹೋರಾಟದಲ್ಲಿ ಬಸನಗೌಡ ಪಾಟೀಲ (ಯತ್ನಾಳ) ಅವರ ಬೆಂಬಲ ಅಮೋಘವಾಗಿದೆ ಎಂದರು.

    ಸಮಾಜದ ತಾಲೂಕು ಕಾರ್ಯದರ್ಶಿ ಲಕ್ಕಪ್ಪ ಪಾಟೀಲ, ಮುಖಂಡರಾದ ಸಿದ್ದುಗೌಡ ಪಾಟೀಲ, ಮಹಾದೇವ ಮಾರಾಪುರ, ಅಡಿವೆಪ್ಪ ಶಿರೋಳ, ಚನ್ನಪ್ಪ ಪಟ್ಟಣಶೆಟ್ಟಿ, ಹಣಮಂತ ಶಿರೋಳ, ಮಲ್ಲಪ್ಪ ಕೌಜಲಗಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಶಿವಲಿಂಗ ಕೌಜಲಗಿ, ವಿನೋದ ಉಳ್ಳಾಗಡ್ಡಿ, ಅಲ್ಲಪ್ಪ ಕಲ್ಲೋಳ್ಳಿ, ಪರಪ್ಪ ಹುದ್ದಾರ, ಶ್ರೀಶೈಲಪ್ಪ ವಜ್ರಮಟ್ಟಿ, ಸದಾಶಿವ ಪಟ್ಟಣಶೆಟ್ಟಿ, ಮಹಾಲಿಂಗ ಕಂಠಿ, ಮಹಾಲಿಂಗ ಕೂಡಲಗಿ, ಮಲ್ಲಪ್ಪ ಉರಬಿನವರ, ಶ್ರೀಶೈಲ ಬಿರಾದಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts