More

    ಈ ಸ್ಟಾರ್ ಕ್ರಿಕೆಟಿಗರಿಗೆ ಇದುವೇ ಕೊನೆಯ ಐಪಿಎಲ್?

    ಬೆಂಗಳೂರು: ಕರೊನಾ ವೈರಸ್ 2ನೇ ಅಲೆಯ ನಡುವೆಯೂ ದೇಶದಲ್ಲಿ ಐಪಿಎಲ್ 14ನೇ ಆವೃತ್ತಿಗೆ ಭರದ ಸಿದ್ಧತೆಗಳು ಸಾಗಿವೆ. ಎಲ್ಲ ತಂಡಗಳು ಈಗಾಗಲೆ ಕಠಿಣ ಅಭ್ಯಾಸದ ಮೂಲಕ ಟೂರ್ನಿಗೆ ಸಜ್ಜಾಗುತ್ತಿವೆ. ಈ ಪೈಕಿ ಕೆಲ ತಂಡಗಳ ಆಟಗಾರರಿಗೆ ಇದು ಕೊನೆಯ ಐಪಿಎಲ್ ಆದರೂ ಅಚ್ಚರಿ ಇಲ್ಲವೆನಿಸಿದೆ. ಈಗಾಗಲೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವ ಕೆಲ ಹಿರಿಯ ಕ್ರಿಕೆಟಿಗರು, ಮುಂದಿನ ವರ್ಷವೂ ಐಪಿಎಲ್‌ನಲ್ಲಿ ಮತ್ತೆ ಆಡುತ್ತಾರೆ ಎಂಬ ಬಗ್ಗೆ ಯಾವುದೇ ಗ್ಯಾರಂಟಿ ನೀಡಲಾಗದು. ಈ ವರ್ಷದ ಅವರ ನಿರ್ವಹಣೆಯೂ ಅವರ ಭವಿಷ್ಯ ನಿರ್ಧರಿಸುವಲ್ಲಿ ನಿರ್ಣಾಯಕವಾಗಬಹುದು. ಮುಂದಿನ ವರ್ಷ ಮತ್ತೊಂದು ಹೊಸ ತಂಡದ ಸೇರ್ಪಡೆಯಿಂದ ಮೆಗಾ ಹರಾಜು ಪ್ರಕ್ರಿಯೆಯೂ ನಡೆಯಲಿದೆ. ಹೀಗಾಗಿ ಯುವ ಆಟಗಾರರ ಸ್ಪರ್ಧೆಯ ನಡುವೆ ಈ ಕ್ರಿಕೆಟಿಗರು ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿಯೂ ಉಳಿಯಬಹುದು. ಇದೇ ಕೊನೇ ಐಪಿಎಲ್ ಟೂರ್ನಿಯಾಗಬಹುದಾದ ಕೆಲ ಸ್ಟಾರ್ ಕ್ರಿಕೆಟಿಗರ ಸಂಕ್ಷಿಪ್ತ ವಿವರ ಇಲ್ಲಿದೆ.

    ಎಂಎಸ್ ಧೋನಿ
    ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಎಂಎಸ್ ಧೋನಿ ಈಗ 40ರ ಸನಿಹದಲ್ಲಿದ್ದಾರೆ. ಕಳೆದ ವರ್ಷದ ಐಪಿಎಲ್‌ನಲ್ಲಿ ಅವರಿಂದ ಅತ್ಯುತ್ತಮ ನಿರ್ವಹಣೆ ಬಂದಿರಲಿಲ್ಲ. ಇಡೀ ವರ್ಷ ಐಪಿಎಲ್‌ನಲ್ಲಿ ಮಾತ್ರ ಆಡಿ ಫಿಟ್ನೆಸ್ ಕಾಯ್ದುಕೊಳ್ಳುವುದು ನಿಜಕ್ಕೂ ತ್ರಾಸದಾಯಕ. ಕಳೆದ ವರ್ಷದ ಐಪಿಎಲ್‌ನಲ್ಲಿ ಅವರು ಆಯಾಸದಿಂದ ಬಳಲಿದ್ದರು. ಹೀಗಾಗಿ ಚೆನ್ನೈ ಸೂಪರ್‌ಕಿಂಗ್ಸ್ ನಾಯಕ ಮುಂದಿನ ವರ್ಷವೂ ಆಡುತ್ತಾರೆ ಎಂದು ಖಚಿತವಾಗಿ ಹೇಳುವುದು ಕಷ್ಟ.

    ಇದನ್ನೂ ಓದಿ: VIDEO | ಸಿಎಸ್‌ಕೆ ನೆಟ್ಸ್‌ನಲ್ಲಿ ಭರ್ಜರಿ ಸಿಕ್ಸರ್‌ ಸಿಡಿಸುತ್ತಿದ್ದಾರೆ ಚೇತೇಶ್ವರ ಪೂಜಾರ!

    ಕ್ರಿಸ್ ಗೇಲ್
    ಇನ್ನೂ 5 ವರ್ಷ ಆಡುವೆ ಎಂದು ಕ್ರಿಸ್ ಗೇಲ್ ಇತ್ತೀಚೆಗೆ ಹೇಳಿಕೊಂಡಿದ್ದರು. ಆದರೆ 41 ವರ್ಷದ ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್‌ಗೆ ಫಿಟ್ನೆಸ್ ವಿಚಾರ ಸಾಥ್ ನೀಡುವುದು ಅನುಮಾನ. ಮುಂಬರುವ ಟಿ20 ವಿಶ್ವಕಪ್‌ನಲ್ಲೂ ಆಡುವ ಇರಾದೆ ಅವರದು. ಆದರೆ ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಅವರ ಪುನರಾಗಮನ ಫಲಪ್ರದವಾಗಿರಲಿಲ್ಲ. ಹೀಗಾಗಿ ಟಿ20 ವಿಶ್ವಕಪ್‌ನಲ್ಲಿ ವಿಂಡೀಸ್ ಪರ ಆಡುವ ಅವಕಾಶ ಸಿಗದಿದ್ದರೆ ಗೇಲ್ ತೆರೆಮರೆಗೆ ಸರಿಯಬಹುದು.

    ಇಮ್ರಾನ್ ತಾಹಿರ್
    ದಕ್ಷಿಣ ಆಫ್ರಿಕಾದ 42 ವರ್ಷದ ಸ್ಪಿನ್ನರ್ ಇಮ್ರಾನ್ ತಾಹಿರ್ ಈ ಬಾರಿ ಐಪಿಎಲ್‌ನಲ್ಲಿ ಆಡಲಿರುವ ಅತ್ಯಂತ ಹಿರಿಯ ಆಟಗಾರ. 2019ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿರುವ ತಾಹಿರ್‌ಗೆ ಕಳೆದ ವರ್ಷವೂ ಚೆನ್ನೈ ಸೂಪರ್‌ಕಿಂಗ್ಸ್‌ನಲ್ಲಿ ಹೆಚ್ಚಿನ ಅವಕಾಶ ಲಭಿಸಿರಲಿಲ್ಲ. ಹೀಗಾಗಿ ಮುಂದಿನ ವರ್ಷದ ಮೆಗಾ ಹರಾಜಿನಲ್ಲಿ ತಾಹಿರ್‌ಗೆ ಮತ್ತೆ ಅದೃಷ್ಟ ಒಲಿಯುವುದು ಅನುಮಾನ.

    ಹರ್ಭಜನ್ ಸಿಂಗ್
    ಮುಂಬೈ ಇಂಡಿಯನ್ಸ್ ಪರ 3 ಮತ್ತು ಚೆನ್ನೈ ಸೂಪರ್‌ಕಿಂಗ್ಸ್ ಪರ 1 ಬಾರಿ ಐಪಿಎಲ್ ಪ್ರಶಸ್ತಿ ಜಯಿಸಿರುವ 40 ವರ್ಷದ ಹರ್ಭಜನ್ ಸಿಂಗ್ ಈ ಬಾರಿ ಮೂಲಬೆಲೆ 2 ಕೋಟಿ ರೂಪಾಯಿಗೆ ಕೋಲ್ಕತ ನೈಟ್‌ರೈಡರ್ಸ್‌ ಪರ ಕಣಕ್ಕಿಳಿಯಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಇನ್ನೂ ಅಧಿಕೃತವಾಗಿ ನಿವೃತ್ತಿ ಹೊಂದದಿರುವ ಹರ್ಭಜನ್, ವೈಯಕ್ತಿಕ ಕಾರಣ ನೀಡಿ ಕಳೆದ ಐಪಿಎಲ್‌ನಲ್ಲಿ ಆಡಿರಲಿಲ್ಲ. 2019ರ ಮೇ ನಂತರ ಅವರು ಯಾವುದೇ ಸ್ಪರ್ಧಾತ್ಮಕ ಪಂದ್ಯವನ್ನೂ ಆಡಿಲ್ಲ. ಹೀಗಾಗಿ ಈ ಬಾರಿ ಅವರು ತೋರುವ ನಿರ್ವಹಣೆ ಭವಿಷ್ಯ ನಿರ್ಧರಿಸಲಿದೆ.

    ಎಬಿ ಡಿವಿಲಿಯರ್ಸ್‌
    2018ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್‌ಗೆ ಇದು ಕೊನೆಯ ಐಪಿಎಲ್ ಆಗುವ ಕ್ಷೀಣ ಸಾಧ್ಯತೆ ಇದೆ. 37 ವರ್ಷದ ಎಬಿಡಿ ಸದ್ಯ ಐಪಿಎಲ್ ಬಿಟ್ಟರೆ ಬೇರೆ ಯಾವ ಲೀಗ್‌ನಲ್ಲೂ ಆಡುತ್ತಿಲ್ಲ. ಹೀಗಾಗಿ ಆರ್‌ಸಿಬಿ ಪರವೂ ಅವರ ಆಟ ಇನ್ನೆಷ್ಟು ವರ್ಷ ಸಾಗಲಿದೆ ಎಂದು ಹೇಳುವುದು ಕಷ್ಟ. ಮುಂದಿನ ವರ್ಷ ಮೆಗಾ ಹರಾಜಿಗೆ ಎಬಿಡಿ ಅವರನ್ನು ಆರ್‌ಸಿಬಿ ಬಿಟ್ಟುಕೊಟ್ಟರೆ, ಮತ್ತೆ ಐಪಿಎಲ್‌ನಲ್ಲಿ ಆಡುವ ಸಾಧ್ಯತೆ ಕಡಿಮೆಯಾಗಲಿದೆ.

    ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ ವಾಷಿಂಗ್ಟನ್​ ಸುಂದರ್ ಸಾಕುನಾಯಿಯ ಹೆಸರು..!

    ಕೊಹ್ಲಿ-ರೋಹಿತ್ ಈಗ ಆಪ್ತಮಿತ್ರರು! ಬಯೋಬಬಲ್‌ನಲ್ಲಿ ಬಗೆಹರಿದ ಭಿನ್ನಾಭಿಪ್ರಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts