More

    ಕರೋನಾದಿಂದ ಹೃದಯಕ್ಕೇನಾದರೂ ತೊಂದರೆಯೇ ?

    ಕರೋನಾದಿಂದ ಹೃದಯಕ್ಕೇನಾದರೂ ತೊಂದರೆಯೇ ?
    ಡಾ.ಎಚ್. ಎಸ್. ಮೋಹನ್ ಸಾಗರ.

    ಈಗ ಜಗತ್ತನ್ನು ತಲ್ಲಣಗೊಳಿಸುತ್ತಿರುವ ಕರೊನಾ ವೈರಸ್ ಕಾಯಿಲೆ ಕೋವಿಡ್ – 19 ಮಾನವನ ಶ್ವಾಸಕೋಶಕ್ಕೆ ತೊಂದರೆ ಕೊಟ್ಟು ಕಾಯಿಲೆ ಉಲ್ಬಣಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇತ್ತೀಚೆಗೆ ಹಲವು ಸಂಶೋಧಕರು ಕರೊನಾ ವೈರಸ್ ದೇಹದ ಇತರ ಭಾಗಗಳ ಮೇಲೂ ಬೀರುವ ಪ್ರಭಾವಗಳ ಬಗೆಗೆ ಅಧ್ಯಯನ ನಡೆಸಿದ್ದಾರೆ. ಅವುಗಳಲ್ಲಿ ಹೃದಯ ಮತ್ತು ಅದರ ಸಂಬಂಧಿ ರಕ್ತ ನಾಳಗಳು ಮುಖ್ಯವಾದವುಗಳು.

    ಇನ್ ಫ್ಲೂಯೆಂಜಾ ರೆಸ್ಪಿರೇಟರಿ ಸಿನ್ ಸಿಟಿಯಲ್ ವೈರಸ್ ಗಳು ಹಾಗೂ ಬ್ಯಾಕ್ಟೀರಿಯಾದ ಕಾರಣದಿಂದ ಬರುವ ನ್ಯುಮೋನಿಯಾ ಕಾಯಿಲೆ ಹೃದಯ ಸಂಬಂಧಿ ಕಾಯಿಲೆಗಳ ಮೇಲೆ ಪರಿಣಾಮ ಬೀರಬಲ್ಲದು. ಅಲ್ಲದೆ ಈಗಾಗಲೇ ಇರುವ ಕಾಯಿಲೆಯನ್ನು ಜಾಸ್ತಿ ಮಾಡಬಲ್ಲದು. ಹಿಂದಿನ ಫ್ಲೂ ಕಾಯಿಲೆಯ ಹಾವಳಿಯನ್ನು ಗಮನಿಸಿ ಇನ್ ಫ್ಲೂಯೆಂಜಾ ಸಾಂಕ್ರಾಮಿಕಗಳಲ್ಲಿ ಹೆಚ್ಚಿನ ರೋಗಿಗಳು ನ್ಯುಮೋನಿಯಾ – ಇನ್ ಫ್ಲೂಯೆಂಜಾ ಕಾಯಿಲೆಗಳ ಕಾರಣಗಳಿಗಿಂತಲೂ ಹೃದಯ ಸಂಬಂಧಿ ಕಾಯಿಲೆಗಳಿಂದ ಮರಣ ಹೊಂದುತ್ತಾರೆ ಎಂದು ಈ ವಿಜ್ಞಾನಿಗಳ ಅಭಿಮತ. ಇತ್ತೀಚಿನ ಕೋವಿಡ್ – 19 ಕಾಯಿಲೆ ಉಂಟುಮಾಡುವ ಕೊರೊನಾ ಬಗ್ಗೆ ಬಹಳ ಕಡಿಮೆ ವಿವರಗಳು ಲಭ್ಯವಿದ್ದುದರಿಂದ ಈ ವಿಜ್ಞಾನಿಗಳು ಇದೇ ತರಹದ ಕಾಯಿಲೆಗಳಾದ ಸಾರ್ಸ್ (SARS)ಮತ್ತು ಮೆರ್ಸ್
    ( MERS ) ಕಾಯಿಲೆಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ.

    50,000 ದಾಟಿತು ಅಮೆರಿಕದಲ್ಲಿ COVID19 ಸಾವಿನ ಸಂಖ್ಯೆ, ನ್ಯೂಯಾರ್ಕ್ ಪರಿಸ್ಥಿತಿ ಶೋಚನೀಯ

    ಸಾರ್ಸ್ ಮತ್ತು ಹೃದಯದ ಆರೋಗ್ಯ: ಈಗಿನ ಕರೊನಾ ವೈರಸ್ – SARS- COV – 2 , ಸಾರ್ಸ್ ಕಾಯಿಲೆ ಉಂಟುಮಾಡುವ ವೈರಸ್ ಕೂಡ ಬಾವಲಿಗಳಿಂದ ಉಗಮವಾಗಿದೆ ಎನ್ನಲಾಗಿದೆ. 2003 ರಲ್ಲಿ 29 ದೇಶಗಳ 8439 ಜನರು ಸಾರ್ಸ್ ಕಾಯಿಲೆಗೆ ಒಳಗಾಗಿದ್ದರು. ಸಾರ್ಸ್ ಕಾಯಿಲೆ ಮತ್ತು ಹೃದಯಕ್ಕೆ ಸಂಬಂಧಪಟ್ಟ ಹಾಗೆ 2006 ರಲ್ಲಿ ಅಧ್ಯಯನ ಮಾಡಿದ ವಿಜ್ಞಾನಿಗಳು ” ಸಾರ್ಸ್ ಕಾಯಿಲೆಯಿಂದ ಹಲವು ಹೃದಯ ಸಂಬಂಧಿ ಕಾಯಿಲೆಗಳು ಮುಖ್ಯವಾಗಿ ಕಡಿಮೆ ರಕ್ತದೊತ್ತಡ ( Hypotension ) ಮತ್ತು ವಿಪರೀತ ಹೃದಯ ಬಡಿದುಕೊಳ್ಳುವಿಕೆ ( Tachycardia ) ಕಾಣಿಸಿಕೊಂಡವು. ಅನಿಯಮಿತವಾಗಿ ಹೃದಯ ಬಡಿದುಕೊಳ್ಳುವಿಕೆಯು ಚಿಕಿತ್ಸೆಯ ನಂತರವೂ ಹಲವು ಕಾಲ ಇವು ಇದ್ದವು ಎಂಬುದು ಗಮನಾರ್ಹ ಅಂಶ.

    ಮೆರ್ಸ್ ಮತ್ತು ಹೃದಯ ಆರೋಗ್ಯ: ಕೊರೊನಾ ವೈರಸ್ ನಿಂದ ಬರುವ ಇನ್ನೊಂದು ಕಾಯಿಲೆ ಮೆರ್ಸ್ ಕೂಡ ಬಾವಲಿಗಳ ಮೂಲದಿಂದ ಬಂದಿದೆ ಎನ್ನಲಾಗಿದೆ. ಇದು 2012 ರಲ್ಲಿ ಮೊದಲ ಬಾರಿಗೆ ಸೌದಿ ಅರೇಬಿಯಾದಲ್ಲಿ ಕಾಣಿಸಿಕೊಂಡಿತು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 2019 ರ ಹೊತ್ತಿಗೆ ಇದು 27 ದೇಶಗಳ 2519 ಜನರಲ್ಲಿ ಕಾಣಿಸಿಕೊಂಡು 866 ಜನರ ಮರಣಕ್ಕೆ ಕಾರಣವಾಯಿತು. ಕಾಯಿಲೆಗೆ ಒಳಗಾದ ಶೇಕಡಾ 30 ರಷ್ಟು ಜನರಿಗೆ ಹೃದಯ ಸಂಬಂಧಿ ತೊಂದರೆ ಇರುವುದನ್ನು ವೈದ್ಯ ವಿಜ್ಞಾನಿಗಳು ಗುರುತಿಸಿದ್ದಾರೆ.

    ಒಂದೇ ಆಸ್ಪತ್ರೆಯ 31 ಸಿಬ್ಬಂದಿಗೆ COVID19 ಪಾಸಿಟಿವ್​! :ನಿಖರ ಕಾರಣ ಇನ್ನೂ ತಿಳಿದಿಲ್ಲ…

    ಈಗಿನ ಕೋವಿಡ್ -19: ಈಗಾಗಲೇ ಹೃದಯ ಸಂಬಂಧಿ ಕಾಯಿಲೆ ಇರುವವರೇ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಕಾಯಿಲೆಯ ಲಕ್ಷಣ ಹೊಂದಿದ್ದಾರೆ ಎನ್ನಲಾಗಿದೆ. ಚೀನಾದಲ್ಲಿ ಕೈಗೊಂಡ ಒಂದು ಅಧ್ಯಯನದ ಪ್ರಕಾರ ಕೋವಿಡ್ ಗೆ ಒಳಗಾದ 44672 ಜನರಲ್ಲಿ 4.2% ಜನರಲ್ಲಿ ಹೃದಯ ಸಂಬಂಧಿ ಲಕ್ಷಣಗಳು ಇದ್ದವು. ಮರಣ ಹೊಂದಿದ ರೋಗಿಗಳ 23% ರೋಗಿಗಳಲ್ಲಿ ಹೃದಯದ ಕಾಯಿಲೆಗಳು ಇದ್ದವು. ಚೀನಾದಲ್ಲಿಯೇ ಕೈಗೊಂಡ ಇನ್ನೊಂದು ಅಧ್ಯಯನದಲ್ಲಿ ಕೋವಿಡ್ -19 ಕಾಯಿಲೆಯ ಶೇಕಡಾ 40 ಜನರಲ್ಲಿ ಹೃದಯ ಸಂಬಂಧಿ ಮತ್ತು ಮೆದುಳಿನ ಸಂಬಂಧಿ ಕಾಯಿಲೆಗಳಿದ್ದವು. ಇನ್ನೊಂದು ಅಧ್ಯಯನದ ಪ್ರಕಾರ ಈ ಕಾಯಿಲೆ ಬಂದು ಬದುಕಿ ಉಳಿದ 82 ವ್ಯಕ್ತಿಗಳಲ್ಲಿ ಯಾರಲ್ಲಿಯೂ ಹೃದಯ ಸಂಬಂಧಿ ಕಾಯಿಲೆ ಇರಲಿಲ್ಲ. 68 ರಲ್ಲಿ 13 ಜನರು ಮರಣ ಹೊಂದಿದರೆ ಅವರೆಲ್ಲರಲ್ಲಿಯೂ ಹೃದಯದ ಕಾಯಿಲೆಗಳಿದ್ದವು. ಹಾಗಾಗಿ ಹೆಚ್ಚಿನ ಸಂದರ್ಭಗಳಲ್ಲಿ ಕೋವಿಡ್ – 19 ಕಾಯಿಲೆ ತೀವ್ರ ರೂಪ ಹೊಂದಿ ಮರಣ ಬರುವುದು ಹೃದಯದ ಕಾಯಿಲೆ ಇದ್ದಾಗಲೇ ಎಂಬ ವಾದಕ್ಕೆ ಪುಷ್ಟಿ ದೊರಕಿದೆ.

    ಹೃದಯದ ಹೊರಭಾಗದ ಅಂಗಾಂಶಗಳನ್ನು ಮಯೋಕಾರ್ಡಿಯಂ ಎನ್ನುತ್ತಾರೆ. ಈ ಅಂಗಾಂಶಗಳು ಸೋಂಕಿಗೆ ಒಳಗಾಗಿ ಉರಿಯೂತಕ್ಕೆ ( Inflammation ) ಒಳಗಾದರೆ ಇದು ಹೃದಯ ಬಡಿದುಕೊಳ್ಳುವ ವೇಗವನ್ನು ಹೆಚ್ಚಿಸುತ್ತದೆ. ( Tachycardia ) ಅಥವಾ ಅನಿಯಮಿತವಾಗಿ ( Irregular beats ) ಬಡಿದುಕೊಳ್ಳುವಂತೆ ಮಾಡುತ್ತದೆ. ವೈರಸ್ ನಿಂದ ಬರುವ ಸೋಂಕು ಮಯೋಕಾರ್ಡೈಟಿಸ್ ಉಂಟುಮಾಡುವ ಮುಖ್ಯ ಕಾರಣ – ಇದು ಬಹಳ ಹಿಂದಿನಿಂದಲೂ ಗೊತ್ತಿರುವ ವಿಚಾರ. ಈಗಿನ ಕೋವಿಡ್ -19 ಹೃದಯದ ಆರೋಗ್ಯದ ಮೇಲೆ ‌ಉಂಟುಮಾಡುವ ಪ್ರಭಾವ ಮತ್ತು ಪರಿಣಾಮ ಇನ್ನೂ ವಿವರವಾಗಿ ಗೊತ್ತಾಗಬೇಕಷ್ಟೆ. ಆದರೆ ಈಗಾಗಲೇ ಹೃದಯ ಕಾಯಿಲೆ ಇರುವವರಿಗೆ ಕೋವಿಡ್ – 19 ಬರುವ ಸಂಭವ ತುಂಬಾ ಜಾಸ್ತಿ ಮತ್ತು ಅದರಿಂದ ಮರಣ ಬರುವ ಸಂಭವವೂ ಜಾಸ್ತಿ. ಹಿಂದಿನ ವೈರಸ್ ಕಾಯಿಲೆಗಳನ್ನು ಗಮನಿಸಿ ಹೃದಯದ ಅನಿಯಮಿತ ಬಡಿತ, ಮಯೋಕಾರ್ಡೈಟಿಸ್ ಬಂದು ಅಂತಿಮವಾಗಿ ಹೃದಯ ವೈಫಲ್ಯ ( Heart Failure ) ಹೊಂದುತ್ತದೆ ಎಂದು ವೈದ್ಯ ವಿಜ್ಞಾನಿಗಳ ಅಭಿಮತ.

    ಮಲೇರಿಯಾ ವಿರುದ್ಧದ ಔಷಧಗಳಾದ ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಕ್ಲೋರೊಕ್ವಿನ್ ಗಳನ್ನು ಕೋವಿಡ್ -19 ಕಾಯಿಲೆಗೆ ಉಪಯೋಗಿಸುವ ಬಗ್ಗೆಯೂ ಈಗ ಜಗತ್ತಿನಾದ್ಯಂತ ಚರ್ಚೆ ನಡೆಯುತ್ತಿದೆ. ಈ ಔಷಧಗಳು ಮುಖ್ಯವಾಗಿ ಹೃದಯದ ಮೇಲೆ ತೀವ್ರ ಪರಿಣಾಮ ಬೀರಿ ವ್ಯಕ್ತಿಯ ಮರಣಕ್ಕೆ ಕಾರಣವಾಗಬಹುದು, ಹಾಗಾಗಿ ಅವುಗಳನ್ನು ಖಂಡಿತಾ ಈ ಕಾಯಿಲೆಯಲ್ಲಿ ಉಪಯೋಗಿಸಬಾರದು ಎಂದು ಹೆಚ್ಚಿನ ವೈದ್ಯ ವಿಜ್ಞಾನಿಗಳ ಅಭಿಪ್ರಾಯ.

    ಆಂಧ್ರಪ್ರದೇಶ-ತೆಲಂಗಾಣದಲ್ಲಿ ಹೆಚ್ಚುತ್ತಲೇ ಇದೆ ಕರೊನಾ: ಅತ್ಯಧಿಕ ಸೋಂಕಿತ 3 ಜಿಲ್ಲೆಗಳಲ್ಲಿ ಜಮಾತ್​ಗೆ ಹೋಗಿ ಬಂದವರೇ ಹೆಚ್ಚು

    ಸಾರ್ಸ್, ಮೆರ್ಸ್ ಮತ್ತು ಕೋವಿಡ್ – 19 ಈ ಮೂರೂ ಕಾಯಿಲೆಗಳನ್ನು ಉಂಟುಮಾಡುವುದು ಕೊರೊನಾ ವೈರಸ್ ಹೌದಾದರೂ ಅವುಗಳಲ್ಲಿ ‌ಹಲವು ವ್ಯತ್ಯಾಸಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಮೂರೂ ವೈರಸ್ ಗಳು ಶ್ವಾಸಕೋಶ ಮತ್ತು ಉಸಿರಾಟಕ್ಕೆ ಸಂಬಂಧ ಪಟ್ಟ ಅಂಗಗಳಿಗೇ ಕಾಯಿಲೆ ತರುತ್ತವೆ‌‌. ಮೊದಲಿನ ಸಾರ್ಸ್ ಮತ್ತು ಮೆರ್ಸ್ ಕಾಯಿಲೆಗಳು ‌ಹೆಚ್ಚು ರೋಗಿಗಳ ಶೇಕಡಾವಾರು ಮರಣಕ್ಕೆ ಕಾರಣವಾಗಿವೆ. ಉದಾಹರಣೆಗೆ ಸಾರ್ಸ್ ಕಾಯಿಲೆ 8439 ಜನರಲ್ಲಿ ಕಾಣಿಸಿಕೊಂಡು 812 ಜನರ ಮರಣಕ್ಕೆ ಕಾರಣವಾಗಿತ್ತು. ಅಂದರೆ ಸುಮಾರು ‌9.6% ಜನರು ಮರಣಿಸಿದ್ದಾರೆ. ಅದೇ ಮೆರ್ಸ್ ಕಾಯಿಲೆ 2519 ಜನರಲ್ಲಿ ಕಾಣಿಸಿಕೊಂಡು 866 ಜನರ ಮರಣಕ್ಕೆ ಕಾರಣವಾಯಿತು. ಅಂದರೆ ಸುಮಾರು 34.3% ಜನರು ಮರಣಿಸಿದರು. ಇಲ್ಲಿಯವರೆಗೆ ( 20-4-20) ಕೋವಿಡ್ – 19 ಕಾಯಿಲೆ ಜಗತ್ತಿನಾದ್ಯಂತ ಅನೇಕ 24 ಲಕ್ಷ ಜನರಲ್ಲಿ ಕಾಣಿಸಿಕೊಂಡು 1,65,000 ಜನರ ಮರಣಕ್ಕೆ ಕಾರಣವಾಗಿದೆ. ಅಂದರೆ 6.9% ಜನರು ಮಡಿದಿದ್ದಾರೆ. ಆದರೆ ಇದು ಕಳೆದ ಡಿಸೆಂಬರ್ ನಲ್ಲಿ ಕಾಣಿಸಿಕೊಂಡು ಕೇವಲ 5 ತಿಂಗಳುಗಳಲ್ಲಿ ಬಹಳ ವೇಗವಾಗಿ ಹರಡಿದೆ ಮತ್ತು ಇನ್ನೂ ಹರಡುತ್ತಲೇ ಇದೆ. ಈಗಾಗಲೇ ಜಗತ್ತಿನ 147 ದೇಶಗಳಿಗೆ ವ್ಯಾಪಿಸಿದೆ ಎಂದು ಒಂದು ಅಂದಾಜು.ಹಾಗಾಗಿ ಈ ಮೂರು ಕಾಯಿಲೆಗಳಲ್ಲಿ ಹೆಚ್ಚು ಜನರಿಗೆ ಅಧಿಕ ‌ವೇಗದಲ್ಲಿ ಹರಡಿದೆ ಎಂಬುದು ಗಮನಾರ್ಹ ಅಂಶ.

    ಈ ರೀತಿಯ ಹರಡುವಿಕೆಗೆ ಮುಖ್ಯ ಕಾರಣ ಎಂದರೆ ಗ್ಲೊಬಲೈಸೇಷನ್ ಎಂದು ವಿಜ್ಞಾನಿಗಳ ಅಭಿಮತ. ಅಂದರೆ ಜನರ ಪ್ರಯಾಣ ಮತ್ತು ಸಾಗಾಟ ಮೊದಲಿಗಿಂತ ಈಗ ವಿಪರೀತ ಜಾಸ್ತಿಯಾಗಿದೆ ಎಂದು ಅವರ ಅಂಬೋಣ. ಮೊದಲು ಈ ರೀತಿಯ ವಾಯುಯಾನ ಈ ಮಟ್ಟದಲ್ಲಿ ಇಲ್ಲದೆ ಇದ್ದದ್ದರಿಂದ ಕೊರೊನಾ ವೈರಸ್ ಎಲ್ಲಿ ಕಾಣಿಸಿಕೊಂಡಿತೋ ಅಲ್ಲಿಯೇ ಹತ್ತಿರದ ಸ್ಥಳಗಳಿಗೆ ಸೀಮಿತವಾಗಿ ಹರಡುವ ಪ್ರಮಾಣ ಕಡಿಮೆ ಆಗಿತ್ತು. ಇನ್ನೊಂದು ಅಂಶ ಎಂದರೆ ಈ ಕಾಯಿಲೆ ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡು ಮರಣವೂ ಪುರುಷರಲ್ಲಿಯೇ ಜಾಸ್ತಿ ಎಂದು ಅಂಕಿ ಸಂಖ್ಯೆಗಳು ಹೇಳುತ್ತವೆ.

    ಆ 22ರ ಯುವತಿ ಕೆಮ್ಮುತ್ತಲೇ ಇದ್ಳು- ಆಸ್ಪತ್ರೆಗೆ ದಾಖಲಾದರೆ ಕೆಮ್ಮಿನ ಇತಿಹಾಸ ಕೇಳಿ, ಕಾರಣ ನೋಡಿ ಅಲ್ಲಿದ್ದವರಿಗೆಲ್ಲ ಶಾಕ್ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts