More

    ಭೀಮ್​​ ಆರ್ಮಿ ಮುಖ್ಯಸ್ಥ ಚಂದ್ರಶೇಖರ್​ ಆಜಾದ್​ ಬಂಧನ: ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ

    ನವದೆಹಲಿ: ಪ್ರತಿಭಟನೆ ನಡೆಸುವುದರಲ್ಲಿ ತಪ್ಪೇನಿದೆ? ಪ್ರತಿಭಟನೆ ನಡೆಸಬಾರದು ಎನ್ನುವುದಕ್ಕೆ ಜಾಮಿಯಾ ಮಸೀದಿಯೇನು ಪಾಕಿಸ್ತಾನದಲ್ಲಿರುವ ಮಸೀದಿಯೇ? ಎಂದು ಪ್ರಶ್ನಿಸುವ ಮೂಲಕ ಮಂಗಳವಾರ ನಡೆದ ಭೀಮ್​​ ಆರ್ಮಿ ಮುಖ್ಯಸ್ಥ ಚಂದ್ರಶೇಖರ್​ ಆಜಾದ್​ ಜಾಮೀನು ಅರ್ಜಿ ವಿಚಾರಣೆ ವೇಳೆ ತೀಸ್​ ಹಜಾರಿ ನ್ಯಾಯಾಲಯ ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತು.

    ಸಿಎಎ ವಿರೋಧಿಸಿ ದೆಹಲಿಯ ದರಿಯಾಗಂಜ್​ನಲ್ಲಿ ನಡೆದ ಪ್ರತಿಭಟನೆ ಹಿಂಸಾತ್ಮ ಕ ರೂಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಚಂದ್ರಶೇಖರ್​ ಅಜಾದ್​ ಅವರನ್ನು ಬಂಧಿಸಿದ್ದರು.

    ದೆಹಲಿ ಪೊಲೀಸರ ಕ್ರಮ ಪಶ್ನಿಸಿ ಚಂದ್ರಶೇಖರ್​ ಆಜಾದ್​ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ತೀಸ್​ ಹಜಾರಿಯ ಸೆಷೆನ್ಸ್​ ಜಡ್ಜ್​ ಕಾಮಿನಿ ಲೌ, ಪಬ್ಲಿಕ್​ ಪ್ರಾಸಿಕ್ಯೂಟರ್​ರನ್ನು ಪ್ರಶ್ನಿಸಿ, ಧರಣಿ ನಡೆಸಿದ್ದರಲ್ಲಿ ತಪ್ಪೇನಿದೆ? ಸಾಂವಿಧಾನಾತ್ಮಕ ಹಕ್ಕುಗಳಲ್ಲಿ ಪ್ರತಿಭಟನೆ ಮಾಡುವುದು ಕೂಡ ಒಂದಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.

    ಇದೇ ವೇಳೆ ದೆಹಲಿ ಪೊಲೀಸರನ್ನು ಪ್ರಶ್ನಿಸಿದ ಅವರು ಪ್ರತಿಭಟನೆ ನಡೆಸಬಾರದು ಎನ್ನುವುದಕ್ಕೆ ಅದೇನು ಪಾಕಿಸ್ತಾನದಲ್ಲಿರುವ ಜಾಮಾ ಮಸೀದಿಯೇ ಎಂದು ಪ್ರಶ್ನಿಸಿದರು.

    ಪ್ರತಿಭಟನೆ ನಡೆಸುವುದಕ್ಕೆ ಯಾರಾದಾರೊಬ್ಬರು ಅನುಮತಿ ಪಡೆಯಬೇಕೆಂದ ಪಬ್ಲಿಕ್​ ಪ್ರಾಸಿಕ್ಯೂಟರ್​ರನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡ ಜಡ್ಜ್​, ಯಾವ ಅನುಮತಿ? ಸೆಕ್ಷನ್​ 144 ಅನ್ನು ಪದೇ ಪದೇ ಹೇರುವುದು ಕಾನೂನಿನ ದುರುಪಯೋಗವೆಂದು ಸುಪ್ರೀಂಕೋರ್ಟ್​ ಹೇಳಿದೆ. ಇಂತಹ ಹಲವು ಪ್ರಕರಣಗಳನ್ನು ನಾನು ನೋಡಿದ್ದೇನೆ ಎಂದು ಟೀಕಿಸಿ, ಸಂವಿಧಾನವನ್ನು ಓದಿದ್ದೀರಾ ಎಂದು ಜಡ್ಜ್​ ಕೇಳಿದರು.

    ತಮ್ಮ ವಾದ ಮುಂದುವರಿಸಿದ ಪಬ್ಲಿಕ್​ ಪ್ರಾಸಿಕ್ಯೂಟರ್​, ಡಿಸೆಂಬರ್​ನಲ್ಲಿ ಸಿಎಎ ವಿರೋಧಿಸಿ ಜಾಮಾ ಮಸೀದಿಯಲ್ಲಿ ನಡೆದ ಪ್ರತಿಭಟನೆ ವೇಳೆ ಚಂದ್ರಶೇಖರ್​ ಆಜಾದ್​ ಅವರು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಡ್ರೋಣ್​ ವಿಡಿಯೋ​ ಫುಟೇಜ್​ ತಿಳಿಸುತ್ತದೆ ಎಂದರು.

    ಡಿಸೆಂಬರ್​ನಲ್ಲಿ ಸಿಎಎ ವಿರೋಧಿಸಿದ ಭೀಮ್​ ಆರ್ಮಿ ಸಂಘಟನೆ ಪೊಲೀಸರ ಅನುಮತಿ ಪಡೆಯದೇ ಜಾಮಾ ಮಸೀದಿಯಿಂದ ಜಂತರ್​ಮಂತರ್​ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿತ್ತು. ದೆಹಲಿ ಗೇಟ್​ ಬಳಿ ಪ್ರತಿಭಟನಾಕಾರರನ್ನು ಪೊಲೀಸರು ಮತ್ತು ಸಂಸದೀಯ ಸಿಬ್ಬಂದಿ ತಡೆದಾಗ ಪ್ರತಿಭಟನಾ ಹಿಂಸಾತ್ಮಕ ರೂಪಕ್ಕೆ ತಿರುಗಿತ್ತು. ಈ ವೇಳೆ ಒಂದು ಕಾರು ಸೇರಿದಂತೆ ಕೆಲವು ವಾಹನಗಳಿಗೆ ಬಿಂಕಿ ಹಚ್ಚಲಾಗಿತ್ತು. ಈ ವೇಳೆ ಪರಿಸ್ಥಿತಿಯನ್ನು ತಹಬದಿಗೆ ತರಲು ಪೊಲೀಸರು ಲಾಠಿಚಾರ್ಜ್​ ಕೂಡ ಮಾಡಿದ್ದರು. ಆಗ ಚಂದ್ರಶೇಖರ್​ ಆಜಾದ್​ ಅವರನ್ನು ಬಂಧಿಸಲಾಗಿತ್ತು. ಅವರನ್ನು ಡಿಸೆಂಬರ್​ 21ರವರೆಗೆ ದೆಹಲಿ ಕೋರ್ಟ್​ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts