More

    ಆರಂಭದ ಆ 25 ವರ್ಷಗಳೇ ಇಡೀ ಬದುಕನ್ನು ರೂಪಿಸುವುದು: ವಿಜಯವಾಣಿ ಕ್ಲಬ್​ಹೌಸ್​ನಲ್ಲಿ ರವಿ ಡಿ. ಚನ್ನಣ್ಣನವರ್​ ಸಂವಾದ

    ಬೆಂಗಳೂರು: ಕಷ್ಟದಲ್ಲೇ ಬೆಳೆದು, ಮಹತ್ತರವಾದದನ್ನು ಸಾಧಿಸಿ, ಯುವಕರಿಗೆ ಸ್ಫೂರ್ತಿಯಾಗಿರುವ ಪೊಲೀಸ್ ಅಧಿಕಾರಿ ರವಿ ಡಿ. ಚನ್ನಣ್ಣವರ್​ ಇದೀಗ ವಿಜಯವಾಣಿ-ದಿಗ್ವಿಜಯ ಕ್ಲಬ್​ಹೌಸ್​ ಸಂವಾದದಲ್ಲಿ ಮಾತನಾಡುತ್ತಿದ್ದು, ತಮ್ಮ ಬದುಕಿನ ಸ್ಫೂರ್ತಿಕರ ಅಂಶಗಳನ್ನು ತೆರೆದಿಟ್ಟಿದ್ದಾರೆ.

    ನಾನೊಬ್ಬ ಹಳ್ಳಿ ಹುಡುಗ, ಗಲ್ಲಿ ಹುಡುಗ, ಕನ್ನಡ ಮಾಧ್ಯಮದಲ್ಲಿ ಓದಿದವನು ಆದರೂ ಏನಾದರೂ ಸಾಧಿಸಬೇಕು ಎಂಬ ಆಸಕ್ತಿ ಇದೆ ಎನ್ನುವಂಥ ಹುಡುಗರಿಗೆ ಸ್ಫೂರ್ತಿಯಾಗಲಿ ಎಂದೇ ನಾನು ನನ್ನ ಜೀವನದ ಕಥೆಯನ್ನು ಹೇಳುತ್ತಿರುತ್ತೇನೆ. ಏಕೆಂದರೆ ನನ್ನಲ್ಲೇ ನಾನು ಅವರನ್ನು ನೋಡುತ್ತೇನೆ. ಇಲ್ಲಿ ಯಾವುದೂ ಅಸಾಧ್ಯವಲ್ಲ. ನಾವು ಯೋಚನೆ ಮಾಡಿದಂತೆ ಆಗುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ.

    ವಿದ್ಯಾರ್ಥಿ ಜೀವನದ ತಮ್ಮ ಸಂಕಷ್ಟಗಳನ್ನು ಹೇಳಿಕೊಂಡ ಅವರು ಹಾಸ್ಟೆಲ್​ನಲ್ಲಿ ನಾವು ಐವರು ಗೆಳೆಯರು ಕರೆಯದೇ ಮದುವೆಗೆ ಹೋಗುತ್ತಿದ್ದೆವು, ಐದು ಮಂದಿ ಐದು ಜತೆ ಬಟ್ಟೆಯನ್ನೇ ವಾರಕ್ಕೊಬ್ಬರಂತೆ ಹಂಚಿಕೊಂಡು ಧರಿಸುತ್ತಿದ್ದೆವು ಎಂದು ತಮ್ಮ ಕಷ್ಟದ ದಿನಗಳನ್ನು ವಿವರಿಸಿದರು.

    ತಾವು ಧಾರವಾಡದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಗ ಕಂಡ ಜಿಲ್ಲಾಧಿಕಾರಿ ದರ್ಪಣ್​ ಜೈನ್, ಹುಬ್ಬಳ್ಳಿ-ಧಾರವಾಡ ಪಾಲಿಕೆ ಆಯುಕ್ತರಾಗಿದ್ದ ಮಣಿವಣ್ಣನ್​, ಎಸ್​ಪಿ ಆಗಿದ್ದ ವಿಪುಲ್ ಕುಮಾರ್ ಅವರ ಕಾರ್ಯವೈಖರಿಗಳನ್ನು ನೋಡಿ ರೋಮಾಂಚಿತನಾಗಿದ್ದೆ ಎಂದು ಉದಾಹರಣೆ ನೀಡಿದರು.

    ಒಟ್ಟಿನಲ್ಲಿ ಪಠ್ಯದ ಜತೆ ಪಠ್ಯೇತರ ಚಟುವಟಿಕೆ ಮಾತ್ರವಲ್ಲದೆ ಆಡಳಿತದಲ್ಲಿ ಬಹುದೊಡ್ಡ ಜವಾಬ್ದಾರಿ ಹೊತ್ತವರ ಬದುಕೇ ಸ್ಫೂರ್ತಿ. ಕೊಟ್ಟ ಪಠ್ಯಕ್ಕಿಂತ ಸಮಾಜದ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳು ಹಾಗೂ ಘಟನೆ ನನ್ನ ಮೇಲೆ ತುಂಬಾ ಪ್ರಭಾವ ಬೀರಿದೆ ಎಂದ ಅವರು ವಿದ್ಯಾರ್ಥಿ ಜೀವನದ ಮೊದಲ ಆ 25 ವರ್ಷಗಳು, ಆ ಸಮಯದಲ್ಲಿ ನಡೆಯುವ ಘಟನೆ, ಕಂಡ ವ್ಯಕ್ತಿಗಳನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎಂಬುದು ಇಡೀ ಬದುಕನ್ನು ರೂಪಿಸುತ್ತದೆ ಎಂದರು.

    ಕೂಲಿ ಕೆಲಸ, ಸಿಮೆಂಟ್ ಚೀಲ, ವೇಟರ್, ಕ್ಲೀನರ್, ವಾಟರ್ ಸರ್ವಿಸ್ ಮಾಡಿದ್ದು ಯಾವುದೂ ನನ್ನನ್ನು ಕುಗ್ಗಿಸಿಲ್ಲ. ಇದು ನನ್ನ ಬದುಕು ನಾನೇ ರೂಪಿಸಿಕೊಳ್ಳಬೇಕು. ಕಷ್ಟಪಡದೆ ಉದ್ಧಾರವಾಗಲ್ಲ ಎಂದು ತಿಳಿದಿದ್ದೇನೆ. ಒಂದೊಂದು ಸಲ ಕಾರ್ಮೋಡ ಕವಿದ ಹಾಗಾಗುತ್ತಿತ್ತು. ಆಗೆಲ್ಲ ಸ್ವಾಮಿ ವಿವೇಕಾನಂದರನ್ನು ನೆನಪಿಸಿಕೊಳ್ಳುತ್ತಿದ್ದೆ, ಹತ್ತಿರದ ರಾಮಕೃಷ್ಣಾಶ್ರಮಕ್ಕೆ ಹೋಗುತ್ತಿದ್ದೆ ಎಂದ ಅವರು, ನೆಗೆಟಿವ್ ಅನಿಸುವ ಎಲ್ಲ ವ್ಯಕ್ತಿ, ವಿಷಯ, ವಸ್ತುಗಳಿಂದ ನಾವು ದೂರವಿರಬೇಕು ಎಂದು ಕಿವಿಮಾತು ಹೇಳಿದರು.

    ಸಂವಾದವನ್ನು ಕೇಳಲು ಈ ಲಿಂಕ್ ಕ್ಲಿಕ್​ ಮಾಡಿ.

    https://www.clubhouse.com/event/PQz2kXGb

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts