More

    ಈ ಬಾರಿಯೂ ಆರ್‌ಸಿಬಿಗಿಲ್ಲ ಕಪ್; 14 ವರ್ಷಗಳ ಬಳಿಕ ಫೈನಲ್‌ಗೇರಿದ ರಾಜಸ್ಥಾನ

    ಅಹಮದಾಬಾದ್: ಸರ್ವಾಂಗೀಣ ವೈಫಲ್ಯ ಅನುಭವಿಸಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-15ರ 2ನೇ ಕ್ವಾಲಿಫೈಯರ್‌ನಲ್ಲೇ ತನ್ನ ಹೋರಾಟವನ್ನು ಮುಕ್ತಾಯಗೊಳಿಸಿತು. ‘ಈ ಸಲ ಕಪ್ ನಮ್ದೆ’.. ಎಂಬ ವೇದಘೋಷದೊಂದಿಗೆ ನೆಚ್ಚಿನ ತಂಡಕ್ಕೆ ಪ್ರೋತ್ಸಾಹಿಸುತ್ತಿದ್ದ ಅಭಿಮಾನಿಗಳ ಆಸೆ ಈ ಬಾರಿಯೂ ಕೈಗೂಡಲಿಲ್ಲ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ 7 ವಿಕೆಟ್‌ಗಳಿಂದ ರಾಜಸ್ಥಾನ ರಾಯಲ್ಸ್‌ಗೆ ಶರಣಾಯಿತು. 6 ವರ್ಷಗಳ ಬಳಿಕ ಫೈನಲ್‌ಗೇರುವ ಕನಸಿನಲ್ಲಿದ್ದ ಆರ್‌ಸಿಬಿ ಆಘಾತ ಕಂಡರೆ, ರಾಯಲ್ಸ್ 14 ವರ್ಷಗಳ ಬಳಿಕ ಪ್ರಶಸ್ತಿ ಸುತ್ತಿಗೇರಿತು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ಕಳೆದ ಪಂದ್ಯದ ಶತಕವೀರ ರಜತ್ ಪಾಟಿದಾರ್ (58 ರನ್, 42 ಎಸೆತ, 4 ಬೌಂಡರಿ, 3 ಸಿಕ್ಸರ್) ಅರ್ಧಶತಕದಾಟದ ನಡುವೆಯೂ ಸ್ಲಾಗ್ ಓವರ್‌ಗಳಲ್ಲಿ ದಿಢೀರ್ ಕುಸಿತ ಕಂಡ ಪರಿಣಾಮ 8 ವಿಕೆಟ್‌ಗೆ 157 ರನ್ ಪೇರಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ರಾಯಲ್ಸ್ ತಂಡ ಜೋಸ್ ಬಟ್ಲರ್ (106*ರನ್, 60 ಎಸೆತ, 10 ಬೌಂಡರಿ, 6 ಸಿಕ್ಸರ್) ಶತಕದಾಟದ ನೆರವಿನಿಂದ 18.1 ಓವರ್‌ಗಳಲ್ಲಿ 3 ವಿಕೆಟ್‌ಗೆ 161 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

    * ಬಟ್ಲರ್ ಬಿರುಸಿನ ಬ್ಯಾಟಿಂಗ್
    ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ (21ರನ್, 13 ಎಸೆತ, 1 ಬೌಂಡರಿ, 2 ಸಿಕ್ಸರ್) ಹಾಗೂ ಜೋಸ್ ಬಟ್ಲರ್ ಜೋಡಿ ಬಿರುಸಿನ ಆರಂಭ ನೀಡಿತು. ಮೊಹಮದ್ ಸಿರಾಜ್ ಎಸೆದ ಮೊದಲ ಓವರ್‌ನಲ್ಲೇ ಯಶಸ್ವಿ ಜೈಸ್ವಾಲ್ 2 ಸಿಕ್ಸರ್, 1 ಬೌಂಡರಿ ಒಳಗೊಂಡಂತೆ 16 ರನ್ ಕಸಿದರು. ಬಟ್ಲರ್- ಯಶಸ್ವಿ ಜೈಸ್ವಾಲ್ ಜೋಡಿ ಮೊದಲ ವಿಕೆಟ್‌ಗೆ 31 ಎಸೆತಗಳಲ್ಲಿ 61 ರನ್ ಪೇರಿಸಿ ತಂಡದ ಗೆಲುವನ್ನು ಸುಲಭವಾಗಿಸಿತು. ನಾಯಕ ಸ್ಯಾಮ್ಸನ್ (23), ಬಟ್ಲರ್ ಜತೆಗೂಡಿ 2ನೇ ವಿಕೆಟ್‌ಗೆ 52 ಪೇರಿಸಿದರು. ಕಡೇ ಹಂತದವರೆಗೂ ಕ್ರೀಸ್‌ನಲ್ಲಿ ನಿಂತ ಬಟ್ಲರ್ ಇನ್ನು 11 ಎಸೆತಗಳು ಬಾಕಿ ಇರುವಂತೆ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು.

    ಆರ್‌ಸಿಬಿ: 8 ವಿಕೆಟ್‌ಗೆ 157 (ರಜತ್ ಪಾಟಿದಾರ್ 58, ಪ್ಲೆಸಿಸ್ 25, ಗ್ಲೆನ್ ಮ್ಯಾಕ್ಸ್‌ವೆಲ್ 24, ಪ್ರಸಿದ್ಧ ಕೃಷ್ಣ 22ಕ್ಕೆ 3, ಒಬೆಡ್ ಮೆಕ್‌ಕಾಯ್ 23ಕ್ಕೆ 3), ರಾಜಸ್ಥಾನ ರಾಯಲ್ಸ್: 18.1 ಓವರ್‌ಗಳಲ್ಲಿ 3 ವಿಕೆಟ್‌ಗೆ 161 (ಜೋಸ್ ಬಟ್ಲರ್ 106*, ಯಶಸ್ವಿ ಜೈಸ್ವಾಲ್ 21, ಸಂಜು ಸ್ಯಾಮ್ಸನ್ 23, ಜೋಸ್ ಹ್ಯಾಸಲ್‌ವುಡ್ 23ಕ್ಕೆ 2, ವನಿಂದು ಹಸರಂಗ 26ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts