More

    ಜನತಾ ಬಜಾರ್ ಪುನರ್ವಸತಿ ಸ್ಥಳ ಬದಲು

    ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಜನತಾ ಬಜಾರ್​ನಲ್ಲಿ ಹೊಸ ವಾಣಿಜ್ಯ ಸಂಕೀರ್ಣ ನಿರ್ವಣಕ್ಕೆ ಪೂರ್ವ ಅಲ್ಲಿರುವ ವ್ಯಾಪಾರಿಗಳಿಗೆ ಪುನರ್ವಸತಿ ಕಲ್ಪಿಸುವ ಸ್ಥಳ ಮತ್ತೆ ಬದಲಾಗಿದೆ. ಇದೀಗ ಗೋಕುಲ ರಸ್ತೆ ಕ್ಲಾರ್ಕ್ಸ್ ಇನ್ ಹೋಟೆಲ್ ಪಕ್ಕ ಹಾಗೂ ಹೊಸೂರು ಬಳಿ ವ್ಯಾಪಾರಿಗಳ ಸ್ಥಳಾಂತರಕ್ಕೆ ಮಹಾನಗರ ಪಾಲಿಕೆ ಸಿದ್ಧತೆ ನಡೆಸಿದೆ.

    ಪ್ರಾರಂಭದಲ್ಲಿ ಜನತಾ ಬಜಾರ್ ಸಮೀಪದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ದಾಜೀಬಾನ ಪೇಟೆವರೆಗೆ ರಸ್ತೆಯ ಮೇಲೆ ಪುನರ್ವಸತಿ ಕಲ್ಪಿಸಲು ನಿರ್ಧರಿಸಲಾಗಿತ್ತು. ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಇದಕ್ಕೆ ಒಪ್ಪಿಗೆ ನೀಡಲಿಲ್ಲ. ರಸ್ತೆ ಭಾಗದ ಅಂಗಡಿಕಾರರು ಸಹ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಈಜುಗೊಳ ಸಮೀಪ (ಟ್ರಾಫಿಕ್ ಐಲ್ಯಾಂಡ್ ಬಳಿ)ದ ಹಳ್ಳೂರ ಕುಟುಂಬದವರಿಗೆ ಸೇರಿದ 1 ಎಕರೆ ಜಾಗವನ್ನು ಬಾಡಿಗೆ ಮೇಲೆ ಪಡೆಯಲು ಪಾಲಿಕೆ ಮುಂದಾಗಿತ್ತು. ನ್ಯಾಯಾಲಯದಲ್ಲಿ ವ್ಯಾಜ್ಯವಿರುವ ಹಿನ್ನೆಲೆಯಲ್ಲಿ ಈ ಜಾಗ ಕೈ ಬಿಡಲಾಯಿತು. ಆಮೇಲೆ ಗಿರಣಿಚಾಳ ಭಾರತ ಮಿಲ್ ಪ್ರದೇಶ ಗುರುತಿಸಲಾಗಿತ್ತು. ಇದಕ್ಕೂ ಸಹ ತಕರಾರು ಇದ್ದ ಕಾರಣ ಪುನರ್ವಸತಿ ಕಗ್ಗಂಟಾಗಿತ್ತು.

    ಇದೀಗ ಜನತಾ ಬಜಾರ್ ಮಾರುಕಟ್ಟೆಯ ತರಕಾರಿ ಮಾರಾಟಗಾರರಿಗೆ ಗೋಕುಲ ರಸ್ತೆ ಕ್ಲಾರ್ಕ್ಸ್ ಇನ್ ಹೋಟೆಲ್ ಪಕ್ಕ ಖಾಲಿ ಜಾಗದಲ್ಲಿ ಪುನರ್ವಸತಿ ಕಲ್ಪಿಸಲು ನಿರ್ಧರಿಸಿ ಶೆಡ್ ಹಾಕಲಾಗಿದೆ. ದಿನಸಿ, ಕಾಳು ಕಡಿ ವ್ಯಾಪಾರಿಗಳಿಗೆ ಹೊಸೂರು ಬಳಿ (ಘಂಟಿ ಆಸ್ಪತ್ರೆ ಹಿಂಭಾಗ) ಪುನರ್ವಸತಿ ಕಲ್ಪಿಸಲು ಮಳಿಗೆಗಳನ್ನು ನಿರ್ವಿುಸಲಾಗಿದೆ. ಇವು ಪಾಲಿಕೆ ಒಡೆತನದ ಜಾಗ. ಪುನರ್ವಸತಿ ಸೌಲಭ್ಯ ಕಲ್ಪಿಸಲು 30 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ. ರಿಯೋ ಗ್ರೀನ್ ಎನ್ವಿರಾನ್ ಸಂಸ್ಥೆ ಇದರ ಗುತ್ತಿಗೆ ಪಡೆದಿದೆ.

    ಕ್ಲಾರ್ಕ್ಸ್ ಇನ್ ಹೋಟೆಲ್ ಪಕ್ಕ 16 ಜನ ತರಕಾರಿ ಮಾರಾಟಗಾರರಿಗೆ ಶೆಡ್ ವ್ಯವಸ್ಥೆ ಮಾಡಲಾಗಿದೆ. ಹೊಸೂರು ಬಳಿ 44 ತಾತ್ಕಾಲಿಕ ಮಳಿಗೆಗಳನ್ನು ನಿರ್ವಿುಸಲಾಗಿದೆ. ಜನತಾಬಜಾರ್​ನಲ್ಲಿ ಪಾಲಿಕೆ ಒಡೆತನದ ಕಟ್ಟಡದಲ್ಲಿ 16-18 ಮಳಿಗೆಗಳು ಖಾಲಿ ಇವೆ. ಈ ಸ್ಥಳಗಳಲ್ಲಿ ಜನತಾ ಬಜಾರ್​ನಲ್ಲಿರುವ ಎಲ್ಲರಿಗೂ ಪುನರ್ವಸತಿ ಕಲ್ಪಿಸಲು ಸಾಧ್ಯವೇ? ಈಗಾಗಲೇ ಅಂಗಡಿಕಾರರು ತಕರಾರು ತೆಗೆದಿದ್ದಾರೆ.

    ನೀತಿ ಸಂಹಿತೆ-ದೀಪಾವಳಿ

    ಪಶ್ಚಿಮ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್​ಗೆ ನಡೆದ ಚುನಾವಣೆ ಫಲಿತಾಂಶ ನ. 10ರಂದು ಬರಲಿದೆ. ಈ ಕಾರಣಕ್ಕೆ ಧಾರವಾಡ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ನೀತಿ ಸಂಹಿತೆ ತೆರವುಗೊಂಡ ಬಳಿಕ ಜನತಾ ಬಜಾರ್ ಅಂಗಡಿಕಾರರು ಹಾಗೂ ವ್ಯಾಪಾರಿಗಳನ್ನು ಪುನರ್ವಸತಿ ಸ್ಥಳಕ್ಕೆ ಸ್ಥಳಾಂತರಿಸಲು ಪಾಲಿಕೆ ಅಣಿಯಾಗಿದೆ. ಆದರೆ, ನೀತಿ ಸಂಹಿತೆ ತೆರವುಗೊಂಡ ಬಳಿಕ ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಬರಲಿದೆ. ಅಂಗಡಿಕಾರರಿಗೆ, ವ್ಯಾಪಾರಿಗಳಿಗೆ ಸ್ಥಳಾಂತರದಿಂದ ಇನ್ನಷ್ಟು ದಿನಗಳ ರಿಯಾಯಿತಿ ಸಿಗಬಹುದು.

    18.35 ಕೋಟಿ ರೂ. ವೆಚ್ಚದಲ್ಲಿ ಜನತಾ ಬಜಾರ್ ನೂತನ ವಾಣಿಜ್ಯ ಸಂಕೀರ್ಣ ನಿರ್ವಣಕ್ಕೆ ಯೋಜನೆ ರೂಪಿಸಲಾಗಿದೆೆ. ಮೆ. ಎಸ್​ಕೆಎಸ್ ಕಾರ್ಕಳ ಇನ್​ಫ್ರಾ ಪ್ರಾಜೆಕ್ಟ್ಸ್ ಪ್ರೖೆವೇಟ್ ಲಿಮಿಟೆಡ್ ಕಂಪನಿ ಗುತ್ತಿಗೆ ಪಡೆದಿದೆ.

    ಜನತಾ ಬಜಾರ್​ನಲ್ಲಿ ವ್ಯಾಪಾರ ನಡೆಸುತ್ತಿರುವವರನ್ನು ಗೋಕುಲ ರಸ್ತೆ ಕ್ಲಾರ್ಕ್ಸ್ ಇನ್ ಹೋಟೆಲ್ ಪಕ್ಕ ಹಾಗೂ ಹೊಸೂರು ಬಳಿ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ. ಅಗತ್ಯ ಬಿದ್ದರೆ ಜನತಾಬಜಾರ್​ನಲ್ಲಿರುವ ಪಾಲಿಕೆ ಒಡೆತನದ ಖಾಲಿ ಇರುವ ಮಳಿಗೆಗಳನ್ನು ಬಳಕೆ ಮಾಡಿಕೊಳ್ಳುತ್ತೇವೆ. ಒಂದೇ ಕಡೆ ಎಲ್ಲರಿಗೂ ಪುನರ್ವಸತಿ ಕಲ್ಪಿಸಲು ಸ್ಥಳದ ಅಭಾವವಿದೆ.

    | ಡಾ. ಸುರೇಶ ಇಟ್ನಾಳ, ಪಾಲಿಕೆ ಆಯುಕ್ತ

    ಹೊಸೂರಿನಲ್ಲಿ ನಿರ್ವಿುಸಿರುವ ಮಳಿಗೆಗಳನ್ನು ಜನತಾ ಬಜಾರ್​ನಲ್ಲಿಯ ಹಾಲಿ ವ್ಯಾಪಾರಿಗಳು ಬಂದು ನೋಡಿಕೊಂಡು ಹೋಗಿದ್ದಾರೆ. ಇದು ತಾತ್ಕಾಲಿಕ ಪರ್ಯಾಯ ವ್ಯವಸ್ಥೆ. ಜನತಾ ಬಜಾರ್ ಹೊಸ ಮಾರುಕಟ್ಟೆ ಸಂಕೀರ್ಣ ನಿರ್ವಣಗೊಂಡ ಮೇಲೆ ಅಲ್ಲಿಗೆ ವಾಪಸ್ ಹೋಗುತ್ತಾರೆ.

    | ಎಸ್.ಎಚ್. ನರೇಗಲ್, ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ ವಿಶೇಷಾಧಿಕಾರಿ

    ಪುನರ್ವಸತಿಗಾಗಿ ಹೊಸೂರು ಹಾಗೂ ಕ್ಲಾರ್ಕ್ಸ್ ಇನ್ ಹೋಟೆಲ್ ಪಕ್ಕದ ಸ್ಥಳ ಜನತಾ ಬಜಾರ್ ವ್ಯಾಪಾರಿಗಳು ಸೂಚಿಸಿದ ಜಾಗವೇ ಅಲ್ಲ. ಇಲ್ಲಿ ಸಾರ್ವಜನಿಕರು ಸುಳಿಯುವುದೇ ಇಲ್ಲ. ವ್ಯಾಪಾರಕ್ಕೆ ಯೋಗ್ಯವಲ್ಲ. ಇದು ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳ ಮೊಂಡುತನ ಸೂಚಿಸುತ್ತದೆ.

    | ಪ್ರೇಮನಾಥ ಚಿಕ್ಕತುಂಬಳ, ಜನತಾ ಬಜಾರ್ ಚಿಕ್ಕ ವ್ಯಾಪಾರಸ್ಥರ ಸಮಿತಿ ಗೌರವಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts