More

    ಸಂಪಾದಕೀಯ: ತಪಾಸಣೆ ವ್ಯವಸ್ಥೆ ಅಗತ್ಯ

    ಶಿಕ್ಷಣ ಪೂರ್ಣಗೊಳಿಸಿದ ಮೇಲೆ ಉದ್ಯೋಗ ಗಿಟ್ಟಿಸಿ, ಉತ್ತಮ ಬದುಕು ರೂಪಿಸಿಕೊಳ್ಳುವ ಕನಸು ಎಲ್ಲರಲ್ಲೂ ಇರುತ್ತದೆ. ಅದರಲ್ಲೂ, ವಿದೇಶದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕರೆ ಶೈಕ್ಷಣಿಕ ಸಾಲ ತೀರಿಸಿ, ಒಂದಿಷ್ಟು ಹಣ ಉಳಿಸಬಹುದು ಎಂಬ ಆಲೋಚನೆ ಯುವಕರದ್ದು. ಆದರೆ, ವಿದೇಶಗಳಲ್ಲಿ ಕೆಲಸಕ್ಕೆ ಸೇರುವ ಮುನ್ನ ಕೂಲಂಕಷವಾಗಿ ಎಲ್ಲ ವಿವರಗಳನ್ನು ಪರಿಶೀಲಿಸುವುದು ಉದ್ಯೋಗಾಕಾಂಕ್ಷಿಗಳ ಕರ್ತವ್ಯ. ಯಾವ ಬಗೆಯ ಕೆಲಸಕ್ಕೆ ತಾವು ವಿದೇಶಕ್ಕೆ ಹೋಗುತ್ತಿದ್ದೇವೆ, ಕಂಪನಿ ಯಾವುದು, ಅದು ನಂಬಲರ್ಹವೇ ಹೀಗೆ ಎಲ್ಲ ಮಾಹಿತಿಯನ್ನು ಮತ್ತೊಮ್ಮೆ ಪರಾಮಶಿಸಿ ಅದು ಸರಿಯಾಗಿದ್ದಲ್ಲಿ ಮಾತ್ರ ಆಫರ್ ಲೆಟರ್​ನ್ನು ಒಪ್ಪಿಕೊಳ್ಳಬೇಕು. ಉದ್ಯೋಗದಾತ ಕಂಪನಿಗಳ ನಡವಳಿಕೆಯಲ್ಲಿ ಅನುಮಾನಗಳು ಕಂಡುಬಂದರೆ, ಅಂಥ ಆಫರ್​ಗಳನ್ನು ತಿರಸ್ಕರಿಸಬೇಕು. ಯುವಕರ ಕೆಲಸದ ಅನಿವಾರ್ಯತೆಯನ್ನು ದುರುಪಯೋಗ ಪಡಿಸಿಕೊಳ್ಳುವ ಮತ್ತು ವಿದೇಶಗಳಲ್ಲಿ ಅವರನ್ನು ಕಿರುಕುಳಕ್ಕೆ ಒಳಪಡಿಸುವ ಜಾಲಗಳು ಹೆಚ್ಚುತ್ತಿರುವುದು ತೀವ್ರ ಕಳವಳಕಾರಿ ಬೆಳವಣಿಗೆ. ಈ ವಿಷಯದಲ್ಲಿ ಸರ್ಕಾರ ಕೂಡ ಎಚ್ಚೆತ್ತುಕೊಳ್ಳಬೇಕಿದೆ ಮತ್ತು ವಿದೇಶಕ್ಕೆ ಉದ್ಯೋಗಕ್ಕೆಂದು ತೆರಳಿದ ಭಾರತೀಯರ ರಕ್ಷಣೆಗೆ ಸಮಗ್ರ ವ್ಯವಸ್ಥೆಯನ್ನು ರೂಪಿಸಬೇಕಿದೆ. ಮುಖ್ಯವಾಗಿ, ವಂಚನೆಯಿಂದ ಬಚಾವಾಗಲು ಸರ್ಕಾರದಿಂದಲೇ ಅಧಿಕೃತ ತಪಾಸಣೆ ವ್ಯವಸ್ಥೆ ಜಾರಿಗೆ ತರುವುದು ಅಗತ್ಯ.

    ಉದ್ಯೋಗ ಕೊಡಿಸುವ ನೆಪದಲ್ಲಿ ಕೆಲ ದುಷ್ಟ ಜಾಲಗಳು ಭಾರತೀಯ ಯುವಕರನ್ನು ಮೋಸಗೊಳಿಸಿ, ರಷ್ಯಾ ಸೇನೆಗೆ ಸೇರಿಸಿದ್ದು, ಅವರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗುತ್ತಿರುವ ಹೊತ್ತಲ್ಲೇ ಕೆಲ ದಿನಗಳ ಹಿಂದೆ ಓರ್ವ ಭಾರತೀಯ ಮೃತಪಟ್ಟಿರುವ ಅಹಿತಕರ ಘಟನೆ ನಡೆದಿತ್ತು. ರಷ್ಯಾದ ಸರ್ಕಾರಿ ಕಚೇರಿಯೊಂದರಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ, ನಂತರ ಯೂಕ್ರೇನ್ ವಿರುದ್ಧದ ಯುದ್ಧದಲ್ಲಿ ಭಾರತದ 20ಕ್ಕೂ ಹೆಚ್ಚು ಯುವಕರನ್ನು ನಿಯೋಜನೆ ಮಾಡಲಾಗಿದೆ.

    ಈ ಕುರಿತಂತೆ 7 ಭಾರತೀಯರು ವಿಡಿಯೋ ಮಾಡಿ, ರಕ್ಷಣೆಗಾಗಿ ಕೇಂದ್ರ ಸರ್ಕಾರವನ್ನು ಕೋರಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಪ್ರಕರಣ ಹಸಿಯಾಗಿರುವಾಗಲೇ ಥಾಯ್ಲೆಂಡ್​ನಲ್ಲಿಯೂ ಭಾರತೀಯರನ್ನು ವಂಚಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ದೊಡ್ಡ ಸಂಬಳದ ನೌಕರಿ ಕೊಡಿಸುವುದಾಗಿ 25 ಭಾರತೀಯ ಯುವಕರನ್ನು ವಂಚಿಸಿ, ಅವರನ್ನು ಲಾವೋಸ್​ಗೆ ಕರೆದೊಯ್ದು ಸೈಬರ್ ಅಪರಾಧ ಕೃತ್ಯಗಳಲ್ಲಿ ತೊಡಗಿಸಲಾಗಿದೆ. ಇದನ್ನು ವಿರೋಧಿಸಿ, ಯುವಕರು ಭಾರತಕ್ಕೆ ವಾಪಸ್ ಆಗಲು ಮುಂದಾದಾಗ ದುರುಳರು ಚಿತ್ರಹಿಂಸೆ ನೀಡಿದ್ದಾರೆ. ಭಾರತೀಯ ದೂತಾವಾಸದ ನೆರವಿನೊಡನೆ ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿರುವ ಥಾಣೆಯ ಯುವಕ ನೀಡಿದ ದೂರಿನ ಮೇರೆಗೆ, ಇಬ್ಬರು ವಂಚಕರನ್ನು ಪೊಲೀಸರು ಬಂಧಿಸಿರುವುದು ಸಮಾಧಾನಕರ ಸಂಗತಿ.

    ಇಂಥ ಜಾಲಗಳು ಈ ಹಿಂದೆ ಸೌದಿ ರಾಷ್ಟ್ರಗಳಲ್ಲಿ ಅಥವಾ ಅಭಿವೃದ್ಧಿ

    ಹೊಂದಿದ ದೇಶಗಳಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ, ಅದಕ್ಕೆ ಭಾರಿ ಪ್ರಮಾಣದ ಶುಲ್ಕವನ್ನು ಪಡೆದು, ಆ ಬಳಿಕ ಎಲ್ಲೋ ಸಣ್ಣಪುಟ್ಟ ಕೆಲಸಗಳನ್ನು ಕೊಡಿಸುತ್ತಿದ್ದವು. ಇಲ್ಲವೆ ಈ ಯುವಕರನ್ನು ಅಪಾಯಕಾರಿ ಪ್ರದೇಶಗಳಲ್ಲಿ ಬಿಡುತ್ತಿದ್ದರು. ದಿನದಿಂದ ದಿನಕ್ಕೆ ಇಂಥ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉದ್ಯೋಗಾಕಾಂಕ್ಷಿಗಳ ಹಿತ ಕಾಯಲು ಸರ್ಕಾರ ಮುಂದಾಗಲಿ, ಅರಿವು ಮೂಡಿಸುವ ಕೆಲಸ ಪ್ರಾಮಾಣಿಕವಾಗಿ ನಡೆಯಲಿ.

    ದೇವೇಗೌಡರ ದೂರಿನ ಮೇಲೆ ಸಂಸದ ಡಿ.ಕೆ.ಸುರೇಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts