More

    ರಾಜ್ಯದ 500 ದೇಗುಲಗಳಲ್ಲಿ ವಸ್ತ್ರಸಂಹಿತೆಗೆ ಉಪಕ್ರಮ

    ಬೆಂಗಳೂರು: ರಾಜ್ಯದ 500ಕ್ಕೂ ಅಧಿಕ ದೇವಸ್ಥಾನಗಳಲ್ಲಿ ಭಾರತೀಯ ಸಂಸ್ಕೃತಿಯ ಪ್ರಕಾರ ವಸ್ತ್ರಸಂಹಿತೆ ಜಾರಿಗೊಳಿಸುವ ನಿರ್ಣಯವನ್ನು ಕರ್ನಾಟಕ ದೇವಸ್ಥಾನ – ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಕೈಗೊಂಡಿದೆ.

    ಇದರನ್ವಯ ಮೊದಲ ಹಂತದಲ್ಲಿ ಬೆಂಗಳೂರಿನ 50 ದೇವಸ್ಥಾನಗಳಲ್ಲಿ ವಸಸಂಹಿತೆ ಜಾರಿಗೆ ಮುಂದಾಗಿದ್ದು, ಬುಧವಾರ ವಸಂತನಗರದ ಶ್ರೀ ಲಕ್ಷ್ಮೀ ವೆಂಕಟರಮಣ ದೇಗುಲದಲ್ಲಿ ಅಧಿಕೃತವಾಗಿ ಅನುಷ್ಠಾನಕ್ಕೆ ತರಲಾಗಿದೆ. ಈ ಪ್ರಕ್ರಿಯೆ ಖಾಸಗಿ ಹಾಗೂ ಸ್ವತಂತ್ರ ನಿರ್ವಹಣೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದೇಗುಲಗಳಲ್ಲಿ ನಿರಂತರವಾಗಿ ಮುಂದುವರಿಯಲಿದೆ ಎಂದು ಮಹಾಸಂಘದ ಸಂಯೋಜಕ ಮೋಹನ್ ಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಇದಲ್ಲದೇ ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ದೇಗುಲಗಳಲ್ಲೂ ವಸಸಂಹಿತೆ ಅನುಷ್ಠಾನ ಹಾಗೂ ಧರ್ಮ ಶಿಕ್ಷಣ ಲಕಗಳನ್ನು ಅಳವಡಿಸಲು ಕೋರಿ ಸಂಬಂಧಿಸಿದ ಸಚಿವರನ್ನು ಶೀಘ್ರವೇ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

    ಹಿಂದೆಯೂ ನಡೆದಿತ್ತು ಪ್ರಯತ್ನ:

    ಈ ಹಿಂದೆ ಧಾರ್ಮಿಕ ದತ್ತಿ ಇಲಾಖೆಯ ರಾಜ್ಯ ಧಾರ್ಮಿಕ ಪರಿಷತ್ ಸಹ ರಾಜ್ಯದ 211 ‘ಎ’ ಗ್ರೇಡ್ ದೇವಸ್ಥಾನಗಳಲ್ಲಿ ಭಕ್ತರಿಗೆ ವಸ್ತ್ರಸಂಹಿತೆಯನ್ನು ಅಳವಡಿಸುವ ಕುರಿತು ಚಿಂತನೆ ನಡೆಸಿತ್ತು. ಇದಕ್ಕೆ ಹೆಚ್ಚಿನ ಭಕ್ತ ವೃಂದದಿಂದ ಬೆಂಬಲ ವ್ಯಕ್ತವಾಗಿತ್ತು. ಇದಲ್ಲದೆ ಈಗಾಗಲೇ ಚಿಕ್ಕಮಗಳೂರಿನ ದೇವಿರಮ್ಮನ ದೇಗುಲದಲ್ಲಿ ಭಕ್ತಾದಿಗಳಿಗೆ ಧಾರ್ಮಿಕ ದತ್ತಿ ಇಲಾಖೆ ಹಾಗೂ ದೇವಸ್ಥಾನ ಆಡಳಿತ ಮಂಡಳಿ ವಸ್ತ್ರಸಂಹಿತೆಯನ್ನು ಜಾರಿ ಮಾಡಿದೆ. ಈ ದೇಗುಲದಲ್ಲಿ ಸ್ಕರ್ಟ್, ಮಿಡಿ, ಸ್ಲೀವ್‌ಲೆಸ್ ಡ್ರೆಸ್ ಹಾಕಿ ಬರುವಂತಿಲ್ಲ. ಹೀಗಾಗಿ ಈ ಪ್ರಯತ್ನ ನಾವೇ ಮೊದಲು ಆರಂಭಿಸಿದ್ದಲ್ಲ, ಸಂಸ್ಕೃತಿ ಹಾಗೂ ಧಾರ್ಮಿಕ ಭಾವನೆಯನ್ನು ಗೌರವಿಸುವ ಉದ್ದೇಶದಿಂದ ಈ ಪದ್ಧತಿಯನ್ನು ಅನುಸರಿಸಲು ಮುಂದಾಗಿದ್ದೇವೆ ಎಂದರು.

    ಭಕ್ತರಲ್ಲಿ ಜಾಗೃತಿಗೆ ಆದ್ಯತೆ:

    ಪ್ರತೀ ದೇವಸ್ಥಾನಗಳ ಮುಂಭಾಗದಲ್ಲಿ ವಸ್ತ್ರ ಸಂಹಿತೆಯ ಫಲಕಗಳನ್ನು ಹಾಕಿ ಭಕ್ತರು ಸೇರಿದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು. ದೇಗುಲಗಳ ಪಾವಿತ್ರ್ಯತೆಯ ರಕ್ಷಣೆ ಹಾಗೂ ಭಾರತೀಯ ಸಂಸ್ಕೃತಿಯನ್ನು ಪಾಲಿಸುವ ಉದ್ದೇಶದಿಂದ ಭಕ್ತರು ತುಂಡು ಬಟ್ಟೆ ಧರಿಸುವ ಬದಲು, ಧಾರ್ಮಿಕ ಭಾವನೆಗೆ ಒಪ್ಪುವ ಉಡುಪುಗಳನ್ನು ಧರಿಸುವಂತೆ ಜನಜಾಗೃತಿ ಮೂಡಿಸಲಾಗುವುದು. ಈ ಕಾರ್ಯವನ್ನು ರಾಜ್ಯದೆಲ್ಲೆಡೆ ಅಭಿಯಾನದ ರೀತಿ ಕೈಗೊಳ್ಳಲಾಗುವುದು ಎಂದು ಮೋಹನ್ ಗೌಡ ವಿವರಿಸಿದರು.

    ಧರ್ಮ ಪ್ರಚಾರ ಕೇಂದ್ರವಾಗಿ ದೇಗುಲ:

    ರಾಜ್ಯದಲ್ಲಿ ದೇಗುಲಗಳ ಸಂರಕ್ಷಣೆ, ಸಂಘಟನೆ ದೃಷ್ಟಿಯಿಂದ ಎಲ್ಲ ಜಿಲ್ಲೆಗಳಲ್ಲಿ ಅಧಿವೇಶನ ಮಾಡಿ, ದೇವಸ್ಥಾನಗಳ ಸಂಘಟನೆ ಮಾಡಲಾಗುವುದು. ಹಿಂದು ಸಮಾಜಕ್ಕೆ ಧರ್ಮದ ಬಗ್ಗೆ ಶಿಕ್ಷಣ ನೀಡಲು ಶೀಘ್ರವೇ ರಾಜ್ಯದ 50 ದೇವಸ್ಥಾನಗಲ್ಲಿ ಮಕ್ಕಳು, ಸ್ತ್ರೀ-ಪುರುಷರಿಗೆ ಶಿಕ್ಷಣ ನೀಡುವ ವರ್ಗಗಳನ್ನು ಪ್ರಾರಂಭಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿ ಒಂದು ಪಠ್ಯಕ್ರಮ ಕೂಡ ರಚಿಸಲಾಗಿದೆ. ಈಗಾಗಲೇ 300 ಸ್ಥಳಗಳಲ್ಲಿ ಈ ವರ್ಗ ಪ್ರಾರಂಭಿಸಿದದು, ಮುಂದಿನ ದಿನಗಳಲ್ಲಿ ಪ್ರತಿ ದೇವಸ್ಥಾನಗಳಲ್ಲೂ ಹಿಂದು ಧರ್ಮ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಮಹಾಸಂಘ ತೀರ್ಮಾನಿಸಿದೆ.

    ಭಾರತೀಯ ಸಾತ್ವಿಕ ಉಡುಪು:

    ಮಹಿಳೆಯರು ಚೂಡಿದಾರ, ಲಂಗ-ದಾವಣಿ, ಸಲ್ವಾರ್-ಕುರ್ತಾ ಜೊತೆಗೆ ಸೀರೆ ಇತ್ಯಾದಿ ಪಾರಂಪರಿಕ ಸಾತ್ವಿಕ ವೇಷಭೂಷಣ ಧರಿಸಿರಬೇಕು. ಪುರುಷರು ಕುರ್ತಾ, ಧೋತಿ, ಸಾಮಾನ್ಯ ಶರ್ಟ್-ಪ್ಯಾಂಟ್, ಲುಂಗಿ ಅಥವಾ ಪೈಜಾಮ ಧರಿಸಿರಬೇಕು.

    ಆಧುನಿಕ ಅಸಾತ್ವಿಕ ಉಡುಪು:

    ಪಾಶ್ಚಿಮಾತ್ಯ ಉಡುಪುಗಳಲ್ಲಿ ಸ್ಕರ್ಟ್, ಮಿಡಿ, ಶಾರ್ಟ್ ಪ್ಯಾಂಟ್, ಸ್ಯಾಂಡೋ ವೆಸ್ಟ್, ಜೀನ್ಸ್, ಸ್ಲೀವ್‌ಲೆಸ್ ಡ್ರೆಸ್, ನೈಟ್ ಡ್ರೆಸ್, ಸಾಕ್ಸ್ ಇತ್ಯಾದಿ ಉಡುಪು ಧರಿಸದಂತೆ ಎಚ್ಚರವಹಿಸುವುದು.

    ದೇಶದ ಅನೇಕ ದೇವಾಲಯ, ಗುರುದ್ವಾರ, ಚರ್ಚ್, ಮಸೀದಿ ಹಾಗೂ ಇತರ ಪ್ರಾರ್ಥನಾ ಸ್ಥಳಗಳು, ಖಾಸಗಿ ಕಂಪನಿ, ಶಾಲಾ-ಕಾಲೇಜು, ನ್ಯಾಯಾಲಯ, ಪೋಲೀಸ್ ಇತ್ಯಾದಿ ಕಡೆಗಳಲ್ಲಿ ವಸ್ತ್ರ ಸಂಹಿತೆ ಜಾರಿಯಾಗಿದೆ. ಉಜ್ಜೈನಿಯ ಮಹಾಕಾಲೇಶ್ವರ ದೇವಸ್ಥಾನ, ವಾರಾಣಸಿಯ ಕಾಶಿ ವಿಶ್ವೇಶ್ವರ ದೇವಾಲಯ, ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನ, ಕೇರಳದ ಶ್ರೀ ಪದ್ಮನಾಭಸ್ವಾಮಿ ದೇಗುಲ ಹೀಗೆ ಹಲವು ದೇವಸ್ಥಾನಗಳಲ್ಲಿ ಭಕ್ತರಿಗಾಗಿ ಸಾತ್ತ್ವಿಕ ವಸ್ತ್ರಸಂಹಿತೆ ಜಾರಿಯಿದೆ. ಇದನ್ನು ಇತರ ದೇಗುಲಗಳಿಗೂ ವಿಸ್ತರಿಸುವ ಪ್ರಯತ್ನ ನಡೆದಿದೆ.
    – ಮೋಹನ್ ಗೌಡ, ಮಹಾಸಂಘದ ಸಂಯೋಜಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts