More

  ಅವಕಾಶಗಳ ಆಗರ ಆಹಾರ ಉದ್ಯಮ

  ಕೆಲ ದಶಕಗಳ ಹಿಂದೆ ಮನೆಯಿಂದ ಹೊರಗಡೆ ಹೋಗಿ ಆಹಾರ ತಿನ್ನುವುದು ಎಂದರೆ ದೊಡ್ಡ ತಪು್ಪ ಮಾಡಿದಂತೆ ಎನ್ನುವ ಮನೋಭಾವ ಇತ್ತು (ಇಂದು ಕೂಡ ಕೆಲವು ಹಳ್ಳಿಗಾಡುಗಳಲ್ಲಿ ಇದೇ ಭಾವನೆ ಇದೆ). ಆದರೆ ಇಂದು ಸಂದಿಗೊಂದಿಗೊಂದರಂತೆ ತಲೆ ಎತ್ತುತ್ತಿರುವ ಹೋಟೆಲ್​ಗಳನ್ನು ನೋಡಿದರೆ ಮನೆಯಲ್ಲಿ ಊಟ ಮಾಡುವವವರೆ ಇಲ್ಲವೇನೋ ಎನ್ನುವ ಸ್ಥಿತಿ ನಿರ್ವಣವಾಗಿದೆ. ಅದಕ್ಕಾಗಿಯೇ ಆಹಾರ ಕ್ಷೇತ್ರ ಕೂಡ ಬೃಹದಾಕಾರವಾಗಿ ಬೆಳೆದು ಉದ್ಯಮವಾಗಿದ್ದು, ಉದ್ಯೋಗಕ್ಕೂ ಅವಕಾಶಗಳ ಬಾಗಿಲು ತೆರೆದಿದೆ.

  ಕೆಲ ವರ್ಷಗಳ ಹಿಂದೆ ಬೆರಳೆಣಿಕೆಯಂತಿದ್ದ ಹೋಟೆಲ್​ಗಳು ಇಂದು ಬೃಹದಾಕಾರವಾಗಿ ಬೆಳೆದು ನಿಂತಿವೆ. ಇದಕ್ಕೆ ಕಾರಣ, ಸುಲಭದಲ್ಲಿ ಸಿಗುವ ಆಹಾರದ ಮೇಲೆ ಜನರಿಗೆ ಹೆಚ್ಚಾಗುತ್ತಿರುವ ಪ್ರೀತಿ. ಈ ಹಿನ್ನೆಲೆಯಲ್ಲಿ ಆಹಾರ ಕೂಡ ಈಗ ಉದ್ಯಮದ ರೂಪ ತಾಳಿದೆ.

  ಒಂದು ಉದ್ಯಮವಾಗಿ ಬದಲಾಗುತ್ತಿರುವ ಈ ಕಾಲಮಾನಕ್ಕೆ ತಕ್ಕಂತೆ ಇದರಲ್ಲಿಯೇ ಭವಿಷ್ಯ ರೂಪಿಸಿಕೊಳ್ಳುವ ಉದ್ದೇಶ ಇರುವ ಯುವಜನತೆಗೆ ಬೇಕಾದ ಕೋರ್ಸ್ ಗಳೂ ಈಗ ಲಭ್ಯವಾಗುತ್ತಿವೆೆ. ಅನೇಕ ಕಾಲೇಜುಗಳಲ್ಲಿ ಫುಡ್ ಇಂಜಿನಿಯರಿಂಗ್, ಫುಡ್ ಸೈನ್ಸ್, ಫುಡ್ ಪ್ರೊಸೆಸಿಂಗ್ ಇತ್ಯಾದಿ ವಿಷಯಗಳನ್ನು ಹೇಳಿಕೊಡಲಾಗುತ್ತದೆ. ಆಹಾರೋತ್ಪನ್ನಗಳು ಹಾಳಾಗದಂತೆ ಅವುಗಳನ್ನು ಸಂಸ್ಕರಿಸಿ ಇಡುವುದು, ಜಾಗರೂಕತೆಯಿಂದ ಪ್ಯಾಕಿಂಗ್ ಮಾಡುವುದು, ಮಾರುಕಟ್ಟೆ ವ್ಯವಸ್ಥೆ, ಸುರಕ್ಷಾ ಕ್ರಮ, ಆಹಾರಗಳನ್ನು ಶುಚಿಯಾಗಿ ಇಟ್ಟುಕೊಳ್ಳುವುದು ಇತ್ಯಾದಿಗಳ ಬಗ್ಗೆ ವೈಜ್ಞಾನಿಕ ರೀತಿಯಲ್ಲಿ ಕಲಿಯಬೇಕೆಂದರೆ ಕೋರ್ಸ್​ಗಳ ಅಗತ್ಯವಿದೆ ಎಂದುಕೊಂಡೇ ಕಾಲೇಜುಗಳು ಪದವಿ, ಸ್ನಾತಕೋತ್ತರ ಪದವಿಯ ಜತೆಗೆ ಸರ್ಟಿಫಿಕೇಟ್ ಕೋರ್ಸ್​ಗಳು, ಆನ್​ಲೈನ್ ಕೋರ್ಸ್​ಗಳನ್ನೂ ತೆರೆದಿವೆ.

  ರೆಡಿ ಟು ಈಟ್​ಗೆ ಡಿಮಾಂಡ್: ಆಹಾರ ಉದ್ಯಮದ ಮುಂದುವರೆದಂತೆ ಹುಟ್ಟುಕೊಂಡಿರುವುದು ‘ರೆಡಿ ಟು ಈಟ್’. ಯಾಂತ್ರಿಕವಾಗಿರುವ ಜೀವನಕ್ಕೆ ಒಗ್ಗಿಕೊಳ್ಳುವ ಆಹಾರವಿದು. ನಗರವಾಸಿಗಳ ಪೈಕಿ ಹೆಚ್ಚಿನವರಿಗೆ ಆಹಾರ ತಯಾರಿಸುವಷ್ಟು ಪುರುಸೊತ್ತೇ ಇಲ್ಲ. ಇದ್ದರೂ ಅದೆಲ್ಲಾ ಯಾರಿಗೆ ಬೇಕು ಎನ್ನುವ ಮನೋಭಾವ. ಆದ್ದರಿಂದಲೇ ‘ರೆಡಿ ಟು ಈಟ್’ಗೆ ಈಗ ಭಾರಿ ಡಿಮಾಂಡ್. ಹೆಚ್ಚಿನ ಗೃಹಿಣಿಯರು ಮಳಿಗೆಗಳಿಗೆ ಹೋದಾಗ ಮೊದಲು ಇಣುಕು ಹಾಕುವುದೇ ರೆಡಿ ಟು ಈಟ್ ಆಹಾರಕ್ಕೆ.

  ನೂಡಲ್ಸ್, ಪಾಸ್ತಾ, ಕೇಕ್, ಪಿಜ್ಜಾ, ಬರ್ಗರ್ ಇವಿಷ್ಟಕ್ಕೇ ರೆಡಿ ಟು ಈಟ್ ಸೀಮಿತವಾಗಿರದೇ ಬಗೆಬಗೆ ದೋಸೆ, ಇಡ್ಲಿ, ಪರೋಟಾ, ಉಪ್ಪಿಟ್ಟು, ಚಟ್ನಿ, ಅವಲಕ್ಕಿ ಎಲ್ಲ ಆಹಾರಗಳೂ ‘ರೆಡಿ ಟು ಈಟ್’ ಆಗಿಬಿಟ್ಟಿವೆ. ಬಿಸಿನೀರೋ, ತಣ್ಣೀರೋ ಹಾಕಿ ಒಲೆಯ ಮೇಲಿಟ್ಟು ತಿರುಗಿಸಿದರೆ ಸಾಕು, ಎಲ್ಲವೂ ‘ಫ್ರೆಷ್’ ಅಂದುಕೊಂಡು ತಿನ್ನಲು ಸಿದ್ಧವಾಗಿಬಿಡುತ್ತವೆ.

  ಇದು ಸಾಮಾನ್ಯ ಮನೆಗಳ ಮಾತಾದರೆ, ಈ ರೀತಿಯ ಸಂಸ್ಕರಿತ ಆಹಾರಗಳು ಯುದ್ಧ, ನೆರೆ ಹಾವಳಿ, ಆಂತರಿಕ ಗಲಭೆಗಳ ಸಂದರ್ಭಗಳಲ್ಲಿ ಸಂತ್ರಸ್ತರಿಗೆ ನೀಡಲು ಬೇಕಾಗುತ್ತವೆ. ಇದರಿಂದಾಗಿ ಕೆಲವು ಸಂಶೋಧನಾಲಯಗಳು ಬಹಳ ದಿನಗಳವರೆಗೆ ಹಾಳಾಗದೇ ಇರುವಂಥ ಚಪಾತಿ, ರೊಟ್ಟಿ, ಬ್ರೆಡ್, ಜ್ಯೂಸ್ ಇತ್ಯಾದಿಗಳನ್ನು ತಯಾರಿಸಿ ಕೊಡುತ್ತವೆ. ಇಂಥ ಆಹಾರಗಳನ್ನು ಗ್ರಾಹಕರಿಗೆ ತಲುಪಿಸುವ ಅನೇಕ ಆಹಾರ ಸಂಸ್ಕರಣಾ ಘಟಕಗಳು ವಿಶ್ವದಾದ್ಯಂತ ಇವೆ.

  ಇದರ ಜತೆಗೆ, ಸ್ಮಾರ್ಟ್​ಫೋನ್ ಯುಗವಿದು. ಒಂದೇ ಕ್ಲಿಕ್​ನಲ್ಲಿ ಆಹಾರಗಳನ್ನು ಮನೆಯ ಬಾಗಿಲಿಗೆ ಒದಗಿಸಲು ಹಲವಾರು ಹೋಟೆಲ್​ಗಳು ಸಿದ್ಧಗೊಂಡು ನಿಂತಿವೆ. ಆಹಾರ ಉದ್ಯಮ ಈ ಪರಿಯಲ್ಲಿ ಬೆಳೆಯುತ್ತಿರಬೇಕಾದರೆ ಅದಕ್ಕೆ ತಕ್ಕನಾದ ಕೆಲಸಗಾರರೂ ಬೇಕಲ್ಲವೆ? ಕೆಲವು ಕೆಲಸಗಳನ್ನು ಹೆಚ್ಚಿನ ವಿದ್ಯಾಭ್ಯಾಸ ಇಲ್ಲದೆಯೂ ಮಾಡಬಹುದು ಎನ್ನುವುದು ನಿಜವಾದರೂ ಇದನ್ನು ಉದ್ಯಮವಾಗಿ ಸ್ವೀಕರಿಸುವಾಗ ಇದಕ್ಕೆ ಸಂಬಂಧಿಸಿದ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡುವ ಅವಶ್ಯಕತೆ ಇದೆ.

  ಇದೇ ಕಾರಣಕ್ಕೆ ಆಹಾರ ಎನ್ನುವುದು ಯುವಪೀಳಿಗೆಗೆ ಉದ್ಯೋಗದ ಬಾಗಿಲನ್ನು ತೆರೆದಿದೆ. ಆಹಾರ ಸಂಸ್ಕರಣೆಯ ಉದ್ಯಮಕ್ಕೆ ಅಗತ್ಯವಾಗಿ ಬೇಕಾಗುವಂಥ ಪ್ಯಾಕಿಂಗ್, ಲೇಬಲ್ ಪ್ರಿಂಟಿಂಗ್, ಮಾರ್ಕೆಟಿಂಗ್ ಇವುಗಳಿಗೂ ಅರ್ಹ ಯುವಕರ ಶೋಧನೆಯಲ್ಲಿ ಆಹಾರೋದ್ಯಮಗಳು ತೊಡಗಿರುತ್ತವೆ. ಮಾಂಸಾಹಾರ ಕೂಡ ಈಗ ಸಂಸ್ಕರಿತ ರೀತಿಯಲ್ಲಿ ಬರುತ್ತಿರುವ ಕಾರಣ, ಇವುಗಳಿಗೂ ಅಧಿಕ ಪ್ರಮಾಣದಲ್ಲಿ ಬೇಡಿಕೆ ಇದ್ದು, ಇವುಗಳ ಸಂಸ್ಕರಣೆಗೂ ವಿಪುಲ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ಇವುಗಳನ್ನು ಹೇಳಿಕೊಡುವುದಕ್ಕಾಗಿಯೇ ಕೋರ್ಸ್​ಗಳು ಹುಟ್ಟುಕೊಂಡಿವೆ.

  ಎಲ್ಲರಿಗೂ ತಿಳಿದಿರುವಂತೆ ಸಂಸ್ಕರಿಸಿದ ಆಹಾರ ಪದಾರ್ಥಗಳು ಹೆಚ್ಚಿಗೆ ದಿನ ಹಾಳಾಗದಂತೆ ಇಡಬೇಕು ಎಂದರೆ ಅದಕ್ಕೆ ರಾಸಾಯನಿಕವನ್ನು ಬೆರೆಸಿ ಇಡಲೇಬೇಕಾದ ಅನಿವಾರ್ಯತೆ ಇದೆ. ರಾಸಾಯನಿಕ ಮನುಷ್ಯನ ದೇಹಕ್ಕೆ ವಿಷಕಾರಕ ಎನ್ನುವ ಅಂಶ ಕೂಡ ಅಷ್ಟೇ ಸತ್ಯ. ಹಾಗೆಂದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರದೇ ಇರುವ ರಾಸಾಯನಿಕಗಳನ್ನು ಯಾವ ಪ್ರಮಾಣದಲ್ಲಿ ಬಳಕೆ ಮಾಡಬೇಕು, ಆಹಾರದ ಗುಣಮಟ್ಟವನ್ನು ಯಾರ ರೀತಿ ಕಾಪಾಡಬೇಕು ಇತ್ಯಾದಿಗಳ ಬಗ್ಗೆ ಆಹಾರ ವಿಜ್ಞಾನಿಯಾದವರಿಗೆ ಅರಿವಿನ ಅಗತ್ಯವಿದೆ.

  ಯಾರ್ಯಾರು ಅರ್ಹರು?: ಪಿಯುಸಿಯಾದವರಿಂದ ಹಿಡಿದು ಡಿಗ್ರಿ, ಸ್ನಾತಕೋತ್ತರ ಪದವಿಯಾದವರಿಗೆ ಅವರ ಶಿಕ್ಷಣದ ಅರ್ಹತೆಯಂತೆ ವಿವಿಧ ಕೋರ್ಸ್​ಗಳಿವೆ. ಪಿಯುಸಿಯ ನಂತರ ಬಿ.ಟೆಕ್ ಮಾಡಬಹುದು. ಇದು ಎಂಟು ಸೆಮಿಸ್ಟರ್ ಒಳಗೊಂಡಿರುವ ನಾಲ್ಕು ವರ್ಷ ಅವಧಿಯ ಕೋರ್ಸ್. ಫುಡ್ ಪೊ›ಸೆಸಿಂಗ್ ಆಂಡ್ ಟೆಕ್ನಾಲಜಿ, ಫುಡ್ ಇಂಜಿನಿಯರಿಂಗ್, ಫುಡ್ ಆಂಡ್ ಇಂಡಸ್ಟ್ರಿಯಲ್ ಮೈಕ್ರೊ ಬಯಾಲಜಿ, ಫುಡ್ ಸೈನ್ಸ್ ಆಂಡ್ ನ್ಯೂಟ್ರೀಷನ್, ಫುಡ್ ಟ್ರೇಡ್ ಆಂಡ್ ಬಿಜಿನೆಸ್ ಮ್ಯಾನೇಜ್​ವೆುಂಟ್ ಕುರಿತ ವಿಷಯಗಳನ್ನು ಇದು ಒಳಗೊಂಡಿದೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಆರು ತಿಂಗಳ ಸರ್ಟಿಫಿಕೇಟ್ ಕೋರ್ಸ್ ಇದೆ. ಪಿಯುಸಿಯಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಜೀವಶಾಸ್ತ್ರ ಓದಿದವರು ಪ್ರವೇಶ ಪರೀಕ್ಷೆ ಬರೆದು, ಫುಡ್ ಪ್ರೊಸೆಸಿಂಗ್ ಕೋರ್ಸ್ ಸೇರಬಹುದು. ಸರ್ಟಿಫಿಕೇಟ್ ಕೋರ್ಸಿನ ಜತೆಗೆ ಮೂರು ವರ್ಷಗಳ ಡಿಪ್ಲೊಮಾ ಕೋರ್ಸ್​ಗಳೂ ಉಂಟು. ಕೆಲವು ವಿಶ್ವವಿದ್ಯಾಲಯಗಳಲ್ಲಿ ಪಿಎಚ್​ಡಿ ಪದವಿಯನ್ನೂ ಪಡೆಯಬಹುದು.

  ಎಲ್ಲೆಲ್ಲಿ ಕೆಲಸ?

  ಹಲವು ವಿದೇಶಿ ಕಂಪನಿಗಳೊಂದಿಗೆ ಕೈ ಜೋಡಿಸಿ ನಡೆಸುತ್ತಿರುವ ಭಾರತದ ಅನೇಕ ಆಹಾರ ಸಂಸ್ಕರಣೆ ಉದ್ಯಮಗಳು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕನುಗುಣವಾಗಿ ಉದ್ಯೋಗ ನೀಡುತ್ತಿವೆ. ಅವುಗಳಲ್ಲಿ ಪ್ರಮುಖವಾದವು ಅಮುಲ್, ಗೋದ್ರೆಜ್ ಇಂಡಸ್ಟ್ರೀಸ್ ಲಿಮಿಟೆಡ್, ನೆಸ್ಲೆ ಇಂಡಿಯಾ, ಡಾಬರ್ ಇಂಡಿಯ ಲಿಮಿಟೆಡ್, ಬ್ರಿಟಾನಿಯಾ, ಐ.ಟಿ.ಸಿ ಪಾರ್ಲೆ, ಕ್ಯಾಡ್​ಬರಿ, ಎಂ.ಟಿ.ಆರ್ ಫುಡ್ಸ್, ಮಿಲ್ಕ್​ಫುಡ್, ಪೆಪ್ಸಿಕೊ ಇಂಡಿಯಾ ಹೋಲ್ಡಿಂಗ್ಸ್ ಇತ್ಯಾದಿ

  ಕೋರ್ಸ್​ಗಳು ಇಲ್ಲಿ ಇವೆ…

  ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಆಹಾರ ತಂತ್ರಜ್ಞಾನ ಅಧ್ಯಯನ ವಿಭಾಗವು 2005ರಲ್ಲಿ ಸಾಪಿಸಲಾಗಿದೆ. ಆಹಾರ ತಂತ್ರಜ್ಞಾನ ವಿಷಯದಲ್ಲಿ ಮಾಸ್ಟರ್ಸ್, ಎಂ.ಫಿಲ್ ಮತ್ತು ಪಿಎಚ್​ಡಿ ಡಿಗ್ರಿ್ರ ಇಲ್ಲಿ ಪಡೆಯಬಹುದು. ಈ ಕೋರ್ಸ್ ನೀಡುತ್ತಿರುವ ಕರ್ನಾಟಕದ ಮೊದಲ ವಿಶ್ವವಿದ್ಯಾಲಯವಿದು. ಆಹಾರ ಮತ್ತು ಔಷಧ ನ್ಯಾನೊತಂತ್ರಜ್ಞಾನ ಮತ್ತು ಆಹಾರ ಸೂತ್ರ ಮುಂತಾದ ಆಹಾರ ತಂತ್ರಜ್ಞಾನದ ಪ್ರಮುಖ ಕ್ಷೇತ್ರಗಳಲ್ಲಿ ಇಲ್ಲಿ ತರಬೇತಿ ನೀಡಲಾಗುತ್ತಿದೆ. ಇದರ ಜತೆಗೆ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಸ್ಥೆ, ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯ, ಬೆಂಗಳೂರಿನ ನ್ಯಾಷನಲ್ ಡೈರಿ ರೀಸರ್ಚ್ ಸಂಸ್ಥೆ, ಮೈಸೂರಿನ ಸಿಎಫ್​ಟಿಆರ್​ಐ, ಹಿಮಾಚಲದ ಕೃಷಿ ವಿವಿ, ಲಕ್ನೋದ ಫ್ರುಟ್ ಟೆಕ್ನಾಲಜಿ ಸಂಸ್ಥೆ ಸೇರಿದಂತೆ ಹಲವಾರು ಗಡೆಗಳಲ್ಲಿ ಡಿಪ್ಲೊಮಾ, ಪದವಿ, ಇಂಜಿನಿಯರಿಂಗ್ ಶಿಕ್ಷಣವನ್ನು ನೀಡಲಾಗುತ್ತಿದೆ.

  ಯಾವ್ಯಾವ ಕೆಲಸಗಳಿವೆ?

  ಆಹಾರ ತಜ್ಞ, ಸಂಸ್ಕರಣಾ ತಜ್ಞ, ಮೇಲ್ವಿಚಾರಕ, ತಂತ್ರಜ್ಞ, ಮಾರ್ಕೆಟಿಂಗ್ ಮ್ಯಾನೇಜರ್, ಸಂಶೋಧಕ, ಆಹಾರ ವಿಜ್ಞಾನಿ, ಫುಡ್ ಇಂಜಿನಿಯರ್, ಬಯೋಕೆಮಿಸ್ಟ್, ಆಗ್ಯಾನಿಕ್ ಕೆಮಿಸ್ಟ್, ಅನಾಲಿಟಿಕಲ್ ಕೆಮಿಸ್ಟ್, ಹೋಮ್ ಎಕನಾಮಿಸ್ಟ್, ಮ್ಯಾನೇಜರ್ ಮತ್ತು ಅಕೌಂಟೆಂಟ್.

  ಸ್ಕಾಲರ್​ಷಿಪ್ ಯೋಜನೆ

  ಆಹಾರ ಸಂಸ್ಕರಣೆ ವಿಷಯಗಳಲ್ಲಿ ಅಧ್ಯಯನ ಮಾಡುವವರಿಗೆ ಅಗ್ರಿ ಬಯೋಟೆಕ್ ಫೌಂಡೇಷನ್, ಜೆಎನ್​ಟಾಟಾ ದತ್ತಿನಿಧಿ, ಎಸ್.ಕೆ. ಪಾಟೀಲ್ ಫೌಂಡೇಷನ್, ರಾಮಲಿಂಗಸ್ವಾಮಿ ದತ್ತಿ ನಿಧಿಗಳು ಸ್ಕಾಲರ್​ಷಿಪ್ ನೀಡುತ್ತವೆ. ಇದರ ಜತೆಗೆ, ಸರ್ಕಾರಗಳ ಕೆಲವು ವಿದ್ಯಾರ್ಥಿವೇತನ ಯೋಜನೆಗಳು ಹಾಗೂ ಬ್ಯಾಂಕ್​ಗಳು, ವಿದ್ಯಾರ್ಥಿಗಳಿಗೆ ಕಡಿಮೆ ಬಡ್ಡಿದರದ ಶಿಕ್ಷಣ ಸಾಲ ನೀಡುತ್ತವೆ.

  | ಸುಚೇತನಾ  

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts