ಹನುಮಸಾಗರ: ಕ್ಷಯ ಸಾಂಕ್ರಾಮಿಕ ರೋಗವಾಗಿದ್ದು, ಇದರ ಬಗ್ಗೆ ಭಯಪಡದೆ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ಸಮುದಾಯ ಆರೋಗ್ಯ ಅಧಿಕಾರಿ ಮಂಜುಳಾ ಇಲಾಳ ಸಲಹೆ ನೀಡಿದರು.
ಸಮೀಪದ ಹನುಮನಾಳ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ತುಗ್ಗಲದೋಣಿ ಗ್ರಾಮದಲ್ಲಿ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ ಕೇಂದ್ರದಿಂದ ಮಂಗಳವಾರ ಹಮ್ಮಿಕೊಂಡಿದ್ದ ಸಕ್ರಿಯ ಕ್ಷಯರೋಗ ಪತ್ತೆ ಜಾಗೃತಿ ಆಂದೋಲನದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಕ್ಷಯದ ಬಗ್ಗೆ ಮಾಹಿತಿ ಪಡೆದು, ಮನೆ ಸುತ್ತಲಿನಲ್ಲಿ ವಾಸವಿರುವ ಯಾರಿಗಾದರೂ ಎರಡು ವಾರಕ್ಕಿಂತ ಹೆಚ್ಚಿನ ಸಮಯ ಕೆಮ್ಮು ಇದ್ದಲ್ಲಿ ಅಂಥವರಿಗೆ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಬೇಕು. ಆರೋಗ್ಯ ಸಿಬ್ಬಂದಿಯೊಂದಿಗೆ ಮಾಹಿತಿ ಹಂಚಿಕೊಂಡರೆ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎಂದರು.
ಕ್ಷಯ ಮೈಕ್ರೋ ಬ್ಯಾಕ್ಟೀರಿಯಂ ಟ್ಯೂಬರ್ ಕ್ಯುಲೋಸಿಸ್ ಎಂಬ ಸೂಕ್ಷ್ಮ ರೋಗಾಣುವಿನಿಂದ ಬರುತ್ತದೆ. ಕ್ಷಯ ರೋಗಿ ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ತುಂತುರುಗಳಿಂದ ಈ ರೋಗಾಣುಗಳು ಗಾಳಿ ಮೂಲಕ ಆರೋಗ್ಯವಂತ ವ್ಯಕ್ತಿಯ ಶ್ವಾಸಕೋಶ ಸೇರಿ ಅವನಿಗೆ ಸೋಂಕು ಉಂಟಾಗಬಹುದು. ಕ್ಷಯ ರೋಗಕ್ಕೆ ಔಷಧಿಗಳಿದ್ದು, ವೈದ್ಯರ ಸಲಹೆ ಮೇರೆಗೆ ಅವುಗಳಿಗೆ ತಕ್ಕಂತೆ ಪೋಷಣೆ ಮುಖ್ಯ. ಲಕ್ಷಣಗಳು ಕಂಡುಬಂದಾಗ ಪ್ರಾಥಮಿಕ ಆರೋಗ್ಯ ಅಧಿಕಾರಿಗಳ ಸಲಹೆ ಪಡೆದುಕೊಳ್ಳಬೇಕು ಎಂದರು.
ಆರೋಗ್ಯ ನಿರೀಕ್ಷಣಾಧಿಕಾರಿ ಡಿ.ಎಸ್.ರಾಠೋಡ, ಶಿಕ್ಷಕರಾದ ಪ್ರಶಾಂತ ಕಟ್ಟಿ, ನಾಗಪ್ಪ ಗಟ್ಟಿಗನೂರ, ವಿಜಯ ಕುಮಾರ ಚಿತ್ರಗಾರ, ಚಂದ್ರಪ್ಪ ಮುಶಿಗೇರಿ, ಪ್ರವೀಣ ಜಡ್ರಾಮಕುಂಟಿ, ಫಿರೋಜ್ ಮುದಗಲ್ಲ, ಉಮೇಶ ಯತ್ತಿನಮನಿ, ಶರಣಯ್ಯ ಹಿರೇಮಠ, ಸಂಗಣ್ಣ ವೈ.ಕೆ., ಗೋಪಾಲ್ ನಾಯಕ, ಚನ್ನಮ್ಮ, ಬಸವರಾಜ ಗುಣ್ಣನ್ನವರ, ಶಿವಕುಮಾರ ಹೂಗಾರ, ಮಲ್ಲಪ್ಪ ಪಿಡ್ರಾವತಾರ, ಮಹೇಶ ಅಂಗಡಿ, ಕಾರ್ಯಕರ್ತೆಯರಾದ ಸುಜಾತಾ ರಾಟಿ, ಯಲ್ಲಕ್ಕ ಪೊಲೀಸ್ ಪಾಟೀಲ್, ಮಾಂತಮ್ಮ ಬೆಣ್ಣಿ, ರೇಣುಕಾ ಬಸಣ್ಣಿ ಇದ್ದರು.