More

    ಸೋಂಕಿತರೊಂದಿಗೆ ಇದ್ದವರ ಪತ್ತೆ ಮಾಡಿ

    ಬೆಳಗಾವಿ: ಸೋಂಕಿತರ ಜತೆ ಪ್ರಾಥಮಿಕ ಸಂಪರ್ಕ ಹೊಂದಿ ಸದ್ಯಕ್ಕೆ ಕ್ವಾರಂಟೈನ್‌ನಲ್ಲಿರುವ ಯಾವುದೇ ವ್ಯಕ್ತಿ ಇನ್ನೊಬ್ಬರ ಜತೆ ಬೆರೆಯದಂತೆ ತೀವ್ರ ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸೂಚನೆ ನೀಡಿದ್ದಾರೆ.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲೂಕುಮಟ್ಟದ ಅಧಿಕಾರಗಳ ಜತೆ ಶುಕ್ರವಾರ ವಿಡಿಯೋ ಸಂವಾದ ನಡೆಸಿದ ಅವರು, ಜಿಲ್ಲೆಯಲ್ಲಿ ಸೋಂಕಿತ ವ್ಯಕ್ತಿಯೊಬ್ಬರ ಜತೆ ಪ್ರಾಥಮಿಕ ಸಂಪರ್ಕ ಹೊಂದಿರುವ ಒಂದೇ ಕುಟುಂಬದ ಮೂವರು ಸದಸ್ಯರಲ್ಲೂ ಸೋಂಕು ಕಂಡುಬಂದಿದೆ. ಹಾಗಾಗಿ ಸೋಂಕಿತರ ಜತೆ ಸಂಪರ್ಕದಲ್ಲಿರುವವರನ್ನು ಪತ್ತೆ ಮಾಡಿ ತಪಾಸಣೆಗೆ ಒಳಪಡಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಬಾರದು ಎಂದು ಸೂಚಿಸಿದರು.

    ಆರೋಗ್ಯ ಇಲಾಖೆಯ ಅಧಿಕಾರಿಗಳು ಈಗಾಗಲೇ ಘೋಷಿಸಲಾಗಿರುವ ಕಂಟೋನ್ಮೆಂಟ್ ಪ್ರದೇಶಗಳಲ್ಲಿ ಎಷ್ಟು ಮನೆಗಳಿವೆ ಎಂಬುದನ್ನು ಪರಿಶೀಲಿಸಿ, ಸಂಖ್ಯೆಗೆ ಅನುಗುಣವಾಗಿ ತಂಡ ರಚಿಸಿಕೊಂಡು ಪ್ರತಿ ಮನೆಗೆ ಭೇಟಿ ನೀಡಬೇಕು. ಸೋಂಕು ಲಕ್ಷಣಗಳ ಬಗ್ಗೆ ನಿರಂತರ ಪರಿಶೀಲಿಸಿ ವರದಿ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರಿಗೆ ನಿರ್ದೇಶನ ನೀಡಿದರು.

    ಆರೋಗ್ಯ ಮತ್ತಿತರ ಇಲಾಖೆ ಸದಸ್ಯರನ್ನು ಒಳಗೊಂಡ ತಂಡವು ಪ್ರತಿ ಮನೆಯಲ್ಲಿ ಇರುವವರ ಸಮಗ್ರ ಮಾಹಿತಿ ಕಲೆಹಾಕಬೇಕು. ಜ್ವರ, ಡಯಾಬಿಟೀಸ್, ರಕ್ತದೊತ್ತಡ, ಉಸಿರಾಟದ ತೊಂದರೆ ಸೇರಿ ಯಾವ ಬಗೆಯ ಆರೋಗ್ಯ ಸಮಸ್ಯೆ ಹೊಂದಿದ್ದಾರೆ ಎಂಬುದನ್ನು ಪರಿಶೀಲಿಸಿ ತಕ್ಷಣ ಜಿಲ್ಲಾಮಟ್ಟದ ತಂಡಕ್ಕೆ ಮಾಹಿತಿ ಸಲ್ಲಿಸಬೇಕು. ಜ್ವರ ಅಥವಾ ಸೋಂಕಿನ ಲಕ್ಷಣಗಳು ಕಂಡುಬಂದರೆ ತಕ್ಷಣ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಬೇಕು ಎಂದು ಆದೇಶ ನೀಡಿದರು.

    ಮುನ್ನೆಚ್ಚರಿಕೆ ವಹಿಸಿ: ಜಿಪಂ ಸಿಇಒ ಡಾ. ಕೆ.ವಿ. ರಾಜೇಂದ್ರ ಮಾತನಾಡಿ, ವೈದ್ಯರು ಮತ್ತು ಸಿಬ್ಬಂದಿಗೆ ಅಗತ್ಯವಿರುವ ಮಾಸ್ಕ್, ಸ್ಯಾನಿಟೈಸರ್ ಮತ್ತಿತರ ಅಗತ್ಯ ವಸ್ತುಗಳ ಖರೀದಿಗೆ ಈಗಾಗಲೇ ಎಲ್ಲ ತಾಲೂಕುಗಳಿಗೂ ಜಿಲ್ಲಾಧಿಕಾರಿಗಳು ಹಣ ಬಿಡುಗಡೆ ಮಾಡಿದ್ದಾರೆ. ಹೀಗಾಗಿ ಅಗತ್ಯ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಯಾವುದೇ ಗ್ರಾಮದಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ಸೂಚಿಸಿದರು.

    ಅಂಗನವಾಡಿ ಮಕ್ಕಳಿಗೆ ನೀಡಲಾಗುವ ಆಹಾರ ಸಾಮಗ್ರಿಗಳನ್ನು ಕಡ್ಡಾಯವಾಗಿ ಮನೆ ಮನೆಗಳಿಗೆ ತೆರಳಿ ವಿತರಿಸಬೇಕು. ಈ ಬಗ್ಗೆ ದೂರುಗಳು ಬಂದರೆ ಸಂಬಂಧಪಟ್ಟವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು. ಸಾಧ್ಯ ಇರುವ ಕಡೆಗಳಲ್ಲಿ ಉದ್ಯೋಗ ಖಾತ್ರಿ ಮೂಲಕವೂ ಜನರಿಗೆ ಉದ್ಯೋಗ ನೀಡುವ ಬಗ್ಗೆ ಪರಿಶೀಲಿಸಬೇಕು ಎಂದು ಡಾ. ರಾಜೇಂದ್ರ ಸಲಹೆ ನೀಡಿದರು.

    ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಸರ್ವೇಕ್ಷಣಾಧಿಕಾರಿ ಡಾ.ತುಕ್ಕಾರ, ಉಪ ವಿಭಾಗಾಧಿಕಾರಿಗಳಾದ ಶಿವಾನಂದ ಭಜಂತ್ರಿ, ಅಶೋಕ ತೇಲಿ, ರವೀಂದ್ರ ಕರಲಿಂಗಣ್ಣವರ, ಎಲ್ಲ ತಹಸೀಲ್ದಾರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಇದ್ದರು.

    ಈಗಾಗಲೇ ಬಿಡುಗಡೆಯಾಗಿರುವ ಪಡಿತರ ಧಾನ್ಯವನ್ನು ಏ.11ರ ಸಂಜೆಯೊಳಗೆ ಸಂಪೂರ್ಣವಾಗಿ ವಿತರಿಸಬೇಕು. ತಾಲೂಕು ಮತ್ತಿತರ ಕೇಂದ್ರಗಳಲ್ಲಿ ಜನಸಂದಣಿ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವುದರ ಜತೆಗೆ ಫಾಗಿಂಗ್, ಪೌಡರ್ ಸಿಂಪಡಣೆ ಕಡ್ಡಾಯವಾಗಿ ಮಾಡಬೇಕು.
    | ಡಾ. ಎಸ್.ಬಿ. ಬೊಮ್ಮನಹಳ್ಳಿ, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts