More

    ಮನೆಗೆ ಬಂದರೂ ದೂರವೇ ಕುಳಿತುಕೊಳ್ಳುವ ಪೊಲೀಸ್​ ಅಪ್ಪನಿಗೆ ಪುಟ್ಟ ಮಗಳಿಂದ ಹತ್ತಾರು ಪ್ರಶ್ನೆ; ವೈರಲ್​ ಫೋಟೋಕ್ಕೆ ಭಾರಿ ಮೆಚ್ಚುಗೆ

    ಇಂದೋರ್‌: ಡ್ಯೂಟಿ ಮುಗಿಸಿ ಅಪ್ಪ ಮನೆಗೆ ಬರುವುದನ್ನೇ ಕಾಯುತ್ತಿದ್ದಾಳೆ ನಾಲ್ಕು ವರ್ಷದ ಪುಟಾಣಿ ಬಾಲಕಿ. ಮನೆಗೆ ಅಪ್ಪ ಬಂದರೆ ಮಗಳ ಬಳಿಯೂ ಹೋಗುವುದಿಲ್ಲ, ಮನೆ ಮಂದಿಯಿಂದ ಅಂತರ ಕಾಯ್ದುಕೊಂಡು ಹೊರಗಡೆ ಕುಳಿತು ತಿಂಡಿ, ಊಟ ಸೇವನೆ ಮಾಡುತ್ತಿದ್ದಾರೆ. ಲಾಕ್‌ಡೌನ್‌ ಇರುವಾಗ ತನ್ನ ಸ್ನೇಹಿತರ ಅಪ್ಪ-ಅಮ್ಮ ಎಲ್ಲರೂ ಮನೆಯಲ್ಲಿಯೇ ಇದ್ದರೂ, ಯಾರೂ ಹೊರಕ್ಕೆ ಹೋಗಬಾರದು ಎಂದು ಎಲ್ಲರೂ ಹೇಳುತ್ತಿದ್ದರೂ ನೀನು ಮಾತ್ರ ದಿನಪೂರ್ತಿ ಹೊರಗಡೆ ಇರುತ್ತೀ ಏಕೆ ಎಂದು ಈ ಕಂದ ಕೇಳುವ ಪ್ರಶ್ನೆಗೆ ಆಕೆಗೆ ಅರ್ಥ ಮಾಡುವಂತೆ ಉತ್ತರ ಹೇಳುವುದು ಈ ಅಪ್ಪನಿಗೆ ಬಲು ಕಷ್ಟ…

    ಇದನ್ನು ಸಾರುವ ಫೋಟೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇಂದೋರ್‌ನ ಪೊಲೀಸ್‌ ಅಧಿಕಾರಿಯೊಬ್ಬರು ಮನೆಯ ಹೊರಗೆ ಕುಳಿತು ಊಟ ಮಾಡುತ್ತಿರುವುದು, ಮಗಳು ದೂರದಿಂದ ನೋಡುತ್ತಿರುವ ಫೋಟೋ ಇದಾಗಿದೆ.

    ಕರೊನಾ ಸೋಂಕಿನಿಂದ ಬಚಾವಾಗಲು ಬಹುತೇಕರು ಮನೆಯ ಒಳಗೆ ರಕ್ಷಣೆ ಪಡೆಯುತ್ತಿದ್ದರೆ, ಸಾರ್ವಜನಿಕರನ್ನು ಈ ಡೆಡ್ಲಿ ವೈರಸ್‌ನಿಂದ ಕಾಪಾಡಲು ಪೊಲೀಸರು, ವೈದ್ಯರು, ತುರ್ತು ಸೇವಾ ಘಟಕದವರು ಸೇರಿದಂತೆ ಅದೆಷ್ಟೋ ಮಂದಿ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಕರ್ತವ್ಯ ನಿರತರಾಗಿದ್ದಾರೆ. ಅಂಥವರಲ್ಲಿ ಒಬ್ಬರು ಇಂದೋರ್‌ನ ನಿರ್ಮಲ್‌ ಶ್ರೀನಿವಾಸ. ಕರೊನಾ ಡ್ಯೂಟಿಯಲ್ಲಿರುವ ನಿರ್ಮಲ್‌ ಅವರು ಡ್ಯೂಟಿ ಮುಗಿಸಿ ಮನೆಗೆ ಬಂದ ನಂತರ ಸೋಂಕಿನ ಭೀತಿಯಿಂದಾಗಿ ಮನೆಯವರಿಂದ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ.

    ಇದರ ಫೋಟೋ ಒಂದನ್ನು ಕಾಂಗ್ರೆಸ್‌ ಮುಖಂಡ ನರೇಂದ್ರ ಸಲುಜಾ ಅವರು ಶೇರ್‌ ಮಾಡಿದ್ದು, ಅಂತರ ಕಾಪಾಡಿಕೊಳ್ಳುತ್ತಿರುವ ನಿರ್ಮಲ್‌ ಅವರ ಕ್ರಮಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಜನರು ಸುರಕ್ಷಿತವಾಗಿ ಇರಬೇಕೆಂದರೆ ನಾವು ರಸ್ತೆಗಿಳಿದು ಕರ್ತವ್ಯ ನಿರ್ವಹಿಸಲೇಬೇಕು. ಆದರೆ ನಾಲ್ಕು ವರ್ಷದ ಮಗಳಿಗೆ ಇದನ್ನೆಲ್ಲಾ ಅರ್ಥ ಮಾಡಿಸುವುದು ತುಂಬಾ ಕಷ್ಟ. ನಾನು ಮನೆಗೆ ಬರುವುದನ್ನೇ ಅವಳು ಕಾಯುತ್ತಿರುತ್ತಾಳೆ. ಆದರೆ ಸಾಮಾನ್ಯ ದಿನಗಳಂತೆ ನಾನು ಮನೆಗೆ ಬಂದ ಮೇಲೆ ಆಕೆಯನ್ನು ಸಮೀಪ ಕರೆದು ಮುದ್ದಿಸುವಂತಿಲ್ಲ. ಇದನ್ನು ಹೇಗೋ ಅವಳಿಗೆ ಅರ್ಥ ಮಾಡಿಸಿದ್ದೇನೆ. ಅವಳಿಗೆ ಎಷ್ಟು ಅರ್ಥವಾಗಿದೆಯೋ ತಿಳಿಯದು, ಆದರೆ ಅಂತರವನ್ನು ಕಾಪಾಡಿಕೊಳ್ಳುತ್ತಿದ್ದಾಳೆ’ ಎಂದಿರುವ ನಿರ್ಮಲ್‌, ಎಲ್ಲರೂ ಕಡ್ಡಾಯವಾಗಿ ಅಂತರ ಕಾಪಾಡಿ ಎಂಬ ಸಂದೇಶವನ್ನೂ ನೀಡಿದ್ದಾರೆ. (ಏಜೆನ್ಸೀಸ್‌)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts