More

    3 ಲಕ್ಷ ದಾಟಿದ ಪ್ರಕರಣ: ಮಹಾರಾಷ್ಟ್ರದಲ್ಲಿ 1 ಲಕ್ಷಕ್ಕಿಂತ ಹೆಚ್ಚು ಕರೊನಾ ಕೇಸ್

    ನವದೆಹಲಿ: ಭಾರತದಲ್ಲಿ ಕಳೆದೊಂದು ತಿಂಗಳಿನಿಂದ ಕರೊನಾ ಪ್ರಕರಣ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಒಟ್ಟು ಸೋಂಕಿತರ ಸಂಖ್ಯೆ 3 ಲಕ್ಷದ ಗಡಿ ದಾಟಿದೆ. ಕಳೆದ 24 ತಾಸಿನಲ್ಲಿ 7,600 ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಪ್ರಮಾಣ 3.05 ಲಕ್ಷಕ್ಕೇರಿದೆ. ಕರೊನಾಗೆ ಅತಿ ಹೆಚ್ಚು ಬಾಧಿತವಾಗಿರುವ ಮಹಾರಾಷ್ಟ್ರದಲ್ಲಿ 3,400 ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 1 ಲಕ್ಷ ದಾಟಿದೆ. ಮುಂಬೈನಲ್ಲಿ ಸುಮಾರು 55 ಸಾವಿರ ಪ್ರಕರಣಗಳಿವೆ.

    ದೇಶದ ಒಟ್ಟು ಪ್ರಕರಣಗಳಲ್ಲಿ ಶೇಕಡಾ 33ಕ್ಕೂ ಅಧಿಕ ಕೇಸ್​ಗಳು ಈ ರಾಜ್ಯದಿಂದಲೆ ವರದಿಯಾಗಿದೆ. ಗುರುವಾರವಷ್ಟೇ ಸ್ಪೇನ್ ಮತ್ತು ಬ್ರಿಟನ್ ಅನ್ನು ಹಿಂದಿಕ್ಕಿರುವ ಭಾರತ ಕರೊನಾಗೆ ಹೆಚ್ಚು ಬಾಧಿತವಾಗಿರುವ ರಾಷ್ಟ್ರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿತ್ತು. ಶುಕ್ರವಾರ ಹೊಸದಾಗಿ 216 ಮಂದಿ ಬಲಿಯಾಗಿದ್ದು, ಮೃತರ ಸಂಖ್ಯೆ 8,700ಕ್ಕೆ ಏರಿಕೆಯಾಗಿದೆ. ಗುಣಮುಖರ ಸಂಖ್ಯೆಯೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಈವರೆಗೆ 1.52 ಲಕ್ಷ ಮಂದಿ (ಶೇ. 49.47) ಚೇತರಿಸಿಕೊಂಡಿದ್ದಾರೆ. ಕಳೆದ 24 ತಾಸಿನಲ್ಲಿ 6,166 ರೋಗಿಗಳು ಗುಣಮುಖರಾಗಿದ್ದಾರೆ. ಆದಾಗ್ಯೂ ಇನ್ನು 1.44 ಲಕ್ಷ ಸಕ್ರಿಯ ಪ್ರಕರಣಗಳಿವೆ. ಕಳೆದ ಮೂರು ದಿನಗಳಿಂದ ಸಕ್ರಿಯ ಪ್ರಕರಣಗಳಿಗಿಂತಲೂ ಒಟ್ಟು ಗುಣಮುಖರ ಸಂಖ್ಯೆ ಹೆಚ್ಚಿದೆ.

    ತಮಿಳುನಾಡಿನಲ್ಲಿ ಈವರೆಗೆ 40 ಸಾವಿರ ಪ್ರಕರಣಗಳು ವರದಿಯಾಗಿದ್ದು, ದೆಹಲಿಯಲ್ಲಿ 34 ಸಾವಿರ, ಗುಜರಾತ್​ನಲ್ಲಿ 22 ಸಾವಿರ, ಉತ್ತರಪ್ರದೇಶದಲ್ಲಿ 12 ಸಾವಿರ, ರಾಜಸ್ಥಾನದಲ್ಲಿ 11 ಸಾವಿರ ಹಾಗೂ ಮಧ್ಯಪ್ರದೇಶದಲ್ಲಿ 10 ಸಾವಿರ ಪ್ರಕರಣಗಳಿವೆ. ಗುಜರಾತ್​ನಲ್ಲಿ 1,400 ಹಾಗೂ ದೆಹಲಿಯಲ್ಲಿ 1 ಸಾವಿರಕ್ಕೂ ಹೆಚ್ಚು ಜನರು ಈವರೆಗೆ ಸಾವನ್ನಪ್ಪಿದ್ದಾರೆ.

    ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್​ಡೌನ್ ಇಲ್ಲ: ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್​ಡೌನ್ ಇಲ್ಲ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ಕರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಮತ್ತೆ ಸಂಪೂರ್ಣ ಲಾಕ್​ಡೌನ್ ಘೋಷಿಸಲಾಗುತ್ತದೆ ಎಂಬ ವದಂತಿಯಿಂದ ಜನರು ಗಾಬರಿಯಾಗಿದ್ದ ಹಿನ್ನೆಲೆ ಅವರು ಸ್ಪಷ್ಟನೆ ನೀಡಿದ್ದಾರೆ. ಆದರೆ ಜನರು ಗುಂಪು ಸೇರಬೇಡಿ ಮತ್ತು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ನಿಯಮಗಳನ್ನು ಪಾಲಿಸಿ ಎಂದು ಠಾಕ್ರೆ ಹೇಳಿದ್ದಾರೆ.

    ದ್ವಿಗುಣಗೊಳ್ಳುವಿಕೆ ದಿನಗಳ ಹೆಚ್ಚಳ

    ದೇಶದಲ್ಲಿ ಪ್ರತಿದಿನ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾದರೂ ಕೂಡ ಪ್ರಕರಣಗಳು ದ್ವಿಗುಣಗೊಳ್ಳುವಿಕೆ ಪ್ರಮಾಣ 15.4 ದಿನಗಳಿಂದ 17.4 ದಿನಗಳಿಗೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸದ್ಯ ದೇಶದಲ್ಲಿ ಸರ್ಕಾರದ 637 ಸೇರಿ ಒಟ್ಟು 877 ಲ್ಯಾಬ್​ಗಳು ಕರೊನಾ ವೈದ್ಯಕೀಯ ಪರೀಕ್ಷೆಯಲ್ಲಿ ತೊಡಗಿವೆ. ಶುಕ್ರವಾರ ನಡೆಸಿದ 1.50 ಲಕ್ಷ ಮಾದರಿಗಳು ಪರೀಕ್ಷೆ ಸೇರಿ ಈವರೆಗೆ ನಡೆಸಿದ ಒಟ್ಟು ಮಾದರಿ ಪರೀಕ್ಷೆ ಸಂಖ್ಯೆ 53.63 ಲಕ್ಷಕ್ಕೆ ಏರಿದೆ.

    ಹೆದ್ದಾರಿ ಸಂಚಾರಕ್ಕೆ ನಿರ್ಬಂಧವಿಲ್ಲ

    ಲಾಕ್​ಡೌನ್​ನ ಭಾಗವಾಗಿ ರಾತ್ರಿ 9ರಿಂದ ಬೆಳಗ್ಗೆ 5ರವರೆಗೆ ವಿಧಿಸಲಾಗಿರುವ ಕರ್ಫ್ಯೂ ವೇಳೆ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸರಕು ಮತ್ತು ಪ್ರಯಾಣಿಕರ ಸಂಚಾರಕ್ಕೆ ಯಾವುದೇ ನಿರ್ಬಂಧ ವಿಧಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ರಾತ್ರಿ ವೇಳೆ ಹೆದ್ದಾರಿಗಳಲ್ಲಿ ಸರಕು ಸಾಗಣೆ ಟ್ರಕ್​ಗಳು, ಪ್ರಯಾಣಿಕರ ಬಸ್​ಗಳು, ಹಾಗೂ ಜನರ ಸಂಚಾರಕ್ಕೆ ನಿರ್ಬಂಧ ವಿಧಿಸುವಂತಿಲ್ಲ ಎಂದು ತಿಳಿಸಲಾಗಿದೆ. ಮಿಕ್ಕಂತೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರಾತ್ರಿ ಕರ್ಫ್ಯೂ ಎಂದಿನಂತೆ ಇರಲಿದೆ.

    ಮಳವಳ್ಳಿ ಸರ್ಕಾರಿ ಪದವಿ ಕಾಲೇಜಿನ ಇಬ್ಬರು ಉಪನ್ಯಾಸಕರು ಆತ್ಮಹತ್ಯೆಗೆ ಶರಣು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts