More

    ಐರ್ಲೆಂಡ್​ನಲ್ಲಿ ಮೈಸೂರಿನ ಮಹಿಳೆ, ಮಕ್ಕಳಿಬ್ಬರ ನಿಗೂಢ ಸಾವು: ಮನೆ ಬಾಗಿಲು ತೆರೆದ ಪೊಲೀಸರಿಗೆ ಶಾಕ್​!

    ನವದೆಹಲಿ: ಮೈಸೂರು ಮೂಲದ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳು ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಐರ್ಲೆಂಡ್​ ದ್ವೀಪ ರಾಷ್ಟ್ರದ ಸೌಥ್​ ಡಬ್ಲಿನ್ ಪ್ರಾಂತ್ಯದಲ್ಲಿ​ ನಡೆದಿದೆ.

    ಮೃತರನ್ನು ಸೀಮಾ ಬಾನು (37) ಮಗಳಾದ ಅಸ್ಫಿರಾ ರಿಜಾ (11) ಮತ್ತು ಮಗ ಫೈಜಾನ್​ ಸೈಯದ್​ (6) ಎಂದು ಗುರುತಿಸಲಾಗಿದೆ. ಸೌಥ್​ ಡಬ್ಲಿನ್​ ಉಪನಗರ ಬಲ್ಲಿಂಟೀರ್​ನ ಲೈವೆಲ್ಲೆನ್​ ಕೋರ್ಟ್​ನಲ್ಲಿರುವ ನಿವಾಸದಲ್ಲಿ ಉಸಿಗಟ್ಟಿಸಿ ಕೊಲೆ ಮಾಡಿರುವ ಸ್ಥಿತಿಯಲ್ಲಿ ಮೂವರ ಶವ ಶುಕ್ರವಾರ ಪತ್ತೆಯಾಗಿದೆ. ಮೃತದೇಹ ಪತ್ತೆಯಾಗುವ ಐದು ದಿನಗಳ ಮುಂಚೆಯೇ ಕೊಲೆ ನಡೆದಿದೆ ಎಂದು ಪೊಲೀಸರು ನಂಬಿದ್ದಾರೆ.

    ಕುಟುಂಬವು ಐರ್ಲೆಂಡ್​ನಲ್ಲಿ ನೆಲೆಸಿ ವರ್ಷಗಳೂ ಕಳೆಯುವಷ್ಟರಲ್ಲೇ ದುರಂತ ಘಟನೆ ಸಂಭವಿಸಿದೆ. ಕೊಲೆ ನಡೆದ ವಿಚಾರ ಸೀಮಾ ಪತಿ ಸಮೀರ್​ ಸೈದ್​ಗೂ ತಿಳಿದಿರಲಿಲ್ಲ. ಆತ ನಗರದಿಂದ ಹೊರ ಹೋಗಿದ್ದ, ಬಳಿಕ ಫೋನ್​ ಮೂಲಕ ಮಾಹಿತಿ ನೀಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇನ್ನು ಸಮೀರ್​ ಮೈಸೂರು ಮೂಲದವರು. ದುಬೈನಲ್ಲಿ ನಲೆಸಿದ್ದರು. ಐರ್ಲೆಂಡ್​ನಲ್ಲಿ ಕೆಲಸ ದೊರೆತಾಗ ಕಳೆದ ಫೆಬ್ರವರಿಯಲ್ಲಿ ಅಲ್ಲಿಗೆ ತೆರಳಿದ್ದರು.

    ಇದನ್ನೂ ಓದಿ: ಮದ್ವೆಯಾಗಿ ವರ್ಷ ಕಳೆದಿಲ್ಲ ಮಾವನಿಂದಲೇ ಸೊಸೆ ಗರ್ಭಿಣಿ?: ಆ ಒಂದು ಮಾತಿಗೆ ಅತ್ತೆಯ ಹತ್ಯೆ!

    ಮೃತರ ಶವಪರೀಕ್ಷೆ ನಡೆಸಿದ ಬಳಿಕ ತನಿಖೆಯನ್ನು ಆರಂಭಿಸಲಾಗಿದೆ ಎಂದು ಐರ್ಲೆಂಡ್​ನ ದುಂಡ್ರಮ್​ ಗರ್ಡಾ ಠಾಣೆ ಪತ್ರಿಕಾ ಹೇಳಿಕೆಯನ್ನು ನೀಡಿದೆ. ಕತ್ತಿನ ಸುತ್ತ ಹಗ್ಗದಿಂದ ಬೀರಿದ ಗಾಯದ ಗುರುತಿನೊಂದಿಗೆ ಮನೆಯ ಕೊಠಡಿಯೊಂದರಲ್ಲಿ ಮಕ್ಕಳಿಬ್ಬರ ಶವ ಪತ್ತೆಯಾಗಿದ್ದು, ಇನ್ನೊಂದು ಕೊಠಡಿಯಲ್ಲಿ ಸೀಮಾ ಶವ ಉಸಿರುಗಟ್ಟಿದ ಸ್ಥಿತಿಯಲ್ಲಿ ಕಂಡುಬಂದಿದೆ ಎಂದು ಐರೀಸ್​ ಮಾಧ್ಯಮಗಳು ವರದಿ ಮಾಡಿವೆ. ಬ್ಯಾಂಕ್​ ರಜಾದಿನಗಳ ವೀಕೆಂಡ್​ನಲ್ಲಿ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಹಲವು ದಿನಗಳವರೆಗೆ ಸೀಮಾ ಕುಟುಂಬದವರು ಕಾಣಿಸಿಕೊಳ್ಳದಿದ್ದನ್ನು ಗಮನಿಸಿ ನೆರೆಹೊರೆಯವರು ಮಾಹಿತಿ ನೀಡಿದ್ದಾರೆ. ಬಳಿಕ ಐರ್ಲೆಂಡ್​ನ ಸಶಸ್ತ್ರ ಬೆಂಬಲ ಘಟಕ ಸೀಮಾ ಮನೆಗೆ ಆಗಮಿಸಿ ಬಾಗಿಲು ಮುರಿದು ಒಳಹೊಕ್ಕಿ ನೋಡಿದಾಗ ಪ್ರಕರಣ ಬಯಲಿಗೆ ಬಂದಿದೆ. ಕೊಲೆಯ ಬಳಿಕ ದುಷ್ಕರ್ಮಿ ಮನೆಯಲ್ಲಿನ ನೀರಿನ ಕೊಳಾಯಿಯನ್ನು ಆನ್​ ಮಾಡಿ ಹೊರಟಿದ್ದರಿಂದ ನೀರು ತುಂಬಿಕೊಂಡು ಸಾಕಷ್ಟು ಹಾನಿಯು ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದೀಗ ತನಿಖೆ ನಡೆಸುತ್ತಿರುವ ಪೊಲೀಸರು ಸ್ಥಳೀಯರ ಮನೆ ಮನೆಗೆ ತೆರಳಿ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ, ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

    ಸದ್ಯ ಪೊಲೀಸರು ಶಂಕಿತ ವ್ಯಕ್ತಿಯೊಬ್ಬನ ಚಿತ್ರವನ್ನು ಬಿಡುಗಡೆ ಮಾಡಿದ್ದು, ಆತನ ಬಗ್ಗೆ ಏನಾದರೂ ಮಾಹಿತಿ ಗೊತ್ತಿದ್ದರೆ ತಿಳಿಸಿ ಎಂದು ಕುಟುಂಬಕ್ಕೆ ಪೊಲೀಸರು ಮನವಿ ಮಾಡಿದ್ದಾರೆ. ಇನ್ನು ಸೀಮಾ ಬಾನು ಮೇಲೆ ಕಳೆದ ಏಪ್ರಿಲ್​ ತಿಂಗಳಲ್ಲಿ ಹಲ್ಲೆ ನಡೆದಿರುವ ಬಗ್ಗೆ ಐರೀಸ್​ ಪೊಲೀಸರು ದೂರು ದಾಖಲಿಸಿದ್ದಾರೆ. ಆರೋಪಿಯ ಬಗ್ಗೆಯೂ ನಿಗಾ ಇಡಲಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

    ಇದನ್ನೂ ಓದಿ: ಟರ್ಕಿಯಲ್ಲಿ ಭೂಕಂಪ: 24ಕ್ಕೇರಿದ ಸಾವಿನ ಸಂಖ್ಯೆ, ಮಾಲೀಕನ ರಕ್ಷಣೆಗೆ ಗೋಳಿಡುತ್ತಿರುವ ಶ್ವಾನ!

    ಇನ್ನು ಮೃತರ ದೇಹಗಳನ್ನು ಸ್ವದೇಶಕ್ಕೆ ತರಿಸಿಕೊಡುವಂತೆ ಐರ್ಲೆಂಡ್​ ಭಾರತೀಯ ರಾಯಭಾರ ಕಚೇರಿಗೆ ಸೀಮಾ ಕುಟುಂಬ ಮನವಿ ಮಾಡಿದೆ. ಶವ ತರಲು ಸುಮಾರು 15 ಲಕ್ಷ ಖರ್ಚಾಗುತ್ತದೆ. ಅಷ್ಟೊಂದು ಹಣ ನಮ್ಮ ಬಳಿ ಇಲ್ಲ. ನಮ್ಮ ಪ್ರೀತಿ ಪಾತ್ರರ ಶವವನ್ನು ಕಳುಹಿಸಿಕೊಟ್ಟರೆ ಜೀವನ ಪೂರ್ತಿ ನಿಮಗೆ ಋಣಿ ಆಗಿರುತ್ತೇವೆ. ಕೊನೆ ಒಂದು ಬಾರಿಯಾದರೂ ಅವರ ಮುಖಗಳನ್ನು ನೋಡಲು ಬಯಸಿದ್ದೇವೆ. ದಯವಿಟ್ಟು ಶವಗಳನ್ನು ಕಳುಹಿಸಿಕೊಡಿ. ನಮಗೆ ಸಹಾಯ ಮಾಡಿ ಎಂದು ಐರೀಸ್​ ವೆಬ್​ಸೈಟ್​ ಆರ್​ಟಿಇ ಜತೆ ಮಾಡಿ ಮನವಿ ಮಾಡಿದ್ದಾರೆ.

    ಐರ್ಲೆಂಡ್‌ನ ಭಾರತೀಯ ರಾಯಭಾರ ಕಚೇರಿಯೂ ಈ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts