More

    ಜಾವೆಲಿನ್ ಪವರ್​ಹೌಸ್ ಆಗಲಿದೆ ಭಾರತ! ಒಲಿಂಪಿಕ್ಸ್ ಚಿನ್ನದ ಹುಡುಗ ನೀರಜ್ ಚೋಪ್ರಾ

    | ರಘುನಾಥ್ ಡಿ.ಪಿ. ಬೆಂಗಳೂರು

    ‘ಜಾವೆಲಿನ್ ಎಸೆಯುವ ಆಟದಲ್ಲಿ ಭಾರತ ಪವರ್ ಹೌಸ್ ಆಗುವುದರಲ್ಲಿ ಅನುಮಾನವೇ ಬೇಡ. ನನ್ನಿಂದ ಸ್ಪೂರ್ತಿ ಪಡೆದ ಹಲವರು ಈ ಕ್ರೀಡೆಯತ್ತ ಬರಬಹುದು. ಮುಂದಿನ ದಿನಗಳಲ್ಲಿ ಭಾರತದಿಂದ ಮತ್ತಷ್ಟು ಉತ್ತಮ ಜಾವೆಲಿನ್ ಥ್ರೋಪಟುಗಳು ಹೊರಹೊಮ್ಮಲಿದ್ದಾರೆ..’

    ಇದು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಮುಡಿಗೆ ಸ್ವರ್ಣ ಕಿರೀಟ ತೊಡಿಸಿದ ಹರಿಯಾಣದ 23 ವರ್ಷದ ಅಥ್ಲೀಟ್, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಆತ್ಮವಿಶ್ವಾಸದ ನುಡಿ. 2021ರ ಆ.7 ಶನಿವಾರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನಕ್ಕೆ ಮುತ್ತಿಟ್ಟು ಭಾರತೀಯ ಕ್ರೀಡಾಕ್ಷೇತ್ರವನ್ನು ಹೊಸ ಎತ್ತರಕ್ಕೇರಿಸಿದ ಅವರು ವಿಜಯವಾಣಿಯೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ಬಂಗಾರದ ಸಾಧನೆಯ ಅನುಭವದ ಜತೆಯಲ್ಲೇ ಭವಿಷ್ಯದ ಯೋಜನೆಗಳ ಮಾಹಿತಿ ಹಂಚಿಕೊಂಡಿದ್ದಾರೆ.

    ಬಜಾರಿಯಾಗೆ ಶ್ಲಾಘನೆ: ಪ್ಯಾರಾ ಲಿಂಪಿಕ್ಸ್ ವಿಚಾರವಾಗಿ ಮಾತನಾಡಿದ ಅವರು ದೇವೇಂದ್ರ ಜಜಾರಿಯಾ ಉತ್ತಮ ಅಥ್ಲೀಟ್ ಆಗಿದ್ದು 2004ರಿಂದಲೂ ಭಾರತಕ್ಕೆ ಪದಕ ಗೆದ್ದುಕೊಡುತ್ತಿದ್ದಾರೆ. ಅವರಿಂದಲೂ ಭಾರತದಲ್ಲಿ ಜಾವೆಲಿನ್ ಥ್ರೋ ಸಾಕಷ್ಟು ಪ್ರಸಿದ್ಧಿ ಪಡೆದಿದೆ ಎಂದು ಶ್ಲಾಘಿಸಿದರು.

    ಒಲಿಂಪಿಕ್ಸ್​ನಲ್ಲಿ ಸ್ವರ್ಣ ಪದಕ ನಿರೀಕ್ಷಿಸಿದ್ದೀರಾ? ಗೆಲುವಿನ ಬಳಿಕ ನಿಮ್ಮ ಸಂಭ್ರಮ ಹೇಗಿತ್ತು?

    ಪದಕ ನಿರೀಕ್ಷೆಯೊಂದಿಗೆ ನಾನು ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸುವುದಿಲ್ಲ, ಇಂಥ ಸ್ಥಾನ ಪಡೆಯಬೇಕೆಂಬ ಟಾರ್ಗೆಟ್ ಇಟ್ಟುಕೊಳ್ಳುವುದಿಲ್ಲ. ಉತ್ತಮ ನಿರ್ವಹಣೆ ನೀಡುವುದಷ್ಟೇ ನನ್ನ ಗುರಿಯಾಗಿರುತ್ತದೆ. ಇದು ಜಾವೆಲಿನ್ ಥ್ರೋ ಆಗಿರುವ ಕಾರಣ ಎಲ್ಲರಿಗೂ 6 ಎಸೆತಗಳು ಸಿಗುತ್ತದೆ. ಕಡೇ ಎಸೆತದವರೆಗೂ ಏನು ಬೇಕಾದರೂ ಆಗಬಹುದು. ಟೋಕಿಯೊದಲ್ಲೂ ಕಡೇ ಎಸೆತದವರೆಗೂ ಎಚ್ಚರಿಕೆಯಿಂದಲೇ ಇದ್ದೆ. ಪೋಡಿಯಂ ಮೇಲೆ ನಿಂತು, ಹೆಗಲ ಮೇಲೆ ತ್ರಿವರ್ಣಧ್ವಜ ಧರಿಸಿ ಪದಕ ಪಡೆಯುವುದೇ ಹೆಮ್ಮೆಯ ವಿಷಯ. ಅದರಲ್ಲೂ ಟೋಕಿಯೊದಲ್ಲಿ ರಾಷ್ಟ್ರಗೀತೆ ಮೊಳಗಿದ್ದು ನನ್ನ ಜೀವನದ ಶ್ರೇಷ್ಠ ಕ್ಷಣ.

    ಜಾವೆಲಿನ್ ಕಡೆ ಆಸಕ್ತಿ ಬೆಳೆಯಲು ಕಾರಣ?

    ಪಾಣಿಪತ್ ಸ್ಟೇಡಿಯಂನಲ್ಲಿ ಫಿಟ್ನೆಸ್​ಗಾಗಿ ಜಾವೆಲಿನ್ ಎಸೆಯುತ್ತಿದ್ದೆ, ಇದಕ್ಕೂ ಗಮನಿಸಿದ ಜೈವೀರ್ ಚೌಧರಿ ಇದನ್ನೇ ಸ್ಪರ್ಧಾತ್ಮಕವಾಗಿ ಆಯ್ಕೆ ಮಾಡಿಕೊಳ್ಳುವಂತೆ ಪ್ರೇರೇಪಿಸಿದರು. ಅವರೇ ನನ್ನ ಮೊದಲ ಗುರು ಕೂಡ. ನನ್ನ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಮನ್ನಣೆ ಸಿಗುವಂತೆ ಮಾಡಿದ ವ್ಯಕ್ತಿ.

    ತಮ್ಮ ಮುಂದಿನ ಟಾರ್ಗೆಟ್ ಏನು?

    ವಿಶ್ವ ಜೂನಿಯರ್ ಚಾಂಪಿಯನ್​ಶಿಷಿಪ್, ಏಷ್ಯಾಡ್, ಕಾಮನ್ವೆಲ್ತ್ ಗೇಮ್ಸ್​ನಲ್ಲಿ ಪದಕ ಜಯಿಸಿದ್ದೇನೆ. ಒಲಿಂಪಿಕ್ಸ್​ನಲ್ಲೂ ಪದಕ ಜಯಿಸಿರುವೆ. ವಿಶ್ವ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್​ಷಿಪ್​ನಲ್ಲಿ ಪದಕ ಜಯಿಸಿಲ್ಲ. ಮುಂದಿನ ವರ್ಷ ನಡೆಯುವ ಸೀನಿಯರ್ ಕೂಟದಲ್ಲಿ ಪದಕ ಗೆಲ್ಲುವ ಗುರಿ ಹೊಂದಿದ್ದೇನೆ. 2022ರಲ್ಲಿ ನಡೆಯಲಿರುವ ಏಷ್ಯಾಡ್ ಹಾಗೂ ಕಾಮನ್ವೆಲ್ತ್ ಗೇಮ್್ಸ ನಲ್ಲಿ ಸ್ವರ್ಣ ಪದಕ ಉಳಿಸಿಕೊಳ್ಳುವ ಜವಾಬ್ದಾರಿಯೂ ನನ್ನ ಮುಂದಿದೆ.

    ಒಲಿಂಪಿಕ್ಸ್ ಸಾಧನೆ ಬಳಿಕ ನಿಮ್ಮ ಜೀವನ ಶೈಲಿ ಯಾವ ರೀತಿ ಬದಲಾಯಿತು?

    ಜೂನಿಯರ್ ವಿಶ್ವ ಚಾಂಪಿಯನ್​ಷಿಪ್, ಕಾಮನ್ವೆಲ್ತ್ ಗೇಮ್್ಸ ಹಾಗೂ ಏಷ್ಯಾಡ್​ನಲ್ಲಿ ಪದಕ ಜಯಿಸಿದಾಗ ಅದ್ದೂರಿ ಸ್ವಾಗತ ನೀಡಲಾಗಿತ್ತು. ಆದರೆ, ಒಲಿಂಪಿಕ್ಸ್​ನಲ್ಲಿ ಪದಕ ಜಯಿಸಿದಾಗ ಸಿಕ್ಕ ಸ್ವಾಗತವೇ ಬೇರೆ. ಇದೊಂದು ಅದ್ಭುತ ಕ್ಷಣ. ಪದಕ ಗೆದ್ದು ಭಾರತಕ್ಕೆ ಆಗಮಿಸಿದಾಗ ನಿಜವಾದ ದೇಶಪ್ರೇಮ ತಿಳಿಯಿತು.

    ನೀವು ಪದಕ ಜಯಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ನಿಮ್ಮೊಂದಿಗೆ ಮಾತನಾಡಿದರು, ಪದಕದೊಂದಿಗೆ ಅವರನ್ನು ಭೇಟಿಯಾದಾಗಿನ ಅನುಭವ ಹೇಳುವಿರಾ?

    ಮೋದಿ ಅವರನ್ನು ಭೇಟಿಯಾಗಿದ್ದು ಅವಿಸ್ಮರಣೀಯ ಕ್ಷಣ. ಪ್ರಧಾನಿ ವೈಯಕ್ತಿಕ ಆಸಕ್ತಿ ವಹಿಸಿ ನಮ್ಮೊಂದಿಗೆ ಮಾತನಾಡಿದಾಗ, ಸಾಧನೆ ಸಾರ್ಥಕ ಎನಿಸಿತು. ಫೈನಲ್​ನಲ್ಲಿ ಎಸೆದ ಭರ್ಜಿಯನ್ನು ಪ್ರಧಾನಿ ಅವರಿಗೆ ಉಡುಗೊರೆ ನೀಡಿದೆ. ತುಂಬಾ ಹತ್ತಿರದಿಂದ ಪ್ರಧಾನಿ ಅವರನ್ನು ನೋಡಿ ಪುಳಕಿತಗೊಂಡೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts