More

    ತವರಿನಲ್ಲಿ ಗೆಲುವಿನ ಖಾತೆ ತೆರದ ಲಖನೌ: ಅಂಕಪಟ್ಟಿಯಲ್ಲಿ ಕುಸಿತ ಕಂಡ ಆರ್‌ಸಿಬಿ

    ಲಖನೌ: ಪದಾರ್ಪಣೆಯ ಪಂದ್ಯದಲ್ಲೇ ಮಿಂಚಿದ 21 ವರ್ಷದ ವೇಗಿ ಮಯಾಂಕ್ ಯಾದವ್ (27ಕ್ಕೆ3) ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಲಖನೌ ಸೂಪರ್‌ಜೈಂಟ್ಸ್ ತಂಡ ಐಪಿಎಲ್-17ರಲ್ಲಿ ಪ್ರವಾಸಿ ಪಂಜಾಬ್ ಕಿಂಗ್ಸ್ ಎದುರು 21 ರನ್‌ಗಳಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ಲಖನೌ ತಂಡ ತವರಿನಲ್ಲಿ ಗೆಲುವಿನ ಖಾತೆ ತೆರೆದರೆ, ಶಿಖರ್ ಧವನ್ ಬಳಗ ಸತತ 2ನೇ ಸೋಲುಂಡಿತು. ಗೆಲುವಿನೊಂದಿಗೆ ಲಖನೌ ಅಂಕಪಟ್ಟಿಯ ಕೊನೇ ಸ್ಥಾನದಿಂದ 5ನೇ ಸ್ಥಾನಕ್ಕೇರಿದರೆ, ಆರ್‌ಸಿಬಿ ತಂಡ 7ನೇ ಸ್ಥಾನಕ್ಕೆ ಕುಸಿದಿದೆ.

    ಏಕನಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಲಖನೌ ತಂಡ, ವಿಕೆಟ್ ಕೀಪರ್-ಬ್ಯಾಟರ್ ಕ್ವಿಂಟನ್ ಡಿಕಾಕ್ (54 ರನ್, 38 ಎಸೆತ, 5 ಬೌಂಡರಿ, 2 ಸಿಕ್ಸರ್) ಅರ್ಧಶತಕ ಹಾಗೂ ಆಲ್ರೌಂಡರ್ ಕೃನಾಲ್ ಪಾಂಡ್ಯ (43* ರನ್, 22 ಎಸೆತ, 4 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಬಲದಿಂದ 8 ವಿಕೆಟ್‌ಗೆ 199 ರನ್ ಕಲೆಹಾಕಿತು. ಪ್ರತಿಯಾಗಿ ನಾಯಕ ಶಿಖರ್ ಧವನ್ (70 ರನ್, 50 ಎಸೆತ, 7 ಬೌಂಡರಿ, 3 ಸಿಕ್ಸರ್) ಹಾಗೂ ಜಾನಿ ಬೇರ್‌ಸ್ಟೋ (42) ಒದಗಿಸಿದ ಭರ್ಜರಿ ಆರಂಭದ ಬಳಿಕ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ವೈಲ್ಯದಿಂದಾಗಿ ಪಂಜಾಬ್ 5 ವಿಕೆಟ್‌ಗೆ 178 ರನ್‌ಗಳಿಸಲಷ್ಟೇ ಶಕ್ತವಾಯಿತು.

    ಧವನ್ ಹೋರಾಟ ವ್ಯರ್ಥ: ಬೃಹತ್ ಚೇಸಿಂಗ್ ನಡೆಸಿದ ಪಂಜಾಬ್‌ಗೆ ಧವನ್ ಹಾಗೂ ಬೇರ್‌ಸ್ಟೋ ಭರ್ಜರಿ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ 70 ಎಸೆತಗಳಲ್ಲಿ 102 ರನ್ ಕಸಿದು ಲಖನೌ ಬೌಲರ್‌ಗಳನ್ನು ಕಂಗೆಡಿಸಿದ ಇವರಿಬ್ಬರು ಓವರ್‌ಗೆ 10ರಂತೆ ಹತ್ತು ಓವರ್‌ಗಳಲ್ಲಿ 98 ರನ್ ಪೇರಿಸಿ ಭದ್ರ ಬುನಾದಿ ಒದಗಿಸಿದರು. 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಧವನ್ ಚೇಸಿಂಗ್‌ಗೆ ಬಲ ತುಂಬಿದರು. ಆದರೆ ನಂತರ ವೇಗಿ ಮಯಾಂಕ್ ಯಾದವ್ ದಾಳಿಗೆ ಇಳಿದ ನಂತರ ಲಯ ತಪ್ಪಿದ ಪಂಜಾಬ್, ಇಂಪ್ಯಾಕ್ಟ್ ಆಟಗಾರ ಪ್ರಭ್‌ಸಿಮ್ರಾನ್ ಸಿಂಗ್ (19), ಜಿತೇಶ್ ಶರ್ಮ (6), ಸ್ಯಾಮ್ ಕರ‌್ರನ್ (0) ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖಮಾಡಿತು. ಲಿಯಾಮ್ ಲಿವಿಂಗ್ ಸ್ಟೋನ್ (28*) ಸೋಲಿನ ಅಂತರ ತಗ್ಗಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts