More

    ರಕ್ಷಣಾ ಸಂಬಂಧಕ್ಕೆ ಬಲ: ಭಾರತ-ಅಮೆರಿಕ ನಡುವೆ 2+2 ಸಭೆ, ಮಹತ್ವದ ನಿರ್ಧಾರ

    ನವದೆಹಲಿ: ಭಾರತ ಹಾಗೂ ಅಮೆರಿಕದ ವಿದೇಶಾಂಗ ಹಾಗೂ ರಕ್ಷಣಾ ಸಚಿವರ 2+2 ಸಭೆಯಲ್ಲಿ ಹಲವು ಮಹತ್ವದ ದ್ವಿಪಕ್ಷೀಯ ಹಾಗೂ ಜಾಗತಿಕ ವಿಚಾರಗಳ ಬಗ್ಗೆ ಚರ್ಚೆ ನಡೆದಿದ್ದು, ರಕ್ಷಣೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.

    ಭಾರತದ ವಿದೇಶಾಂಗ ಸಚಿವ ಎಸ್. ಜೈ ಶಂಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಹಾಗೂ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ. ಎಸ್ಪರ್ ಸಭೆ ನಡೆಸಿದರು. ಹಿಂದು ಮಹಾಸಾಗರ-ಶಾಂತಸಾಗರ (ಇಂಡೋ-ಪೆಸಿಫಿಕ್) ವಲಯದಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಚೀನಾ ಸತತ ಪ್ರಯತ್ನ ನಡೆಸುತ್ತಿರುವುದರಿಂದ ಅದನ್ನು ಮಟ್ಟ ಹಾಕಲು ಭಾರತ-ಅಮೆರಿಕ ಮುಂದಾಗಿರುವ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದಿದೆ.

    ಚೀನಾ ಬೆದರಿಕೆಗೆ ತಕ್ಕ ಉತ್ತರ

    ಭಾರತ ಎದುರಿಸುತ್ತಿರುವ ಎಲ್ಲ ಬಗೆಯ ಬೆದರಿಕೆಗಳ ವಿರುದ್ಧ ಸಹಕಾರ ಹೆಚ್ಚಿಸಲು ಅಮೆರಿಕ ಮತ್ತು ಭಾರತ ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂದು ಸಭೆಯ ನಂತರ ಪಾಂಪಿಯೋ ಹೇಳಿದರು. ಚೀನಾ ಕಮ್ಯುನಿಸ್ಟ್ ಪಕ್ಷದ (ಸಿಪಿಸಿ) ಬೆದರಿಕೆ ಜತೆಗೆ ಎಲ್ಲ ರೀತಿಯ ಬೆದರಿಕೆಗಳನ್ನೂ ಒಟ್ಟಾಗಿ ಎದುರಿಸಲಾಗುವುದು ಎಂದು ಅವರು ಘೋಷಿಸಿದರು. ಇಂಡೋ-ಪೆಸಿಫಿಕ್ ವಿಚಾರಕ್ಕೆ ಚರ್ಚೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಯಿತು ಎಂದು ವಿದೇಶಾಂಗ ಸಚಿವ ಎಸ್. ಜೈ ಶಂಕರ್ ಹೇಳಿದರು. ಈ ವಲಯದ ಎಲ್ಲ ದೇಶಗಳ ಸ್ಥಿರತೆ, ಶಾಂತಿ ಮತ್ತು ಸಮೃದ್ಧಿಗೆ ನೀಡಬೇಕಾದ ಮಹತ್ವವನ್ನು ಉಭಯ ದೇಶಗಳು ಪುನರುಚ್ಚರಿಸಿವೆ ಎಂದರು.

    ಕಾಯಂ ಸದಸ್ಯತ್ವಕ್ಕೆ ಬೆಂಬಲ

    ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ಸಿಗಬೇಕೆಂಬ ವಿಚಾರಕ್ಕೆ ಅಮೆರಿಕದ ಸಂಪೂರ್ಣ ಬೆಂಬಲವಿದೆ ಎಂದು ಪಾಂಪಿಯೋ ಹೇಳಿದ್ದಾರೆ. ಕರೊನಾ ಸಾಂಕ್ರಾಮಿಕತೆ ನಡುವೆಯೂ, ಭದ್ರತೆ ಮತ್ತು ಸ್ವಾತಂತ್ರ್ಯಕ್ಕೆ ಚೀನಾ ಕಮ್ಯೂನಿಸ್ಟ್ ಪಕ್ಷದಿಂದ ಉದ್ಭವಿಸಿರುವ ಅಪಾಯವನ್ನು ರ್ಚಚಿಸಲು ಇದೊಂದು ಉತ್ತಮ ಅವಕಾಶ ಎಂದು ಅವರು ಅಭಿಪ್ರಾಯಪಟ್ಟರು.

    ಯುದ್ಧ ಸ್ಮಾರಕಕ್ಕೆ ಭೇಟಿ

    ಸಭೆಗೂ ಮುನ್ನ ಪಾಂಪಿಯೋ ಮತ್ತು ಎಸ್ಪರ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು. ಜೂನ್​ನಲ್ಲಿ ಗಲ್ವಾನ್ ಕಣಿವೆಯಲ್ಲಿ ಚೀನಾ ಸೇನೆಯ ಜತೆ ಹೋರಾಡಿ ಹುತಾತ್ಮರಾದವರ ಸಹಿತ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಹುತಾತ್ಮ ಯೋಧರಿಗೆ ನಮನಗಳು ಎಂದು ಪಾಂಪಿಯೋ ಹೇಳಿದರು.

    ಮೂಲಭೂತ ವಿನಿಮಯ, ಸಹಕಾರ ಒಪ್ಪಂದವನ್ನು (ಬಿಇಸಿಎ) ಪೂರ್ಣಗೊಳಿಸಿರುವುದಕ್ಕೆ ನಮಗೆ ಸಂತೋಷವಾಗಿದೆ. ರಕ್ಷಣಾ ಮಾಹಿತಿ ವಿನಿಮಯಕ್ಕೆ ಅದು ಹೊಸ ಹಾದಿಯನ್ನು ತೆರೆಯಲಿದೆ.
    | ರಾಜನಾಥ್ ಸಿಂಗ್ ರಕ್ಷಣಾ ಸಚಿವ

    ಆತ್ಮನಿರ್ಭರ ಭಾರತಕ್ಕೆ ಒತ್ತು

    ಆತ್ಮನಿರ್ಭರ ಭಾರತ ನೀತಿಗನುಸಾರ ವಾಗಿ ಭಾರತದ ರಕ್ಷಣಾ ವಲಯದಲ್ಲಿ ಬಂಡವಾಳ ಹೂಡಲು ಮುಂದೆ ಬರುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕರೆ ನೀಡಿದ್ದಾರೆ. ಅಮೆರಿಕದ ಕಂಪನಿಗಳು ಭಾರತದಲ್ಲಿನ ಅವಕಾಶಗಳ ಪ್ರಯೋಜನ ಪಡೆಯಬೇಕು ಎಂದು ಸೋಮವಾರ ಸಂಜೆ ಎಸ್ಪರ್ ಜೊತೆಗಿನ ಸಭೆಯಲ್ಲಿ ಸಿಂಗ್ ಹೇಳಿದ್ದರು. ಚೀನಾ ದೊಂದಿಗಿನ ಗಡಿ ಉದ್ವಿಗ್ನತೆಯ ಹಿನ್ನೆಲೆ ಇದೊಂದು ಮಹತ್ವದ ಕ್ರಮವಾಗಿದೆ.

    ಮೂರೂ ಸೇನಾ ಪಡೆಗಳ ಪ್ರಧಾನ ದಂಡನಾಯಕ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ, ನೌಕಾ ದಳ ಮುಖ್ಯಸ್ಥ ಕರಂಬೀರ್ ಸಿಂಗ್, ವಾಯುಪಡೆಯ ಪ್ರಮುಖ ಆರ್.ಕೆ.ಎಸ್. ಬಧೌರಿಯಾ, ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಮತ್ತು ರಕ್ಷಣೆ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಅಧ್ಯಕ್ಷ ಜಿ. ಸತೀಶ್ ರೆಡ್ಡಿ ಭಾರತದ ನಿಯೋಗದಲ್ಲಿದ್ದರು.

    ಪ್ರಧಾನಿ ಮೋದಿ ಭೇಟಿ

    ಮೈಕ್ ಪಾಂಪಿಯೋ ಮತ್ತು ಮಾರ್ಕ್ ಎಸ್ಪರ್ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ರ್ಚಚಿಸಿದರು. ರಾಜನಾಥ್ ಸಿಂಗ್, ಎಸ್. ಜೈ ಶಂಕರ್, ಅಜಿತ್ ದೋವಲ್ ಮತ್ತು ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನ್ ಜಸ್ಟರ್ ಜತೆಯಲ್ಲಿದ್ದರು.

    ಅಜಿತ್ ದೋವಲ್ ಎಲ್ಬೊ ಬಂಪ್!

    ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್​ಎಸ್​ಎ) ಅಜಿತ್ ದೋವಲ್, ಮೈಕ್ ಪಾಂಪಿಯೋ ಮತ್ತು ಮಾರ್ಕ್ ಎಸ್ಪರ್ ಅವರನ್ನು ವಿಶಿಷ್ಟ ರೀತಿಯಲ್ಲಿ ಬರಮಾಡಿಕೊಂಡರು. ಕರೊನಾ ಸಾಂಕ್ರಾಮಿಕತೆ ಹಿನ್ನೆಲೆಯಲ್ಲಿ ದೈಹಿಕ ಅಂತರ ಕಾಪಾಡುವ ನಿಯಮಕ್ಕನುಗುಣವಾಗಿ, ಹಸ್ತಲಾಘವ ನೀಡದೆ ಉಭಯತ್ರರ ಮೊಣಕೈಗಳಿಗೆ ಮೊಣಕೈಯಿಂದ ರ್ಸ³ಸಿದರು (ಎಲ್ಬೊ ಬಂಪ್).

    ಭಾರತ – ಅಮೆರಿಕ ಹಿಂದಿನ ಒಪ್ಪಂದ

    ಭದ್ರತಾ ಮಿಲಿಟರಿ ಮಾಹಿತಿ ಒಪ್ಪಂದಕ್ಕೆ 2002ರಲ್ಲಿ ಸಹಿ 2016ರಲ್ಲಿ ಲಾಜಿಸ್ಟಿಕ್ಸ್ ವಿನಿಮಯ ಒಡಂಬಡಿಕೆ ಒಪ್ಪಂದಕ್ಕೆ (ಎಲ್​ಇಎಂಒಎ) ಅಂಕಿತ. ಎರಡೂ ದೇಶಗಳು ರಿಪೇರಿ ಹಾಗೂ ರಕ್ಷಣಾ ಸಾಮಗ್ರಿಗಳ ಪೂರೈಕೆಗೆ ಪರಸ್ಪರರ ರಕ್ಷಣಾ ನೆಲೆಗಳನ್ನು ಬಳಸಿಕೊಳ್ಳಲು ಅವಕಾಶ. ಸಂವಹನ ಹೊಂದಾಣಿಕೆ ಮತ್ತು ಭದ್ರತಾ ಒಪ್ಪಂದ (ಸಿಒಎಂಸಿಎಎಸ್​ಎ) ಒಡಂಬಡಿಕೆಗೆ 2018ರಲ್ಲಿ ಸಹಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts