More

    ಭಾರತವನ್ನು ವಿಭಜಿಸಿದೆ ಜಾತಿ, ವರ್ಗ

    ಮೈಸೂರು: ಮಾನವ ಹಕ್ಕುಗಳನ್ನು ಅಸ್ಪಶ್ಯರು, ಮಹಿಳೆಯರು, ಅಸಹಾಯಕರ ದೃಷ್ಟಿಯಿಂದ ನೋಡಬೇಕು ಎಂದು ಚಿಂತಕ ನಾ.ದಿವಾಕರ್ ಹೇಳಿದರು.


    ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಪ್ರಯುಕ್ತ ಭಾರತ ಜ್ಞಾನ ವಿಜ್ಞಾನ ಸಮಿತಿ, ಪೀಪಲ್ ಲೀಗಲ್ ಫೋರಂ, ಸಿದ್ಧಾರ್ಥನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ಸ್ ರೇಂಜರ್ ಘಟಕದ ಸಹಯೋಗದಲ್ಲಿ ಮಹಾರಾಜ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ‘ಸಂವಿಧಾನದ ದೃಷ್ಟಿಯಲ್ಲಿ ಮಾನವ ಹಕ್ಕುಗಳು’ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.


    ಜಾತಿವಾರು ಹೌಸಿಂಗ್ ಸೊಸೈಟಿಗಳು ರಚನೆಯಾಗಿವೆ. ಪರಿಶಿಷ್ಟ ಜಾತಿಯ ಹೌಸಿಂಗ್ ಬೋರ್ಡ್ ನಿರ್ಮಿಸುವ ಬಡಾವಣೆಯಲ್ಲಿ ಪೌರಕಾರ್ಮಿಕರಿಗೆ ನಿವೇಶನ ಕೊಡುವುದಿಲ್ಲ. ಇದು ದುರಂತ. ಜಾತಿ, ವರ್ಗ ಭಾರತವನ್ನು ವಿಭಜಿಸಿದೆ. ಜಾತಿ ವ್ಯವಸ್ಥೆ ಮೆಟ್ಟಿಲುಗಳು ಇಲ್ಲದ ಬಹುಮಹಡಿ ಕಟ್ಟಡ ಎಂಬ ಬಿ.ಆರ್.ಅಂಬೇಡ್ಕರ್ ಅವರ ಮಾತು ನಿಜ ಎನಿಸಿ ಕಳವಳ ಮೂಡಿಸುತ್ತದೆ ಎಂದರು.


    ವಿಕಿಪೀಡಿಯಾ ನೀಡುವ ಮಾಹಿತಿ ಸತ್ಯವಲ್ಲ. ಮಾರುಕಟ್ಟೆ ದಾಸರನ್ನಾಗಿಸುವ ಆರ್ಥಿಕ ವ್ಯವಸ್ಥೆಯೂ ಜೀತದಾಳುಗಳನ್ನು ಸೃಷ್ಟಿಸುತ್ತಿದೆ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದರು.


    ನಿವೃತ್ತ ಮೇಜರ್ ಜನರಲ್ ಎಸ್.ಜಿ.ಒಂಬತ್ಕೆರೆ ಮಾತನಾಡಿ, ಸಂವಿಧಾನದ ಆಶಯ ಮತ್ತು ಮಾನವ ಹಕ್ಕು ಒಂದಕ್ಕೊಂದು ಪೂರಕವಾಗಿವೆ. ಈ ಹಿಂದೆ ಬಿತ್ತಿದ ವಿಷಬೀಜದ ಫಲವನ್ನು ಜನರು ಇವತ್ತು ಸೇವಿಸುತ್ತಿದ್ದಾರೆ. ದೇಶದ ಇಡೀ ವಾತಾವರಣ ಕಲುಷಿತಗೊಂಡಿದೆ. ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ. ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.


    ಪೀಪಲ್ ಲೀಗಲ್ ಫೋರಂ ನಿರ್ದೇಶಕ, ವಕೀಲ ಪಿ.ಪಿ.ಬಾಬುರಾಜ್ ಮಾತನಾಡಿ, ಪ್ರಸ್ತುತ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ. ಸಮಾನತೆ, ಸ್ವಾತಂತ್ರ್ಯದ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ. ಆಯ್ಕೆಯ ಸ್ವಾತಂತ್ರ್ಯ ಮೊಟಕುಗೊಳಿಸಲಾಗುತ್ತಿದೆ. ಒಂದೇ ರಾಷ್ಟ್ರ, ಒಂದೇ ಆಹಾರ, ಒಂದೇ ಉಡುಗೆ ತೊಡಬೇಕೆಂದು ಒತ್ತಾಯಿಸುವುದು ಸಂವಿಧಾನ ವಿರೋಧಿಯಾಗಿದೆ ಎಂದು ಕಿಡಿಕಾರಿದರು.


    1948ರ ವಿಶ್ವ ಮಾನವ ಹಕ್ಕುಗಳಲ್ಲಿ ಪ್ರಕಟಿಸಿರುವ 30 ಹಕ್ಕುಗಳನ್ನು ಭಾರತದ ಸಂವಿಧಾನದಲ್ಲಿ ಸೇರ್ಪಡೆ ಮಾಡಲಾಗಿದೆ. ಅಸ್ಪಶ್ಯತೆ ನಿವಾರಣೆ, ತಾರತಮ್ಯದಿಂದ ಮುಕ್ತಿ, ಬದುಕುವ ಹಕ್ಕು, ಸ್ವಾತಂತ್ರ್ಯ ಮತ್ತು ಸಮಾನತೆ ಮುಖ್ಯವಾದವು. ಈ ಪ್ರಧಾನ ಹಕ್ಕುಗಳನ್ನು ರಕ್ಷಿಸಿದರೆ ದೇಶ ಶಾಂತಿ ಸುಭಿಕ್ಷವಾಗಿರುತ್ತದೆ ಎಂದು ನುಡಿದರು.


    ಸಂವಿಧಾನ ಅತೀತವಾದ ಅಲಿಖಿತ ಕಾನೂನು ದೇಶದಲ್ಲಿದೆ. ಇದರ ವಿರುದ್ಧ ಸಂವಿಧಾನ ಮತ್ತು ಮಾನವ ಹಕ್ಕುಗಳನ್ನು ಅಸ್ತ್ರವಾಗಿ ಬಳಸಿದರೆ ಪರಿಹಾರವಿದೆ. ಇದಕ್ಕೆ ಚಳವಳಿಯ ನೆರವು ಪಡೆಯಬೇಕು ಎಂದು ಹೇಳಿದರು. ಮಾನವ ಹಕ್ಕುಗಳನ್ನು ರಕ್ಷಿಸಿದರೆ ಸಾಮರಸ್ಯ ಬೆಳೆದು ದೇಶದ ಪ್ರಗತಿ ಆಗುತ್ತದೆ ಎಂದರು.


    ಮುಖ್ಯಶಿಕ್ಷಕ ಡಾ.ಡಿ.ಮಹೇಶ್, ಬಿಜಿವಿಎಸ್ ಕಾರ್ಯದರ್ಶಿ ಎಸ್.ವಜ್ರಮುನಿ, ವಕೀಲ ಜಿ.ವಿ.ಯತೀಶ್, ಮುಖಂಡರಾದ ದೇವನೂರ ಪುಟ್ಟನಂಜಯ್ಯ, ಎಚ್.ಡಿ.ಕೋಟೆ ಎ.ಎಸ್.ಹರ್ಷವರ್ಧನ್, ಅನಿಲ್‌ಕುಮಾರ್ ಇನ್ನಿತರರಿದ್ದರು


    ನಿರ್ಣಯ:


    ಶಾಲಾ-ಕಾಲೇಜು ಶಿಕ್ಷಣದಲ್ಲಿ ಮಾನವ ಹಕ್ಕುಗಳ ಪಠ್ಯ ಸೇರ್ಪಡೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts