More

    ಸರಣಿ ಗೆಲುವಿನತ್ತ ಟೀಮ್ ಇಂಡಿಯಾ ಚಿತ್ತ ; ಪುಟಿದೇಳುವ ವಿಶ್ವಾಸದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ತಂಡ

    ಕೋಲ್ಕತ: ಏಕದಿನ ಸರಣಿ ಮಾದರಿಯಲ್ಲೇ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಪ್ರಬಲ ಹಿಡಿತ ಮುಂದುವರಿಸಿರುವ ಭಾರತ ತಂಡ ಎರಡನೇ ಟಿ20 ಹಣಾಹಣಿಗೆ ಸಜ್ಜಾಗಿದೆ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಜಯ ದಾಖಲಿಸಿ ಸರಣಿ ವಶಪಡಿಸಿಕೊಳ್ಳಲು ರೋಹಿತ್ ಶರ್ಮ ಬಳಗ ಉತ್ಸುಕವಾಗಿದೆ. ಅಹಮದಾಬಾದ್‌ನಲ್ಲಿ ನಡೆದ 3 ಪಂದ್ಯಗಳ ಏಕದಿನ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿದ್ದ ಭಾರತ ತಂಡ, 3 ಪಂದ್ಯಗಳ ಚುಟುಕು ಕ್ರಿಕೆಟ್ ಸರಣಿಯಲ್ಲಿ 1-0 ಯಿಂದ ಮುನ್ನಡೆ ಸಾಧಿಸಿದೆ. ತವರು ನೆಲದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಟಿ20 ಸರಣಿಯಲ್ಲಿ ಮಣಿಸಿ ಭಾರತಕ್ಕೆ ಆಗಮಿಸಿದ್ದ ವೆಸ್ಟ್ ಇಂಡೀಸ್ ತಂಡ ಮೊದಲ ಪಂದ್ಯದಲ್ಲಿ ನಿರೀಕ್ಷಿತ ನಿರ್ವಹಣೆ ತೋರಲು ವಿಫಲವಾಗಿತ್ತು. ವೆಸ್ಟ್ ಇಂಡೀಸ್ ತಂಡ ಸರಣಿಯಲ್ಲಿ ತನ್ನ ಹೋರಾಟವನ್ನು ಜೀವಂತವಾಗಿರಿಸಿಕೊಳ್ಳಲು ಮಾಡು ಇಲ್ಲವೇ ಮಡಿ ಅನಿವಾರ್ಯತೆಯಲ್ಲಿ ಸಿಲುಕಿದೆ. ಇಬ್ಬನಿ ಸಮಸ್ಯೆ ಕಾಡುವ ಹಿನ್ನೆಲೆಯಲ್ಲಿ ಟಾಸ್ ಪ್ರಮುಖ ಪಾತ್ರವಹಿಸಲಿದೆ.

    * ಆತ್ಮವಿಶ್ವಾಸದಲ್ಲಿ ರೋಹಿತ್ ಪಡೆ
    ಮೊದಲ ಪಂದ್ಯದಲ್ಲಿ ವಿಂಡೀಸ್ ನೀಡಿದ ಸಾಧಾರಣ ಮೊತ್ತವನ್ನು ಭಾರತ ತಂಡ ಸುಲಭವಾಗಿ ಬೆನ್ನಟ್ಟಿದರೂ ಪ್ರಮುಖ ಆಟಗಾರರ ವೈಫಲ್ಯ ಕಾಡುತ್ತಿದೆ. ರೋಹಿತ್ ಶರ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಭದ್ರಬುನಾದಿ ಹಾಕಿಕೊಟ್ಟರೂ ಕೊಹ್ಲಿ, ರಿಷಭ್ ಪಂತ್ ವೈಫಲ್ಯ ಅನುಭವಿಸಿದರೆ, ಇಶಾನ್ ಕಿಶನ್ ಮಂದಗತಿ ಬ್ಯಾಟಿಂಗ್‌ನಿಂದಾಗಿ ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳಲು ವಿಫಲರಾದರು. ಪ್ರಸಕ್ತ ಐಪಿಎಲ್ ಆಟಗಾರರ ಮೆಗಾ ಹರಾಜಿನಲ್ಲಿ ದುಬಾರಿ ಆಟಗಾರ (15.25 ಕೋಟಿ) ಎಂಬ ಶ್ರೇಯಕ್ಕೆ ಪಾತ್ರರಾಗಿರುವ ಇಶಾನ್ ಕಿಶನ್‌ರಿಂದ ಬಿರುಸಿನ ನಿರ್ವಹಣೆ ಬರಬೇಕಿದೆ. ತಂಡವನ್ನು ಗೆಲುವಿನ ದಡಕ್ಕೆ ಸೇರಿಸುವ ಮೂಲಕ ಸೂರ್ಯಕುಮಾರ್ ಯಾದವ್ ಹಾಗೂ ವೆಂಕಟೇಶ್ ಅಯ್ಯರ್ ಜೋಡಿ ಮಧ್ಯಮ ಕ್ರಮಾಂಕದಲ್ಲಿ ಭರವಸೆ ನೀಡಿದೆ. ಆಲ್ರೌಂಡರ್ ಕೋಟಾದಡಿ ವೆಂಕಟೇಶ್ ಅಯ್ಯರ್‌ಗೆ ಮೊದಲ ಪಂದ್ಯದಲ್ಲಿ ಅವಕಾಶ ನೀಡಲಾಗಿತ್ತು. ಇದೀಗ ಹನ್ನೊಂದರ ಬಳಗಕ್ಕೆ ಶ್ರೇಯಸ್ ಅಯ್ಯರ್ ಕೂಡ ಪ್ರಬಲ ಅಕಾಂಕ್ಷಿಯಾಗಿದ್ದಾರೆ. ವೇಗಿ ದೀಪಕ್ ಚಹರ್ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದು, ಎರಡನೇ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಗಳಿವೆ.

    ಟೀಮ್ ನ್ಯೂಸ್:
    ಭಾರತ: ಗಾಯಾಳು ದೀಪಕ್ ಚಹರ್ ಬದಲಿಗೆ ಮೊಹಮದ್ ಸಿರಾಜ್ ಅಥವಾ ಆವೇಶ್ ಖಾನ್ ಸ್ಥಾನ ಪಡೆಯುವ ನಿರೀಕ್ಷೆಯಿದೆ. ಅಲ್ಲದೆ, ಶಾರ್ದೂಲ್ ಠಾಕೂರ್‌ಗೂ ಮಣೆ ಹಾಕುವ ಸಾಧ್ಯತೆಗಳಿವೆ. ಉಳಿದಂತೆ ತಂಡದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷಿಸುವಂತಿಲ್ಲ.

    ವೆಸ್ಟ್ ಇಂಡೀಸ್: ಗಾಯದ ಸಮಸ್ಯೆಯಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ವಿಶ್ರಾಂತಿಯಲ್ಲಿದ್ದ ಜೇಸನ್ ಹೋಲ್ಡರ್ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೇಸನ್ ಬಂದರೆ ರೋಸ್ಟನ್ ಚೇಸ್ ಅಥವಾ ಅಕೀಲ್ ಹೊಸೀನ್ ಹೊರಗುಳಿಯಲಿದ್ದಾರೆ.

    ಮುಖಾಮುಖಿ: 18, ಭಾರತ: 11, ವೆಸ್ಟ್ ಇಂಡೀಸ್: 6, ರದ್ದು: 1.
    ಪಂದ್ಯ ಆರಂಭ: ರಾತ್ರಿ 7
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts