More

    ಇಂದು ಭಾರತ – ದಕ್ಷಿಣ ಆಫ್ರಿಕಾ ನಡುವಿನ 5ನೇ ಟಿ20; ಚುಟುಕು ಕ್ರಿಕೆಟ್​ ಸರಣಿಗಿಂದು ಕ್ಲೈಮ್ಯಾಕ್ಸ್

    ಬೆಂಗಳೂರು: ಆರಂಭಿಕ ಹಿನ್ನಡೆ ನಡುವೆಯೂ ಪುಟಿದೇಳುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಿರುವ ಭಾರತ ತಂಡ 5ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಗೆಲುವಿನ ಫೇವರಿಟ್​ ಆಗಿ ಕಣಕ್ಕಿಳಿಯಲಿದೆ. ಕಳೆದ 10 ದಿನಗಳಿಂದ ರೋಚಕವಾಗಿ ಸಾಗುತ್ತಿರುವ ಭಾರತ ಹಾಗೂ ಪ್ರವಾಸಿ ದಕ್ಷಿಣ ಆಫ್ರಿಕಾ ನಡುವಿನ ಚುಟುಕು ಕ್ರಿಕೆಟ್​ ಸರಣಿ ಸಮರಕ್ಕೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ಕ್ಲೈಮ್ಯಾಕ್ಸ್​ ಸಿಗಲಿದೆ. ಕೆಲದಿನಗಳಿಂದ ಸಂಜೆ ವೇಳೆ ಸಿಲಿಕಾನ್​ ಸಿಟಿಯಲ್ಲಿ ವ್ಯಾಪಕವಾಗಿ ಮಳೆ ಅಬ್ಬರಿಸುತ್ತಿದ್ದು, ಪಂದ್ಯಕ್ಕೆ ಅಡ್ಡಿಯುಂಟುವಾಡುವ ಸಾಧ್ಯತೆಗಳಿವೆ. ಮಳೆ ಬಿಡುವು ನೀಡಿದರೆ ಉದ್ಯಾನನಗರಿ ಜನರಿಗೆ ರೋಚಕ ಹಣಾಹಣಿ ಸವಿಯುವ ಸೌಭಾಗ್ಯ ದಕ್ಕಲಿದೆ.

    ಪ್ರವಾಸಿ ದಕ್ಷಿಣ ಆಫ್ರಿಕಾ ಎದುರು ಮೊದಲ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದ್ದ ಭಾರತ ತಂಡ 3ನೇ ಹಾಗೂ 4ನೇ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿ ಸರಣಿಯಲ್ಲಿ 2-2 ರಿಂದ ಸಮಬಲ ಕಂಡಿದೆ. ಕಳೆದ ಎರಡೂ ಪಂದ್ಯಗಳಲ್ಲಿ ಭರ್ಜರಿ ನಿರ್ವಹಣೆ ತೋರಿರುವ ಭಾರತ ತಂಡ ಹ್ಯಾಟ್ರಿಕ್​ ಗೆಲುವಿನೊಂದಿಗೆ ಸರಣಿ ಒಲಿಸಿಕೊಳ್ಳುವ ಉತ್ಸಾಹದಲ್ಲಿದೆ. ಇದರೊಂದಿಗೆ ವರ್ಷದ ಆರಂಭದಲ್ಲಿ ದಣ ಆಫ್ರಿಕಾ ನೆಲದಲ್ಲಿ ಅನುಭವಿಸಿದ ಟೆಸ್ಟ್​ ಹಾಗೂ ಏಕದಿನ ಸರಣಿಯಲ್ಲಿ ಅನುಭವಿಸಿದ ಸೋಲಿಗೂ ಸೇಡು ತೀರಿಸಿಕೊಂಡಂತಾಗಲಿದೆ. ಕಳೆದ 8 ದಿನಗಳ ಅಂತರದಲ್ಲಿ 4 ಪಂದ್ಯಗಳನ್ನಾಡಿರುವ ಭಾರತ ತಂಡ ಒಂದೇ ತಂಡವನ್ನು ಕಣಕ್ಕಿಳಿಸುವ ಮೂಲಕ ಗಮನಸೆಳೆದಿದೆ.

    * ಆತ್ಮವಿಶ್ವಾಸದಲ್ಲಿ ರಿಷಭ್​ ಪಂತ್​
    ಟೂರ್ನಿಯಲ್ಲಿ ಭರ್ಜರಿ ಕಮ್​ಬ್ಯಾಕ್​ ಮಾಡಿದ ವಿಶ್ವಾಸದಲ್ಲಿರುವ ಭಾರತ ತಂಡಕ್ಕೆ ಬೌಲರ್​ಗಳೇ ದೊಡ್ಡ ಶಕ್ತಿಯಾಗಿದ್ದಾರೆ. ತಂಡದ ಪರ ಇದುವರೆಗೂ ಹೆಚ್ಚು ರನ್​ ಗಳಿಸಿರುವ ಇಶಾನ್​ ಕಿಶನ್​ (191) ಆರಂಭದಲ್ಲಿ ಸ್ಫೋಟಿಸುತ್ತಿದ್ದರೆ, ಇವರಿಗೆ ಋತುರಾಜ್​ ಸಾಥ್​ ನೀಡಬೇಕಿದೆ. ವಿಶಾಖಪಟ್ಟಣದಲ್ಲಿ ಅಬ್ಬರಿಸಿದ್ದ ಋತುರಾಜ್​, ರಾಜ್​ಕೋಟ್​ನಲ್ಲಿ ಕೈಕೊಟ್ಟಿದ್ದರು. ನಾಯಕತ್ವದ ಒತ್ತಡದಿಂದಾಗಿ ರಿಷಭ್​ ಪಂತ್​ ಬ್ಯಾಟಿಂಗ್​ನಲ್ಲಿ ಲಯಮರೆತಂದಿದೆ. ಮೂರನೇ ಕ್ರಮಾಂಕದಲ್ಲಿ ಶ್ರೇಯಸ್​ ಅಯ್ಯರ್​ ಬ್ಯಾಟಿಂಗ್​ ವೇಗಕ್ಕೆ ಮತ್ತಷ್ಟು ಚುರುಕು ನೀಡಬೇಕಿದೆ. ಹಾರ್ದಿಕ್​ ಪಾಂಡ್ಯ ಹಾಗೂ ಅನುಭವಿ ದಿನೇಶ್​ ಕಾರ್ತಿಕ್​ ಮಧ್ಯಮ ಕ್ರಮಾಂಕದಲ್ಲಿ ತಂಡದ ಶಕ್ತಿಯಾಗಿದ್ದಾರೆ. ಭುವನೇಶ್ವರ್​ ಕುಮಾರ್​, ಹರ್ಷಲ್​ ಪಟೇಲ್​ ಹಾಗು ಆವೇಶ್​ ಖಾನ್​ಗೆ ಸ್ಪಿನ್ನರ್​ ಯಜುವೇಂದ್ರ ಚಾಹಲ್​ ಸಾಥ್​ ನೀಡುತ್ತಿದ್ದಾರೆ.

    * ಪ್ರವಾಸಿ ತಂಡಕ್ಕೆ ಗಾಯದ ಸಮಸ್ಯೆ
    ಸತತ ಎರಡು ಪಂದ್ಯಗಳಲ್ಲಿ ಸೋಲಿನ ಪೆಟ್ಟು ತಿಂದಿರುವ ಪ್ರವಾಸಿ ತಂಡ ಗಾಯದ ಸಮಸ್ಯೆ ಎದುರಾಗಿದೆ. ಶುಕ್ರವಾರ ಬ್ಯಾಟಿಂಗ್​ ವೇಳೆ ಗಾಯಗೊಂಡು ಕಣದಿಂದ ನಿವೃತ್ತಿ ಹೊಂದಿದ್ದ ನಾಯಕ ಟೆಂಬಾ ಬವುಮಾ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡಿಲ್ಲ. ಆವೇಶ್​ ಖಾನ್​ ಓವರ್​ನ ಬೌನ್ಸರ್​ ಎಸೆತದಲ್ಲಿ ಪೆಟ್ಟು ತಿಂದಿರುವ ಮಾಕೋರ್ ಜಾನ್ಸೆನ್​ ಕೂಡ ಕಣಕ್ಕಿಳಿಯುವುದು ಅನುಮಾನ ಮೂಡಿಸಿದೆ. ಗೆಲುವಿನ ಒತ್ತಡದ ಜತೆಗೆ ತಂಡ ಸಂಯೋಜನೆಯೇ ಪ್ರವಾಸಿಗರಿಗೆ ದೊಡ್ಡ ತಲೆನೋವಾಗಿದೆ. ಬೌಲಿಂಗ್​ ವಿಭಾಗದಲ್ಲಿ ವೇಗಿಗಳು ನಿರೀಕ್ಷಿತ ನಿರ್ವಹಣೆ ತೋರುತ್ತಾ ಬಂದಿದ್ದರೂ ಕಡೆ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್​ ವೈಫಲ್ಯವೇ ತಂಡದ ಸೋಲಿಗೆ ಪ್ರಮುಖ ಕಾರಣ. ಮೊದಲ ಪಂದ್ಯದಲ್ಲ 200ಕ್ಕೂ ಅಧಿಕ ಮೊತ್ತ ಬೆನ್ನಟ್ಟಿದ ಪ್ರವಾಸಿ ಬ್ಯಾಟರ್​ಗಳು, ಕಡೇ 2 ಪಂದ್ಯಗಳಲ್ಲಿ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಲು ವಿಲವಾಗಿದೆ.

    * ಪಂದ್ಯಕ್ಕೆ ಮಳೆ ಅಡ್ಡಿ ಭೀತಿ
    ಹವಾಮಾನ ಇಲಾಖೆ ವರದಿಯಂತೆ ಭಾನುವಾರ ಸಂಜೆಯೂ ಮಳೆ ಬೀಳುವ ಸಾಧ್ಯತೆಗಳಿದ್ದು, ಆಯೋಜಕರನ್ನು ಚಿಂತೆಗೀಡು ಮಾಡಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಬ್​ಏರ್​ ಸ್ಟಿಸ್ಟಮ್​ ಆಳವಡಿಕೆ ಮಾಡಿರುವ ಹಿನ್ನೆಲೆಯಲ್ಲಿ ಎಷ್ಟೇ ದೊಡ್ಡ ಪ್ರಮಾಣದಲ್ಲಿ ಮಳೆಬಿದ್ದರೂ ನಿಂತ 20 ನಿಮಿಷಗಳಲ್ಲೇ ಪಂದ್ಯ ಆರಂಭಿಸಬಹುದು. ಆದರೆ, ಮಳೆ ಬಿಡುವು ನೀಡದೆ ಸತತವಾಗಿ ಬಿದ್ದರಷ್ಟೇ ಪಂದ್ಯಕ್ಕೆ ಅಡ್ಡಿಯಾಗಲಿದೆ.

    ಟೀಮ್​ ನ್ಯೂಸ್​:
    ಭಾರತ: ಹ್ಯಾಟ್ರಿಕ್​ ಗೆಲುವಿನ  ನಿರೀಕ್ಷೆಯಲ್ಲಿರುವ ರಿಷಭ್​ ಪಂತ್​ ಪಡೆ ಸತತ 5ನೇ ಪಂದ್ಯದಲ್ಲೂ ಒಂದೇ ತಂಡವನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ.

    ದಕ್ಷಿಣ ಆಫ್ರಿಕಾ : ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಪ್ರವಾಸಿ ತಂಡಕ್ಕೆ ಕೆಲವೊಂದು ಬದಲಾವಣೆ ನಿರೀಸಬಹುದು. ಟೆಂಬಾ ಬವುಮಾ ಹೊರಗುಳಿದರೆ ಸ್ಪಿನ್ನರ್​ ಕೇಶವ್​ ಮಹಾರಾಜ್​ ನಾಯಕತ್ವ ವಹಿಸಿಕೊಳ್ಳಬಹುದು. ಬವುಮಾ ಬದಲಿಗೆ ರೀಜಾ ಹೆನ್​ಡ್ರಿಕ್ಸ್​ ಹನ್ನೊಂದರ ಬಳಗಕ್ಕೆ ವಾಪಸಾಗಲಿದ್ದಾರೆ. ಮಾಕೋರ್ ಜಾನ್ಸೆನ್​ ಅಥವಾ ತಬರೇಜ್​ ಶಮ್ಸಿ ಬದಲಿಗೆ ವಾಯ್ನೆ ಪಾರ್ನೆಲ್​ ಅವಕಾಶ ಗಿಟ್ಟಿಸಿಕೊಳ್ಳಬಹುದು. ಲುಂಗಿ ಎನ್​ಗಿಡಿ ಮತ್ತೊಂದು ಅವಕಾಶದ ನಿರೀೆಯಲ್ಲಿದ್ದಾರೆ.


    * ಪಿಚ್​ ರಿಪೋರ್ಟ್​
    ಪಿಚ್​ ಬ್ಯಾಟರ್​ಗಳ ಪಾಲಿಗೆ ಸ್ವರ್ಗದಂತಿದ್ದು, ರನ್​ ಮಳೆಯನ್ನೆ ನಿರೀಸಬಹುದು. ಜತೆಗೆ ಸ್ಪಿನ್ನರ್​ಗಳಿಗೆ ನೆರವಾಗುವ ಸಾಧ್ಯತೆಯಿದೆ. ಪಿಚ್​ನ ಎರಡು ಬದಿಯಲ್ಲೂ ಸ್ಪಿನ್ನರ್​ಗಳಿಗೆ ಅನುಕೂಲವಿದೆ. ಟಾಸ್​ ಜಯಿಸಿದ ನಾಯಕ ಎರಡನೇ ಆಯ್ಕೆಇಲ್ಲದೆ ಫೀಲ್ಡಿಂಗ್​ ಆಯ್ದುಕೊಳ್ಳುವುದು ಪಕ್ಕಾ. ಮೈದಾನದಲ್ಲಿ ಇದುವರೆಗೂ ನಡೆದಿರುವ 7 ಅಂತಾರಾಷ್ಟ್ರೀಯ ಟಿ20 ಪಂದ್ಯಗಳ ಪೈಕಿ 5 ಬಾರಿ ಚೇಸಿಂಗ್​ ತಂಡವೇ ಗೆಲುವು ದಾಖಲಿಸಿದೆ.

    * 3 ವರ್ಷಗಳ ಬಳಿಕ ಟಿ20
    ಮೂರು ವರ್ಷಗಳ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಂತಾರಾಷ್ಟ್ರೀಯ ಟಿ20 ಪಂದ್ಯ ಆಯೋಜಿಸಲಾಗುತ್ತಿದೆ. 2019ರ ಸೆಪ್ಟೆಂಬರ್​ 22 ರಂದು ಭಾರತ ಹಾಗೂ ದಣ ಆಫ್ರಿಕಾ ತಂಡಗಳೇ ಕಡೆಯ ಬಾರಿಗೆ ಎದುರಾಗಿದ್ದವು. ಆ ಪಂದ್ಯದಲ್ಲಿ ಭಾರತ 9 ವಿಕೆಟ್​ಗಳಿಂದ ಸೋಲು ಕಂಡಿತು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಇದುವರೆಗೂ ಆಡಿರುವ 5 ಪಂದ್ಯಗಳ ಪೈಕಿ ಕೇವಲ 2 ರಲ್ಲಿ ಜಯ ದಾಖಲಿಸಿ 3 ಪಂದ್ಯಗಳಲ್ಲಿ ಸೋಲು ಕಂಡಿದೆ. 2012ರ ಡಿಸೆಂಬರ್​ 25 ರಂದು ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ 5 ವಿಕೆಟ್​ಗಳಿಂದ ಪಾಕಿಸ್ತಾನಕ್ಕೆ ಶರಣಾಗಿತ್ತು.

    ಪಂದ್ಯ ಆರಂಭ: ರಾತ್ರಿ 7.00
    ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​
    ಮುಖಾಮುಖಿ: 19, ಭಾರತ: 11, ದ.ಆಫ್ರಿಕಾ: 8

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts