More

    ವೈಟ್‌ವಾಷ್ ತಪ್ಪಿಸಿಕೊಳ್ಳಲು ಟೀಮ್ ಇಂಡಿಯಾ ಹೋರಾಟ ; ಇಂದು ದಕ್ಷಿಣ ಆಫ್ರಿಕಾ ಎದುರು ಅಂತಿಮ ಏಕದಿನ ಪಂದ್ಯ

    ಕೇಪ್‌ಟೌನ್: 2022ರ ಮೊದಲ ತಿಂಗಳಲ್ಲೇ ಸತತ 2 ಸರಣಿ ಸೋತು ಮುಖಭಂಗಕ್ಕೀಡಾಗಿರುವ ಭಾರತ ತಂಡ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಭಾನುವಾರ ಎದುರಿಸಲಿದೆ. ಕಳೆದ 20 ದಿನಗಳಲ್ಲಿ ಆತಿಥೇಯ ತಂಡದ ಎದುರು ತಲಾ 2 ಟೆಸ್ಟ್, 2 ಏಕದಿನ ಪಂದ್ಯಗಳಲ್ಲಿ ಸೋತು ಮುಖಭಂಗಕ್ಕೀಡಾಗಿರುವ ಭಾರತ ತಂಡ ಇದೀಗ ವೈಟ್‌ವಾಷ್ ಭೀತಿಯಲ್ಲಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ವೈಫಲ್ಯದಿಂದಾಗಿ ಬೆಲೆತೆತ್ತಿರುವ ಕನ್ನಡಿಗ ಕೆಎಲ್ ರಾಹುಲ್ ನಾಯಕತ್ವದ ಪಡೆ ಪುಟಿದೇಳಬೇಕಿದೆ. ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯ ಭಾರತದ ಪಾಲಿಗೆ ಮಹತ್ವ ಪಡೆದಿದೆ. ಮತ್ತೊಂದೆಡೆ, ಆತಿಥೇಯ ತಂಡಕ್ಕೆ ಅದೃಷ್ಟದ ಮೈದಾನದ ಇದಾಗಿದ್ದು, ಸರಣಿ ಕ್ಲೀನ್‌ಸ್ವೀಪ್ ಸಾಧಿಸುವ ಕನಸಿನಲ್ಲಿದೆ.

    ಆರಂಭಿಕ ಎರಡೂ ಪಂದ್ಯಗಳಿಂದ ಭಾರತದ ಬೌಲರ್‌ಗಳು ಎದುರಾಳಿ ತಂಡದ ಕೇವಲ 7 ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದಾರೆ. ಅನುಭವಿ ಬೌಲರ್‌ಗಳಾದ ಆರ್.ಅಶ್ವಿನ್ ಹಾಗೂ ಭುವನೇಶ್ವರ್ ಕುಮಾರ್ ಜೋಡಿ ಎರಡೂ ಪಂದ್ಯಗಳಲ್ಲೂ ಪರಿಣಾಮಕಾರಿಯಾಗಿಲ್ಲ. ಅಶ್ವಿನ್ ಬೌಲಿಂಗ್‌ನಲ್ಲಿ ವಿಫಲರಾದರೂ ಬ್ಯಾಟಿಂಗ್‌ನಲ್ಲಿ ಅಗತ್ಯ ಸಾಥ್ ನೀಡಿದ್ದಾರೆ. ಆದರೆ, ಭುವನೇಶ್ವರ್ ಕುಮಾರ್ ದ.ಆಫ್ರಿಕಾ ನೆಲದಲ್ಲಿ ಆಡಿದ ಸತತ 5ನೇ ಪಂದ್ಯದಲ್ಲೂ ವಿಕೆಟ್ ಕಬಳಿಸಲು ವಿಫಲರಾಗಿದ್ದಾರೆ. ಹೀಗಾಗಿ ಭುವನೇಶ್ವರ್ ಕುಮಾರ್ ಪಾಲಿಗೆ ಈ ಪಂದ್ಯ ಮಹತ್ವ ಪಡೆದಿದೆ.
    ಗೆಲುವಿನೊಂದಿಗೆ ಪ್ರವಾಸಕ್ಕೆ ವಿದಾಯ ಹೇಳಬಯಸಿರುವ ಭಾರತ ತಂಡದಲ್ಲಿ ಕೆಲವೊಂದು ಬದಲಾವಣೆಯಾದರೂ ಅಚ್ಚರಿಯಿಲ್ಲ. ಪ್ರವಾಸದ ಎಲ್ಲ ಪಂದ್ಯಗಳಲ್ಲೂ ಆಡಿರುವ ವೇಗಿಗಳಾದ ಜಸ್‌ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್‌ಗೆ ವಿಶ್ರಾಂತಿ ನೀಡಬಹುದು. ದೀಪಕ್ ಚಹರ್ ಅವಕಾಶದ ನಿರೀಕ್ಷೆಯಲ್ಲಿದ್ದರೆ, ಸಿಕ್ಕ ಎರಡೂ ಅವಕಾಶಗಳನ್ನು ಕೈಚೆಲ್ಲಿಸಿರುವ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ತಮ್ಮ ಸಾಮರ್ಥ್ಯ ಸಾಬೀತುಕೊಳ್ಳಬೇಕಿದೆ. ಸೂರ್ಯಕುಮಾರ್ ಯಾದವ್ ಹಾಗೂ ಋತುರಾಜ್ ಗಾಯಕ್ವಾಡ್ ಹನ್ನೊಂದರ ಬಗಳದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವ ಭರವಸೆಯಲ್ಲಿದ್ದಾರೆ.

    * ಆತ್ಮವಿಶ್ವಾಸದಲ್ಲಿ ಆತಿಥೇಯರು
    ಟೆಸ್ಟ್ ಸರಣಿ ಜಯಿಸಿದ ಬೆನ್ನಲ್ಲೇ ಬಲಿಷ್ಠ ಭಾರತವನ್ನು ಏಕದಿನದಲ್ಲೂ ಮಣಿಸಿರುವ ವಿಶ್ವಾಸದಲ್ಲಿರುವ ಆತಿಥೇಯ ತಂಡಕ್ಕೆ ನಾಯಕ ಟೆಂಬಾ ಬವುಮಾ, ರಾಸೀ ವ್ಯಾನ್ ಡರ್ ಡುಸೆನ್ ಹಾಗೂ ಕ್ವಿಂಟನ್ ಡಿಕಾಕ್ ಒಳಗೊಂಡ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದ್ದರೆ, ಕೇಶವ್ ಮಹಾರಾಜ್, ತಬರೇಜ್ ಶಮ್ಸಿ ಸ್ಪಿನ್ ಜೋಡಿ ಮತ್ತೊಮ್ಮೆ ಮೋಡಿ ಮಾಡಲು ಸಜ್ಜಾಗಿದೆ.

    * ರಾಹುಲ್ ಜೋಡಿಗೆ ದಕ್ಕುವುದೇ ಮೊದಲ ಜಯ
    ಕನ್ನಡಿಗರಾದ ನಾಯಕ ಕೆಎಲ್ ರಾಹುಲ್ ಹಾಗೂ ಮುಖ್ಯಕೋಚ್ ರಾಹುಲ್ ದ್ರಾವಿಡ್ ಜೋಡಿಗೆ ಇದುವರೆಗೂ ಜಯ ಒಲಿದಿಲ್ಲ. ಕೆಎಲ್ ರಾಹುಲ್, ಕೊಹ್ಲಿ ಅನುಪಸ್ಥಿತಿಯಲ್ಲಿ ಎರಡನೇ ಟೆಸ್ಟ್ ಪಂದ್ಯ ಮುನ್ನಡೆಸಿದಾಗ ಭಾರತ ಸೋತರೆ, ಏಕದಿನ ಸರಣಿಯ ಆರಂಭಿಕ ಎರಡೂ ಪಂದ್ಯಗಳಲ್ಲೂ ಮುಗ್ಗರಿಸಿದೆ. ಗೆಲುವಿನ ಖಾತೆ ತೆರೆಯಲು ರಾಹುಲ್‌ದ್ವಯರು ಪರದಾಡುವಂತಾಗಿದೆ.

    ಟೀಮ್ ನ್ಯೂಸ್:
    ಭಾರತ: ಆರಂಭಿಕ ಎರಡೂ ಪಂದ್ಯಗಳಲ್ಲೂ ಒಂದೇ ತಂಡದೊಂದಿಗೆ ಆಡಿದ್ದ ಭಾರತ ತಂಡದಲ್ಲಿ ಕೆಲವೊಂದು ಬದಲಾವಣೆಯಾಗುವ ಸಾಧ್ಯತೆಗಳಿವೆ. ಜಸ್‌ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿದರೆ, ಮೊಹಮದ್ ಸಿರಾಜ್ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಶಾರ್ದೂಲ್ ಅಥವಾ ಭುವನೇಶ್ವರ್ ಕುಮಾರ್ ಅವರನ್ನು ತಂಡದಿಂದ ಕೈಬಿಟ್ಟರೆ ದೀಪಕ್ ಚಹರ್ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ರೇಯಸ್ ಅಯ್ಯರ್ ಬದಲಿಗೆ ಸೂರ್ಯಕುಮಾರ್ ಯಾದವ್ ಕಾಣಿಸಿಕೊಳ್ಳಬಹುದು.

    ದ.ಆಫ್ರಿಕಾ:
    ಸತತ ಮೂರು ಟೆಸ್ಟ್, 2 ಏಕದಿನ ಪಂದ್ಯಗಳನ್ನಾಡಿರುವ ವೇಗಿ ಲುಂಗಿ ಎನ್‌ಗಿಡಿಗೆ ವಿಶ್ರಾಂತಿ ನೀಡಿದರೆ, ಮಾರ್ಕೋ ಜಾನ್ಸೆನ್ ತಂಡಕ್ಕೆ ವಾಪಸಾಗಬಹುದು. ಅಲ್ಲದೆ, ಡ್ವೈನ್ ಪ್ರಿಟೋರಿಯಸ್ ಕೂಡ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

    ಪಂದ್ಯ ಆರಂಭ: ಮಧ್ಯಾಹ್ನ 2 ಗಂಟೆಗೆ
    ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts