More

    ಇಂದು ಭಾರತ- ಇಂಗ್ಲೆಂಡ್ ಫೈನಲ್ ಫೈಟ್

    ಪುಣೆ: ಪ್ರವಾಸಿ ಇಂಗ್ಲೆಂಡ್ ಎದುರು ಟೆಸ್ಟ್ ಹಾಗೂ ಟಿ20 ಸರಣಿಗಳಲ್ಲಿ ನಿರ್ಣಾಯಕ ಹಂತದಲ್ಲೇ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಭಾರತ ತಂಡ, ಇದೀಗ ಮತ್ತೊಂದು ಪ್ರಶಸ್ತಿ ಹಣಾಹಣಿಗೆ ಸಜ್ಜಾಗಿದೆ. ಹಿಂದಿನ ಎರಡೂ ಸರಣಿಗಳಲ್ಲಿ ಆರಂಭಿಕ ಹಿನ್ನಡೆ ನಡುವೆಯೂ ಪುಟಿದೆದ್ದು ಪ್ರಶಸ್ತಿ ಗೆದ್ದಿರುವ ಇತಿಹಾಸ ಹೊಂದಿರುವ ಭಾರತ ಹ್ಯಾಟ್ರಿಕ್ ಪ್ರಶಸ್ತಿಯ ಕನಸಿನಲ್ಲಿದೆ. 3 ಏಕದಿನ ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 1-1 ರಿಂದ ಸಮಬಲ ಸಾಧಿಸಿವೆ. ಈ ಮೂಲಕ ಏಕದಿನ ಅಂತಿಮ ಕದನದೊಂದಿಗೆ ಎರಡು ತಂಡಗಳ ಕಳೆದ 7 ವಾರಗಳ ದ್ವಿಪಕ್ಷೀಯ ಸಮರಕ್ಕೂ ತೆರೆಬೀಳಲಿದೆ. ಮತ್ತೊಂದೆಡೆ, ಇಂಗ್ಲೆಂಡ್ ತಂಡ ಏಕದಿನ ಮಾದರಿಯಲ್ಲಾದರೂ ಆತಿಥೇಯರಿಗೆ ತಿರುಗೇಟು ನೀಡುವ ಲೆಕ್ಕಾಚಾರದಲ್ಲಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ದ್ವಿಪಕ್ಷೀಯ ಸರಣಿಯ ಅಂತಿಮ ಸಮರಕ್ಕೆ ಮಹಾರಾಷ್ಟ್ರ ಕ್ರಿಕೆಟ್ ಮೈದಾನ ಸನ್ನದ್ಧವಾಗಿದೆ.

    ಭಾರತಕ್ಕೆ ಬೌಲಿಂಗ್‌ನದ್ದೇ ಚಿಂತೆ: ಬ್ಯಾಟಿಂಗ್ ವಿಭಾಗದಲ್ಲಿ ಬ್ಯಾಟ್ಸ್ ಮನ್‌ಗಳು ನೀರಿನಂತೆ ರನ್ ಪೇರಿಸುತ್ತಿದ್ದರೂ ಬೌಲಿಂಗ್ ವಿಭಾಗವೇ ದೊಡ್ಡ ಚಿಂತೆಯಾಗಿದೆ. ಅದರಲ್ಲೂ ತವರಿನಲ್ಲಿ ಮಿಂಚುತ್ತಿದ್ದ ಸ್ಪಿನ್ ಬೌಲಿಂಗ್ ವಿಭಾಗವೇ ಕೊಹ್ಲಿ ಬಳಗಕ್ಕೆ ಏಕದಿನ ಮಾದರಿಯಲ್ಲಿ ಕೈಕೊಟ್ಟಿದೆ. ಹಿಂದಿನ ಎರಡು ಪಂದ್ಯಗಳಿಂದ ಸ್ಪಿನ್ನರ್‌ಗಳು ಎಸೆದಿರುವ 35 ಓವರ್‌ಗಳಿಂದ ಸರಾಸರಿ 8.09 ರಂತೆ 283 ರನ್ ಬಿಟ್ಟುಕೊಟ್ಟಿದ್ದಾರೆ. ಶುಕ್ರವಾರ ಬರೋಬ್ಬರಿ 8 ಸಿಕ್ಸರ್ ಚಚ್ಚಿಸಿಕೊಂಡಿದ್ದ ಕುಲದೀಪ್ ಯಾದವ್ ಅನಪೇಕ್ಷಿತ ದಾಖಲೆಗೆ ಒಳಗಾದರು. ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಮೊದಲ ಪಂದ್ಯದಲ್ಲಿ 64 ಹಾಗೂ ಎರಡನೇ ಪಂದ್ಯದಲ್ಲಿ 84 ರನ್ ಬಿಟ್ಟುಕೊಟ್ಟಿದ್ದಾರೆ. ಮತ್ತೊಂದೆಡೆ, ಪದಾರ್ಪಣೆ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದರೂ ಕೃನಾಲ್ ಪಾಂಡ್ಯ ಬೌಲಿಂಗ್‌ನಲ್ಲಿ ದಂಡನೆಗೆ ಒಳಗಾದರು. ಕೊಹ್ಲಿ ಬಳಗಕ್ಕೆ ರವೀಂದ್ರ ಜಡೇಜಾ ಅನುಪಸ್ಥಿತಿ ಕಾಡುತ್ತಿದೆ. ಸ್ಪಿನ್ ಬೌಲಿಂಗ್‌ನಲ್ಲಿ ಕೆಲಬದಲಾವಣೆ ಅನಿವಾರ್ಯವಾಗಿದೆ. ಮತ್ತೊಮ್ಮೆ ಕೊಹ್ಲಿ ಟಾಸ್ ಸೋತರೂ ಬ್ಯಾಟಿಂಗ್ ವಿಭಾಗ ಹೆಚ್ಚಿನ ಜವಾಬ್ದಾರಿಯಿಂದ ಬ್ಯಾಟ್ ಬೀಸಬೇಕಿದೆ. ಡೆತ್ ಓವರ್‌ಗಳಲ್ಲಿ ಸ್ಫೋಟಿಸುತ್ತಿದ್ದರೂ ಆರಂಭಿಕ 30 ಓವರ್‌ಗಳಲ್ಲಿ ಮತ್ತಷ್ಟು ರನ್ ಪೇರಿಸಬೇಕಿದೆ.

    ಆತ್ಮವಿಶ್ವಾಸದಲ್ಲಿ ಪ್ರವಾಸಿಗರು
    ಶುಕ್ರವಾರದ ನಿರ್ವಹಣೆಯಿಂದ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಪ್ರವಾಸಿ ತಂಡ ಅಂತಿಮ ಪಂದ್ಯದಲ್ಲೂ ಪಾರಮ್ಯ ಸಾಧಿಸುವ ಗುರಿಯಲ್ಲಿದೆ. ಬೆನ್ ಸ್ಟೋಕ್ಸ್ ಫಾರ್ಮ್‌ಗೆ ಮರಳಿರುವುದು ತಂಡದ ಪ್ಲಸ್ ಪಾಯಿಂಟ್. ಪ್ರವಾಸದುದ್ದಕ್ಕೂ ಫಾರ್ಮ್ ಕೊರತೆ ಎದುರಿಸಿದ್ದ ಸ್ಟೋಕ್ಸ್, 2ನೇ ಪಂದ್ಯದಲ್ಲಿ 99 ರನ್‌ಗಳಿಸಿದ್ದರು. ತಂಡಕ್ಕೆ ಬ್ಯಾಟಿಂಗ್ ವಿಭಾಗವೇ ದೊಡ್ಡ ಶಕ್ತಿಯಾಗಿದೆ. ನಿರ್ಣಾಯಕ ಸಮರಕ್ಕೆ ಮಾರ್ಕ್ ವುಡ್ ಲಭ್ಯತೆ ಇನ್ನು ಖಚಿತವಾಗಿಲ್ಲ, ಭಾರತೀಯ ಸ್ಪಿನ್ನರ್‌ಗಳು ದಂಡನೆಗೆ ಒಳಗಾಗಿದ್ದರೂ ಆದೀಲ್ ರಶೀದ್ ಹಾಗೂ ಮೊಯಿನ್ ಅಲಿ ಜೋಡಿ ತಕ್ಕ ಮಟ್ಟಿಗೆ ಸುಧಾರಣೆ ಕಂಡಿತ್ತು. ಮಾರ್ಕ್ ವುಡ್ ಸುಧಾರಣೆ ಕಾಣದಿದ್ದರೆ ಈ ಜೋಡಿಯೇ ಕಣಕ್ಕಿಳಿಯಲಿದೆ.

    ಟೀಮ್ ನ್ಯೂಸ್:
    ಭಾರತ:
    ನಿರ್ಣಾಯಕ ಸಮರಕ್ಕೆ ಕೆಲವೊಂದು ಬದಲಾವಣೆಯೊಂದಿಗೆ ಭಾರತ ತಂಡ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಎರಡೂ ಪಂದ್ಯಗಳಲ್ಲಿ ದುಬಾರಿಯಾಗಿರುವ ಕುಲದೀಪ್ ಯಾದವ್ ಬದಲಿಗೆ ಯಜುವೇಂದ್ರ ಚಾಹಲ್ ತಂಡಕ್ಕೆ ವಾಪಸಾಗುವ ಸಾಧ್ಯತೆಗಳಿವೆ. ಕೃನಾಲ್ ಪಾಂಡ್ಯ ಬದಲಿಗೆ ಮತ್ತೋರ್ವ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ಪರಿಗಣಿಸಬಹುದು. ಕರ್ನಾಟಕದ ವೇಗಿ ಪ್ರಸಿದ್ಧ ಕೃಷ್ಣ ಅಥವಾ ಶಾರ್ದೂಲ್ ಠಾಕೂರ್ ಬದಲಿಗೆ ಯಾರ್ಕರ್ ಸ್ಪೆಷಲಿಸ್ಟ್ ಎಡಗೈ ವೇಗಿಗೆ ಮಣೆ ಹಾಕಬಹುದು.

    ಇಂಗ್ಲೆಂಡ್:
    ವೇಗಿ ಮಾರ್ಕ್ ವುಡ್ ಪೂರ್ಣ ಪ್ರಮಾಣದಲ್ಲಿ ಚೇತರಿಕೆ ಕಂಡಿದ್ದರೆ ರೀಸ್ ಟಾಪ್ಲೆ ಅಥವಾ ಟಾಮ್ ಕರ‌್ರನ್ ಬದಲಿಗೆ ಕಣಕ್ಕಿಳಿಯಬಹುದು. ಉಳಿದಂತೆ ಇಂಗ್ಲೆಂಡ್ ತಂಡದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷಿಸುವಂತಿಲ್ಲ. ಹಿಂದಿನ ಪಂದ್ಯದಲ್ಲಿ ಆಡಿದ ತಂಡವೇ ಬಹುತೇಕ ಕಣಕ್ಕಿಳಿಯಲಿದೆ.

    ಪಿಚ್ ರಿಪೋರ್ಟ್
    ಬ್ಯಾಟಿಂಗ್ ಸ್ನೇಹಿ ಪಿಚ್ ಇದಾಗಿದ್ದು, ಹಿಂದಿನ ಎರಡೂ ಪಂದ್ಯಗಳಲ್ಲಿ ಹರಿದಿರುವ ರನ್‌ಪ್ರವಾಹವೇ ಇದಕ್ಕೆ ಸಾಕ್ಷಿ. ಇನಿಂಗ್ಸ್ ಸಾಗುತ್ತಿದ್ದಂತೆ ಬ್ಯಾಟ್ಸ್‌ಮನ್‌ಗಳು ಹೆಚ್ಚು ನೆರವಾಗುತ್ತಿದೆ. ಎರಡನೇ ಸರದಿ ಬ್ಯಾಟಿಂಗ್ ಮಾಡಿದ ತಂಡಕ್ಕೆ ಹೆಚ್ಚು ಅನುಕೂಲ. ಮೊದಲು ಬ್ಯಾಟಿಂಗ್ ಮಾಡಿದ ತಂಡ ಕನಿಷ್ಠ 330 ರನ್ ಪೇರಿಸುವುದು ಅನಿವಾರ್ಯ.

    ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
    ನೇರ ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts