More

    ಇಂದಿನಿಂದ ಮಹಿಳಾ ಏಕದಿನ ಸರಣಿ ; ಭಾರತ – ಆಸ್ಟ್ರೇಲಿಯಾ ದ್ವಿಪಕ್ಷೀಯ ಹಣಾಹಣಿ

    ಮ್ಯಾಕ್‌ಕೇ: ಮಧ್ಯಮ ಕ್ರಮಾಂಕದ ಕಳಪೆ ಬ್ಯಾಟಿಂಗ್‌ನಿಂದ ಸಾಕಷ್ಟು ಟೀಕೆಗೆ ಗುರಿಯಾಗಿರುವ ಭಾರತ ಮಹಿಳಾ ತಂಡ ಮಂಗಳವಾರ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಸಜ್ಜಾಗಿದೆ. ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ದೃಷ್ಟಿಯಿಂದ ಈ ಸರಣಿ ಭಾರತದ ಪಾಲಿಗೆ ಮಹತ್ವ ಪಡೆದಿದೆ. ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿ ನೀರಸ ಬ್ಯಾಟಿಂಗ್‌ನಿಂದಾಗಿ ಹೀನಾಯ ಸೋಲನುಭವಿಸಿದ್ದ ಮಹಿಳಾ ತಂಡ ಪುಟಿದೇಳಬೇಕಿದೆ. ಕಳಪೆ ಬ್ಯಾಟಿಂಗ್, ಫೀಲ್ಡಿಂಗ್‌ನಿಂದಾಗಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಮಹಿಳಾ ತಂಡ ಆಸೀಸ್ ನೆಲದಲ್ಲಿ ಹೊಸ ಸವಾಲಿಗೆ ಸನ್ನದ್ಧವಾಗಿದೆ.

    ಉಪನಾಯಕಿ ಹರ್ಮಾನ್‌ಪ್ರೀತ್ ಕೌರ್ ಶನಿವಾರ ಅಭ್ಯಾಸದ ವೇಳೆ ಹೆಬ್ಬರಳಿಗೆ ಗಾಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಮೊದಲ ಪಂದ್ಯದಲ್ಲಿ ಅಲಭ್ಯರಾಗಲಿದ್ದಾರೆ. ಯುವ ಆಟಗಾರ್ತಿ ಶೆಫಾಲಿ ವರ್ಮ ಹಾಗೂ ಸ್ಮತಿ ಮಂದನಾ ಇನಿಂಗ್ಸ್ ಆರಂಭಿಸಿದರೆ, ಇಂಗ್ಲೆಂಡ್ ಪ್ರವಾಸದಲ್ಲಿ ವಿಲರಾದರೂ ದ ಹಂಡ್ರೆಡ್ ಟೂರ್ನಿಯಲ್ಲಿ ರನ್‌ಹೊಳೆಯನ್ನೇ ಹರಿಸಿದ್ದ ಜೇಮಿಮಾ ರೋಡ್ರಿಗಸ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆಗಳಿವೆ.

    ನಾಯಕ ಮಿಥಾಲಿ ರಾಜ್, ಇಂಗ್ಲೆಂಡ್ ಪ್ರವಾಸದಲ್ಲಿ ಈ ಕ್ರಮಾಂಕದಲ್ಲಿ ಉತ್ತಮ ನಿರ್ವಹಣೆ ತೋರಿದ್ದರು. ವಿಶ್ವಕಪ್‌ಗೆ ತಂಡದ ಸಂಯೋಜನೆ ದೃಷ್ಟಿಯಿಂದ ಜೇಮಿಮಾಗೆ ಮಣೆ ಹಾಕಬಹುದು. ಸ್ಪಿನ್ನರ್ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಹಾಗೂ ಸ್ನೇಹಾ ರಾಣಾ ನಡುವಿನ ಹನ್ನೊಂದರ ಬಳಗಕ್ಕೆ ಪೈಪೋಟಿ ಏರ್ಪಟ್ಟಿದೆ. ನಿಗದಿತ ಓವರ್‌ಗಳಲ್ಲಿ ಉತ್ತಮ ಅನುಭವ ಹೊಂದಿರುವ ರಾಜೇಶ್ವರಿಗೆ ಮಣೆ ಹಾಕಬಹುದು, ಲೆಗ್ ಸ್ಪಿನ್ನರ್ ಪೂನಂ ಯಾವದ್, ಅನುಭವಿ ವೇಗಿ ಜೂಲನ್ ಗೋಸ್ವಾಮಿ ಜತೆ ಚೆಂಡು ಹಂಚಿಕೊಳ್ಳಲಿದ್ದಾರೆ.

    ಪಂದ್ಯ ಆರಂಭ: ಬೆಳಗ್ಗೆ 5.35ಕ್ಕೆ
    ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts